ಬೆಂಗಳೂರು: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು, ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಮುಂದಿನ 1 ವಾರ ಹೈ ಅಲರ್ಟ್’ನಲ್ಲಿರಬೇಕಿದ್ದು, ಮುಂಜಾಗ್ರತಾ ಕ್ರಮಗಳ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಹೇಳಿದರು.
ಇದನ್ನೂ ಓದಿ:ಕೇಂದ್ರದ ಮಾನದಂಡ ಆಧರಿಸಿ ಬರ ಪೀಡಿತ ಪ್ರದೇಶ ಘೋಷಣೆ:ಕಂದಾಯ ಸಚಿವ ಕೃಷ್ಣ ಬೈರೇಗೌಡ
ವಿಕಾಸಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಸ್ಥಿತಿ ಅವಲೋಕನ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಸಚಿವರು, ಬೀದರ್, ಯಾದಗಿರಿ, ವಿಜಯಪುರ, ಕಲಬುರಗಿ ಮತ್ತಿತರ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದೆ. ಬಹುತೇಕ ಜಿಲ್ಲೆಗಳಲ್ಲಿ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಹೇಳಿದರು.
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಇಲಾಖೆಯು ಆಯಾ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಕಳೆದ ವಾರ ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ.120ರಷ್ಟು ಹೆಚ್ಚು ಮಳೆಯಾಗಿದೆ. ಕಲಬುರಗಿಯಲ್ಲಿ ಶೇ.300 ಹಾಗೂ ಯಾದಗಿರಿಗೆ ಶೇ.160ರಷ್ಟು ಹೆಚ್ಚು ಮಳೆಯಾಗಿದೆ. ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ಹೀಗಾಗಿ ಒಟ್ಟಾರೆ ಮಳೆ ಕೊರತೆಯು ಜೂನ್ ಅಂತ್ಯಕ್ಕೆ ಶೇ.56 ರಿಂದ ಶೇ.14ಕ್ಕೆ ಇಳಿದಿದೆ. ಕಳೆದ ವಾರ ಭಾರೀ ಮಳೆ ಹಾಗೂ ಸಿಡಿಲಿಗೆ 27 ಮಂದಿ ಸಾವನ್ನಪ್ಪಿದ್ದಾರೆ. ಕೆಲ ವಾರಗಳ ಹಿಂದೆ ಶೇ.23ರಷ್ಟಿದ್ದ ಜಲಾಶಯಗಳ ನೀರಿನ ಸಂಗ್ರಹ ಇದೀಗ ಶೇ.40ಕ್ಕೆ ಏರಿಕೆಯಾಗಿದೆ. ಸೋಮವಾರದ ಅಂತ್ಯದ ವೇಳೆಗೆ ಸುಮಾರು ಶೇ.50 ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದ ಏಳು ದಿನಗಳಲ್ಲಿ ಜಲಾಶಯಗಳಲ್ಲಿ ನೀರು ಸಂಗ್ರಹಣೆ 144 ಟಿಎಂಸಿ ಅಡಿ ಹೆಚ್ಚಿದ್ದು, ಭಾನುವಾರ 40 ಟಿಎಂಸಿ ಅಡಿ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಬರ ಘೋಷಣೆಗೆ ನಿಯಮಾವಳಿ ಸಡಿಲಿಸುವ ಕುರಿತು ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆಯಲಿದ್ದಾರೆ ಕೇಂದ್ರದ ನಿಯಮಗಳ ಪ್ರಕಾರ, ಬರ ಘೋಷಣೆಗೆ ಶೇ.60 ಕೊರತೆ ಮತ್ತು ಮೂರು ವಾರಗಳವರೆಗೆ ಮಳೆಯಾಗದಿರುವುದು ಅಗತ್ಯವಾಗಿದೆ. ರಾಜ್ಯಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಅದನ್ನು ಬದಲಾಯಿಸಬೇಕಾಗಿದೆ. ಇದನ್ನು ಶೇ.25 ಕೊರತೆಗೆ ಬದಲಾಯಿಸಬೇಕಾಗಿದೆ ಎಂದು ಹೇಳಿದರು.
ಇದರ ಮಧ್ಯೆ ನಾಳೆ ಜುಲೈ-26 ಬುಧವಾರ ಸಂಜೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳೊಂದಿಗೆ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಿ ಪರಿಸ್ಥಿತಿ ಅವಲೋಕನ ನಡೆಸಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.