– ಡಾ: ಎನ್.ಬಿ.ಶ್ರೀಧರ
ನೀವೆಲ್ಲಾ ಒಂದು ಮೊಟ್ಟೆಯ ಕಥೆ ಕೇಳಿದ್ದೀರಿ. ಆದರೆ ಇದು ಒಂದು ಚಿಟ್ಟೆಯ ಕಥೆ. ಇದೊಂದು ಚಿಟ್ಟೆಗಳ ಸಾಮ್ರಾಜ್ಯದ ಕಲ್ಪನಾ ಕಥೆ. ಚಿಟ್ಟೆಯ ಜೀವನಚಕ್ರ ಮೊಟ್ಟೆ, ಲಾರ್ವಾ, ಪ್ಯುಪಾ, ಮತ್ತು ವಯಸ್ಕ ಚಿಟ್ಟೆ ಹೀಗೆ ಬದಲಾಗುವುದು ಎಲ್ಲರಿಗೂ ಗೊತ್ತೇ ಇದೆ. ಪ್ರತಿ ಹಂತದಲ್ಲಿಯೂ ಸಹ ಒಂದಿಷ್ಟು ದಿನಗಳನ್ನು ಕಳೆದೇ ಕಳೆಯುತ್ತದೆ. ಗಂಡು ಮತ್ತು ಹೆಣ್ಣು ಚಿಟ್ಟೆಗಳ ಮಿಲನದಿಂದ ಜಗತ್ತಿಗೆ ಮೊಟ್ಟೆಯ ರೂಪದಲ್ಲಿ ಹೊಸ ಚಿಟ್ಟೆಗಳ ಆಗಮನವಾಗುತ್ತದೆ. ಆರಂಭಿಕ ದಿನಗಳಲ್ಲಿ ಮೊಟ್ಟೆಯೊಳಗಿನ ಜೀವಗಳು ಅತ್ಯಂತ ಜೀವಕಳೆಯಿಂದಲೂ ಮತ್ತು ಉತ್ಸಾಹದಿಂದಲೂ ಇರುತ್ತವೆ. ಹೊಸ ಹೊಸದನ್ನು ಮಾಡಲು ತುಡಿಯುತ್ತಿರುತ್ತವೆ. ಹುಟ್ಟಿದ ಮೇಲೆ ಏನಾದರೂ ಮಾಡಲೇಬೇಕು, ನನ್ನ ಬದುಕಿಗೆ ಭಾರಿ ಅರ್ಥವಿದೆ ಅಂದುಕೊಳ್ಳುತ್ತವೆ. ಆಗ ಅವುಗಳಿಗೆ ಇತರ ಲಾರ್ವಾ, ಪ್ಯುಪಾ, ವಯಸ್ಕ ಮತ್ತು ಹಿರಿ ಚಿಟ್ಟೆಗಳು “ನಿನ್ನ ವೇಗ ಅತಿಯಾಯ್ತು, ನಿನ್ನದು ಬಲು ಜಾಸ್ತಿಯಾಯ್ತು, ನಾವು ನಿನ್ನ ಹಾಗೆ ಇದ್ದಾಗ ಇದೇ ರೀತಿ ಇದ್ದೆವು, ಪರಿಸ್ಥಿತಿಯ ಪ್ರಭಾವಕ್ಕೆ ಒಳಗಾಗಿ ಅನಿಯಾರ್ಯ ಕಾರಣದಿಂದ ನಿಷ್ಕ್ರಿಯರಾಗಿದ್ದೇವೆ, ನೀನೂ ಹಾರಾಡಬೇಡ, ಸುಮ್ಮನೆ ಕಾಲಕಳಿ, ಇದರಲ್ಲಿ ಇರುವುದು ಇಷ್ಟೇ” ಎಂದು ಪ್ರಾಥಮಿಕ ಎಚ್ಚರಿಕೆ ನೀಡುತ್ತವೆ. ಆದರೆ ಆಗಷ್ಟೆ ಮೊಟ್ಟೆಯೊಡೆದು ಜಗತ್ತಿಗೆ ಹೊರಬಂದ ಯುವ ಲಾರ್ವಾ ಚಿಟ್ಟೆಗೆ ಇದೆಲ್ಲಾ ಅರ್ಥವೇ ಆಗುವುದಿಲ್ಲ. ಇವೆಲ್ಲಾ ಔಟ್ ಡೇಟೆಡ್ ಚಿಟ್ಟೆಗಳು, ಇವುಗಳಿಗೆ ಏನೂ ತಿಳಿಯಲ್ಲ ಮಾಡರ್ನ್ ಕಾಲಕ್ಕೆ ಹೊಂದಿಕೊಂಡಿಲ್ಲ, ಜನರೇಶನ್ ಗ್ಯಾಪ್” ಎಂದುಕೊಂಡು ಅದೇ ಉತ್ಸಾಹದಿಂದ ಮುಂದುವರೆಯುತ್ತದೆ. ಪ್ಯೂಪಾ ಹಂತಕ್ಕೆ ಹೋಗಲು ಇನ್ನಿಲ್ಲದ ಕಸರತ್ತು ನಡೆಸುತ್ತದೆ.
ಇದೇ ಸಮಯದಲ್ಲಿ ಇಡೀ ವ್ಯವಸ್ಥೆಯ ಮುಖ್ಯಸ್ಥನಾದ “ದೇವ ಚಿಟ್ಟೆ” ಇದನ್ನೆಲ್ಲಾ ಗಮನಿಸುತ್ತಾ ಇರುತ್ತಾ ಇರುತ್ತದೆ. ಅಗಾಗ ವಿವಿಧ ಹಂತದ ಚಿಟ್ಟೆಗಳ ಎದುರು ಅಭಿನಂದಿಸುತ್ತದೆ ಸಹಾ. ಇದರಿಂದ ಮತ್ತೂ ಉತ್ಸಾಹಗೊಂಡ ಲಾರ್ವಾ ಚಿಟ್ಟೆ ತನ್ನನ್ನು ಇನ್ನೂ ಜಾಸ್ತಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತದೆ. ವ್ಯವಸ್ಥೆಯನ್ನೇ ಬದಲಾಯಿಸ ಹೊರಡುತ್ತದೆ. ದೇವ ಚಿಟ್ಟೆಗೆ ಪ್ಯೂಪಾ ಮತ್ತು ವಯಸ್ಕ ಚಿಟ್ಟೆಗಳು ಕೆಲಸ ಮಾಡದೇ ಸೋಮಾರಿಯಾಗಿರುವುದರಿಂದ ಅದರ ಸಾಮ್ರಾಜ್ಯ ಶ್ರೀಮಂತವಾಗಿರಲು, ಉತ್ತಮ ಸಾಮ್ರಾಜ್ಯವೆಂದು ಹೆಸರು ಬರಲು ಲಾರ್ವಾ ಚಿಟ್ಟೆಗಳ ದುಡಿತ ಬೇಕಿರುತ್ತದೆ. ಹೇಗಿದ್ದರೂ ಅದು ಮತ್ತೊಂದು ಸಾಮ್ರಾಜ್ಯಕ್ಕೆ ಅಧಿಪತಿಯಾಗಲು ಬ್ರಹ್ಮಚಿಟ್ಟೆಯ ಗಮನ ಸೆಳಯ ಬೇಕಲ್ಲ. ಇತರ ಸಾಮ್ರಾಜ್ಯಗಳಿಗಿಂತ ಮುಂದಿರಬೇಕಲ್ಲ?
ದೇವಚಿಟ್ಟೆಯ ಈ ಅಭಿನಂದನೆ ಇದ್ದಕ್ಕಿದ್ದ ಹಾಗೆ ಪ್ಯೂಪ ಮತ್ತು ಹಿರಿಯ ಚಿಟ್ಟೆಗಳ ಹೊಟ್ಟೆಯ ದಾವಾನಲವನ್ನು ಹೆಚ್ಚಿಸುತ್ತದೆ. ಮೊನ್ನೆ ಮೊನ್ನೆಯಷ್ಟೆ ಜಗತ್ತಿಗೆ ಬಂದ ಮೊಟ್ಟೆ ಚಿಟ್ಟೆ ಲಾರ್ವಾ ಆಗಿ ಹೆಸರು ಪಡೆಯುವುದನ್ನು ಕಂಡು ಅವು ಕರುಬಿ ಸಾಯುತ್ತವೆ. ಅವುಗಳ ಹೊಟ್ಟೆಯ ಆಮ್ಲತೆ ಭಾರಿ ಜಾಸ್ತಿಯಾಗಿ ಅಲ್ಸರುಗಳಿಂದ ಬಳಲುತ್ತವೆ. ಲಾರ್ವಾ ಚಿಟ್ಟೆಗಳು ಪ್ಯೂಪಾ ಆಗಿ ಬೆಳೆದರೆ ತಮಗೆ ಪೈಪೋಟಿಯಾಗುತ್ತದೆ ಎಂದು ಕರುಬುತ್ತವೆ. ಮೊಟ್ಟೆ ಚಿಟ್ಟೆ ಲಾರ್ವಾ ಆಗಿ ಬದಲಾಗಿ ಅದರ ಪದರ ಕಳೆದುಕೊಂಡು ಪ್ಯೂಪಾ ಆಗದಂತೆ ಬಹಳ ತಯಾರಿ ನಡೆಸಿ ಸಾಕಷ್ಟು ಹಂತದಲ್ಲಿ ಪರಿಪರಿಯಾಗಿ ಅದಕ್ಕೆ ಕಿರುಕುಳಕೊಡುತ್ತವೆ. ಲಾರ್ವಾ ಚಿಟ್ಟೆಯ ಕೆಲಸವನ್ನೂ ತಮಗೂ ವಹಿಸಿ ಕಡ್ಡಾಯ ಮಾಡಿಬಿಟ್ಟರೆ ಕಷ್ಟ ಎಂದು “ನಿನ್ನ ಒಳ್ಳೆಯದಕ್ಕೇ ಹೇಳುತ್ತೇವೆ; ಒಂದು ಲಿಮಿಟ್ಟಿನಲ್ಲಿರು” ಎಂದು ಉಪದೇಶ ಮಾಡುತ್ತವೆ.
ಇವುಗಳ ಕುತಂತ್ರದಿಂದ ಕೆಲವು ಮೊಟ್ಟೆ ಚಿಟ್ಟೆಗಳು ಲಾರ್ವಾ ಚಿಟ್ಟೆಗಳು ಹಕ್ಕಿ, ಹುಳ, ಹುಪ್ಪಟೆಗಳ ಆಹಾರವಾಗಿ ಬಿಡುತ್ತವೆ. ಉಳಿದ ಪ್ಯೂಪಾ ಮತ್ತು ಹಿರಿಯ ಚಿಟ್ಟೆಗಳು ಇವುಗಳ ಸೋಲನ್ನು ಸಾವನ್ನು ಹಬ್ಬದಂತೆ ಸಂಭ್ರಮಿಸುತ್ತವೆ. ಮೊಟ್ಟೆ ಚಿಟ್ಟೆ ಲಾರ್ವಾ ಚಿಟ್ಟೆಗಳ ಕಾಲೆಳೆದು ಅವು ನೆಲಕ್ಕೆ ಬಿದ್ದು ಮತ್ತೆ ಮೇಲೇಳಲು ಆಗದೇ ಶಕ್ತಿ ಕಳೆದುಕೊಂಡಿದ್ದು ಅವುಗಳಿಗೆ ಬಹಳ ಸಂತೋಷ ಪಡುತ್ತವೆ. ಮನಸ್ಸಿನಲ್ಲಿಯೇ ತಮ್ಮ ಮುಂದಿನ ಪ್ರತಿಸ್ಪರ್ಧಿಯನ್ನು ಮಣಿಸಿದ ಸಾರ್ಥಕ ಭಾವನೆ ಅವುಗಳಿಗೆ ಬರುತ್ತವೆ.
ಪ್ಯೂಪಾ ಮತ್ತು ವಯಸ್ಕ ಚಿಟ್ಟೆಗಳು ಲಾರ್ವಾ ಚಿಟ್ಟೆಗಳಿಗೆ ಪ್ಯೂಪಾ ಮತ್ತು ಚಿಟ್ಟೆ ಹಂತವು ಅತ್ಯಂತ ಅಪಾಯಕಾರಿಯಾಗಿದ್ದು, ಈ ಹಂತಕ್ಕೆ ಬರಲೇಬಾರದು ಎಂದು ಪರಿ ಪರಿಯಾಗಿ ತಿಳಿಯಪಡಿಸುತ್ತವೆ. ತಾವು ಪ್ಯೂಪಾ ಮತ್ತು ಚಿಟ್ಟೆ ಹಂತದಲ್ಲಿದ್ದಾಗ ಅವುಗಳಿಗೆ ಚಿಟ್ಟೆ, ಹಿರಿಯ ಚಿಟ್ಟೆ ಮತ್ತು ದೇವಚಿಟ್ಟೆಗಳು ನೀಡಿದ ಅಪರಿಮಿತ ಕಿರುಕುಳಗಳನ್ನು ದಿನವೂ ಹೇಳಿ ಹೇಳಿ ಅದರ ಉತ್ಸಾಹವು ಬತ್ತಿ ಹೋಗುವಂತೆ ಮಾಡುತ್ತವೆ. ಸಮಯಕ್ಕೆ ಸರಿಯಾಗಿ ಹೇಗೆ ಬೆಳವಣಿಗೆ ಹೊಂದಿದರೆ, ಸಮಯ ಪಾಲನೆ ಮಾಡಿದರೆ, ಅವುಗಳ ಕರ್ತವ್ಯವನ್ನು ಶ್ರದ್ಧೆಯಿಂದ ನಿಭಾಯಿಸಿದರೆ ಆಗುವ ತೊಂದರೆಯ ಬಗ್ಗೆ ನಿರಂತರವಾಗಿ ಬುದ್ಧಿ ಹೇಳುತ್ತಾ ಅವು ಹೇಳುವುದೆಲ್ಲವೂ ಸಹ ಮೊಟ್ಟೆ ಚಿಟ್ಟೆಯ ಒಳಿತಿಗಾಗಿಯೇ ಎಂದು ನಂಬಿಸುತ್ತವೆ. ಆದರೂ ಸಹ ಕೆಲವೊಂದು ಲಾರ್ವಾ ಚಿಟ್ಟೆಗಳು ಹೇಗೇಗೋ ಮಾಡಿ ಪ್ಯೂಪಾ ಹಂತಕ್ಕೆ ಹೋಗಿಯೇ ಬಿಡುತ್ತವೆ.
ಒಂದು ಹಂತದಲ್ಲಿ ಮೊಟ್ಟೆ ಚಿಟ್ಟೆ ಇದನ್ನು ನಂಬಿ ತನ್ನ ಬೆಳವಣಿಗೆಯ ಗತಿವಿಧಿಯನ್ನೇ ಕಳೆದುಕೊಂಡಾಗ ಅದನ್ನು ಅದರ ಗೂಡಿನಿಂದ ಯಜಮಾನ ಚಿಟ್ಟೆಗಳು ಮತ್ತು ದೇವಚಿಟ್ಟೆ ಎಲ್ಲಾ ಸೇರಿ ಹೊರಗೆ ಹಾಕಿದಾಗ ಪ್ಯೂಪಾ ವಯಸ್ಕ ಮತ್ತು ಹಿರಿಯ ಚಿಟ್ಟೆಗಳೆಲ್ಲಾ ಕುಪ್ಪಳಿಸಿ ವಿಜಯೋತ್ಸಾಹದಲ್ಲಿ ರಣಕೇಕೆ ಹಾಕಿ ನೃತ್ಯ ಮಾಡುತ್ತವೆ. ಲಾರ್ವಾ ಚಿಟ್ಟೆಗಳು ಬೇಗ ಬೆಳೆದು ಜಾಸ್ತಿ ಕೆಲಸ ಮಾಡಿ ಪ್ಯೂಪಾ ಆಗದಂತೆ ಆಗಲು ಇನ್ನಿಲ್ಲದ ಕಸರತ್ತು ಮಾಡುತ್ತವೆ. ಆದರೂ ಸಹ ಕೆಲವೊಂದು ಮೊಟ್ಟೆ ಚಿಟ್ಟೆಗಳು ಯಾರ ಬಾಯಿಗೂ ಬೀಳದೇ, ಆಹಾರವಿಲ್ಲದೇ ಸಾಯದೇ ಹೇಗೋ ಅವುಗಳ ಸ್ವಂತ ಬಲದಮೇಲೋ ಅಥವಾ ಅಕ್ಕಪಕ್ಕದ ಮೊಟ್ಟೆಗಳ ರಸಹೀರಿ ಪ್ಯೂಪಾ ಹಂತಕ್ಕೆ ತಲುಪಿಯೇ ಬಿಡುತ್ತವೆ.
ಒಂದಿಷ್ಟು ಹಿರಿಯ ಒಳ್ಳೆಯ ಚಿಟ್ಟೆಗಳು ಮೊಟ್ಟೆ ಮತ್ತು ಲಾರ್ವಾ ಹಂತದ ಚಿಟ್ಟೆಗಳನ್ನು ಒಳ್ಳೊಳ್ಳೆಯ ಮಾತುಗಳನ್ನು ಹೇಳಿ ಪ್ರೋತ್ಸಾಹಿಸುತ್ತವೆ. ಅತ್ಯುತ್ಸಾಹದಿಂದ ಹಿರಿತನದ ರೇಖೆಯನ್ನು ಸಹ ದಾಟದಂತೆ ಎಚ್ಚರ ನೀಡುತ್ತವೆ. ಅವುಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನೂ ಸಹ ಒದಗಿಸುತ್ತವೆ. ಲಾರ್ವಾ ಮತ್ತು ಪ್ಯೂಪಾ ಚಿಟ್ಟೆಗಳು ವ್ಯವಸ್ಥೆಯ ಬಗ್ಗೆ ಖಿನ್ನಗೊಂಡರೆ ಸಮಾದಾನಪಡಿಸುತ್ತವೆ. ಆದರೆ ಈ ಒಳ್ಳೆಯ ಚಿಟ್ಟೆಗಳು ಅಲ್ಪಸಂಖ್ಯಾತವಾಗಿರುವುದರಿಂದ ಇವುಗಳ ಮಾತು ಆಯಾ ಚಿಟ್ಟೆ ರಾಜ್ಯಗಳಲ್ಲಿ ನಡೆಯುವುದೇ ಇಲ್ಲ. ಅವುಗಳ ಜೀವಮಾನದಲ್ಲಿ ಯಜಮಾನ ಚಿಟ್ಟೆಯ ಸ್ಥಾನವೇ ದೊರೆಯುವುದಿಲ್ಲ. ಯಜಮಾನನಾಗಬೇಕೆಂಬ ಚಿಟ್ಟೆಯು ಹೇಗಾದರೂ ಮಾಡಿ ಇವುಗಳನ್ನು ಪೈಪೋಟಿಗಿಳಿಯದಂತೆ ತಡೆಯುತ್ತದೆ. ಯಜಮಾನ ಚಿಟ್ಟೆಯ ಸ್ಥಾನ ಬಹಳ ರಿಸ್ಕಿನದು, ಬಹಳ ಜವಾಬ್ದಾರಿಯದು, ಅನೇಕರಿಗೆ ಮಣೆ ಹಾಕಬೇಕಾಗುತ್ತದೆ,ಕಾಗೆ, ಗೂಗೆ, ಗುಬ್ಬಚ್ಚಿಗಳ ಆಹಾರವಾಗಬೇಕಾಗುತ್ತದೆ ಎಂದೆಲ್ಲಾ ಹೇಳಿ ಸಜ್ಜನ ಚಿಟ್ಟೆಗಳ ಜೀವನೋತ್ಸಾಹ ಕುಂದಿಸಿ ಯಜಮಾನ ಚಿಟ್ಟೆ ಪಟ್ಟಕ್ಕೆ ಪೈಪೋಟಿ ಒಡ್ಡದಂತೆ ತಡೆಯುತ್ತದೆ. ಕ್ರಮೇಣ ಈ ಸಜ್ಜನ ಚಿಟ್ಟೆಗಳೂ ಸಹ ಜೀವನದಲ್ಲಿ ಜಿಗುಪ್ಸೆಗೊಂಡು ನೈಸರ್ಗಿಕ ಅಂತ್ಯವನ್ನು ಕಾಯುತ್ತಿರುತ್ತವೆ.
ಒಮ್ಮೊಮ್ಮೆ ಪ್ಯೂಪಾ ಮತ್ತು ಹಿರಿಚಿಟ್ಟೆಗಳೂ ಸಹ ತಮ್ಮಲ್ಲೇ ಪೈಪೋಟಿಗೆ ಬೀಳುತ್ತವೆ. ಲಾರ್ವಾ ಹಂತದಿಂದ ಪ್ಯೂಪಾ ಚಿಟ್ಟೆ ವಯಸ್ಕ ಚಿಟ್ಟೆಯಾಗುವುದು ಹಿರಿಯ ಚಿಟ್ಟೆಗಳಿಗೆ ಸುತರಾಂ ಇಷ್ಟವಿರುವುದಿಲ್ಲ. ಇಲ್ಲ ಸಲ್ಲದ ನೀತಿ ನಿಯಮಗಳನ್ನು ಅವುಗಳಿಗೆ ಹೇರಿ ಅವು ನಿಷ್ಕ್ರಿಯಗೊಳ್ಳುವಂತೆ ಮಾಡುತ್ತವೆ. ಅವುಗಳ ಚಿಂತನೆ ಪುರಾತನವಾಗಿದ್ದರೂ ಸಹ ಅದನ್ನು ಎಲ್ಲಾ ಪ್ಯುಫಾಗಳ ಮೇಲೆ ಒತ್ತಾಯಿಸುತ್ತವೆ. ಯಜಮಾನ ಚಿಟ್ಟೆಗಳೂ ಸಹ ಇವುಗಳ ಸಮಕಾಲೀನರಾಗಿರುವುದರಿಂದ ಇವುಗಳ ಮಾತನ್ನು ಕೇಳುತ್ತವೆ. ಇವೆಲ್ಲಾ ಪ್ರಪಂಚ ಬದಲಾಗಲ್ಲ, ಸಾಮ್ರಾಜ್ಯ ಬದಲಾಗಲ್ಲ, ರಾಜ್ಯಗಳ ಯಜಮಾನರು ಬದಲಾಗಲ್ಲ ಈ ವ್ಯವಸ್ಥೆಯೇ ಹೀಗೆ ಎಂದು ಲಾರ್ವಾ ಮತ್ತು ಪ್ಯೂಪಾ ಚಿಟ್ಟೆಗಳ ಆತ್ಮಸ್ಥೈರ್ಯವನ್ನೇ ಕುಂದಿಸುತ್ತವೆ. ಹಿರಿಯ ಚಿಟ್ಟೆಗಳಿಗೂ ಸಹ ಬೇರೆ ರಾಜ್ಯಕ್ಕೆ ಹೋಗುವುದು ಸುತರಾಂ ಇಷ್ಟವಿಲ್ಲದಿರುವುದರಿಂದ ಯಜಮಾನ ಮತ್ತು ದೇವಚಿಟ್ಟೆಯ ನಿಷ್ಕ್ರಿಯತೆಯ ಬಗ್ಗೆ ಅಪರೋಕ್ಷವಾಗಿ ಹೇಳಿ ಕೊರಗುತ್ತವೆಯೇ ಹೊರತು ಅವುಗಳ ಮುಂದೆ ತುಟಿ ಪಿಟಕ್ ಎನ್ನುವುದಿಲ್ಲ.
ಯಜಮಾನ ಚಿಟ್ಟೆಗಳಿಗೆಲ್ಲಾ ದೇವಚಿಟ್ಟೆಯ ಆಕರ್ಷಕ ಸ್ಥಾನದ ಬಗ್ಗೆ ಮತ್ತು ಅದು ಆ ಪಟ್ಟವನ್ನು ಗಿಟ್ಟಿಸಿಕೊಳ್ಳಲು ಪಟ್ಟ ಪ್ರಯತ್ನ ವಿಧಾನಗಳ ಬಗ್ಗೆ ಗೊತ್ತಿರುವುದರಿಂದ ಮತ್ತು ಸ್ಪರ್ಧೆಯಲ್ಲಿ ಅವು ಸೋತಿರುವುದರಿಂದ ಒಳಗೊಳಗೇ ಕರುಬುತ್ತವೆ. ಆದರೆ ದೇವಚಿಟ್ಟೆಯೆದುರು ಮಾತ್ರ ಅತ್ಯಂತ ವಿದೇಯವಾಗಿ ವರ್ತಿಸುತ್ತವೆ. ದೇವಚಿಟ್ಟೆಯೇ ಯಜಮಾನ ಚಿಟ್ಟೆಗೆ ಪಟ್ಟ ಕಟ್ತಬೇಕಲ್ಲ? ಅದಕ್ಕೆ ಬೇಕಾದ ರಾಜ್ಯದ ಆಧಿಪತ್ಯವನ್ನು ಒದಗಿಸಬೇಕಲ್ಲ, ಅದರ ಅವಧಿ ಮುಗಿದ ಮೇಲೆ ಅದರ ಆಪ್ತ ರಾಜ್ಯಕ್ಕೆ ವಾಪಸ್ ಕಳಿಸಬೇಕಲ್ಲ? ಮತ್ತೊಂದು ಅವಧಿಗೂ ಅಧಿಕಾರ ವಿಸ್ತರಿಸಬೇಕಲ್ಲ? ಎಂಬ ಭಯ ಮತ್ತು ಅನಿಶ್ಚಿತತೆ ಅವುಗಳನ್ನೂ ಕಾಡುತ್ತಿರುವುದರಿಂದ ಅತ್ಯಂತ ಪ್ರಜ್ಞಾವಂತರಾಗಿಯೂ, ಕರ್ತವ್ಯನಿಷ್ಟೆಯಿಂದ ಇರುವಂತೆ ವರ್ತಿಸುತ್ತವೆ.
ದೇವಚಿಟ್ಟೆ ತನ್ನ ಸಾಮ್ರಾಜ್ಯವನ್ನು ವಿವಿಧ ಸಾಮಂತ ರಾಜ್ಯಗಳಲ್ಲಿ ವಿಂಗಡಿಸಿ ಪ್ರತಿ ರಾಜ್ಯಕ್ಕೂ ಸಹ ಒಂದು “ಯಜಮಾನ ಚಿಟ್ಟೆ” ಯನ್ನು ಮುಖ್ಯಸ್ಥನನ್ನಾಗಿ ನೇಮಿಸಿರುತ್ತದೆ. ಇದೂ ಸಹ ದೇವಚಿಟ್ಟೆಯ ಇಚ್ಚೆಗೆ ಬಿಟ್ಟಿದ್ದಾಗಿದ್ದರೂ ಸಹ ಒಮ್ಮೊಮ್ಮೆ ವಿವಿಧ ಚಿಟ್ಟೆಗಳ ಮೆರಿಟ್, ರಾಜಕೀಯ, ಹಣ, ಮತ್ತಿನ್ನೇನೋ ಕಾರಣದಿಂದ ಸಾಮಂತ ರಾಜ್ಯಗಳಿಗೆ ಅದರದೇ ಆಯ್ಕೆಯ ಚಿಟ್ಟೆಗಳನ್ನು ರಾಜರನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ಈ ಕುರಿತು ಖೇದವಿದ್ದರೂ ಸಹ ಅಸಹಾಯಕವಾಗುತ್ತದೆ. ದೇವಚಿಟ್ಟೆಯಾಗಲು ಅದೂ ಪೈಪೋಟಿ ಮಾಡಿ ಬ್ರಹ್ಮಚಿಟ್ಟೆಗೆ ಮತ್ತು ತ್ರಿಮೂರ್ತಿ ಚಿಟ್ಟೆಗಳಿಗೆ ಸಾಕಷ್ಟು ಹಣ, ಪ್ರಭಾವ, ಜಾತಿ ಮತ್ತು ಅದಕ್ಕಿಂತ ಮೆರಿಟ್ ಜಾಸ್ತಿ ಇರುವ ಚಿಟ್ಟೆಗಳನ್ನು ಮಣಿಸಿ ಬಂದಿರುವುದರಿಂದ ಅದಕ್ಕೆ ಬ್ರಹ್ಮ ಚಿಟ್ಟೆ ಮತ್ತು ತ್ರಿಮೂರ್ತಿ ಚಿಟ್ಟೆಗಳ ಮಾತುಕೇಳುವುದು ಅನಿವಾರ್ಯವಾಗಿ ಬಿಡುತ್ತದೆ.
ಯಜಮಾನ ಚಿಟ್ಟೆಗೆ ಆ ಹಂತಕ್ಕೆ ಹೋದ ಕೂಡಲೆ ರಕ್ಕೆಗಳು ಬಂದಿರುವುದರಿಂದ ಹಾರಲು ಸಾಧ್ಯವಿರುವುದರಿಂದ ತಾನು ಮೊಟ್ಟೆ, ಲಾರ್ವಾ, ಪ್ಯೂಪಾ ಮತ್ತು ಹಿರಿಯ ಚಿಟ್ಟೆಯ ಹಂತದಿಂದ ಬಂದಿದ್ದು ಮರೆತೇಹೋಗುತ್ತದೆ. ಅದು ಸದಾ ಆಕಾಶದಲ್ಲಿ ಹಾರುವುದರಿಂದ ನೆಲದ ಅಥವಾ ಗಿಡದ ಎಲೆ ಮೆಲ್ಲುತ್ತಾ ತೆವಳುವ ಲಾರ್ವಾ ಮತ್ತು ಪ್ಯೂಪಾಗಳು ಅತ್ಯಂತ ನಿಕೃಷ್ಟವಾಗಿ ಕಾಣತೊಡಗುತ್ತವೆ. ಅದು ಅತ್ಯಂತ ದರ್ಪದಿಂದ ವರ್ತಿಸಲು ಮತ್ತು ಹೊಸ ಹೊಸ ನಿಯಮಗಳನ್ನು ವಿಧಿಸಲು ಪ್ರಾರಂಭಿಸುತ್ತದೆ. ತಾನು ಮೊಟ್ಟೆ, ಲಾರ್ವಾ ಮತ್ತು ಪ್ಯೂಪಾ ಹಂತದಲ್ಲಿದ್ದಾಗ ಕಳೆದ ಸೋಮಾರಿತನ, ಸಮಯಪಾಲನೆ ಮಾಡದಿರುವುದು ಎಲ್ಲಾ ಮರೆತು ಹೋಗಿ ಇದ್ದಕ್ಕಿದ್ದ ಹಾಗೆ ಸಮಯಪಾಲನೆ, ಕರ್ತವ್ಯಪಾಲನೆ, ಕಷ್ಟಸಹಿಷ್ಣುತೆ, ನಿಯಮಪಾಲನೆ ಇತ್ಯಾದಿಗಳ ಬಗ್ಗೆ ಗಂಟೆಗಟ್ಟಲೇ ಭಾಷಣ ಮಾಡಲು ಮತ್ತು ಹೇರಲು ಪ್ರಯತ್ನಿಸುತ್ತದೆ. ಇತರ ರಾಜ್ಯಗಳ ಯಜಮಾನ ಚಿಟ್ಟೆಗಳು ಇದರ ಪರಮ ಸ್ನೇಹಿತರಾಗುತ್ತಾರೆ. ಅದರ ಸಹವರ್ತಿ ಹಿರಿಯ ಚಿಟ್ಟೆಗಳ ಜೊತೆ ಉಟೋಪಚಾರ, ಟೀಕಾಫಿ, ಭೋಜನ, ವಾಕಿಂಗ್ ಇತ್ಯಾದಿಗಳನ್ನು ಮಾಡಿದರೆ ತನ್ನ ಘನತೆಗೆ ಕುಂದು ಎಂದು ಭಾವಿಸಿ ಸಾಕಷ್ಟು ಅಂತರ ಕಾಯ್ದುಕೊಳ್ಳುತ್ತದೆ. ಯಜಮಾನ ಚಿಟ್ಟೆಯಾದೊಡನೆ ಈ ಮೊದಲು ನಡೆಸುತ್ತಿದ್ದ ಸಮೂಹ ಸಂಭಾಷಣೆಗಳನ್ನು ಇದ್ದಕ್ಕಿದ್ದ ಹಾಗೆ ನಿಲ್ಲಿಸಿಬಿಡುತ್ತದೆ. ಸಭೆಗಳಲ್ಲಿ ನಡೆಸುತ್ತಿದ್ದ ಭೀಕರ ಟೀಕಾಪ್ರಹಾರಗಳನ್ನೆಲ್ಲಾ ಇದ್ದಕ್ಕಿದ್ದ ಹಾಗೆ ನಿಲ್ಲಿಸಿ ಆಡಳಿತಪರವಾಗಿಬಿಡುತ್ತದೆ.
ಇದನ್ನು ಓದಿ : ಭಾರತದಲ್ಲಿ ಮನುಷ್ಯರಿಗೆ ಹಕ್ಕಿಜ್ವರದ ಸೋಂಕು ದೃಢಪಡಿಸಿದ ವಿಶ್ವ ಆರೋಗ್ಯ ಸಂಸ್ಥೆ
ಅದರ ಮಾತನ್ನು ಕೇಳುವ ಹಿರಿಯ ಮತ್ತು ಕೆಲವು ಲಾರ್ವಾ ಮತ್ತು ಪ್ಯೂಪಾ ಹಂತದ ಚಿಟ್ಟೆಗಳನ್ನು ಆಪ್ತವಲಯದಲ್ಲಿ ಗುರುತಿಸಿ ಅವುಗಳಿಗೆ ಎಲ್ಲಾ ಸೌಲಭ್ಯವನ್ನೂ ಕೊಡುತ್ತದೆ. ಈ ಚಿಟ್ಟೆಗಳೂ ಸಹ ಯಜಮಾನ ಚಿಟ್ಟೆಗೆ ಆಪ್ಯಾಯಮಾನವಾಗುವಂತೆ ಅದನ್ನು ಹೊಗಳಲು ಪ್ರಾರಂಭಿಸುತ್ತವೆ. ಯಜಮಾನ ಚಿಟ್ಟೆಯ ಬಣ್ಣ, ಅದರ ಮಾತು, ಭಾಷಣ, ಹಾವಭಾವ, ಇಲ್ಲದ ಆಡಳಿತ ವೈಖರಿಯನ್ನು ಬಣ್ಣ ಬಣ್ಣದ ಶಬ್ಧಬಂಡಾರದ ಮೂಲಕ ಹೊಗಳಿ ಅದನ್ನು ಅಟ್ಟಕ್ಕೇರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಇತರ ಲಾರ್ವಾ ಮತ್ತು ಪ್ಯೂಪಾ ಚಿಟ್ಟೆಗಳಿಗೆ ಯಾವುದೇ ಅಧಿಕಾರ ದೊರೆಯದಂತೆ ಮಾಡುವಲ್ಲಿ ಯಶಸ್ವಿಯಾಗಿ ಮಾಡುತ್ತವೆ.
ಇದ್ದಕ್ಕಿದ್ದ ಯಜಮಾನ ಚಿಟ್ಟೆಗೆ ತಾನು ಚಿಟ್ಟೆ ಜಾತಿಗೆ ಸೇರಿದ್ದರೂ ಅದನ್ನು ಮರೆತು ಅದರದೇ ಬಣ್ಣದ “ಸ್ವಜಾತಿ” ಚಿಟ್ಟೆಗಳ ವ್ಯಾಮೋಹ ಪ್ರಾರಂಭವಾಗಿ ಅವರನ್ನು ಹತ್ತಿರ ಸೇರಿಸಿರುತ್ತದೆ. ಅವುಗಳಿಗೆ ಕೆಲವೊಮ್ಮೆ ಗುಟ್ಟಾಗಿ ಮತ್ತು ಕೆಲವೊಮ್ಮೆ ಬಹಿರಂಗವಾಗಿ ಸಹಾಯ ಮಾಡಲು ಪ್ರಾರಂಭಿಸುತ್ತದೆ. ಪರಜಾತಿಯ ಯಾವುದೇ ಹಂತಕ್ಕೆ ಸೇರಿದ ಚಿಟ್ಟೆಗಳು ಅದಕ್ಕೆ ವಿರೋಧಿ ಬಣವಾಗಿ ಕಾಣಿಸುತ್ತವೆ.
ಯಜಮಾನ ಚಿಟ್ಟೆಗಳಿಗೆ ವಿವಿಧ ಸಭೆ ಸಮಾರಂಭಗಳಲ್ಲಿ ಸಾಕಷ್ಟು ಗೌರವಾದರಗಳು ದೊರೆಯಲಾರಂಭಿಸುತ್ತದೆ. ಅದರ ಮನೆಯ ಮುಂದೆ ಘನತೆಗೆ ತಕ್ಕ ವಾಹನ ಬಂದು ನಿಲ್ಲುವುದರಿಂದ ಹೆಂಡತಿ ಚಿಟ್ಟೆ ಒರೆಗಿತ್ತಿ ಚಿಟ್ಟೆಗಳ ಮುಂದೆ ಗತ್ತಿನಿಂದ ಓಡಾಡುವುದನ್ನು ನೋಡಿ ಅವು ಕರುಬುತ್ತವೆ. ಇದೆಲ್ಲಾ ಗೌರವವನ್ನು ಆನಂದದಿಂದ ಅನುಭವಿಸುವ ಯಜಮಾನ ಚಿಟ್ಟೆ ಸಮಸ್ಯೆಗಳು ಬಂದಾಗ ಮಾತ್ರ ಅದು ತನ್ನದಲ್ಲ ಎನ್ನುತ್ತಾ ದೇವಚಿಟ್ಟೆಯ ಸಾಮ್ರಾಜ್ಯದ ಮೇಲೆ ಎತ್ತಿಹಾಕುತ್ತದೆ ಅಥವಾ ಆಯಾ ಜವಾಬ್ದಾರಿ ಹೊಂದಿದ ಹಿರಿಚಿಟ್ಟೆಗಳ ಮೇಲೆ ಮುಲಾಜಿಲ್ಲದೇ ಎತ್ತಿಹಾಕಿ ಅವುಗಳ ಬಲಿಹಾಕುತ್ತದೆ ಮತ್ತು ತಾನು “ಸೇಫ್” ಆಗುತ್ತದೆ. ಬೆನೆಫಿಟ್ಟನ್ನು ಅದು ಖಂಡಿತಾ ಬಿಡುವುದಿಲ್ಲ ಮತ್ತು ರಿಸ್ಕನ್ನು ಹತ್ತಿರವೂ ಸೇರಿಸುವುದಿಲ್ಲ.
ಒಂದಿಷ್ಟು ಹೆಣ್ಣು ಚಿಟ್ಟೆಗಳು ಯಜಮಾನ ಚಿಟ್ಟೆಯ ಗಮನ ಸೆಳೆಯುತ್ತವೆ. ಅವು ವಿವಿಧ ಬಣ್ಣಗಳನ್ನು ಹೊಂದಿ ಸುಂದರವಾಗಿದ್ದಷ್ಟು ಯಜಮಾನ ಚಿಟ್ಟೆಗಳು ಆಕರ್ಷಿತವಾಗುತ್ತವೆ. ಸುಂದರ ಚಿಟ್ಟೆಯ ಸೇವೆಗೆ ಸದಾ ಕಾದಿರುತ್ತವೆ. ಅದನ್ನು ಬೇರೆ ರಾಜ್ಯಕ್ಕೆ ವರ್ಗಾವಣೆಯಾಗುವಂತಿದ್ದರೆ ದೇವಚಿಟ್ಟೆಯ ಜೊತೆ ಕಾದಾಡಿ ಅವುಗಳ ರಾಜ್ಯದಲ್ಲಿಯೇ ಇರುವಂತೆ ಮಾಡುತ್ತವೆ. ಸುಂದರ ಚಿಟ್ಟೆಗಳಿದ್ದರೆ ಯಜಮಾನ ಚಿಟ್ಟೆಗೆ ಏನೋ ಒಂಥರಾ ಆನಂದ, ಅವುಗಳ ಸಾನ್ನಿಧ್ಯವೇ ಅದಕ್ಕೆ ಹಬ್ಬ, ಅವುಗಳ ಸುಮಧುರ ಮಾತೇ ಯಜಮಾನ ಚಿಟ್ಟೆಗೆ ಚೇತೋಹಾರಿ. ಆದರೆ ಯಜಮಾನ ಚಿಟ್ಟೆ ಇನ್ನೂ ಮುಂದುವರೆಯಲು ಸಿಡಿ, ಪೆನ್ ಡ್ರೈವ್ ಇತ್ಯಾದಿ ಕರ್ಣಕಠೋರ ಶಬ್ಧಗಳು ನೆನಪಾಗಿ ಗಾಬರಿಗೊಂಡು ದೂರದಿಂದಲೇ ಅವುಗಳ ಸೌಂದರ್ಯವನ್ನು ಆಸ್ವಾದಿಸುತ್ತದೆ. ಸುಂದರ ಚಿಟ್ಟೆಗಳು ಹತ್ತಿರ ಸುಳಿದಾಡಿದರೆ ಸಾಕು, ಏನೋ ಆನಂದದಿಂದ ತೇಲುತ್ತದೆ, ಹಾರ್ಮೋನುಗಳಲ್ಲಿ ವ್ಯತ್ಯಯವಾಗಿ ಸುಂದರ ಲೋಕದಲ್ಲಿ ಸುಂದರ ಚಿಟ್ಟೆಯೊಡನೆ ಇದ್ದಂತೆ ಕಲ್ಪನೆ ಮಾಡಿಕೊಂಡು ಇದ್ದಕ್ಕಿದ್ದ ಹಾಗೆ ಹೆಂಡತಿ ಚಿಟ್ಟೆಯ ಬಿರುನುಡಿಗಳ ನೆನಪಾಗಿ ಬೆಚ್ಚಿ ಬೀಳುತ್ತದೆ. ಲಾರ್ವಾ, ಪ್ಯೂಪಾ ಮತ್ತು ವಯಸ್ಕ ಚಿಟ್ಟೆಗಳು ಯಜಮಾನ ಚಿಟ್ಟೆಗೆ “ಜೊಲ್ಲು ಪಾರ್ಟಿ” ಎಂದು ಹೆಸರಿಸಿ ಅವುಗಳಿಗೆ ಸುಂದರ ಚಿಟ್ಟೆಗಳ ಸಹವಾಸ ದೊರಕದಿರುವದಕ್ಕೆ ವಿಷಾದಾನಂದವನ್ನು ಅನುಭವಿಸುತ್ತವೆ. ಸುಂದರ ಚಿಟ್ಟೆಗಳ ಮೇಲೆ ಇಲ್ಲ ಸಲ್ಲದ ಕಥೆ ಕಟ್ಟಿ ಸುಖಿಸುತ್ತವೆ.
ದೇವಚಿಟ್ಟೆಗೆ ಲಾರ್ವಾ, ಪ್ಯೂಪಾ, ವಯಸ್ಕ ಅಥವಾ ಹಿರಿಯ ಚಿಟ್ಟೆಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾವಣೆ ಮಾಡುವ ಅಧಿಕಾರವಿರುತ್ತದೆ. ಆದರೆ ತಮ್ಮದೇ ಆದ “ಹಿತಕರ” ವಾತಾವರಣದಲ್ಲಿರುವ ಲಾರ್ವಾ, ಪ್ಯೂಪಾ ಮತ್ತು ವಯಸ್ಕ ಚಿಟ್ಟೆಗಳು ಈ ವರ್ಗಾವಣೆಗೆ ಭಾರಿ ಭಯಪಡುತ್ತವೆ. ಕಾರಣ ವರ್ಗಾವಣೆಯಾಗದಂತೆ ತೊಂದರೆಯಾಗದಿರಲು ಅವು ದೇವಚಿಟ್ಟೆಯ ಆಡಳಿತದಲ್ಲಿ ಅನೇಕ ರೀತಿಯ ಅಪರಾತಪರಾಗಳಿದ್ದರೂ ಸಹ ಅದನ್ನು ಬಹಿರಂಗವಾಗಿ ಬಾಯಿ ಬಿಟ್ಟು ಹೇಳಲೂ ಸಹ ಭಯಪಡುತ್ತವೆ. ಅವುಗಳ ರಾಜ್ಯವ್ಯಾಪ್ತಿಯಲ್ಲಿಯೇ ಸ್ವಂತ ಮನೆ ಮಠ ಮಾಡಿಕೊಂಡಿರುವುದರಿಂದ ಮತ್ತು ಅವುಗಳಿಗೂ ಹೆಂಡತಿ ಚಿಟ್ಟೆ ಮತ್ತು ಮೊಟ್ಟೆ, ಲಾರ್ವಾ ಹಂತದ ಮರಿ ಚಿಟ್ಟೆಗಳಿರುವುದರಿಂದ ಅವುಗಳ ವಿದ್ಯಾಭ್ಯಾಸ ಮತ್ತು ಮನೆಯಲ್ಲಿ ಕಾಯಿಲೆಯಿಂದ ಬಳಲುತ್ತಿರುವ ತಂದೆ ತಾಯಿ ಇತ್ಯಾದಿ ಮುದಿಚಿಟ್ಟೆಗಳಿರುವುದರಿಂದ ನೋವು, ಅನ್ಯಾಯ, ಹಿಂಸೆ ನಡೆದರೂ ಸಹ ನನಗೇಕೆ ಈ ಸಹವಾಸ? ನನಗೆ ಬಿಸಿಯಾದ ವಾತಾವರಣದ ಬೇರೆ ರಾಜ್ಯಕ್ಕೆ ಕಳಿಸದಿದ್ದರೆ ಸಾಕು ಅನ್ನುತ್ತಾ ಸದಾ ವರ್ಗಾವಣೆಯ ಅನಿಶ್ಚಿತತೆಯ ಭಯದಲ್ಲಿಯೇ ಕಾಲ ನೂಕುತ್ತವೆ.
ಈ ಮಧ್ಯೆ ವಿವಿಧ ರಾಜ್ಯಗಳ ಯಜಮಾನ ಚಿಟ್ಟೆಯಡಿಯಿರುವ ಒಂದಿಷ್ಟು ರೆಬೆಲ್ ಚಿಟ್ಟೆಗಳು ನೀತಿ, ನಿಯಮ, ಕರ್ತವ್ಯ ನಿಷ್ಟೆ ಅದು, ಇದು ಇತ್ಯಾದಿಗಳನ್ನೆಲ್ಲಾ ಹೇಳಿಕೊಂಡು ಭ್ರಮೆಯಲ್ಲಿ ಓಡಾಡುತ್ತವೆ. ಅವುಗಳಿಗೆ ಬ್ರಹ್ಮಚಿಟ್ಟೆ ಮತ್ತು ಒಮ್ಮೊಮ್ಮೆ ತ್ರಿಮೂರ್ತಿ ಚಿಟ್ಟೆಗಳ ಸಂಪರ್ಕವೂ ಇರುವುದರಿಂದ ಒಂದಿಷ್ಟು ಅಹಂಕಾರವೂ ಇರುತ್ತದೆ. ಯಜಮಾನ ಚಿಟ್ಟೆಗಳ ಪಕ್ಷಪಾತವನ್ನೆಲ್ಲಾ ಅದು ಮೇಲಿಂದ ಮೇಲೆ ಎತ್ತಿ ತೋರಿಸುತ್ತಿರುತ್ತದೆ. ಇದು ಯಜಮಾನ ಚಿಟ್ಟೆಗೆ ಅದರದೇ ಆದ ನಿಯಮಗಳನ್ನು ಜಾರಿಗೆ ತರಲು ತೊಂದರೆಯಾಗುವುದರಿಂದ, ಹೊಗಳುಭಟ್ಟ ಚಿಟ್ಟೆಗಳಿಗೆಲ್ಲಾ ಉತ್ತಮ ಸ್ಥಾನಮಾನ ನೀಡಲು ಅಡ್ಡಿಬರುವುದರಿಂದ ತನ್ನ ಸಮಕಾಲೀನ ಇತರ ರಾಜ್ಯದ ಮತ್ತು ದೇವಚಿಟ್ಟೆಯ ಪಕ್ಕದ ಯಜಮಾನ ಚಿಟ್ಟೆಗಳನ್ನೆಲ್ಲಾ ಎತ್ತಿಕಟ್ಟುತ್ತದೆ. ಅವು ಈ ರೆಬೆಲ್ ಚಿಟ್ಟೆಗಳ ರೆಕ್ಕೆಪುಕ್ಕ ಕಟ್ಟು ಮಾಡಿ ಹಾರಾಡದಂತೆ ಮಾಡುತ್ತವೆ. ಅದಕ್ಕೆ ಸಿಗಬೇಕಾದ ಸೌಲಭ್ಯಕ್ಕೆಲ್ಲ ಪರಿ ಪರಿ ನಿಯಮಗಳನ್ನೆಲ್ಲಾ ಹೇರಿ ಅದು ನೈತಿಕ ಅಧ:ಪತನಕ್ಕೆ ಜಾರುವಂತೆ ಮಾಡುತ್ತವೆ.
ಪ್ರತಿಯೊಂದು ರಾಜ್ಯದಲ್ಲಿಯೂ ಸಹ ರೆಬೆಲ್ ಚಿಟ್ಟೆಗಳಿರುವುದರಿಂದ ಸಮಾನ ಮನಸ್ಕ ಯಜಮಾನ ಚಿಟ್ಟೆಗಳು ಶತ್ರುವಿನ ಶತ್ರು ಮಿತ್ರ ಎಂಬಂತೆ ಒಂದಾಗಿಬಿಡುತ್ತವೆ. ರೆಬೆಲ್ ಚಿಟ್ಟೆಗಳು ಅಲ್ಪಸಂಖ್ಯಾತವಾಗಿರುವುದರಿಂದ ಅವುಗಳ ಪ್ರಸ್ತಾವನೆ ಎಲ್ಲಾ ಕಡೆ ಬಿದ್ದು ಹೋಗುತ್ತವೆ. ಇತರ ಚಿಟ್ಟೆಗಳೆಲ್ಲಾ ರೆಬೆಲ್ ಚಿಟ್ಟೆಗಳ ಕಾರ್ಯವೆಲ್ಲಾ ಸರಿಯಿದೆಯಾದರೂ ಇತರ ರಾಜ್ಯಕ್ಕೆ ವರ್ಗಾವಣೆಗೊಂದರೆ ಅವುಗಳ ತೊಂದರೆಯನ್ನು ಹೇಳಿಕೊಂಡು “ನೈತಿಕ” ಬೆಂಬಲವನ್ನು ಮಾತ್ರ ವ್ಯಕ್ತಪಡಿಸುತ್ತವೆ. ದೇವಚಿಟ್ಟೆಯ ಕಿವಿ ಊದಿ ಅಥವಾ ಹಠ ಹಿಡಿದು ಯಜಮಾನ ಚಿಟ್ಟೆಗಳೆಲ್ಲಾ ವರ್ಗಾವಣೆಯ ಸಮಯದಲ್ಲಿ ರೆಬೆಲ್ ಚಿಟ್ಟೆಯ ವರ್ಗಾವಣೆ ಮಾಡಿಸುತ್ತವೆ. ನೀತಿ, ನಿಯಮ ಹೇಳಿಕೊಂಡು ಓಡಾಡುವ ರೆಬೆಲ್ ಚಿಟ್ಟೆ ಕೋರ್ಟು, ಕಚೇರಿ, ಬ್ರಹ್ಮಚಿಟ್ಟೆ ಮತ್ತು ತ್ರಿಮೂರ್ತಿ ಚಿಟ್ಟೆಗಳ ಎಡತಾಕುತ್ತದೆ. ಎಲ್ಲಾ ಕಡೆ ಅದಕ್ಕೆ ಸೋಲಾಗುತ್ತದೆ. ಅದು ಭ್ರಮನಿರಸನ ಗೊಳ್ಳುತ್ತದೆ ಮತ್ತು ತನ್ನ ಮೂಲಸ್ಥಾನಕ್ಕೆ ಬರಲು ಎಲ್ಲಿಲ್ಲದ ಕಸರತ್ತು ನಡೆಸುತ್ತಾ ಎಲ್ಲ ಚಿಟ್ಟೆಗಳ ವರ್ಗಕ್ಕೆ ಸೇರಿ ಹೋಗುತ್ತದೆ. ಅದರ ರೆಬೆಲ್ ಗುಣಗಳೆಲ್ಲಾ ಮಣ್ಣು ಸೇರಿ ಹೋಗುತ್ತವೆ. ಯಾವುದೇ ಚಿಟ್ಟೆಗಳು ತನ್ನ ಕಷ್ಟಕಾಲದಲ್ಲಿ ಸಹಾಯಕ್ಕೆ ಬರದಿರುವುದಕ್ಕೆ ಬೇಸರಗೊಂಡು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ತನ್ನ ಕಾಲ ಸವೆಸುತ್ತದೆ.
ಕಾಲಚಕ್ರ ನಿಂತಿತೇ? “ಮೈ ಸಮಯ್ ಹುಂ” ಎಂದು ಅದು ತಿರುಗುತ್ತಾ ಇರುತ್ತದೆ. ಹಿರಿಯ ಚಿಟ್ಟೆಗಳೆಲ್ಲಾ ನಿವೃತ್ತಿಗೊಳ್ಳುತ್ತವೆ. ಲಾರ್ವಾ ಚಿಟ್ಟೆಗಳು ಪ್ಯೂಪಾಗಳಾಗಿ, ಪ್ಯೂಪಾಗಳು ವಯಸ್ಕ ಚಿಟ್ಟೆಗಳಾಗಿ, ವಯಸ್ಕ ಚಿಟ್ಟೆಗಳು ಹಿರಿಯ ಚಿಟ್ಟೆಗಳಾಗಿ ಬದಲಾಗುತ್ತವೆ. ಹೊಸ ಹೊಸ ಚಿಟ್ಟೆಗಳ ಮೊಟ್ಟೆ ಮತ್ತು ಲಾರ್ವಾಗಳ ಎಂಟ್ರಿಯಾಗುತ್ತದೆ. ಬ್ರಹ್ಮಚಿಟ್ಟೆ ಮತ್ತು ತ್ರಿಮೂರ್ತಿ ಚಿಟ್ಟೆಗಳು ಬದಲಾಗುತ್ತವೆ. ದೇವಚಿಟ್ಟೆ ಬದಲಾಗುತ್ತದೆ. ಯಜಮಾನ ಚಿಟ್ಟೆಗಳೆಲ್ಲಾ ರಾಜ್ಯಾಧಿಕಾರ ಕಳೆದುಕೊಂಡು ಅವುಗಳ ಗೂಡು ಸೇರುವ ಕಾಲ ಬರುತ್ತದೆ.
ಆದರೆ ಈ ಚಿಟ್ಟೆಗಳು ಅವುಗಳ ಮೂಲ ಗೂಡು ಸೇರಿದರೂ ಸಹ ಲಾರ್ವಾ, ಪ್ಯೂಪಾ ಮತ್ತು ವಯಸ್ಕ ಚಿಟ್ಟೆಗಳಿಗೆ ಕೊಟ್ಟ ಕಾಟ ನೆನಪಿರುವುದರಿಂದ ಆದಷ್ಟು ಅಂತರ ಕಾಯ್ದುಕೊಳ್ಳುತ್ತವೆ. ಅದಕ್ಕೆ ಅಧಿಕಾರ ಇರದಿರುವುದರಿಂದ ಹೊಗಳು ಭಟ್ಟ ಚಿಟ್ಟೆಗಳೆಲ್ಲಾ ಹೊಸ ಯಜಮಾನ ಚಿಟ್ಟೆಯ ಸುತ್ತಲೂ ನಿಂತು ಹೊಸ ಹೊಸ ವಿಧಾನಗಳ ಮೂಲಕ ಹೊಗಳಲು ಪ್ರಾರಂಭಿಸುತ್ತವೆ. ಮಾಜಿ ಯಜಮಾನ ಚಿಟ್ಟೆಯ ಘನಕಾರ್ಯವನ್ನು ಯಾರೂ ಹೊಗಳದೇ ಇರುವುದರಿಂದ ಸಿಕ್ಕ ಸಿಕ್ಕ ಲಾರ್ವಾ ಮತ್ತು ಪ್ಯೂಪಾ ಚಿಟ್ಟೆಗಳು ಅಥವಾ ಸೇವಕ ಚಿಟ್ಟೆಗಳ ಮುಂದೆ ತನ್ನ ಕಾರ್ಯಗಳ ಮುಂದೆ ತನ್ನ ಘನಕಾರ್ಯಗಳನ್ನೆಲ್ಲಾ ಹೇಳಿಕೊಳ್ಳಲು ಪ್ರಾರಂಭಿಸುತ್ತವೆ. ಮೊದಲು ಇವನ್ನೆಲ್ಲಾ ಸಹಿಸಿಕೊಳ್ಳುವ ಲಾರ್ವಾ ಮತ್ತು ಪ್ಯೂಪಾ ಚಿಟ್ಟೆಗಳು ನಂತರ ಅವುಗಳಿಗೆ ಇರುವ ಕೆಲಸದ ನೆಪವೊಡ್ಡಿ ತಪ್ಪಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸೇವಕ ಚಿಟ್ಟೆಗೆ ಈ ಅವಕಾಶವಿರದಿರುವುದರಿಂದ ಅದು ಅನಿವಾರ್ಯವಾಗಿ ಮಾಜಿ ಯಜಮಾನ ಚಿಟ್ಟೆಯ ಪ್ರವರಗಳಿಗೆ ಕಿವಿಯಾಗುತ್ತದೆ.
ಕಾಲ ಉರುಳಿದಂತೆ ಇದೇ ಚಕ್ರ ಪುನರಾವರ್ತನೆಯಾಗುತ್ತದೆ. ಗಂಡು ಹೆಣ್ಣು ಚಿಟ್ಟೆಗಳು ಮಿಲನ ಮಹೋತ್ಸಾ ಆಚರಿಸಿ ಮೊಟ್ಟೆಯನ್ನಿಡುತ್ತವ. ಮೊಟ್ಟೆಯಿಂದ ಲಾರ್ವಾ, ಲಾರ್ವಾದಿಂದ ಪ್ಯೂಪಾ, ಪ್ಯೂಪಾದಿಂದ ವಯಸ್ಕ ಚಿಟ್ಟೆ, ಹಿರಿಯ ಚಿಟ್ಟೆ, ಯಜಮಾನ ಚಿಟ್ಟೆ, ದೇವಚಿಟ್ಟೆ, ಬ್ರಹ್ಮ ಚಿಟ್ಟೆ, ತ್ರಿಮೂರ್ತಿ ಚಿಟ್ಟೆ ಇದೇ ಪುನರಾವರ್ತನೆಯಾಗುತ್ತದೆ. ರಾಜ್ಯಗಳಿಯುತ್ತವೆ, ಸಾಮ್ರಾಜ್ಯಗಳ ಅಧ:ಪತನವಾಗುತ್ತಲೇ ಹೋಗುತ್ತದೆ. ಕಾಲಚಕ್ರ ಮಾತ್ರ ಮಾತ್ರ ಎಲ್ಲವನ್ನೂ ಗಮನಿಸಿಕೊಂಡು ನಿರ್ಲಿಪ್ತವಾಗಿ ಸುತ್ತುತ್ತಾ ಇರುತ್ತದೆ.
ಇದೊಂದು ಸಂಪೂರ್ಣ ಕಾಲ್ಪನಿಕ ಕಥೆ ಮತ್ತು ಇದು ಯಾರದೇ ಭಾವನೆಗೆ ಧಕ್ಕೆ ತರುವುದಕ್ಕಾಗಲಿ ಅಲ್ಲ. ಇದು ಯಾರದಾದರೂ ನಿಜಜೀವನಕ್ಕೆ ಅಥವಾ ಸಂಸ್ಥೆಗೆ ಹೋಲಿಕೆಯಾದರೆ, ಅಥವಾ ಯಾರಾದರೂ ಈ ಚಿಟ್ಟೆಗಳ ಕಾಲ್ಪನಿಕ ಪಾತ್ರಕ್ಕೆ ತಮ್ಮನ್ನು ಹೋಲಿಸಿಕೊಂಡರೆ ಅದು ಅವರದೇ ಆದ ಕಲ್ಪನೆಯೇ ಹೊರತು ಲೇಖಕರು ಇದಕ್ಕೆ ಜವಾಬ್ದಾರಲ್ಲ. ಈ ಕಲ್ಪನೆಯ ಕಥೆ ಇಷ್ಟವಾದರೆ ಮುಂದೆ ಮತ್ತೊಂದು ಕಥೆಯೊಡನೆ ಬರುವೆ.
ಡಾ: ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಶಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
ಇದನ್ನು ನೋಡಿ : ಪರಿಸರ ಸಂರಕ್ಷಣೆ ನಮ್ಮ ಹೊಣೆ : ಮರುಭೂಮಿಯಾಗದಂತೆ ನೋಡಿಕೊಳ್ಳೋಣ Janashakthi Media