ಬೆಂಗಳೂರು: ಡೆಲ್ಟಾ ರೂಪಾಂತರಿಗಿಂತ ಓಮೈಕ್ರಾನ್ ವೈರಸ್ ತಳಿಯು ಹೆಚ್ಚಿನ ವೇಗವಾಗಿ ಹರಡುವ ಸಾಧ್ಯತೆಗಳು ಅಧಿಕವಾಗಿರುವ ಕಾರಣದಿಂದ ಓಮೈಕ್ರಾನ್ ಸೋಂಕಿನ ಕಡಿವಾಣಕ್ಕೆ ಮತ್ತಷ್ಟು ಕಠಿಣ ಕ್ರಮಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಕೆ. ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಮೈಕ್ರಾನ್‍ನಿಂದ ಬ್ರಿಟನ್ ಪರಿಸ್ಥಿತಿ ಗಂಭೀರ ಪರಿಸ್ಥಿತಿ ಉಲ್ಪಣವಾಗಿದ್ದು, ಆತಂಕವಾಗುತ್ತದೆ. ವೇಗವಾಗಿ ಹರಡುವ ಇಂತಹ ವೈರಸ್ ಸೋಂಕನ್ನು ನಮ್ಮಲ್ಲೂ ನಿಯಂತ್ರಿಸಬೇಕಿದೆ. ಹಾಗಾಗಿ ಚಲನವಲನಗಳ ಮೇಲೆ ಜಾಗೃತೆ ವಹಿಸಬೇಕಿದೆ. ಸರ್ಕಾರ ತೆಗೆದುಕೊಳ್ಳುವ ಬಿಗಿ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.
ಕ್ರಿಸ್‍ಮಸ್, ಹೊಸ ವರ್ಷಾಚರಣೆ ಸೇರಿದಂತೆ ವಿವಿಧ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರುವ ಬಗ್ಗೆ ಸದ್ಯಕ್ಕೆ ಯಾವುದೇ ಕ್ರಮಗಳಿಲ್ಲ. ಆದರೆ ಬಿಗಿ ಕ್ರಮಗಳ ಬಗ್ಗೆ ಮುಖ್ಯಮಂತ್ರಿಯವರು ಸಮಾಲೋಚನೆ ನಡೆಸುತ್ತಿದ್ದಾರೆ. ಶೀಘ್ರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ವಿದೇಶದಿಂದ ಬಂದವರನ್ನು ವಿಮಾನ ನಿಲ್ದಾಣದಲ್ಲಿ ಕ್ವಾರಂಟೈನ್ ಮಾಡಲು ಸದ್ಯಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ನಾವಿನ್ನೂ ಸಾಂಸ್ಥಿಕ ಕ್ವಾರಂಟೈನ್ ಅನ್ನು ಆರಂಭಿಸಿಲ್ಲ. ಓಮೈಕ್ರಾನ್ ಪತ್ತೆಯಾಗಲು ಮೂರ್ನಾಲ್ಕು ದಿನಗಳ ವಿಂಡೋ ಅವಧಿಯಲ್ಲೇ ಪತ್ತೆಯಾಗಲಿದೆ. ಈ ಸಮಯದಲ್ಲಿ ವಿದೇಶದಿಂದ ಯಾರಾದರೂ ಬಂದರೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಫಾಲ್ಸ್ ನೆಗೆಟಿವ್ ಬರಲಿದೆ.
ಅವರು ಮನೆಗೆ ಹೋದ ಬಳಿಕ ಒಂದೆರಡು ದಿನಗಳಲ್ಲಿ ಪಾಸಿಟಿವ್ ಆಗುತ್ತಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರನ್ನು ಪ್ರತ್ಯೇಕವಾಗಿರಿಸಬೇಕು ಎಂಬ ಬೇಡಿಕೆ ಇದೆ. ಆದರೆ ನಾವಿನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಲು ಕ್ರಮಕೈಗೊಳ್ಳಲಾಗುತ್ತದೆ. ಆ ವೇಳೆ ಅವರ ಮೇಲೆ ನಿಗಾವಹಿಸಲಾಗುವುದು ಎಂದು ಹೇಳಿದರು.