ಆನಂದ್​ ತೆಲ್ತುಂಬ್ಡೆ ಜಾಮೀನು ವಿರೋಧಿಸಿ ಎನ್‌ಐಎ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಅವರಿಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಎನ್‌ಐಎ ಅರ್ಜಿಯನ್ನು ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ನ್ಯಾಯಪೀಠ ಎನ್ಐಎ ಅರ್ಜಿಯನ್ನು ವಜಾಗೊಳಿಸಿ, ಹೈಕೋರ್ಟ್‌ನ ದೋಷಾರೋಪಣೆಯ ತೀರ್ಪಿನಲ್ಲಿರುವ ಅವಲೋಕನಗಳನ್ನು ವಿಚಾರಣೆಯಲ್ಲಿ ನಿರ್ಣಾಯಕ ಅಂತಿಮ ತೀರ್ಮಾನಗಳಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠ ತೇಲ್ತುಂಬ್ಡೆ ಅವರ ಪಾತ್ರವೇನು ಎಂದು ಎನ್‌ಐಎ ಪರ ಹಾಜರಾದ ಎಎಸ್‌ಜಿ ಐಶ್ವರ್ಯ ಭಾಟಿ ಅವರನ್ನು ಪ್ರಶ್ನಿಸಿದರು. ‘ತೇಲ್ತುಂಬ್ಡೆ ಅವರ ಪಾತ್ರವೇನು? ಯುಎಪಿಎ ಸೆಕ್ಷನ್‌ಗಳನ್ನು ಕಾರ್ಯರೂಪಕ್ಕೆ ತರಲು ನಿರ್ದಿಷ್ಟ ಪಾತ್ರವೇನು? ನೀವು ಆರೋಪಿಸುತ್ತಿರುವ ಐಐಟಿ ಮದ್ರಾಸ್ ಕಾರ್ಯಕ್ರಮವು ದಲಿತರನ್ನು ಒಗ್ಗೂಡಿಸುವುದಕ್ಕಾಗಿ, ದಲಿತ ಸಂಘಟನೆಯು ನಿಷೇಧಿತ ಚಟುವಟಿಕೆಗೆ ಪೂರ್ವಸಿದ್ಧತಾ ಕಾರ್ಯವಾಗಿ ಕಾರ್ಯನಿರ್ವಹಿಸಿದೆಯೇ?” ಎಂದು ಪ್ರಶ್ನೆ ಮಾಡಿದರು. ನಿಷೇಧಿತ ಸಿಪಿಐ (ಮಾವೋವಾದಿ) ಸಿದ್ಧಾಂತವನ್ನು ಪ್ರಚಾರ ಮಾಡಲು ಮತ್ತು ಸರ್ಕಾರವನ್ನು ಉರುಳಿಸಲು ಅವರು ಪಿತೂರಿ ನಡೆಸಿದ್ದಾರೆ ಎಂದು ತೇಲ್ತುಂಬ್ಡೆ ವಿರುದ್ಧ ಸಲ್ಲಿಸಲಾದ ಆರೋಪಪಟ್ಟಿ ಆರೋಪಿಸಲಾಗಿದೆ.

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಎಸ್ ಗಡ್ಕರಿ ಮತ್ತು ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರ ವಿಭಾಗೀಯ ಪೀಠ, ಆನಂದ್‌ ತೇಲ್ತುಂಬ್ಡೆಗೆ ಜಾಮೀನು ನೀಡುವಾಗ, ತೇಲ್ತುಂಬ್ಡೆ ವಿರುದ್ಧ ಭಯೋತ್ಪಾದಕ ಚಟುವಟಿಕೆಯ ಅಪರಾಧಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪ್ರಾಥಮಿಕವಾಗಿ ಗಮನಿಸಿತು. ಹೀಗಾಗಿ ಅವರಿಗೆ ಜಾಮೀನು ನೀಡಿತ್ತು. ಆದಾಗ್ಯೂ, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನ್ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಲುವಾಗಿ ಹೈಕೋರ್ಟ್ ತನ್ನ ಜಾಮೀನು ಆದೇಶಕ್ಕೆ ಒಂದು ವಾರ ತಡೆ ನೀಡಿತ್ತು.

Donate Janashakthi Media

Leave a Reply

Your email address will not be published. Required fields are marked *