ಸಂವಿಧಾನದ ಮೇಲೆ ಹಾಗೂ ಭಾರತದಲ್ಲಿನ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ಮತ್ತೊಂದು ಗಂಭೀರ ದಾಳಿ ನಡೆಸಲು ಮೋದಿ ಸರ್ಕಾರ ಹಾಗೂ ಬಿಜೆಪಿ ಸಿದ್ಧತೆ ನಡೆಸಿದೆ.
“ಒಂದು ದೇಶ, ಒಂದು ಚುನಾವಣೆ” ವಿಷಯವನ್ನು ಪ್ರಚಾರ ಮಾಡುವ ಸಲುವಾಗಿ ಡಿಸೆಂಬರ್ 2020ರ ಕೊನೆಯ ವಾರದಲ್ಲಿ ಬಿಜೆಪಿಯು 25 ವೆಬಿನಾರ್‌ಗಳನ್ನು ನಡೆಸಿದೆ. ಪ್ರಧಾನಮಂತ್ರಿ, ನರೇಂದ್ರಮೋದಿಯವರು ತಮ್ಮ ಎಂದಿನ ಘೋಷಣೆಗಳೊಂದರಲ್ಲಿ “ಒಂದು ದೇಶ, ಒಂದು ಚುನಾವಣೆ”ಯ ಅಗತ್ಯದ ಬಗ್ಗೆ ಮಾತನಾಡಿದ ಹಿನ್ನೆಲೆಯಲ್ಲಿ ಇದು ಬಂದಿದೆ. ಸಂವಿಧಾನ ದಿನವಾದ ನವಂಬರ್ 26ರಂದು ನಡೆದ ಸದನಗಳ ಸಭಾಧ್ಯಕ್ಷರ 80ನೇ ಸಮ್ಮೇಳನದಲ್ಲಿ ಇತ್ತೀಚಿಗೆ ಅಂತಹ ಮಾತನ್ನಾಡಿದ್ದಾರೆ.
ಏಕಕಾಲದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳ ಅಗತ್ಯತೆಯ ಬಗ್ಗೆ ವ್ಯಾಪಕವಾಗಿ ನಡೆಯುತ್ತಿರುವ ವಾದಗಳ ಕುರಿತು ಆ ಬಿಜೆಪಿ ವೆಬಿನಾರ್‌ಗಳು ಪ್ರತಿಪಾದನೆ ಮಾಡಿವೆ: ಆ ಮೂಲಕ ಬಹಳಷ್ಟು ವೆಚ್ಚವನ್ನು ಉಳಿಸಬಹುದು; ಪದೇ ಪದೇ ನಡೆಯುವ ಚುನಾವಣೆಗಳ ಸಂದರ್ಭದಲ್ಲಿ ಜಾರಿ ಮಾಡುವ ಚುನಾವಣಾ ನೀತಿ ಸಂಹಿತೆಗಳಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುತ್ತವೆ, ಅಧಿಕಾರಿಗಳ ಗಮನವನ್ನು ಬೇರೆಡೆ ಸೆಳೆಯುತ್ತವೆ, ಇತ್ಯಾದಿ ವಾದಗಳನ್ನು ಮಾಡಲಾಗುತ್ತಿದೆ. ಅಂತಹ ಒಂದು ವೆಬಿನಾರಿನಲ್ಲಿ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ಭೂಪೇಂದ್ರ ಯಾದವ್ ಹೀಗೆ ಹೇಳಿದರು: “ಚುನಾವಣೆಯು ಪ್ರಜಾಪ್ರಭುತ್ವದ ಒಂದು ಸಾಧನವಷ್ಟೆ, ಆದರೆ ಪದೇ ಪದೇ ಚುನಾವಣೆಗಳನ್ನು ಮಾಡುವುದೇ ಪ್ರಜಾಪ್ರಭುತ್ವದ ಉದ್ದೇಶವೆನ್ನುವಂತೆ ತೋರುತ್ತದೆ. ಆಡಳಿತ ಹಿಂದೆ ಬೀಳುತ್ತದೆ.”
ಇದರ ಅಂತರಾರ್ಥ ಏನೆಂದರೆ ಹೆಚ್ಚು ಚುನಾವಣೆಗಳನ್ನು ನಡೆಸುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ಅದಕ್ಕೂ ಮುಖ್ಯವಾದದ್ದು ಆಡಳಿತ ಎಂದು. ರೈತರ ಹೋರಾಟಗಳ ಬಗ್ಗೆ ಮಾತನಾಡುತ್ತಾ ನೀತಿ ಆಯೋಗದ ಮುಖ್ಯ ಅಧಿಕಾರಿ(ಸಿಇಒ) ಅಮಿತಾಭ್ ಕಾಂತ್ ಭಾರತದಲ್ಲಿ ಪ್ರಜಾಪ್ರಭುತ್ವ ಅತಿಯಾಗಿದೆ ಎಂಬ ಮಾತಿಗೆ ಅನುಗುಣವಾಗಿದೆ ಇದು. ಸಂದೇಶವು ಹಗಲಿನಷ್ಟೇ ಸ್ಪಷ್ಟವಾಗಿದೆ – “ಒಂದು ದೇಶ, ಒಂದು ಚುನಾವಣೆ” ಕರೆಯ ತಾರ್ಕಿಕ ವಿಸ್ತರಣೆ “ಒಂದು ದೇಶ, ಒಬ್ಬ ನಾಯಕ” ಎನ್ನುವುದೇ ಆಗಿದೆ; ಮತ್ತು “ಅದು ಚರ್ಚೆಯ ವಿಷಯವಲ್ಲ, ಅದೀಗ ಭಾರತದ ಅಗತ್ಯ” ಎಂದು ಆ ನಾಯಕರು ಘೋಷಿಸಿ ಆಗಿದೆ.
- “ಒಂದು ದೇಶ, ಒಂದು ಚುನಾವಣೆ” ಕರೆಯ ತಾರ್ಕಿಕ ವಿಸ್ತರಣೆ “ಒಂದು ದೇಶ, ಒಬ್ಬ ನಾಯಕ” ಎನ್ನುವುದೇ ಆಗಿದೆ; ಇದು ‘ಭಾರತದಲ್ಲಿ ಪ್ರಜಾಪ್ರಭುತ್ವ ಅತಿಯಾಗಿದೆ’ ಎಂಬ ನೀತಿ ಆಯೋಗದ ಸಿ.ಇ.ಒ.ಮಾತಿಗೆ ಅನುಗುಣವಾಗಿದೆ. ಈ ಕರಾಳ ಪ್ರಜಾಪ್ರಭುತ್ವ-ವಿರೋಧಿ, ಒಕ್ಕೂಟ-ವಿರೋಧಿ ಯತ್ನಗಳ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ವಿಶೇಷವಾಗಿ ಎಚ್ಚರ ವಹಿಸಬೇಕು, ಪ್ರಾದೇಶಿಕ ಪಕ್ಷಗಳು, ಅದರಲ್ಲೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳು, ಈ ಸರ್ವಾಧಿಕಾರಶಾಹಿ ಯೋಜನೆಯಿಂದ ಬಹಳಷ್ಟನ್ನು ಕಳೆದುಕೊಳ್ಳಲಿವೆ. ಉಳಿದೆಲ್ಲಾ ವಿರೋಧ ಪಕ್ಷಗಳೊಂದಿಗೆ ಅವರೂ ಕೈಜೋಡಿಸಿದರೆ ಬಿಜೆಪಿಯ ಶಾಸನಾತ್ಮಕ ಪದವಂಚನೆಗಳನ್ನು ಸೋಲಿಸಬಹುದು.
ಎಲ್ಲಾ ಮಟ್ಟಗಳಲ್ಲಿನ ಚುನಾವಣೆಗಳನ್ನು ಒಟ್ಟಿಗೇ ನಡೆಸಬೇಕು(ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನೂ ರಾಜ್ಯ ಹಾಗೂ ದೇಶಗಳ ಚುನಾವಣೆಗಳ ಜತೆ ಮಾಡಬೇಕು ಎಂದು ಕೆಲವು ಬಿಜೆಪಿ ನಾಯಕರು ಬಯಸಿದ್ದಾರೆ) ಮತ್ತು ಅದನ್ನು ತರಲು ಅಗತ್ಯವಾದ ಸಾಂವಿಧಾನಿಕ ಬದಲಾವಣೆಗಳು ಸಂಸದೀಯ ಪ್ರಜಾಪ್ರಭುತ್ವದ ಗುಣಲಕ್ಷಣಗಳನ್ನು ಮೂಲಭೂತವಾಗಿ ಬದಲಾಯಿಸುತ್ತವೆ ಮತ್ತು ದೇಶದ ಒಕ್ಕೂಟ ವ್ಯವಸ್ಥೆಯನ್ನೇ ನಾಶಮಾಡುತ್ತವೆ. ಲೋಕಸಭಾ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೇ ನಡೆಸುವುದೆಂದರೆ ವಿಧಾನಸಭೆಗೆ ಸರ್ಕಾರದ ಸಾಂವಿಧಾನಿಕ ಉತ್ತರದಾಯಿತ್ವವನ್ನು ಕಿತ್ತುಹಾಕುವುದೆಂದೇ ಅರ್ಥ. ಸಂವಿಧಾನದ ಅಡಿಯಲ್ಲಿ, ಒಂದು ಸರ್ಕಾರವು ಅವಿಶ್ವಾಸ ನಿರ್ಣಯದಲ್ಲಿ ಸೋತರೆ, ಅಥವಾ, ಹಣಕಾಸು ಮಸೂದೆ ಮೇಲಿನ ಮತದಾನದಲ್ಲಿ ಸೋತರೆ, ಅದು ರಾಜೀನಾಮೆ ನೀಡಲೇಬೇಕು, ಮತ್ತು ಪರ್ಯಾಯ ಸರ್ಕಾರ ರಚನೆಯಾಗದಿದ್ದರೆ, ಸದನವನ್ನು ವಿಸರ್ಜಿಸಬೇಕು ಮತ್ತು ಮಧ್ಯಂತರ ಚುನಾವಣೆ ನಡೆಸಬೇಕು. ಲೋಕಸಭೆಗಾಗಲೀ ಅಥವಾ ವಿಧಾನಸಭೆಗಾಗಲಿ ಸಂವಿಧಾನದಲ್ಲಿ ನಿಶ್ಚಿತ ಅಧಿಕಾರಾವಧಿಯನ್ನು ಒದಗಿಸಿಲ್ಲ.
ನೀತಿ ಆಯೋಗವು 2017ರ ‘ಚರ್ಚೆಯ ಪ್ರಬಂಧ’ದಲ್ಲಿ ಮತ್ತು 2018ರ ಕಾನೂನು ಆಯೋಗದ ಕರಡು ವರದಿಯಲ್ಲಿ ಕೆಲವು ಪ್ರಸ್ತಾಪಗಳನ್ನು ಮುಂದಿಡಲಾಗಿದೆ. ಅವೆಲ್ಲವುಗಳ ಒಟ್ಟು ತಾತ್ಪರ್ಯ ಹೀಗಿದೆ: ಈಗಿರುವ ಕೆಲವು ರಾಜ್ಯ ವಿಧಾನಸಭೆಗಳ ಅವಧಿಯನ್ನು ಮೊಟಕುಗೊಳಿಸುವುದು, ಅಥವಾ, ಕೆಲವುಗಳ ಅವಧಿಯನ್ನು ವಿಸ್ತರಿಸುವುದು, ಆ ಮೂಲಕ ಅವುಗಳನ್ನು ಲೋಕಸಭಾ ಚುನಾವಣೆಗಳ ಜತೆ ಜೋಡಿಸುವುದು, ಅಥವಾ, ಕೊನೇ ಪಕ್ಷ ಐದು ವರ್ಷಗಳ ಅವಧಿಯಲ್ಲಿ ಕೇವಲ ಎರಡು ರೀತಿಯ ಚುನಾವಣೆಗಳನ್ನು ನಡೆಸುವುದು. ವಿಧಾನಸಭೆಗಳ ಅವಧಿಯನ್ನು ಮೊಟಕುಗೊಳಿಸುವುದಾಗಲೀ ಅಥವಾ ಅದನ್ನು ವಿಸ್ತರಿಸುವುದಾಗಲೀ ನಿಜಕ್ಕೂ ಪ್ರಜಾಪ್ರಭುತ್ವ-ವಿರೋಧಿಯಾಗುತ್ತದೆ ಮತ್ತು ತಮ್ಮ ಶಾಸಕರನ್ನು ಆಯ್ಕೆಮಾಡುವ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ.
ಸದನದ ಮಧ್ಯಂತರ ವಿಸರ್ಜನೆಯನ್ನು ಮತ್ತು ತದನಂತರದ ಚುನಾವಣೆಗಳನ್ನು ತಪ್ಪಿಸಲು, ನಿಶ್ಚಿತ ಅಧಿಕಾರಾವಧಿ ಎಂಬುದು ಇರಬೇಕು ಎಂದು ಸೂಚಿಸಲಾಗಿದೆ. ಇದರ ಪರಿಣಾಮಗಳು ಅಪಾಯಕಾರಿಯಾಗಿವೆ. ನೀತಿ ಆಯೋಗದ ಪ್ರಬಂಧದಲ್ಲಿನ ಪ್ರಸ್ತಾಪಗಳಲ್ಲಿನ ಒಂದರಲ್ಲಿ, ಲೋಕಸಭಾ ವಿಸರ್ಜನೆಯನ್ನು ತಪ್ಪಿಸಲು ಸಾಧ್ಯವಾಗದಿದ್ದರೆ ಮತ್ತು ಲೋಕಸಭಾದ ಇನ್ನುಳಿದ ಅವಧಿಯು ದೀರ್ಘವಾಗಿಲ್ಲದಿದ್ದರೆ, ಆಗ ರಾಷ್ಟ್ರಾಧ್ಯಕ್ಷರೇ, ತಾವು ನೇಮಿಸಿದ ಸಚಿವ ಮಂಡಳಿಯ ಸಹಾಯ ಹಾಗೂ ಸಲಹೆಯ ಆಧಾರದಲ್ಲಿ, ಮುಂದಿನ ಸದನವನ್ನು ರೂಪಿಸುವವರೆಗೆ ಆಡಳಿತ ನಡೆಸಲು ಸಾಧ್ಯವಾಗುವಂತೆ ಒಂದು ನಿಬಂಧನೆಯನ್ನು ಮಾಡಬೇಕು ಎಂದಿದೆ. ಈ ಅತಿರೇಕದ ಪ್ರಸ್ತಾಪವು ರಾಷ್ಟ್ರಾಧ್ಯಕ್ಷರನ್ನು ಕಾರ್ಯಾಂಗದ ಮುಖ್ಯಸ್ಥರನ್ನಾಗಿ ಮಾಡುತ್ತದೆ. ಇದು ಹಿಂಬಾಗಿಲ ಮೂಲಕ ರಾಷ್ಟ್ರಪತಿಗಳದ್ದೇ ಆಳ್ವಿಕೆಯನ್ನು ತರುವುದಾಗಿದೆ. ಇದೇ ರೀತಿಯ ಧೋರಣೆಯನ್ನು ರಾಜ್ಯ ವಿಧಾನಸಭೆಗಳಿಗೂ ಹೇಳಲಾಗಿದೆ, ಅಲ್ಪಾವಧಿಗೆ ರಾಜ್ಯಪಾಲರು ಕಾರ್ಯಾಂಗವನ್ನು ತಮ್ಮ ವಶಕ್ಕೆ ಪಡೆಯಬಹುದಾಗಿದೆ.
ಸದನದಲ್ಲಿ ಸ್ಥಿರ ಬಹುಮತ ಹೊಂದಿರುವ ಆಳುವ ಪಕ್ಷವು ಸದನವನ್ನು ವಿಸರ್ಜಿಸಲು ಶಿಫಾರಸು ಮಾಡಲು ಸಾಧ್ಯವಿಲ್ಲ ಎನ್ನುವುದು ನಿಶ್ಚಿತ ಅಧಿಕಾರಾವಧಿ ಎಂಬುದರ ನಿಜವಾದ ಅರ್ಥವಾಗಿದೆ. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದರ ಜತೆಯಲ್ಲಿಯೇ ಪರ್ಯಾಯ ಸರ್ಕಾರವನ್ನು ನಡೆಸುವ ಹೊಸ ನಾಯಕನ ಹೆಸರನ್ನು ಸೂಚಿಸುವ ನಿರ್ಣಯವನ್ನೂ ಮಂಡಿಸಬೇಕಾಗುತ್ತದೆ ಎಂದು ಕಾನೂನು ಆಯೋಗದ ವರದಿಯು ಪ್ರಸ್ತಾಪಿಸಿದೆ ಕೂಡ. ಇದನ್ನು “ಸೃಜನಾತ್ಮಕ ಅವಿಶ್ವಾಸ ಮತ” ಎನ್ನಲಾಗಿದೆ, ಇದರ ಅರ್ಥವೇನೆಂದರೆ, ಸದನದ ಸದಸ್ಯರು ಒಂದು ಸರ್ಕಾರವನ್ನು ಮತದಾನದ ಮೂಲಕ ಸೋಲಿಸಿದರೂ, ಅಲ್ಲಿ ಮತ್ತೊಂದು ಪರ್ಯಾಯ ಸರ್ಕಾರ ಇರಲೇಬೇಕು, ಅಥವಾ, ಮೈತ್ರಿಕೂಟದ ಸರ್ಕಾರವಾದರೂ ಇರಬೇಕು, ಆದರೆ ಅದು ಜನಪ್ರಾತಿನಿಧ್ಯವಿಲ್ಲದ ಜನರ ಆಯ್ಕೆಗೆ ವಿರುದ್ಧವಾದ ಸರ್ಕಾರವಾಗಿರುತ್ತದೆ. ನಿಶ್ಚಿತ ಅಧಿಕಾರಾವಧಿ ಮೂಲಕ ಸ್ಥಿರತೆಗೆ ಆದ್ಯತೆ ನೀಡಲಾಗಿದೆ ಮತ್ತು ಮತದಾರರ ಆಯ್ಕೆಯು ಅಪ್ರಸ್ತುತವಾಗುತ್ತದೆ.
ಅಂತಹ ವ್ಯವಸ್ಥೆಯಲ್ಲಿ ರಾಜ್ಯ ಶಾಸನಸಭೆಗಳು ಹಾಗೂ ರಾಜ್ಯ ಸರ್ಕಾರಗಳ ಮೇಲೆ ಕೇಂದ್ರೀಕೃತ ನಿಯಂತ್ರಣ ಹೇರಲಾಗುತ್ತದೆ. ಸರ್ಕಾರವೊಂದು ತನ್ನ ಬಹುಮತ ಕಳೆದುಕೊಂಡಿರುವಾಗ ಅದನ್ನು ವಿಸರ್ಜಿಸುವ ಅಧಿಕಾರವನ್ನು ಮೊಟಕುಗೊಳಿಸಿದ ನಂತರ ಐದು ವರ್ಷಗಳ ನಿಗದಿತ ಅವಧಿ ಇರುವ ಕಾರಣ ಒಂದು ಪರ್ಯಾಯ ಸರ್ಕಾರವನ್ನು ರಚಿಸಲೇಬೇಕಾಗುತ್ತದೆ. ಅಂತಹ ಸರ್ಕಾರವು ರಾಜ್ಯಪಾಲರ ಮರ್ಜಿಯ ಮೇಲೆ ಅವಲಂಬಿತವಾಗಿರುತ್ತದೆ. ಯಾವ ನಾಯಕನನ್ನು ಕರೆದು ಸರ್ಕಾರ ಮಾಡಬೇಕು ಎನ್ನುವುದನ್ನು ಅವರು ತೀರ್ಮಾನಿಸುತ್ತಾರೆ. ನಿಶ್ಚಿತ ಕಾಲಾವಧಿಯು ಶಾಸಕರಿಗೆ, ಚುನಾವಣೆಯನ್ನು ಎದುರಿಸುವ ಯಾವುದೇ ಭಯವಿಲ್ಲದೇ ಸಾರಾಸಗಟಾಗಿ ತಮ್ಮ ನಿಷ್ಠೆ ಬದಲಾಯಿಸುವ ಸ್ವೇಚ್ಛೆಯನ್ನು ನೀಡುತ್ತದೆ.
ಜಗದೀಪ್ ಢಣಕರ್, ಭಗತ್ ಸಿಂಗ್ ಕೋಶ್ಯಾರಿ ಮತ್ತು ಅರಿಫ್ ಮೊಹಮ್ಮದ್ ಖಾನ್ ರಂತಹ ರಾಜ್ಯಪಾಲರಿದ್ದರೆ, ಕೇಂದ್ರ ಸರ್ಕಾರದ ಪಕ್ಷಪಾತದ ಸಾಧನಗಳಾಗಿ ಏನೆಲ್ಲಾ ಅನಾಹುತಗಳನ್ನು ಸೃಷ್ಟಿಸಬಹುದು ಎಂಬುದನ್ನು ಯಾರೂ ಊಹಿಸಬಹುದು.
ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಯನ್ನು ನಡೆಸಲು, ಪ್ರಮುಖ ಸಾಂವಿಧಾನಿಕ ಬದಲಾವಣೆಯನ್ನೇ ತರಬೇಕಾಗುತ್ತದೆ. ಸಂವಿಧಾನದ ವಿಧಿ 83 (ಸದನದ ಕಾಲಾವಧಿ), ವಿಧಿ 85(ಲೋಕಸಭಾ ವಿಸರ್ಜನೆ), ವಿಧಿ 172 (ರಾಜ್ಯ ಶಾಸನಸಭೆಗಳ ಕಾಲಾವಧಿ), ವಿಧಿ 174(ರಾಜ್ಯ ವಿಧಾನಸಭೆಗಳ ವಿಸರ್ಜನೆ), ವಿಧಿ 356(ಸಾಂವಿಧಾನಿಕ ಆಡಳಿತದ ವೈಫಲ್ಯ) ಇವುಗಳಲ್ಲದೇ ಜನ ಪ್ರಾತಿನಿಧ್ಯ ಕಾಯಿದೆಗಳಿಗೆ ಹಾಗೂ ಇತರ ನಿಯಮಗಳಿಗೆ ತಿದ್ದುಪಡಿಗಳನ್ನು ತರಬೇಕಾಗುತ್ತದೆ.
ಬಿಜೆಪಿಯು ಸತತವಾಗಿ 2014 ರಿಂದಲೂ ತನ್ನ ಪ್ರಣಾಳಿಕೆಯಲ್ಲಿ “ಒಂದು ದೇಶ, ಒಂದು ಚುನಾವಣೆ” ಚಿಂತನೆಗಳನ್ನು ಪ್ರತಿಪಾದಿಸುತ್ತಲೇ ಬಂದಿದೆ. ಭಾರತದ ರಾಷ್ಟ್ರಾಧ್ಯಕ್ಷರು ಹಾಗೂ ಉಪರಾಷ್ಟ್ರಾಧ್ಯಕ್ಷರು ತಮ್ಮ ಅಧಿಕೃತ ಅಧಿಕಾರದ ವ್ಯಾಪ್ತಿಯಡಿಯಲ್ಲೇ ಈ ಚಿಂತನೆಗಳಿಗೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಪ್ರಸ್ತುತ ಒತ್ತಡ ಹಾಗೂ ಪ್ರಚಾರವು ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡುತ್ತಿದೆ. ಸಾಂವಿಧಾನಿಕ ತಿದ್ದುಪಡಿಗಳು ಹಾಗೂ ಬದಲಾವಣೆಗಳು ಆಳುವ ಪಕ್ಷದ ಸರ್ವಾಧಿಕಾರಿ ಯತ್ನಕ್ಕೆ ದೊಡ್ಡ ಅಡಚಣೆಯಾಗಲಿದೆ ಎಂಬ ಯೋಚನೆಯು ತಪ್ಪಾಗಿದೆ. ಸಂವಿಧಾನದ ವಿಧಿ 370ನ್ನು ತೊಡೆದುಹಾಕುವಲ್ಲಿ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜ್ಯವನ್ನು ಕಳಚಿಹಾಕುವಲ್ಲಿ ಅವರು ತೋರಿದ ರಾಜಕೀಯ ಧೂರ್ತತನವನ್ನು ನಾವೀಗಾಗಲೇ ಕಂಡಿದ್ದೇವೆ.
ಮುಂದೆಂದಾದರೂ ಮೋದಿ ಸರ್ಕಾರವು ಸಂಸತ್ತಿನಲ್ಲಿ ಅಂತಹ ಒಂದು ಪ್ರಯತ್ನ ಮಾಡಿದಾಗ ವಿರೋಧ ಪಕ್ಷಗಳು ತಿಳಿದೇ ಇರಲಿಲ್ಲ ಎಂದು ಹೇಳುವ ಹಾಗಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ವಿಶೇಷವಾಗಿ ಎಚ್ಚರ ವಹಿಸಬೇಕು, ಏಕೆಂದರೆ ವಿಧಿ 370ರ ರದ್ಧತಿ ವಿಚಾರದಲ್ಲಿ ಅದರ ಡೋಲಾಯಮಾನ ಮನಸ್ಥಿತಿಯನ್ನು ಬಿಜೆಪಿಯು ಪೂರ್ಣವಾಗಿ ದುರುಪಯೋಗ ಪಡಿಸಿಕೊಂಡಿದೆ.
ಪ್ರಾದೇಶಿಕ ಪಕ್ಷಗಳು, ಅದರಲ್ಲೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳು, “ಒಂದು ದೇಶ, ಒಂದು ಚುನಾವಣೆ”ಯ ಈ ಸರ್ವಾಧಿಕಾರಶಾಹಿ ಯೋಜನೆಯಿಂದ ಬಹಳಷ್ಟನ್ನು ಕಳೆದುಕೊಳ್ಳಲಿವೆ. ರಾಜ್ಯ ಸರ್ಕಾರಗಳಿಗೆ ಈಗಿರುವ ಸೀಮಿತ ಸ್ವಾಯತ್ತತೆಯೂ ಹೋಗಲಿದೆ. ವಿಧಾನಸಭೆಯನ್ನು ವಿಸರ್ಜಸುವ ಪ್ರಜಾಸತ್ತಾತ್ಮಕ ನಿಯಮಗಳನ್ನು ಉಪಯೋಗಿಸಿಕೊಳ್ಳುವ ಅಥವಾ ವಿಧಾನಸಭೆ ಚುನಾವಣೆಗಳಿಗೆ ರಾಜಕೀಯ ಕಾರ್ಯಸೂಚಿಯನ್ನು ರೂಪಿಸುವ ಹಕ್ಕನ್ನು ಲೋಕಸಭಾ ಚುನಾವಣೆಗೆ ರಾಜ್ಯ ವಿಧಾನಸಭಾ ಚುನಾವಣೆಗಳನ್ನು ತಳಕುಹಾಕುವ ಯತ್ನಗಳ ಮೂಲಕ ಕಳೆದುಕೊಳ್ಳುತ್ತವೆ.
ಒರಿಸ್ಸಾದ ಬಿಜು ಜನತಾ ದಳ, ತೆಲಂಗಾಣದ ಟಿಆರ್‌ಎಸ್ ಮತ್ತು ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ನಂತಹ ಪಕ್ಷಗಳ ಸೋಮಾರಿತನ ಹಾಗೂ ಸಮಯಸಾಧಕತನಗಳಿಂದಾಗಿ ಮೋದಿ ಸರ್ಕಾರಕ್ಕೆ ರಾಜ್ಯಗಳ ಹಕ್ಕುಗಳ ಮೇಲೆ ದಾಳಿಗಳನ್ನು ನಡೆಸಿ ಅವನ್ನು ದಕ್ಕಿಸಿಕೊಳ್ಳುವುದು ಸಾಧ್ಯವಾಗಿದೆ. ಅವುಗಳು ಎಚ್ಚರಗೊಳ್ಳಬೇಕು ಮತ್ತು ಈ ಕರಾಳ ಪ್ರಜಾಪ್ರಭುತ್ವ-ವಿರೋಧಿ, ಒಕ್ಕೂಟ-ವಿರೋಧಿ ಯತ್ನಗಳನ್ನು ವಿರೋಧಿಸಬೇಕು. ಉಳಿದೆಲ್ಲಾ ವಿರೋಧ ಪಕ್ಷಗಳೊಂದಿಗೆ ಅವರೂ ಕೈಜೋಡಿಸಿದರೆ ಬಿಜೆಪಿಯ ಶಾಸನಾತ್ಮಕ ಪದವಂಚನೆಗಳನ್ನು ಸೋಲಿಸಬಹುದು.
ಅನು: ಟಿ. ಸುರೇಂದ್ರ ರಾವ್