ಜಾಗತಿಕವಾಗಿ ಹೆಚ್ಚಾಗುತ್ತಿರುವ ಕೋವಿಡ್‌ ಪ್ರಕರಣ: ಅಂತರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭವಿಲ್ಲ

ನವದೆಹಲಿ: ಕೋವಿಡ್‌ ಸಂದರ್ಭದಲ್ಲಿ ಅಂತರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಡಿಸೆಂಬರ್ 15ರಿಂದ ವಿಮಾನಗಳ ಸಂಚಾರವನ್ನು ಪುನಃ ಆರಂಭಿಸುವುದಾಗಿ ಘೋಷಿಸಲಾಗಿತ್ತು. ಆದರೆ, ಕೋವಿಡ್‌ ರೂಪಾಂತರಿ ತಳಿ ಓಮಿಕ್ರಾನ್ ವೈರಸ್‌ನ ಗಂಭೀರತೆಯಿಂದಾಗಿ ಅಂತರರಾಷ್ಟ್ರೀಯ ವಿಮಾನ ಹಾರಟಕ್ಕ ತಡೆಬಿದ್ದಿದೆ.

ಕೋವಿಡ್‌ ಸಾಂಕ್ರಾಮಿಕತೆಯ ಓಮಿಕ್ರಾನ್ ವೈರಸ್‌ ಸಾಕಷ್ಟು ಪ್ರಮಾಣದಲ್ಲಿ ಗಂಭೀರ ಸ್ವರೂಪದಿಂದ ಕೂಡಿದೆ. ಅಲ್ಲದೆ, ಹಲವು ದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ಓಮಿಕ್ರಾನ್‌ ವೈರಸ್‌ ದಾಳಿಯಿಂದ ಒಳಗಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಡಿಸೆಂಬರ್ 15ರಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡುತ್ತಿಲ್ಲ. ಡಿಸೆಂಬರ್ ಅಂತ್ಯದವರೆಗೂ ನಿರ್ಬಂಧ ಮುಂದುವರೆಯುವ ಸಾಧ್ಯತೆ ಇದೆ. ವಿದೇಶಿ ವಿಮಾನಗಳ ಹಾರಾಟ ನಿಷೇಧ ಮುಂದುವರೆಯಲಿದೆ ಎನ್ನಲಾಗಿದೆ.

ಇಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಈ ಕುರಿತು ಪ್ರಕಟಣೆ ಹೊರಡಿಸಿದೆ. “ಜಾಗತಿಕ ಸನ್ನಿವೇಶದ ದೃಷ್ಟಿಯಿಂದ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಂತರರಾಷ್ಟ್ರೀಯ ವಿಮಾನ ಸೇವೆಗಳ ಪುನರಾರಂಭದ ದಿನಾಂಕವನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು” ಎಂದು ಹೇಳಿದೆ.

ವಿಮಾನ ಸಂಚಾರಕ್ಕೆ ದಿನಾಂಕ ನಿಗದಿಯಾಗಿತ್ತು: ಡಿಸೆಂಬರ್ 15ರಿಂದ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಪುನರ್‌ ಆರಂಭಿಸಲಾಗುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಕೆಲ ದಿನಗಳ ಹಿಂದೆ ಘೋಷಣೆ ಮಾಡಿತ್ತು. ಅಲ್ಲದೆ, 14 ದೇಶಗಳಿಂದ ಮಾತ್ರ ವಿಮಾನಗಳ ಆಗಮನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಗಾಗಿ ಬೇರೆ ದೇಶಗಳಿಗೆ ಹೋಗುವುದಕ್ಕೆ ಸಿದ್ಧಗೊಂಡಿದ್ದರು. ಆದರೆ ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳಲ್ಲಿ ಕಂಡುಬಂದಿರುವ ಕೋವಿಡ್ ಸೋಂಕಿನ ಹೊಸ ರೂಪಾಂತರಿ ಓಮಿಕ್ರಾನ್ ಈಗ ವಿವಿಧ ದೇಶಗಳಲ್ಲಿ ತಲ್ಲಣ ಸೃಷ್ಟಿ ಮಾಡಿದೆ.

ಒಂದು ವರ್ಷದಿಂದ ನಿರ್ಬಂಧ;

ಭಾರತವು 2020ರ ಮಾರ್ಚ್‌ನಲ್ಲಿ ಕೋವಿಡ್ ಸೋಂಕು ತೀವ್ರ ಸ್ವರೂಪ ಪಡೆದುಕೊಂಡಾಗ ಲಾಕ್‌ಡೌನ್ ಘೋಷಣೆ ಮಾಡಿತು. ಆಗ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಸಂಚಾರ ರದ್ದುಗೊಳಿಸಿತು. ಬಳಿಕ ಸೋಂಕು ಹತೋಟಿಗೆ ಬಂದಾಗ ಷರತ್ತುಗಳ ಅನ್ವಯ ದೇಶಿಯ ವಿಮಾನಗಳ ಹಾರಾಟವನ್ನು ಆರಂಭಿಸಲಾಯಿತು.

ನಂತರ ವಂದೇ ಭಾರತ್ ಮತ್ತು ಏರ್ ಬಬಲ್ ಒಪ್ಪಂದದ ಮೂಲಕ ಕೆಲವು ದೇಶಗಳಿಗೆ ವಿಮಾನ ಸೇವೆಯನ್ನು ಆರಂಭಿಸಲಾಯಿತು. ಡಿಸೆಂಬರ್ 15ರಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಪುನಃ ಆರಂಭಿಸಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು.

ಸರ್ಕಾರಗಳು ಕೋವಿಡ್‌ ನಿಯಂತ್ರಣ ನಿಯಮಾವಳಿಗಳನ್ನು ಮತ್ತಷ್ಟು ಕಠಿಣಗೊಳಿದ್ದು, ಈಗ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧವನ್ನು ಮುಂದುವರೆಸಿದೆ.

Donate Janashakthi Media

Leave a Reply

Your email address will not be published. Required fields are marked *