ಶರತ್ ಆನೇಕಲ್
ಹೆಸರಿಗೆ ತಕ್ಕಂತೆ ಗುಣದವಳು, ಜೊತೆಗೆ ಆ ಗುಣಕ್ಕೆ ತಕ್ಕಂತೆ ನಡೆವವಳು….. ಹಾಗೇ ನಡೆದು ಹೆಸರಾದವಳು ಜೊತೆಗೆ ನನ್ನಂತ ನೂರಾರು ಮಂದಿ ಯುವ ಜನಾಂಗಕ್ಕೆ ಮಾದರಿಯಾದವಳು ಜನನಿ. ಹೌದು, ಆ ಗುಣದವಳು ಮತ್ತು ಗುಣಕ್ಕೆ ತಕ್ಕಂತೆ ನಡೆಯುತ್ತಿರುವವರು ಜನನಿ ವತ್ಸಲ.
ಹೆಸರು ಜನನಿ ವತ್ಸಲ, ವಿಶ್ವೇಶ್ವರಪುರ ಕಾನೂನು ಕಾಲೇಜಿನ ವಿದ್ಯಾರ್ಥಿನಿ. ಈಕೆ ಬಡತನದಲ್ಲಿಯೇ ಹುಟ್ಟಿ ಬೆಳೆದದ್ದು, ಮೂಲ ಊರು ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ, ಹೊಸಹಳ್ಳಿ ಗ್ರಾಮ. ಬೆಂಗಳೂರಿಗೆ ಕುಟುಂಬದೊಂದಿಗೆ ಬಂದು ಹನ್ನೆರಡು ವರ್ಷವಾಯಿತು. ಈಕೆ ಶ್ರೀಮಂತ ಕುಟುಂಬದವಳಲ್ಲ ರಾಜಕಾರಣಿಗಳ ಮನೆತನದಲ್ಲಿ ಹುಟ್ಟಿದವಳೂ ಅಲ್ಲ, ಬಡತನ ರೇಖೆಯಲ್ಲಿ ಹಳ್ಳಿಗಾಡಿನ ಹುಡುಗಿ ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ವಾಸವಾಗಿರುವವಳು.
ಈಕೆ ʻಒಂದು ಜೊತೆ ಬಟ್ಟೆ ಅಭಿಯಾನʼ ಮಾಡಲು ಒಂದು ಮಹತ್ತರ ಘಟನೆಯೆಂದರೆ ಬಡತನ, ಪರಿಸ್ಥಿತಿಗಳು ಹಾಗೂ ಸಮಾಜದ ವ್ಯವಸ್ಥೆ, ಜನನಿ ವತ್ಸಲ ಎಂಬ ಹೆಸರಿಗೆ ತಕ್ಕ ತಾಯಿ ರೀತಿಯ ವಾತ್ಸಲ್ಯ. ಹಾಗಾಗೀಯೇ ರಸ್ತೆಯ ಇಕ್ಕೆಲಗಳಲ್ಲಿ, ಇನ್ಯಾವುದೋ ಜಾಗದಲ್ಲಿ, ಬಸ್ ನಿಲ್ದಾಣದಲ್ಲಿ ಮಲಗುವ ನಿರಾಶ್ರಿತರ ಕಂಡು ಅವರಿಗೆ ಪ್ರಕೃತಿಯ ಕಾಲ ಬದಲಾವಣೆ ಮತ್ತು ಆರೋಗ್ಯದ ವಿಷಯವನ್ನು ಮನಗಂಡು ಬಟ್ಟೆಯೂ ಬಹು ಮುಖ್ಯವಾದ ಅತ್ಯಗತ್ಯವಾದ ಮೂಲಭೂತ ವಸ್ತುವಾಗಿದ್ದು ಅದನ್ನು ನೀಡುವ ಮನಸ್ಸು ಮಾಡಿದಳು.
ಪ್ರಥಮ ಹೆಜ್ಜೆ ಮತ್ತು ಮನಸ್ಸು ಅವಳದೇ ಆದ ಕಾರಣ ಮೊದಮೊದಲು ಒಬ್ಬಳೇ “ಒಂದು ಜೊತೆ ಬಟ್ಟೆ ಅಭಿಯಾನ”ವನ್ನು ದೈರ್ಯವಾಗಿ ಒಬ್ಬಳೇ ಮಾಡಿದಳು. ರಾತ್ರಿಯೆನ್ನದೆ ಬೀದಿ ಬೀದಿಯೆಲ್ಲ ಸುತ್ತಿ ಬಟ್ಟೆಗಳ ಅವಶ್ಯಕತೆ ಇರುವ ನೊಂದವರ ಹುಡುಕಿ ಬಟ್ಟೆಗಳನ್ನು ನೀಡಿದಳು. ಕಾಲನಂತರ ಕೆಲವರು ಪ್ರೇರಣೆಗೊಂಡು ಕೆಲವು ಗೆಳೆಯ, ಗೆಳತಿಯರು ಕೂಡ ಜೊತೆಯಾದರು.
ಹೀಗೆ ಆನೇಕ ಬಾರಿ ಒಂಟಿಯಾಗಿ, ಕೆಲವು ಸಾರಿ ಮಾತ್ರ ಗೆಳೆಯ, ಗೆಳತಿಯರೊಂದಿಗೆ ಜಂಟಿಯಾಗಿ ಈವರೆಗೆ ಸರಿ ಸುಮಾರು ಎರಡು ವರುಷಗಳಿಂದ, ಒಂದೂವರೆ ಸಾವಿರದಿಂದ ಮೂರು ಸಾವಿರ ಜನಕ್ಕೆ ಬಟ್ಟೆಯನ್ನು ನೀಡಿ ಮಾನವೀಯ ಮನಸ್ಸುಗಳಿಗೆ ಮಾದರಿಯಾದ ಹುಡುಗಿ ಇವಳು.
ಇನ್ನೊಂದು ಸೋಜಿಗದ ಸಂಗತಿಯೆಂದರೆ ಸಾಮಾಜಿಕ ಜಾಲತಾಣದಲ್ಲಿ ಯುವ ಸಮೂಹ ಮಾರು ಹೋಗಿದೆ ಮತ್ತು ಹದಗೆಟ್ಟು ಹೋಗಿದೆ ಅನ್ನುವ ಮಾತನ್ನು ಸುಳ್ಳಾಗಿಸುವಂತೆ ಸಾಮಾಜಿಕ ಜಾಲತಾಣವನ್ನು ಧನಾತ್ಮಕವಾಗಿ ಬಳಸಿಕೊಂಡ ದಿಟ್ಟ ಹುಡುಗಿ ಎಂದರೆ ತಪ್ಪಾಗಲಾರದು. ಏಕೆಂದರೆ ಇದೇ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಅಭಿಯಾನದ ಮಾಹಿತಿಯನ್ನು ಜನರಿಗೆ ತಿಳಿಸಿ ಅವರು ನೀಡುವ ಬಟ್ಟೆಗಳನ್ನು ಅವರಿದ್ದಲ್ಲಿಯೇ ಹೋಗಿ ಪಡೆದು ಬಂದು ನಿರಾಶ್ರಿತರು ಮತ್ತು ನಿರ್ಗತಿಕರಿಗೆ ನೀಡುವ ಮನಸ್ಸು ಮಾಡಿದ ಮಾದರಿ ಹೆಣ್ಣು.
ಈ ಕಾರ್ಯದ ಜೊತೆ ಜೊತೆಯಲ್ಲೇ “ಒಂದು ಹೊತ್ತಿನ ಊಟದ ಅಭಿಯಾನ” ಕೈಗೊಂಡಳು. ಇದು ಕೂಡ ಬಹಳಷ್ಟು ಹಸಿದ ಹೊಟ್ಟೆಗೆ ಅನ್ನ ನೀಡುವಲ್ಲಿ ಯಶಸ್ವಿಯಾಯಿತು. ಮೊದಲು ಪ್ರಾರಂಭದಲ್ಲಿ ತನ್ನಲ್ಲಿದ್ದ ಹಣದಲ್ಲಿ ಈ ಕಾರ್ಯ ಶುರು ಮಾಡಿದಳು. ನಂತರದ ದಿನಗಳಲ್ಲಿ ಕೆಲವು ಸ್ನೇಹಿತರು, ಸಮಾಜಮುಖಿ ಜನರು ಹಾಗೆಯೇ ಕೆಲವು ಹೋಟೆಲ್ ನವರು ಊಟ ನೀಡಲು ಮತ್ತು ಸಣ್ಣ ಪ್ರಮಾಣದ ಹಣದ ಸಹಾಯ ಮಾಡಲು ನಿಂತರು. ಆವಾಗಿನಿಂದ ಈ ಅಭಿಯಾನಗಳು ಮತ್ತಷ್ಟು ಯಶಸ್ವಿಯಾಗಿ ನಡೆಯಿತು.
ಅಲ್ಲದೆ, ಸರ್ಕಾರಿ ಶಾಲೆಗಳನ್ನು ಉಳಿಸಿ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಬೇಕೆಂದು ಹಲವು ಸಂದರ್ಭಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಪ್ರಸ್ತಾಪಿಸಿ ಸಮಸ್ಯೆಗಳ ಪರಿಹಾರಕ್ಕಾಗಿನ ಕಾರ್ಯಗಳಲ್ಲಿಯೂ ಜನನಿ ವಲ್ಸತ ತೊಡಗಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಹಲವಾರು ಸಂದರ್ಭಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ಬಗ್ಗೆಯೂ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆಯೂ ಸಾಕಷ್ಟು ಬಾರಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಆದರೆ ಯಾರಿಲ್ಲದಿದ್ದರೂ ತಿಳಿಯದ ಮತ್ತು ಪರಿಚಯವೇ ಇಲ್ಲದ ಸ್ಥಳಗಳಲ್ಲಿ ಹೋಗಿ ಬಟ್ಟೆ ಮತ್ತು ಊಟ ನೀಡಿ ಬರುವ ಈಕೆಯ ಧೈರ್ಯ ಇಂದಿನ ಹೆಣ್ಣು ಮಕ್ಕಳಿಗೆ ಮಾದರಿ ಮತ್ತು ಅನುಕರಣೀಯ ವಿಷಯವಾಗಿದೆ. ಈಕೆಯ ಕೆಲಸಗಳ ವಿಷಯ ಹಂಚಿಕೆ ಮುಖಪುಟ ಹಾಗೂ ಟ್ವಿಟರ್ ಖಾತೆಗಳಲ್ಲಿ ಸದ್ಯಕ್ಕೆ ಲಭ್ಯವಾಗುತ್ತದೆ.
ಒಂದು ಜೊತೆ ಬಟ್ಟೆ ಅಭಿಯಾನ…ದ ಮನದಳದ ಮಾತು.. pic.twitter.com/fHXOfqMGf7
— ಜನನಿ ವತ್ಸಲ (@jananivathsala) January 28, 2020
ಹಾಗಾಗೀ ಇಂತಹ ಒಳ್ಳೆಯ ಕೆಲಸಗಳಿಗೆ ಸಹಕರಿಸುವ ಮನಸ್ಸುಗಳು ಸಮಾಜದಲ್ಲಿದ್ದಾವೆ ಎಂಬ ಬಲವಾದ ನಂಬಿಕೆಯಿಂದ ಜೊತೆಗೆ ಬಹು ಮುಖ್ಯವಾಗಿ ತನ್ನ ಸಾಮಾಜಿಕ ಕಾರ್ಯಗಳಲ್ಲಿ ಬಹು ನಂಬಿಕೆ ಇರಿಸಿ ಮುಂದೆ ಇನ್ನಷ್ಟು ಅನೇಕ ವಿಭಿನ್ನ ಅಭಿಯಾನಗಳನ್ನು ಕೈಗೊಂಡಿದ್ದಾರೆ. ಇನ್ನಷ್ಟು ಜನರು ಸಹ ಸಹಕರಿಸಿ ಕೈಲಾದಷ್ಟು ಸಹಾಯ ಮಾಡಿ ಎಂಬುದೇ ಜನನಿ ಮತ್ತು ಸ್ನೇಹಿತರ, ಸಮಾಜ ಹಿತ ಬಯಸುವ ಮನಸ್ಸುಗಳ ವಿನಂತಿಯಾಗಿದೆ. ಜನನಿ ವತ್ಸಲಾರವರನ್ನು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ : 8749065597