ದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾಗಾಂಧಿ ಪಕ್ಷಕ್ಕೆ ಪೂರ್ಣಾವಧಿಯ ಸಕ್ರಿಯ ಅಧ್ಯಕ್ಷರಾಗಿ ಮುಂದುವರೆಯಲು ಇಚ್ಚಿಸಿದ್ದು ಇಂದು ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ತಮ್ಮ ನಿಲುವನ್ನು ಪ್ರಕಟಿಸಿದರು.
ಕೋವಿಡ್ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ನಡೆಯದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ(ಸಿಡಬ್ಲ್ಯೂಸಿ) ಸಭೆ ಇಂದು ಆರಂಭವಾಗಿದೆ. ಭೌತಿಕವಾಗಿ ನಡೆಯುತ್ತಿರುವ ಈ ಸಭೆಯಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆ, ಮುಂಬರುವ ವಿಧಾನಸಭಾ ಚುನಾವಣೆಗಳು ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಯಂತಹ ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸುತ್ತಿದ್ದಾರೆ.
ಕಾಂಗ್ರೆಸ್‌ಗೆ ಪೂರ್ಣಾವಧಿ ಅಧ್ಯಕ್ಷೆ
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾಗಾಂಧಿ ʻಕಾಂಗ್ರೆಸ್ ಪಕ್ಷಕ್ಕೆ ನಾನೇ ಪೂರ್ಣಾವಧಿಯ ಹಾಗೂ ಸಕ್ರಿಯ ಅಧ್ಯಕ್ಷೆ… ಅದು ಕೂಡ ನೀವು ಒಪ್ಪಿದರೆ ಮಾತ್ರ. ಇಡೀ ಸಂಘಟನೆ ಕಾಂಗ್ರೆಸ್‌ನ ಪುನರುಜ್ಜೀವನವನ್ನು ಬಯಸುತ್ತದೆ. ಇದಕ್ಕೆ, ಒಗ್ಗಟ್ಟು, ಪಕ್ಷದ ಹಿತವೇ ಅಂತಿಮ ಎಂಬ ಮನೋಭವಾ ಅಗತ್ಯ. ಎಲ್ಲಕ್ಕಿಂತ ಸ್ವಯಂ ನಿಯಂತ್ರಣ ಮತ್ತು ಶಿಸ್ತಿನ ಅಗತ್ಯವಿದೆ ಎಂದು ಹೇಳಿದರು.
ನಾನು ಯಾವಾಗಲೂ ಪ್ರಾಮಾಣಿಕತೆಯನ್ನು ಮೆಚ್ಚಿದ್ದೇನೆ. ಮಾಧ್ಯಮದ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ. ಆದ್ದರಿಂದ ನಾವೆಲ್ಲರೂ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆ ನಡೆಸೋಣ. ಇಲ್ಲಿ ಕೈಗೊಂಡ ನಿರ್ಣಯ ಮತ್ತು ಸಿಡಬ್ಲ್ಯೂಸಿಯ ಸಾಮೂಹಿಕ ನಿರ್ಧಾರವನ್ನೇ ಈ ಕೊಠಡಿಯ ನಾಲ್ಕು ಗೋಡೆಗಳ ಹೊರಗೆ ಸಂವಹನ ಮಾಡಬೇಕು ಎಂದು ನೇರವಾಗಿ ಸದಸ್ಯರಿಗೆ ಸೋನಿಯಾ ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ
ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸೋನಿಯಾ ಅವರು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದು ʻಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಹೇಳುತ್ತಿರುವ ಸರ್ಕಾರದ ಪ್ರಚಾರದ ಹೊರತಾಗಿಯೂ ದೇಶದ ಆರ್ಥ ವ್ಯವಸ್ಥೆ ತುಂಬಾ ಚಿಂತಾಜನಕವಾಗಿದೆ. ರಾಷ್ಟ್ರದ ಆಸ್ತಿ ಮಾರಾಟವೇ, ದೇಶದ ಆರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರಲು ಸಾಧ್ಯವೆಂದು ಸರ್ಕಾರ ಭಾವಿಸಿಕೊಂಡಂತೆ ಕಾಣುತ್ತಿದೆ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಾಗೂ ಉತ್ತರ ಪ್ರದೇಶದ ರಾಜ್ಯದ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡು ‘ಲಖಿಂಪುರ್-ಖೇರಿಯಲ್ಲಿ ನಡೆದ ಆಘಾತಕಾರಿ ಘಟನೆಗಳು ದೇಶದ ಕೃಷಿ ಮತ್ತು ರೈತರ ವಿಚಾರವಾಗಿ ಬಿಜೆಪಿಯ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಈ ಆಘಾತಕಾರಿ ಘಟನೆಗಳು ರೈತ ಚಳವಳಿಯನ್ನು ಅದು ಹೇಗೆ ಗ್ರಹಿಸುತ್ತದೆ ಎಂಬುದನ್ನು ಸಾಬೀತುಪಡಿಸಿದೆ’ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದ ಸುಮಾರು 52 ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಪೈಕಿ ದಿಗ್ವಿಜಯ್ ಸಿಂಗ್ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ಐದು ಹಿರಿಯ ನಾಯಕರು ಕಾರಣಾಂತರಗಳಿಂದ ಗೈರಾಗಿದ್ದಾರೆ.