ಭಾರತ ಮಹಿಳಾ ಹಾಕಿ ತಂಡಕ್ಕೆ ನಿರಾಸೆ: ಫೈನಲ್‌ ಪ್ರವೇಶದ ಕನಸು ವಿಫಲ

ಟೋಕಿಯೊ: ಭಾರತ ಮಹಿಳಾ ಹಾಕಿ ತಂಡವು ಸೆಮಿ ಫೈನಲ್‌ನಲ್ಲಿ ಮಹಿಳೆಯರ ತಂಡ ಬಲಿಷ್ಠ ಅರ್ಜೆಂಟಿನಾ ವಿರುದ್ಧ ಸೋಲು ಕಂಡಿದೆ. ತೀವ್ರ ಪೈಪೋಟಿ ಎದುರಿಸಿದ ಭಾರತವು ಪಂದ್ಯದ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರೂ ಬಳಿಕ ಎದುರಾಳಿ ತಂಡವು ಎರಡು ಗೋಲು ಗಳಿಸಿಕೊಂಡಿದ್ದರಿಂದ ಭಾರತಕ್ಕೆ ಹಿನ್ನೆಡೆಯಾಯಿತು. ಬಳಿಕ ಪಂದ್ಯವನ್ನು ಸಮಬಲಗೊಳಿಸಲು ಸಾಕಷ್ಟು ಪ್ರಯತ್ನ ನಡೆಸಿತಾದರೂ ಅದು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಭಾರತ ಮಹಿಳೆಯರ ತಂಡ 1-2 ಅಂತರದಿಂದ ಸೋಲು ಅನುಭವಿಸಿದ್ದು ಫೈನಲ್ ಪ್ರವೇಶಿಸಲು ವಿಫಲವಾಗಿದೆ.

ಇದನ್ನು ಓದಿ: ಮುರಿದ ಹಾಕಿ ಸ್ಟಿಕ್‌ ನಿಂದ ನಾಯಕಿ ಪಟ್ಟದವರೆಗೆ – ರಾಣಿ ರಾಂಪಾಲ್‌ ಸಾಧಿಸಿದ ಸಾಹಸಗಾಥೆ

ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದರೂ, ಗೆಲುವು ದಾಖಲಿಸುವಲ್ಲಿ ಸಾಧ್ಯವಾಗಲಿಲ್ಲ. ಆದರೂ, ಶುಕ್ರವಾರ ನಡೆಯಲಿರುವ ಮೂರು-ನಾಲ್ಕನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಸೆಣಸುವ ಭಾರತದ ಮಹಿಳಾ ಹಾಕಿ ತಂಡದ ಕಂಚಿನ ಪದಕ ಗೆಲ್ಲುವ ಅವಕಾಶ ಉಳಿದುಕೊಂಡಿದೆ.

ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲೇ ಗುರ್ಜಿತ್ ಕೌರ್ ಗೋಲು ಬಾರಿಸುವ ಮೂಲಕ ಭಾರತಕ್ಕೆ ಮುನ್ನಡೆ ಸಾಧಿಸಲು ಅವಕಾಶ ಮಾಡಿಕೊಟ್ಟರು. ಭಾರತದ ರಾಣಿ ರಾಂಪಾಲ್‌ ತಂಡವು ಮೊದಲ ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾಗೆ ಯಾವುದೇ ಗೋಲು ಗಳಿಸಲು ಅವಕಾಶ ನೀಡಲಿಲ್ಲ.

ಎರಡನೇ ಕ್ವಾರ್ಟರ್‌ನ 17ನೇ ನಿಮಿಷದಲ್ಲಿ ಅರ್ಜೆಂಟೀನಾ ಗೋಲು ಬಾರಿಸಿ 1-1ರ ಸಮಬಲ ಸಾಧಿಸಿತು. ಮೊದಲಾರ್ಧದ ಅಂತ್ಯದ ವೇಳೆಗೆ ಉಭಯ ತಂಡಗಳು 1-1ರ ಸಮಬಲ ಸಾಧಿಸಿತು. ಪಂದ್ಯದ 36ನೇ ನಿಮಿಷದಲ್ಲಿ ಅರ್ಜೆಂಟೀನಾ ಮತ್ತೊಂದು ಗೋಲು ಬಾರಿಸುವ ಮೂಲಕ 2-1ರ ಮುನ್ನಡೆ ಸಾಧಿಸಿತು. ಅರ್ಜೆಂಟೀನಾ ತಂಡದ ನಾಯಕಿ ಬರಿಯೊನುಯೆವೊ ನೋಯೆಲ್‌ ಎರಡು ಗೋಲ್‌ ಬಾರಿಸಿ ತಂಡಕ್ಕೆ ಜಯ ದಕ್ಕಿಸಿಕೊಟ್ಟರು.

ಇದಾದ ಬಳಿಕ ಭಾರತಕ್ಕೆ ಸಾಕಷ್ಟು ಗೋಲು ಬಾರಿಸುವ ಅವಕಾಶ ಇದ್ದರೂ, ಹೋರಾಟದ ಕಾಳಗದಲ್ಲಿ ಗೋಲಿ ಗಳಿಸಲು ಸಾಧ್ಯವಾಗಲಿಲ್ಲ. ಲೀಗ್‌ ಹಂತದಲ್ಲಿ ಮೊದಲ ಮೂರು ಪಂದ್ಯಗಳು ಸೋತರೂ ಸಹ ಭರ್ಜರಿ ಆಟದಿಂದಾಗಿ ರಾಣಿ ರಾಂಪಾಲ್ ಬಳಗ ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸವನ್ನು ನಿರ್ಮಿಸಿತು.

ಇದನ್ನು ಓದಿ: ಮತ್ತೊಂದು ಪದಕದ ನಿರೀಕ್ಷೆ: ಫೈನಲ್‌ ಪ್ರವೇಶಿಸಿದ ಕುಸ್ತಿಪಟು ರವಿ ಕುಮಾರ್‌ ದಹಿಯಾ

ಭಾರತ ತಂಡ ಈಗ ಕಂಚಿನ ಪದಕಕ್ಕಾಗಿ ಬ್ರಿಟನ್‌ ವಿರುದ್ಧ ಪೈಪೋಟಿ ನಡೆಸಲಿದೆ. ಲೀಗ್‌ ಹಂತದಲ್ಲಿ ಭಾರತ ಮಹಿಳಾ ಪಡೆ ಇದೇ ತಂಡದ ಎದುರು 1-4 ಅಂತರದಲ್ಲಿ ಸೋತು ನಿರಾಶೆ ಅನುಭವಿಸಿತ್ತು. ಕಂಚಿನ ಪದಕ ಗೆಲ್ಲುವ ಅವಕಾಶ ರಾಣಿ ರಾಂಪಾಲ್ ಪಡೆಗೆ ಸಿಕ್ಕಿದೆ. ಬ್ರಿಟನ್‌ ಸೆಮಿಫೈನಲ್‌ ಪಂದ್ಯದಲ್ಲಿ ನೆದರ್ಲೆಂಡ್ಸ್‌ ಎದುರು 1-5 ಅಂತರದ ಹೀನಾಯ ಸೋಲನುಭವಿಸಿದೆ.

ಪುರುಷರ ತಂಡಕ್ಕೂ ಸೆಮಿ ಫೈನಲ್​ನಲ್ಲಿ ಸೋಲು

ಒಲಿಂಪಿಕ್ಸ್ ಕ್ರೀಡಾಕೂಟದ ಸೆಮಿಫೈನಲ್ ತಲುಪಿದ್ದ ಭಾರತದ ಪುರುಷರ ಹಾಕಿ ತಂಡವೂ ಫೈನಲ್ ಪ್ರವೇಶಿಸಲು ಸಾಧ್ಯವಾಗಿಲ್ಲ. ಬೆಲ್ಜಿಯಂ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 2-5 ಗೋಲುಗಳಿಂದ ಸೋಲನುಭವಿಸಿತು.  ಕಳೆದ ಬಾರಿಯ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಬೆಲ್ಜಿಯಂ ತಂಡ ಈ ಗೆಲುವಿನೊಂದಿಗೆ ಸತತ ಎರಡನೇ ಬಾರಿ ಫೈನಲ್ ತಲುಪಿತು.

ಭಾರತ ಈ ಸೆಮಿಫೈನಲ್ ಸೋತರೂ ಅದರ ಕಂಚಿನ ಪದಕದ ಆಸೆ ಜೀವಂತವಾಗಿದೆ. ಮತ್ತೊಂದು ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ಮತ್ತು ಜರ್ಮನಿ ತಂಡಗಳು ಮುಖಾಮುಖಿಯಾಗಲಿವೆ. ಇದರಲ್ಲಿ ಗೆದ್ದ ತಂಡವು ಚಿನ್ನದ ಪದಕಕ್ಕಾಗಿ ಬೆಲ್ಜಿಯಂ ತಂಡವನ್ನ ಎದುರುಗೊಳ್ಳಲಿದೆ. ಸೋತ ತಂಡದ ವಿರುದ್ಧ ಭಾರತ ಕಂಚಿನ ಪದಕಕ್ಕಾಗಿ ಸೆಣಸಲಿದೆ.

Donate Janashakthi Media

Leave a Reply

Your email address will not be published. Required fields are marked *