ರಾಯಚೂರು: ನೆನ್ನೆಯಷ್ಟೇ ವಿಧಾನಸಭಾ ಉಪ ಚುನಾವಣೆ ಸೋಲಿಗೆ ಬಿ.ವೈ. ವಿಜಯೇಂದ್ರ ಕಾರಣವೆಂದು, ಕಾಂಗ್ರೆಸ್ ನನ್ನ ರಕ್ತ, ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಇಂದು(ಜನವರಿ 12) ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ರಾಯಚೂರಿನ ದೇವದುರ್ಗದ ತಿಂಥಣಿಯಲ್ಲಿ ನಡೆಯುತ್ತಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಭಾಗಿಯಾದ ಸಿದ್ದರಾಮಯ್ಯ ಹಾಗೂ ಹೆಚ್ ವಿಶ್ವನಾಥ್ ಅಕ್ಕಪಕ್ಕದಲ್ಲಿ ಕುಳಿತು ಉಭಯ ಕುಶಲೋಪರಿ ವಿಚಾರಿಸಿದರಲ್ಲದೇ, ಒಂದೇ ಹಣ್ಣನ್ನ ಹಂಚಿಕೊಂಡು ತಿಂದರು.
ಇದನ್ನು ಓದಿ : ಬಿಜೆಪಿ ತೊರೆಯಲಿದ್ದಾರೆಯೇ ಹಳ್ಳಿಹಕ್ಕಿ; ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಭೇಟಿ ಮಾಡಿದ ಎಚ್.ವಿಶ್ವನಾಥ್
ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಜೊತೆ ವೇದಿಕೆ ಹಂಚಿಕೊಂಡ ಹೆಚ್ ವಿಶ್ವನಾಥ್ ವೇದಿಕೆಯಲ್ಲಿ ಸಿದ್ದರಾಮಯ್ಯ ಪಕ್ಕದಲ್ಲೇ ಕುಳಿತರು. ಅಲ್ಲದೆ, ಹೆಚ್.ವಿಶ್ವನಾಥ್ ಅವರಿಗೆ ಸಿದ್ದರಾಮಯ್ಯ ತಮ್ಮ ಕೈಯಲ್ಲಿದ್ದ ಅರ್ಧ ಪೇರಲ ಹಣ್ಣು ಕೊಟ್ಟರು. ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ, ಹೆಚ್.ಎಂ.ರೇವಣ್ಣ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರೂ ಭಾಗವಹಿಸಿದ್ದರು.
ಭಾಷಣ ವೇಳೆ ಸ್ಪೀಕರ್ ಏರಿದ ಯುವಕ
ಕಾರ್ಯಕ್ರಮವನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಯುವಕನೊಬ್ಬ ಸ್ಪೀಕರ್ ಮೇಲೆ ಏರಿ ಕುಳಿತು ಕೈ ಮುಗಿಯುವ ಮೂಲಕ ಗಮನ ಸೆಳೆದ ಘಟನೆ ನಡೆದಿದೆ. ಅಭಿಮಾನಿಯ ಹುಚ್ಚಾಟ ಕಂಡು ಗರಂ ಆದ ಸಿದ್ದರಾಮಯ್ಯ ಕೆಳಗಡೆ ಇಳಿಯುವಂತೆ ಆತನನ್ನು ಗದರಿಸಿದ್ದಾರೆ.
ಸಿದ್ದರಾಮಯ್ಯ ಬೈದರೂ ಯುವಕ ಕೈ ಮುಗಿಯುತ್ತಲೇ ಕುಳಿತಿದ್ದ. ಅವನನ್ನು ಯಾರೂ ನೋಡಬೇಡಿ. ಭಾಷಣ ಕೇಳಿ ಅಂತಾ ಸಿದ್ದರಾಮಯ್ಯ ಹೇಳಿದ್ದಕ್ಕೆ ಕೆಲಕಾಲ ನೆರೆದಿದ್ದ ಜನ ನಗೆಗಡಲಲ್ಲಿ ತೇಲಿದ್ದರು. ಬಳಿಕ ಯುವಕನನ್ನು ಪೊಲೀಸರು ಕೆಳಗೆ ಇಳಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ