ಡಾ.ಸುಶೀಲಾ ಕೆ.
ಓಮಿಕ್ರೋನ್ ಹಿಂದಿನ ರೂಪಾಂತರಿಗಳಿಗಿಂತ ಹೆಚ್ಚು ಅಪಾಯಕಾರಿಯೇ? ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೇಗ ಜಾಸ್ತಿಯೇ? ಇದು ಲಸಿಕೆಗೆ ಹೆಚ್ಚಿನ ಪ್ರತಿರೋಧ ತೋರಿಸುತ್ತದೆಯೆ? ಎನ್ನುವುದನ್ನು ಈಗಲೇ ನಿಖರವಾಗಿ ಹೇಳುವುದು ಅಸಾಧ್ಯ. ಈಗ ಸಿಗುವ ಮಾಹಿತಿಯ ಪ್ರಕಾರ – ಇದು ಡೆಲ್ಟಾಗಿಂತ ಹೆಚ್ಚು ಶೀಘ್ರವಾಗಿ ಹರಡಬಹುದು. ಆದರೆ ಕಾಯಿಲೆ ಸ್ವೌಮ್ಯ ಸ್ವಭಾವದ್ದಾಗಿದ್ದು ಇಲ್ಲಿಯ ತನಕ ಐ.ಸಿ.ಯು.ವಿನಲ್ಲಿನ ಚಿಕಿತ್ಸೆಯ ಅಗತ್ಯ ಬಿದ್ದಿಲ್ಲ. ಸಾವುಗಳೂ ವರದಿಯಾಗಿಲ್ಲ. ಓಮಿಕ್ರಾನ್ ರೂಪಾಂತರಿಯ ಮೇಲೆ ಲಸಿಕೆಯ ಪರಿಣಾಮ ಉಳಿದ ರೂಪಾಂತರಿಗಳಿಗಿಂತ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದ್ದರೂ ಲಸಿಕೆಗೆ ರೂಪಾಂತರಿ ಸಂಪೂರ್ಣ ಪ್ರತಿರೋಧ ಬೆಳೆಸಿಕೊಳ್ಳುವ ಸಾಧ್ಯತೆ ಇಲ್ಲ. ಹೀಗಾಗಿ ಈ ಲಸಿಕೆ ಓಮಿಕ್ರಾನ್‌ನಿಂದ ತೀಕ್ಷ್ಣ ಕಾಯಿಲೆ ಬರದಂತೆ ತಡೆಗಟ್ಟುವ ಶಕ್ತಿ ಹೊಂದಿರುತ್ತದೆ ಎನ್ನುವ ಭರವಸೆ ತಜ್ಞರಿಗೆ ಇದೆ. ಎರಡು ಡೋಸ್ ಲಸಿಕೆಯಿಂದ ದೇಹದಲ್ಲಿ ಉಂಟಾಗುವ ರೋಗ ನಿರೋಧಕ ಸಾಮರ್ಥ್ಯ ಎಷ್ಟು ಕಾಲ ಉಳಿಯುವುದು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಕಾಲಾವಧಿಯ ನಂತರ ಕಡಿಮೆಯಾಗಿ ರೋಗ ತಡೆಗಟ್ಟುವ ಸಾಮರ್ಥ್ಯ ಹೆಚ್ಚಿಸುವ ಬೂಸ್ಟರ್ ಲಸಿಕೆಯನ್ನು ನೀಡುವುದೇ ಸೂಕ್ತ. ಆದರೆ ಅದಕ್ಕೂ ಮೊದಲು ಇನ್ನೂ ಲಸಿಕೆ ಪಡೆಯದ ಜನರಿಗೆ ಅದನ್ನು ನೀಡುವುದು ಇಂದಿನ ಪರಿಸ್ಥಿತಿಯಲ್ಲಿ ಬಹಳ ಅಗತ್ಯ. 3ನೇ ಅಲೆ ತೀಕ್ಷ್ಣವಾಗಿ ಬರುವ ಸಂಭವ ಕಡಿಮೆಯಾಗಿದ್ದರೂ, ಅಂತಹ ಪರಿಸ್ಥಿತಿ ಬಂದರೆ ಅದನ್ನು ಎದುರಿಸಲು ಬೇಕಾದ ಎಲ್ಲಾ ಸೂಕ್ತ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ.
ಪ್ರಪಂಚವನ್ನೇ ನಡುಗಿಸಿದ ಕೋವಿಡ್-19 ಗೆ ಕಾರಣವಾದ ಸಾರ್ಸ್-ಕೋವ್-2 ವೈರಸ್ ಈ 2 ವರ್ಷದ ಕಾಲಾವಧಿಯಲ್ಲಿ ತನ್ನ ಸಂಖ್ಯೆಯನ್ನು ಅತ್ಯಧಿಕ ಸಂಖ್ಯೆಯಲ್ಲಿ ವೃದ್ಧಿಸಿಕೊಂಡಿತು. ಆಗ ಸಹಜವಾಗಿಯೇ ಅವುಗಳಲ್ಲಿ ಕೆಲವೊಂದು ತಮ್ಮ ರಚನೆಯಲ್ಲಿ ಅತ್ಯಲ್ಪ ಬದಲಾವಣೆಗೊಳಗಾಗಿದ್ದುವು. ಇವಿಗಳನ್ನು `ರೂಪಾಂತರಿ ವೈರಸ್’ (Viral Variant) ಎಂದು ಕರೆಯುತ್ತಾರೆ. ಈ ರೂಪಾಂತರಿಗಳನ್ನು ಗುರುತಿಸಲು ಅವುಗಳಿಗೆ ನಾಮಕರಣ ಮಾಡುವುದು ಅವಶ್ಯಕ. ಆದರೆ ಸಂಶೋಧಕರು ನೀಡುವ ತಾಂತ್ರಿಕ ಹೆಸರುಗಳು ಜನ ಜನಸಾಮಾನ್ಯರಿಗೆ ಬಳಸಲು ಕಷ್ಟ. ಉದಾ: ಯು.ಕೆ. ಯಲ್ಲಿ ಪತ್ತೆಯಾದ ರೂಪಾಂತರಿ ಬಿ.1.1.7., ದ.ಆಫ್ರಿಕಾದ ಬಿ.1.351, ಭಾರತದ 1.617 ಗಳ ಈ ರೀತಿಯ ಹೆಸರುಗಳಿಗೆ ಬದಲಾಗಿ ಜನರು ಯು.ಕೆ. ವೈರಸ್, ದ.ಆಫ್ರಿಕಾದ ವೈರಸ್ ಹಾಗೂ ಭಾರತದ ವೈರಸ್ ಎಂದು ಕರೆಯಲು ಪ್ರಾರಂಭಿಸಿದ್ದರು. ಸಾರ್ವಜನಿಕರಲ್ಲಿ ಗೊಂದಲ ಹುಟ್ಟಿಸುವ ಅಥವಾ ಯಾವುದಾದರೂ ದೇಶಗಳಿಗೆ ಕಳಂಕ ತರುವ ಹೆಸರಿನ ಬದಲು ಪ್ರತಿ ರೂಪಾಂತರಿಗೂ 2021 ಮೇ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO -ವಿ.ಆ.ಸಂ) ಗ್ರೀಕ್ ಅಕ್ಷರ ಮಾಲೆಯ 24 ಅಕ್ಷರಗಳನ್ನು ಕ್ರಮಬದ್ದವಾಗಿ ನೀಡಲು ನಿರ್ಧರಿಸಿತ್ತು. ಅದಾಗಲೇ 12 ರೂಪಾಂತರಿಗಳು ಪತ್ತೆಯಾಗಿದ್ದು `ಓಮಿಕ್ರಾನ್’ 13ನೇ ರೂಪಾಂತರಿ ಹಾಗೂ 13ನೇ ಅಕ್ಷರ ನು(NU). ಇದನ್ನು ನ್ಯೂ ಎಂದು ಉಚ್ಛರಿಸುವ ಸಾಧ್ಯತೆ ಇತ್ತು. ಹಾಗೂ 14ನೇ ಅಕ್ಷರ ಕ್ಸಿ(Xi). ಇದು ಚೀನಾದ ಅಧ್ಯಕ್ಷರ ಹಾಗೂ ಅಲ್ಲಿನ ಬಹಳಷ್ಟು ನಾಗರಿಕರ ಹೆಸರಿನ ಭಾಗವಾಗಿತ್ತು. ಯಾವುದೇ ಸಂಸ್ಕೃತಿ, ಸಮಾಜ, ರಾಷ್ಟ್ರ, ಪ್ರದೇಶ, ವೃತ್ತು ಅಥವಾ ಜನಾಂಗದ ಮನನೋಯಿಸುವ ಸಂದರ್ಭ ಬಾರದಿರುವಂತೆ ನೋಡಿಕೊಳ್ಳುವುದು ವಿ.ಆ.ಸಂ.ಯ ಧ್ಯೇಯ. ಹಾಗಾಗಿ ಈ ಎರಡು ಅಕ್ಷರಗಳನ್ನು ಬಿಟ್ಟು ಅಕ್ಷರ ಮಾಲೆಯ 15ನೇ ಅಕ್ಷರವಾದ `ಓಮಿಕ್ರಾನ್’ನ್ನು ಈ ರೂಪಾಂತರಿಗೆ ಇಡಲಾಯಿತು.
ಎಲ್ಲಾ ದೇಶದಲ್ಲಿ ಈ ಕಾಯಿಲೆಯ ಕೆಲವು ರೋಗಿಗಳ ವೈರಸ್‌ಗಳ ವಂಶಾವಳಿಯ (Genomics Sequencing) ಕ್ರಮಾಂಕ ಪರೀಕ್ಷಿಸುತ್ತಾ ಇರುವುದು ಸಾಮಾನ್ಯ ಪದ್ದತಿ. ಹಾಗೆ ಪರೀಕ್ಷಿಸುತ್ತಿದ್ದಾಗ ನವೆಂಬರ್ 9 ರಂದು ಬೋಟ್ಸ್ವಾನಾದಲ್ಲಿ ಹೊಸ ರೂಪಾಂತರಿಯೊಂದು ಪತ್ತೆಯಾಗಿತ್ತು. ಅದೇ ಸಮಯದಲ್ಲಿ ದ. ಆಫ್ರಿಕಾದಲ್ಲಿ ಕೆಲವು ಕೋವಿಡ್-19 ರೋಗಿಗಳಿಗೆ ಆ ಕಾಯಿಲೆಯ ಗುಣ ಲಕ್ಷಣದ ಬದಲು ಬೇರೆ ಕಾಯಿಲೆ ಗುಣಲಕ್ಷಣ ಕಾಣಿಸಿಕೊಂಡವು. ಆಗ ಆ ರೋಗಿಗಳ ವೈರಸ್ ಮಾದರಿಯನ್ನು 20 ನವೆಂಬರ್ 2021 ರಂದು ವಂಶಾವಳಿಗಳ ಕ್ರಮಾಂಕದ ಪರೀಕ್ಷೆಗೊಳಪಡಿಸಿದಾಗ ಬೋಟ್ಸ್ವಾನದಲ್ಲಿ ಪತ್ತೆಯಾದ ರೂಪಾಂತರಿ ಇಲ್ಲಿಯೂ ಕಾಣಿಸಿಕೊಂಡಿತ್ತು. ಆ ತಿಂಗಳ 24 ರಂದು ಇದನ್ನು ವಿ.ಆ.ಸಂ.ಯ ಅವಗಾಹನೆಗೆ ತರಲಾಯಿತು. `ಓಮಿಕ್ರಾನ್’ ರೂಪಾಂತರಿಯ ಹೆಸರಿನಲ್ಲಿ ಇದು ಪ್ರಪಂಚಕ್ಕೆ ಪರಿಚಿತವಾಯಿತು. ಆದರೆ ಸಾಧಾರಣ ಅದೇ ಸಮಯದಲ್ಲಿ ಯುರೋಪಿನ ಕೆಲವು ದೇಶಗಳಲ್ಲೂ ಇದು ಪತ್ತೆಯಾಯಿತು. ಹಾಗಾಗಿ ಇದರ ತೌರು ದ. ಆಫ್ರಿಕಾ ಎಂದು ಖಚಿತವಾಗಿ ಹೇಳಲಾಗದು. ಡಿಸೆಂಬರ್ 8ನೇ ತಾರೀಖಿನ ತನಕ ಈ ಓಮಿಕ್ರಾನ್ ಅದಾಗಲೇ ಯೂರೋಪಿನ 21 ದೇಶಗಳೂ ಸೇರಿದಂತೆ ಪ್ರಪಂಚದ 57 ದೇಶಗಳಲ್ಲಿ ಕಾಣಿಸಿಕೊಂಡಿದೆ.
ಈ ಓಮಿಕ್ರೋನ್ ಹಿಂದಿನ ರೂಪಾಂತರಿಗಳಿಗಿಂತ ಹೆಚ್ಚು ಅಪಾಯಕಾರಿಯೇ? ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೇಗ ಜಾಸ್ತಿಯೇ? ಇದು ಲಸಿಕೆಗೆ ಹೆಚ್ಚಿನ ಪ್ರತಿರೋಧ ತೋರಿಸುತ್ತದೆಯೆ? ಎನ್ನುವುದನ್ನು ಈಗಲೇ ನಿಖರವಾಗಿ ಹೇಳುವುದು ಅಸಾಧ್ಯ. ಇದು ಪತ್ತೆಯಾಗಿ ಹೆಚ್ಚು ಸಮಯವಾಗಿಲ್ಲ. ಇನ್ನು ಪ್ರಪಂಚದ ಹೆಚ್ಚಿನ ದೇಶಗಳಲ್ಲಿ `ಡೆಲ್ಟಾ’ ರೂಪಾಂತರಿಯ ಅಟ್ಟಹಾಸ ಮುಂದುವರಿಯುತ್ತಿದೆ. ಈಗಿನ (8 ಡಿಸೆಂಬರ್ 2021) ತನಕ ಯುರೋಪಿನಲ್ಲಿ ಈ ಓಮಿಕ್ರಾನ್ ರೂಪಾಂತರಿಯ ಪ್ರಮಾಣ ಒಟ್ಟು ಸೋಂಕಿತರ ಶೇಕಡಾ ಒಂದರಷ್ಟಿದೆ.
ಆರ್.ಟಿ.ಪಿ.ಸಿ.ಆರ್. ನಿಂದ ಪತ್ತೆಯಾದ ಕೋವಿಡ್ ರೋಗಿಗೆ ಓಮಿಕ್ರಾನ್ ರೂಪಾಂತರಿಯಿಂದ ಸೋಂಕು ಬಂದಿದೆಯಾ ಎಂದು ತಿಳಿಯಲು ವಂಶಾವಳಿಯ ಕ್ರಮಾಂಕದ ಪರೀಕ್ಷೆ ಮಾಡುವುದು ಅಗತ್ಯ. ಟೆಕ್‌ಪಾತ್ (Taq Path) ಕೋವಿಡ್-19 ಕಿಟ್‌ನಿಂದಲೂ ಈ ರೂಪಾಂತರಿಯ ಪತ್ತೆ ಸಾಧ್ಯ ಎನ್ನುವ ಮಾಹಿತಿ ಇದೆ.
ಆದರೆ ಈಗ ಸಿಗುವ ಮಾಹಿತಿಯ ಪ್ರಕಾರ – ಇದು ಡೆಲ್ಟಾಗಿಂತ ಹೆಚ್ಚು ಶೀಘ್ರವಾಗಿ ಹರಡಬಹುದು. ಇದರ ರಚನೆಯಲ್ಲಿ 50 ಬದಲಾವಣೆಗಳಿದ್ದು ಇದರಲ್ಲಿ 32 ಬದಲಾವಣೆಗೆ ಇದರ ಹೊರ ಕವಚದಿಂದ ಹೊರಗೆ ಚಾಚಿಕೊಂಡಿರುವ ಸ್ಟೈಕ್ ಪ್ರೊಟೀನ್ ನಲ್ಲಿ ಆಗಿದೆ. ದೇಹದ ಜೀವಕಣದ ಒಳ ಪ್ರವೇಶಿಸಲು ಈ ವೈರಸ್‌ಗಳು ಸ್ಟೈಕ್ ಪ್ರೋಟೀನ್‌ಗಳನ್ನು ಉಪಯೋಗಿಸುತ್ತದೆ. ಎಂ.ಆರ್.ಎನ್.ಎ. (mRNA) ಎಂದು ಕರೆಯಲಾಗುವ ವಿಧದ ಲಸಿಕೆಗಳಾದ ಮೊಡರ್ನಾ ಹಾಗೂ ಫೈಝರ್‌ಗಳು ಉತ್ಪತ್ತಿಸುವ ಆ್ಯಂಟಿಬೋಡಿಗಳು ಈ ಸ್ಟೈಕ್ ಪ್ರೋಟೀನ್‌ಗಳ ವಿರುದ್ಧ ಕಾರ್ಯನಿರ್ವಹಿಸಿ ಅವುಗಳು ಜೀವಕಣದೊಳಗೆ ಪ್ರವೇಶಿಸದಂತೆ ನಿರ್ಬಂಧಿಸುತ್ತವೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಬದಲಾವಣೆಗೆ ಒಳಗಾದ ಓಮಿಕ್ರಾನ್‌ನ ಸ್ಟೈಕ್ ಪ್ರೋಟೀನ್ ಈ ಆ್ಯಂಟಿ ಬೋಡಿಗಳಿಗೆ ಪ್ರತಿರೋಧ ತೋರಿಸುವ ಸಾಧ್ಯತೆ ಇದೆಯೆ, ಇದ್ದರೆ ಯಾವ ಪ್ರಮಾಣದಲ್ಲಿ ಎನ್ನುವುದು ಕಾದು ನೋಡಬೇಕಾಗಿದೆ. ಹಾಗಾಗಿ ಲಸಿಕೆಯ ಸಾಮರ್ಥ್ಯ ಕುಗ್ಗಬಹುದು. ಆದರೆ ಲಸಿಕೆ ಸಂಪೂರ್ಣ ನಿರುಪಯೋಗಿ ಆಗಲಾರದು. ಏಕೆಂದರೆ ದೇಹದ ರಕ್ಷಣಾ ವ್ಯೂಹದಲ್ಲಿ ಮಹತ್ತರ ಪಾತ್ರ ವಹಿಸುವ ಕಣಗಳನ್ನು ಕೂಡಾ ಲಸಿಕೆ ಹೆಚ್ಚಿಸುವುದು.
ಇಲ್ಲಿಯ ತನಕದ ಮಾಹಿತಿಯ ಪ್ರಕಾರ ಈ ರೂಪಾಂತರಿ 30 ವಯಸ್ಸಿಗಿಂತ ಕೆಳಗಿನ ಪ್ರಾಯದವರಲ್ಲಿ ಕಾಣಿಸಿಕೊಂಡಿದೆ. ಅತೀವ-ಆಯಾಸ, ಮೈಕೈ ನೋವು, ಸಣ್ಣ ತಲೆನೋವು, ಗಂಟಲಲ್ಲಿ ಕೆರೆತ – ಇದರ ಗುಣಲಕ್ಷಣವಾಗಿದ್ದು, ಕಾಯಿಲೆ ಸ್ವೌಮ್ಯ ಸ್ವಭಾವದ್ದಾಗಿದ್ದು ಇಲ್ಲಿಯ ತನಕ ಐ.ಸಿ.ಯು.ವಿನಲ್ಲಿನ ಚಿಕಿತ್ಸೆಯ ಅಗತ್ಯ ಬಿದ್ದಿಲ್ಲ. ಸಾವುಗಳೂ ವರದಿಯಾಗಿಲ್ಲ. ಆದರೆ ಈ ರೂಪಾಂತರಿ ಹರಡದಂತೆ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯಕ. ಈಗಾಗಲೇ ತಿಳಿದಂತೆ ಮಾಸ್ಕ್ ಧಾರಣೆ, ಒಬ್ಬರಿಂದೊಬ್ಬರ ನಡುವೆ ಅಂತರ ಕಾಪಾಡುವಿಕೆ, ಪದೇ ಪದೇ ಸಾಬೂನಿನಿಂದ ಕೈ ತೊಳೆಯುವುದು, ಜನರು ಸಭೆ ಸಮಾರಂಭಗಳ ಹೆಸರಲ್ಲಿ ಗುಂಪುಕೂಡುವುದನ್ನು ನಿರ್ಬಂಧಿಸುವುದು, ಈ ರೂಪಾಂತರಿ ಸಮಾಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡಿ 3ನೇ ಅಲೆಗೆ ಕಾರಣವಾಗದಂತೆ ನೋಡಿಕೊಳ್ಳುವುದು ಅಗತ್ಯ. ಒಮ್ಮೆ ಸಮಾಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದರ ಸೋಂಕು ಕಾಣಿಸಿಕೊಂಡರೆ ಆಗ ವಯಸ್ಕರಿಗೆ, ಧೀರ್ಘಕಾಲಿಕ ಕಾಯಿಲೆಗಳಿಂದ ಬಳಲುವವರಿಗೆ, ಈ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯದ ಕೊರತೆ ಇರುವರಿಗೆ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಆಗ ಇಂತಹವರಲ್ಲಿ ಈ ರೂಪಾಂತರಿಯ ಕಾಯಿಲೆಯ ತೀವ್ರತೆ ಹೆಚ್ಚುವ ಸಂಭವ ಇಲ್ಲದಿಲ್ಲ. ಆಗ ಹಲವು ರೋಗಿಗಳಿಗೆ ಆಸ್ಪತ್ರೆಯ ದಾಖಲಾತಿ ಹಾಗೂ ತುರ್ತು ನಿಗಾ ಘಟಕಗಳನ್ನು ಚಿಕಿತ್ಸೆ ಬೇಕಾಗಬಹುದು. ಸಾವು ನೋವಿನ ಪ್ರಮಾಣ ಹೆಚ್ಚಬಹುದು.
3ನೇ ಅಲೆ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವೆನ್ನುವ ಭರವಸೆ ಇಲ್ಲ. ಆದರೆ ಇದು ಸೌಮ್ಯವಾಗಿರುವಂತೆ ನೋಡಿಕೊಳ್ಳಲು ಸಾಧ್ಯವಾಗಬಹುದು. ನಮ್ಮ ಸರ್ಕಾರ ಇದಕ್ಕಾಗಿ ಜನರು ಕೋವಿಡ್ ತಡೆಗಟ್ಟುವ ಸೂಕ್ತ ಆಚರಣೆಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಈ ಕಾರ್ಯ ಸಫಲವಾಗಬೇಕಾದರೆ ನಮ್ಮ ರಾಜಕಾರಣಿಗಳು, ಮುಖಂಡರು, ಅಧಿಕಾರಿಗಳು ಈ ಆಚರಣೆಗಳನ್ನು ತಾವು ಪಾಲಿಸುವುದು ಅಗತ್ಯ. ಜನರಲ್ಲಿ ಸೊಂಕು ಶೀಘ್ರದಲ್ಲಿ ಪತ್ತೆ ಹಚ್ಚಲು ಸಾಧ್ಯವಾಗುವಂತೆ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕು. ಹಾಗೂ ಸೋಕಿತರನ್ನು ರೋಗದ ತೀಕ್ಷ್ಣತೆಗನುಗುಣವಾಗಿ ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಸೂಕ್ತ ಚಿಕಿತ್ಸೆ ನೀಡಬೇಕು.
ದೇಶದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಪ್ರತಿಶತ 70 ರಿಂದ 80 ಜನರಿಗೆ ತಮ್ಮ ದೇಹದಲ್ಲಿ ಈ ರೋಗದ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಎರಡು ಡೋಸ್ ಲಸಿಕೆ ನೀಡುವ ಕಾರ್ಯ ಶೀಘ್ರಗತಿಯಲ್ಲಿ ನೆರವೇರುವಂತೆ ನೋಡಿಕೊಳ್ಳುವುದು ಅವಶ್ಯಕ. 11 ಡಿಸೆಂಬರ್ 2021 ರ ತನಕ ನಮ್ಮ ದೇಶದ ಒಟ್ಟು ಜನಸಂಖ್ಯೆಯ 37.8 ಶೇಕಡಾ ಜನರು ಎರಡು ಡೋಸ್ ಲಸಿಕೆ ಪಡೆದಿದ್ದರೆ, 60% ಜನರು ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಓಮಿಕ್ರಾನ್ ರೂಪಾಂತರಿಯ ಮೇಲೆ ಲಸಿಕೆಯ ಪರಿಣಾಮ ಉಳಿದ ರೂಪಾಂತರಿಗಳಿಗಿಂತ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದ್ದರೂ ಲಸಿಕೆಗೆ ರೂಪಾಂತರಿ ಸಂಪೂರ್ಣ ಪ್ರತಿರೋಧ ಬೆಳೆಸಿಕೊಳ್ಳುವ ಸಾಧ್ಯತೆ ಇಲ್ಲ. ಹೀಗಾಗಿ ಈ ಲಸಿಕೆ ಓಮಿಕ್ರಾನ್‌ನಿಂದ ತೀಕ್ಷ್ಣ ಕಾಯಿಲೆ ಬರದಂತೆ ತಡೆಗಟ್ಟುವ ಶಕ್ತಿ ಹೊಂದಿರುತ್ತದೆ ಎನ್ನುವ ಭರವಸೆ ತಜ್ಞರಿಗೆ ಇದೆ.
ಈ ಎರಡು ಡೋಸ್ ಲಸಿಕೆಯಿಂದ ದೇಹದಲ್ಲಿ ಉಂಟಾಗುವ ರೋಗ ನಿರೋಧಕ ಸಾಮರ್ಥ್ಯ ಎಷ್ಟು ಕಾಲ ಉಳಿಯುವುದು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಪ್ರತೀ ವ್ಯಕ್ತಿಯ ದೇಹದ ರಕ್ಚಣಾ ವ್ಯೂಹದ ಸಾಮರ್ಥ್ಯವನ್ನು ಹಾಗೂ ಲಸಿಕೆಯ ವಿಧವನ್ನು ಹೊಂದಿಕೊಂಡು ಇದು ಕೆಲವು ತಿಂಗಳುಗಳಿಂದ ವರ್ಷದ ತನಕ ಇರಬಹುದೆನ್ನುವುದು ತಜ್ಞರ ಅಭಿಪ್ರಾಯ. ಹಾಗಾಗಿ ಈ ಕಾಲಾವಧಿಯ ನಂತರ ಕಡಿಮೆಯಾಗಿ ರೋಗ ತಡೆಗಟ್ಟುವ ಸಾಮರ್ಥ್ಯ ಹೆಚ್ಚಿಸುವ ಬೂಸ್ಟರ್ ಲಸಿಕೆಯನ್ನು ನೀಡುವುದೇ ಸೂಕ್ತ. ಆದರೆ ಅದಕ್ಕೂ ಮೊದಲು ಇನ್ನೂ ಲಸಿಕೆ ಪಡೆಯದ ಜನರಿಗೆ ಅದನ್ನು ನೀಡುವುದು ಇಂದಿನ ಪರಿಸ್ಥಿತಿಯಲ್ಲಿ ಬಹಳ ಅಗತ್ಯ.
3ನೇ ಅಲೆ ತೀಕ್ಷ್ಣವಾಗಿ ಬರುವ ಸಂಭವ ಕಡಿಮೆಯಾಗಿದ್ದರೂ, ಅಂತಹ ಪರಿಸ್ಥಿತಿ ಬಂದರೆ ಅದನ್ನು ಎದುರಿಸಲು ಬೇಕಾದ ಎಲ್ಲಾ ಸೂಕ್ತ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ. ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೇಕಷ್ಟು ಹಾಸಿಗೆ, ಇತರ ವೈದ್ಯಕೀಯ ಸೌಲಭ್ಯ, ಅಗತ್ಯದ ಔಷಧ, ಆ್ಯಂಬುಲೆನ್ಸ್ ವ್ಯವಸ್ಥೆ, ಈ ಕಾರ್ಯಗಳಿಗೆ ಬೇಕಾದ ಸಿಬ್ಬಂದಿಗಳ ಪೂರೈಕೆಗೆ ಆದ್ಯ ಗಮನ ನೀಡುವುದು ಅಗತ್ಯ. ಇಂದು ಇಡೀ ಪ್ರಪಂಚ ಕೋವಿಡ್ ದಾಳಿಗೊಳಗಾಗಿದೆ. ಹಾಗೂ ಈ ಜೆಟ್ ಯುಗದಲ್ಲಿ 24 ಗಂಟೆಗಳೊಳಗೆ ಸೋಂಕಿತ ವ್ಯಕ್ತಿಗಳೊಂದಿಗೆ ಪ್ರಪಂಚದ ಮೂಲೆ ಮೂಲೆಗಳನ್ನು ತಲುಪುವ ಸೌಲಭ್ಯ ಹೊಂದಿದೆ. ಹಾಗಾಗಿ ಯಾವುದೇ ದೇಶದಲ್ಲಿ ಈ ಸೋಂಕು ಉಲ್ಬಣಗೊಂಡು ಅದರ ಸಂತತಿಯಿಂದ ಹುಟ್ಟುವ ರೂಪಾಂತರಿಯೂ ಇತರ ದೇಶಗಳಿಗೆ ಹರಡಲು ಹೆಚ್ಚಿನ ಸಮಯ ಬೇಕಾಗಿಲ್ಲ. ಹೀಗಾಗಿ ಪ್ರಪಂಚದ ಬಡವ ಬಲ್ಲಿದ ಎನ್ನುವ ಭೇಧವಿಲ್ಲದೆ ಎಲ್ಲಾ ದೇಶಗಳಲ್ಲೂ ಈ ಸೋಂಕು ಹತೋಟಿಗೆ ಬಂದಾಗ ಮಾತ್ರ ಇದರ ಪ್ರಾಬಲ್ಯ ಕುಂದಲು ಸಾಧ್ಯ. ಆದರೆ ಈ ಕಾರ್ಯದಲ್ಲಿ ತೊಡಗುವ ಬದಲು ಕೆಲವು ಶ್ರೀಮಂತ ದೇಶಗಳ ಬಹುರಾಷ್ಟ್ರೀಯ ಔಷಧ ಕಂಪೆನಿಗಳು ಈ ಸಮಯದ ಲಾಭ ಪಡೆಯುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶೋಚನೀಯ. ಸರ್ಕಾರಗಳ ಧನಸಹಾಯದಿಂದ ಸಂಶೋಧಿಸಿದ ಲಸಿಕೆಯ ಜ್ಞಾನವನ್ನು ಅತೀ ಅಗ್ಗ ಬೆಲೆಗೆ ಕೊಂಡು ಅತೀ ಹೆಚ್ಚಿನ ಬೆಲೆಗೆ ಶ್ರೀಮಂತ ದೇಶಗಳಿಗೆ ಮಾರುತ್ತಿದ್ದಾರೆ. ಫೈಝರ್ ಔಷಧಿ ಕಂಪೆನಿ ತಯಾರಿಸುವ ಒಂದು ಡೋಸ್ ಲಸಿಕೆಗೆ ತಗಲುವ ವೆಚ್ಚ ಒಂದು ಡಾಲರ್, ಆದರೆ ಅದರ ಮಾರು ಕಟ್ಟೆಯ ಬೆಲೆ 29 ಡಾಲರ್ ಎಂದು ಹೇಳಲಾಗುತ್ತಿದೆ. ಹಾಗೂ ಈ ಉತ್ಪಾದನೆ ಕೆಲವೇ ಕಂಪೆನಿಗಳ ಕೈಯಲ್ಲಿರುವುದರಿಂದ ಪ್ರಪಂಚದ ಎಲ್ಲಾ ದೇಶಗಳಿಗೆ ಅಗತ್ಯವಿರುವಷ್ಟು ಲಸಿಕಾ ಉತ್ಪಾದನೆಯೂ ಆಗುತ್ತಿಲ್ಲ. ಈ ಲಸಿಕೆ ತಯಾರಿಕೆಯ ಜ್ಞಾನವನ್ನು ಬಡರಾಷ್ಟ್ರಗಳಿಗೆ ಹಂಚಿದರೆ ಹೆಚ್ಚಿನ ರಾಷ್ಟ್ರಗಳು ತಮ್ಮ ಅವಶ್ಯಕತೆಗೆ ಬೇಕಾದ ಲಸಿಕೆ ಅಗ್ಗದ ಬೆಲೆಯಲ್ಲಿ ತಯಾರಿಸಬಹುದು. ಆದರೆ ಧನದಾಹ ಈ ಕಾರ್ಯಕ್ಕೆ ತಡೆಯೊಡ್ಡುತ್ತಿದೆ.
ಯಾವುದೇ ಸೋಂಕು ಕೆಲವು ವರ್ಷದಲ್ಲಿ ತಾನು ದಾಳಿ ಮಾಡುವ ಜನರ ಸಂಖ್ಯಾ ಪ್ರಮಾಣ ಹೆಚ್ಚಿದಂತೆ, ಅವರಲ್ಲಿ ರೋಗ ತಡೆಗಟ್ಟುವ ಸಾಮರ್ಥ್ಯ ಹೆಚ್ಚಿಸುತ್ತದೆ. ಮತ್ತು ಸೋಂಕಿಗೊಳಗಾಗುವವರ ಸಂಖ್ಯೆ ಕಡಿಮೆಯಾಗುತ್ತದೆ. ಈ ಸೋಂಕು ಬರಿಸಿದ ರೋಗಾಣುಗಳ ಸಂಖ್ಯೆ ಹಾಗೂ ಅವುಗಳ ಸಂತತಿಯ ಸಂಖ್ಯಾ ಪ್ರಮಾಣವು, ಅವುಗಳಿಂದಾಗುವ ರೂಪಾಂತರಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಹೀಗೆ ರೋಗ ತನ್ನಿಂದ ತಾನೇ ಹತೋಟಿಗೆ ಬರುತ್ತದೆ. ಆದರೆ ಆಗಾಗ ಕೆಲವು ಪ್ರದೇಶದಲ್ಲಿ ಇವು ಚಿಕ್ಕ ಅಲೆಗಳನ್ನು ಉಂಟು ಮಾಡುವ ಸಾಮರ್ಥ್ಯ ಹೊಂದಿರುತ್ತವೆ.
ಈ ಜಗತ್ತು ಸೂಕ್ಷ್ಮಾಣುಗಳ ಜಗತ್ತು. ಹಾಗಾಗಿ ಇವುಗಳಲ್ಲಿ ಯಾವುದೇ ಸೂಕ್ಷ್ಮಾಣು ಕೋವ್-2 ಕಾಡಿದಂತೆ ಕಾಡುವುದಿಲ್ಲ ಎನ್ನುವ ಭರವಸೆ ಇಲ್ಲ.