ಮಾಜಿ ನ್ಯಾಯಾಧೀಶರಿಂದ ಎಸ್ಐಟಿ ತನಿಖೆ: ನಿಲುವು ತಿಳಿಸಲು ಯುಪಿ ಸರಕಾರಕ್ಕೆ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇರೆ ರಾಜ್ಯದ ಹೈಕೋರ್ಟಿನ ಮಾಜಿ ನ್ಯಾಯಾಧೀಶರಿಂದ ಎಸ್ಐಟಿ ತನಿಖೆ ಮೇಲ್ವಿಚಾರಣೆ ನಡೆಸುವ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೋಮವಾರದವರೆಗೆ ಕಾಲಾವಕಾಶ ನೀಡಿದೆ.

ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಹಿಮಾ ಕೊಹ್ಲಿ ನೇತೃತ್ವದ ಪೀಠಕ್ಕೆ ಉತ್ತರಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಹರೀಶ್ ಸಾಳ್ವೆ ʻʻನನಗೆ ಸೋಮವಾರದವರೆಗೆ ಸಮಯ ಕೊಡುವರೇ? ನಾನು ಅದನ್ನು ಬಹುತೇಕ ಪೂರ್ಣಗೊಳಿಸಿದ್ದೇನೆ. ನಾವು ಏನಾದರೂ ಕೆಲಸ ಮಾಡುತ್ತಿದ್ದೇವೆʼʼ ಎಂದು ತಿಳಿಸಿದರು.

ವಿಚಾರಣೆಯನ್ನು ಸೋಮವಾರಕ್ಕೆ ಪಟ್ಟಿ ಮಾಡಿದ ನ್ಯಾಯಪೀಠವು ಮನವಿಗೆ ಸಮ್ಮತಿಸಿತು.

ಇದನ್ನು ಓದಿ: ಲಖಿಂಪುರ ಖೇರಿ ಪ್ರಕರಣ : ಆಶಿಶ್ ಗುಂಡು ಹಾರಿಸಿದ್ದು ನಿಜ – ವಿಧಿವಿಜ್ಞಾನ ವರದಿಯಲ್ಲಿ ದೃಢ

ನವೆಂಬರ್ 8 ರಂದು ಸುಪ್ರೀಂ ಕೋರ್ಟ್ ಲಖಿಂಪುರ ಖೇರಿ ಹಿಂಸಾಚಾರ ತನಿಖೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತ್ತು, ಈಗ ನಡೆಯುತ್ತಿರುವ ತನಿಖೆಯಲ್ಲಿ ಸ್ವಾತಂತ್ರ್ಯ, ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತತೆಯನ್ನು ತುಂಬಲು ಬೇರೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರು ಇದನ್ನು ದಿನನಿತ್ಯದ ಆಧಾರದ ಮೇಲೆ ಮೇಲ್ವಿಚಾರಣೆ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.

ಸರಕಾರದ ಮೇಲೆ  ತನಗೆ ವಿಶ್ವಾಸವಿಲ್ಲ ಎಂದ ನ್ಯಾಯಪೀಠ, ರಾಜ್ಯವು ನೇಮಿಸಿದ ಏಕಸದಸ್ಯ ನ್ಯಾಯಾಂಗ ಆಯೋಗವು ಪ್ರಕರಣದ ತನಿಖೆಯನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಹೇಳಿದೆ.

ಲಖಿಂಪುರ ಖೇರಿ ಜಿಲ್ಲೆಯ ಟಿಕೋನಿಯಾ-ಬನ್‌ಬೀರ್‌ಪುರ ರಸ್ತೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್  ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರನ್ನು ರಾಜ್ಯ ಸರಕಾರ ಹೆಸರಿಸಿದೆ.

ಇದನ್ನು ಓದಿ: ಲಖಿಂಪುರ ಖೇರಿ ಹಿಂಸಾಚಾರ: ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಸುಪ್ರೀಂ ಸೂಚನೆ

ಬೇರೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಿಂದ ತನಿಖೆಯ ಮೇಲ್ವಿಚಾರಣೆಯ ಸಲಹೆಯ ಮೇರೆಗೆ ರಾಜ್ಯ ಸರಕಾರವು ತನ್ನ ನಿಲುವನ್ನು ತಿಳಿಸುವಂತೆ ಕೇಳಿದೆ.

ಅಕ್ಟೋಬರ್ 3ರಂದು ನಡೆದಿದ್ದ ಈ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *