ನವದೆಹಲಿ: ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿರುವ ಪೆಗಾಸಸ್ ಬೇಹುಗಾರಿಕೆಯ ಹಗರಣ ಕುರಿತಾದ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಸಂಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯಲ್ಲಿಯೂ ಚರ್ಚಿಸದಂತೆ ವಾಗ್ದಂಡನೆ ನೀಡಿದೆ.
ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶ ಬಳಸಿ ದೇಶದ ಪ್ರಮುಖ ಗಣ್ಯರ ಮೇಲೆ ಬೇಹುಗಾರಿಕೆ ನಡೆಸಿರುವ ಹಗರಣ ಇದಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ್ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ಕೈಗೊಂಡಿತು. ಅಲ್ಲದೆ ನ್ಯಾಯಾಪೀಠವು ಅರ್ಜಿದಾರರು ಒಂದು ವ್ಯವಸ್ಥೆಯನ್ನು ನೆಚ್ಚಿಕೊಂಡ ಮೇಲೆ ಅದರ ಮೇಲೆ ವಿಶ್ವಾಸವಿಡಬೇಕು ಎಂದು ಹೇಳಿದೆ.
ಇದನ್ನು ಓದಿ: ಪೆಗಾಸಸ್ ಆರೋಪಗಳಲ್ಲಿ ಸತ್ಯಾಂಶವಿದ್ದರೇ, ಅದು ಗಂಭೀರವಾದದ್ದೇ: ಸುಪ್ರೀಂ ಕೋರ್ಟ್
ನ್ಯಾಯಪೀಠವು ನಾವು ಪ್ರತಿಯೊಬ್ಬರನ್ನೂ ವಿಚಾರಿಸಲಾಗುತ್ತದೆ. ಪ್ರತೀಯೊಬ್ಬರು ಹೇಳಿಕೆಗಳನ್ನು ನೀಡಬೇಕಾಗುತ್ತದೆ. ಈ ವಿಚಾರ ಕುರಿತು ನ್ಯಾಯಾಲಯದಲ್ಲಿಯೇ ಚರ್ಚೆಗಳು ನಡೆಯಬೇಕು. ವೆಬ್‌ಸೈಟ್ ಸೇರಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯಬಾರದು. ವಿರೋಧ ಪಕ್ಷ ನಾಯಕರು, ಹಿರಿಯ ಪತ್ರಕರ್ತರು ಸೇರಿದಂತೆ ಯಾರೇ ಆಗಲಿ, ಒಂದು ಬಾರಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದ ಮೇಲೆ ನೀವು ಹೇಳುವ ಯಾವುದೇ ವಿಷಯಗಳು ಇದ್ದರೂ ಸಹ ಅವುಗಳನ್ನು ನ್ಯಾಯಾಲಯದಲ್ಲಿಯೇ ಪ್ರಸ್ತಾಪಿಸಬೇಕು. ಸಾಮಾಜಿಕ ಜಾಲತಾಣ ಸೇರಿದಂತೆ ಬೇರೆ ಯಾವುದೇ ವೇದಿಕೆಯನ್ನು ಬಳಸಿಕೊಳ್ಳುವಂತಿಲ್ಲ ಎಂದು ಅರ್ಜಿದಾರರಿಗೆ ಸೂಚನೆ ನೀಡಿತು.
ಪೆಗಾಸಸ್ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತರಾದ ಎನ್ ರಾಮ್, ಶಶಿಕುಮಾರ್, ಸಿಪಿಐ(ಎಂ) ಪಕ್ಷದ ಸಂಸದ ಜಾನ್ ಬ್ರಿತ್ತಾಸ್ ಹಾಗೂ ವಕೀಲ ಎಂ ಎಲ್ ಶರ್ಮಾ ಸಲ್ಲಿಸಿದ ಅರ್ಜಿ ಇದಾಗಿದೆ. ನ್ಯಾಯಾಲಯಕ್ಕೆ ನೀಡಿರುವ ಅರ್ಜಿಯ ಅಂಶವನ್ನು ಒಳಗೊಂಡ ಒಂದು ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುವಂತೆ ಅರ್ಜಿದಾರರಿಗೆ ಕೋರ್ಟ್ ಸೂಚಿಸಿತ್ತು.
ಇದನ್ನು ಓದಿ: ಪೆಗಾಸಸ್: ಸರ್ವಾಧಿಕಾರಶಾಹಿಯ ಸೈಬರ್ ಆಯುಧ
ಈ ಬಗ್ಗೆ ಕೇಂದ್ರ ಸರ್ಕಾರದಿಂದ ಉತ್ತರ ನೀಡುವುದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಕಾಲಾವಶ ನೀಡಬೇಕೆಂದು ನ್ಯಾಯಾಲಯದ ಮನವಿ ಸಲ್ಲಿಸಿದರು. ನ್ಯಾಯಲಯವು ಮುಂದಿನ ವಿಚಾರಣೆಯನ್ನು ಆಗಸ್ಟ್ 16ಕ್ಕೆ ನಿಗದಿಪಡಿಸಿ ಆದೇಶ ನೀಡಿದೆ.
ದೇಶದ ಪ್ರಮುಖ 142ಕ್ಕೂ ಹೆಚ್ಚು ರಾಜಕೀಯ ವ್ಯಕ್ತಿಗಳು ಸೇರಿದಂತೆ 300ಕ್ಕೂ ಹೆಚ್ಚು ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು ಹಾಗೂ ಪತ್ರಕರ್ತರ ಮೊಬೈಲ್ ಸಂಖ್ಯೆಗಳನ್ನು ಹ್ಯಾಕ್ ಮಾಡಿ ಬೇಹುಗಾರಿಕೆ ನಡೆದಿರುವ ಬಗ್ಗೆ ಆರೋಪಗಳಿವೆ. ಈ ಪಟ್ಟಿಯಲ್ಲಿ ಸ್ವತಃ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಜೊತೆಗೆ 40 ಮಂದಿ ಪತ್ರಕರ್ತರ ಹೆಸರು ಕೂಡ ಸೇರಿದೆ.