ಭುವನೇಶ್ವರ: ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ಮುಂದೂಡಲು ಕೇಂದ್ರ ಸರ್ಕಾರವು “ಒಂದು ರಾಷ್ಟ್ರ-ಒಂದು ಚುನಾವಣೆ” ಪ್ರಚಾರ ಮಾಡುತ್ತಿದೆ ಎಂದು ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಮತ್ತು ಹೋರಾಟಗಾರ ಪ್ರಶಾಂತ್ ಭೂಷಣ್ ಭಾನುವಾರ ಆರೋಪಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
“ಭಾರತದಂತಹ ಸಂಸದೀಯ ಪ್ರಜಾಪ್ರಭುತ್ವದಲ್ಲಿ ‘ಒಂದು ರಾಷ್ಟ್ರ-ಒಂದು ಚುನಾವಣೆ’ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ವ್ಯವಸ್ಥೆಯಲ್ಲಿ ಸರ್ಕಾರವು ಬಹುಮತವನ್ನು ಕಳೆದುಕೊಂಡು ಮಧ್ಯಂತರವಾಗಿ ಬಿದ್ದು ಹೊಸ ಸರ್ಕಾರ ರಚನೆಯಾಗುತ್ತದೆ” ಎಂದು ಪ್ರಶಾಂತ್ ಭೂಷಣ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಂದು ವೇಳೆ, ‘ಒಂದು ರಾಷ್ಟ್ರ-ಒಂದು ಚುನಾವಣೆ’ ಜಾರಿಯಾದರೆ, ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ. ಇಂತಹ ಆಳ್ವಿಕೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮವನ್ನು ಒಪ್ಪಿಕೊಳ್ಳುವವರು ಮನುಷ್ಯರೆ ಅಲ್ಲ; ಉದಯನಿಧಿ ಹೇಳಿಕೆ ಸಮರ್ಥಿಸಿದ ಡಿಎಂಕೆ ನಾಯಕ ಎ. ರಾಜಾ
“ಅಂದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ರಾಷ್ಟ್ರಪತಿ ಆಳ್ವಿಕೆಗೆ ಬದಲಾಗುತ್ತಿದ್ದೇವೆ. ಹಾಗಾಗಿ ಇದು ಸಂಸದೀಯ ಪ್ರಜಾಪ್ರಭುತ್ವದ ಸಂಪೂರ್ಣ ಉಲ್ಲಂಘನೆಯಾಗುತ್ತದೆ. ನನ್ನ ದೃಷ್ಟಿಯಲ್ಲಿ, ಸರ್ಕಾರಕ್ಕೆ ಈ ಬಗ್ಗೆ ಸ್ಪಷ್ಟವಾಗಿ ತಿಳಿದಿದೆ. ಜೊತೆಗೆ ರಾಷ್ಟ್ರಪತಿ ಆಳ್ವಿಕೆ ವ್ಯವವಸ್ಥೆಗೆ ಸಂವಿಧಾನದಲ್ಲಿ ಹಲವಾರು ತಿದ್ದುಪಡಿಗಳ ಅಗತ್ಯವಿದೆ ಎಂದು ಕೂಡಾ ಅವರು ತಿಳಿದಿದ್ದಾರೆ” ಭೂಷಣ್ ಹೇಳಿದ್ದಾರೆ.
“ಈಗಿನ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತವಿಲ್ಲ. ಈ ಎಲ್ಲ ಸಂಗತಿಗಳು ಸರ್ಕಾರಕ್ಕೆ ತಿಳಿದಿದೆ. ಆದರೂ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ಚುನಾವಣೆಯನ್ನು ಮುಂದೂಡುವ ಒಂದೇ ಒಂದು ಉದ್ದೇಶದಿಂದ ಅವರು ಒಂದು ರಾಷ್ಟ್ರ, ಒಂದು ಚುನಾವಣೆ ಎಂಬ ಬಲೂನ್ ಹಾರಿ ಬಿಟ್ಟಿದ್ದಾರೆ” ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
“ಬಿಜೆಪಿ ಸರ್ಕಾರವು ಈ ಐದು ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿದೆ. ಹಾಗಾಗಿ, ಅವರು ಒಂದು ರಾಷ್ಟ್ರ, ಒಂದು ಚುನಾವಣೆ ಹೆಸರಿನಲ್ಲಿ 2024 ರ ಸಾರ್ವತ್ರಿಕ ಚುನಾವಣೆಯವರೆಗೆ ವಿಧಾನಸಭೆ ಚುನಾವಣೆಯನ್ನು ಮುಂದೂಡಲು ಹೊರಟಿದ್ದಾರೆ. ಅಲ್ಲಿವರೆಗೆ ಈ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುವುದು” ಪ್ರಶಾಂತ್ ಭೂಷಣ್ ಪ್ರತಿಪಾದಿಸಿದ್ದಾರೆ.
ವಿಡಿಯೊ ನೋಡಿ: ಪಿಚ್ಚರ್ ಪಯಣ – 137, ಸಿನೆಮಾ : ಏಕ್ ದಿನ ಅಚಾನಕ್, ವಿಶ್ಲೇಷಣೆ : ಮೀನಾಕ್ಷಿ ಬಾಳಿ Janashakthi Media