ಬೆಂಗಳೂರು : ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಳವಾಗುತ್ತಿದ್ದು, ಹೆಣ್ಣು ಮಕ್ಕಳ ಸಂಖ್ಯೆ ಕುಸಿತವಾಗುತ್ತಿದೆ ಎಂದು ಕೇಂದ್ರ ಸರ್ಕಾರ ನಡೆಸಿದ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಂ (SRS)-2022 ರ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಂ-2022 ರ ವರದಿಯಲ್ಲಿ ಪ್ರಸ್ತುತ ರಾಜ್ಯದಲ್ಲಿ 1 ಸಾವಿರ ಗಂಡು ಮಕ್ಕಳಿಗೆ ಕೇವಲ 916 ಹೆಣ್ಣು ಮಕ್ಕಳಿದ್ದಾರೆ. ಗ್ರಾಮೀಣ ಭಾಗದಲ್ಲಿ 1 ಸಾವಿರ ಗಂಡು ಮಕ್ಕಳಿಗೆ 942 ಹೆಣ್ಣು ಮಕ್ಕಳಿದ್ದರೆ, ನಗರ ಪ್ರದೇಶದಲ್ಲಿ 1 ಸಾವಿರ ಗಂಡು ಮಕ್ಕಳಿಗೆ 871 ಹೆಣ್ಣು ಮಕ್ಕಳಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಠಿಣ ಕಾನೂನು ಜಾರಿಗೊಳಿಸಿದೆ. ಈ ನಡುವೆ ಆರೋಗ್ಯ ಇಲಾಖೆಯೂ ಸಭೆ ನಡೆಸಿ, ಭ್ರೂಣ ಪರೀಕ್ಷೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ಕಾಯಿದೆಯಡಿ ಅಕ್ರಮವಾಗಿ ಭ್ರೂಣ ಪತ್ತೆ ಮಾಡುವ ಸ್ಕ್ಯಾನ್ ಸೆಂಟರ್ ಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
ಇನ್ನು ರಾಜ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ದಂಧೆಯಲ್ಲಿರುವ ವೈದ್ಯರು, ಸ್ಕ್ಯಾನಿಂಗ್ ಸೆಂಟರ್ ದಲ್ಲಾಳಿಗಳ ಮಾಹಿತಿ ನೀಡಿದಿವರಿಗೆ 50 ಸಾವಿರ ರೂ. ಬಹುಮಾನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಶಿಕ್ಷಾರ್ಹ ಅಪರಾಧ : ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಗರ್ಭಿಣಿ ಮಹಿಳೆಯರ ಉಪಯೋಗಕ್ಕೆಂದು ಬಳಕೆಯಾಗಬೇಕಿದ್ದ ಸ್ಕ್ಯಾನಿಂಗ್ ಸೆಂಟರ್‍ಗಳು ಭ್ರೂಣ ಲಿಂಗ ಪತ್ತೆಯಂತಹ ಕಾನೂನು ಬಾಹಿರ ಕೆಲಸಗಳಿಗೆ ದುರ್ಬಳಕೆಯಾಗುತ್ತಿರುವುದು ಕಳವಳಕಾರಿ. ಅಪರಾಧಿಗಳಿಗೆ ಈ ಕೆಳಗಿನಂತೆ ಶಿಕ್ಷ ನೀಡಲಾಗುತ್ತದೆ.
- ಮೊದಲ ಅಪರಾಧಕ್ಕೆ: 3 ವರ್ಷಗಳ ಜೈಲು ಮತ್ತು ₹ 10,000 ದಂಡ
- ನಂತರದ ಅಪರಾಧಕ್ಕೆ: 5 ವರ್ಷಗಳ ಕಾರಾಗೃಹವಾಸ ಮತ್ತು ₹ 50,000 ದಂಡ
- ಇಂತಹ ಕೃತ್ಯಕ್ಕೆ ಸಹಾಯ ಕೋರುವ ವ್ಯಕ್ತಿಯೂ ಶಿಕ್ಷಾರ್ಹ
- ಮೊದಲ ಅಪರಾಧಕ್ಕೆ: 3 ವರ್ಷಗಳ ಕಾರಾಗೃಹ ಮತ್ತು ₹ 50,000 ದಂಡ
- ನಂತರದ ಅಪರಾಧಕ್ಕೆ: 5 ವರ್ಷಗಳ ಕಾರಾಗೃಹ ಮತ್ತು ₹ 1 ಲಕ್ಷ ದಂಡ
(ಈ ಕಾನೂನಿನ ಅಡಿಯಲ್ಲಿ ಎಲ್ಲ ಅಪರಾಧ ಜಾಮೀನಿಗೆ ಅರ್ಹವಲ್ಲ ಮತ್ತು ರಾಜಿ ಇಲ್ಲ)
ಭೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಕಾಗದದ ಯೋಜನೆಯಾಗಿದೆ. ಎಲ್ಲಿಯೂ ಕೂಡ ಮಹಿಳೆಯರನ್ನು ರಕ್ಷಿಸುವ ಕೆಲಸಗಳು ಆಗುತ್ತಿಲ್ಲ ಎಂದು ಜನಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸ್ತ್ರೀ ಭ್ರೂಣ ಹತ್ಯೆ ತಡೆಯೋಕೆ ಕಾನೂನು ರೂಪಿಸುವ ಸ್ಥಿತಿ ಬಂದಿರುವುದು ವಿಷಾದನೀಯ. ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದರೆ ಹೊರೆ ಎಂಬ ಭಾವ ತಳೆದು ಹಿಂದೆಯೂ ಸಹ ಹುಟ್ಟಿದ ತಕ್ಷಣ ಕೊಲ್ಲುತ್ತಿದ್ದರು. ಈಗ ತಂತ್ರಜ್ಞಾನದ ನೆರವಿನಿಂದ ಭ್ರೂಣದಲ್ಲೇ ಚಿವುಟಿ ಹಾಕುತ್ತಿದ್ದಾರೆ. ಸುಶಿಕ್ಷಿತರು ಸಹ ಹೆಣ್ಣು ಭ್ರೂಣ ಹತ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಲಿಂಗಪತ್ತೆ ದೊಡ್ಡ ವ್ಯವಹಾರವಾಗಿದೆ ಇಂತವರ ಹೆಡೆಮುರು ಕಟ್ಟಲು ಸರಕಾರ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ ಎಂದು ಜನಪರ ಸಂಘಟನೆಗಳು ಆಗ್ರಹಿಸಿವೆ.