ಒಳ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಹೋರಾಟ ನಿರತರ ಮೇಲೆ ಪೋಲೀಸ್ ಧಾಳಿ – ಸಿಪಿಐಎಂ ಖಂಡನೆ

ಬೆಂಗಳೂರು : ಒಳ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಹೋರಾಟ ನಿರತರ ಮೇಲೆ ಪೋಲೀಸ್ ಧಾಳಿ ನಡೆಸಿರುವುನ್ನು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಖಂಡಿಸಿದ್ದಾರೆ.

ಪರಿಶಿಷ್ಟ ಜಾತಿ ಸಮುದಾಯಗಳ ನಡುವೆ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಸುತ್ತಿದ್ದ ಹೋರಾಟಗಾರರ ಜೊತೆ ಸರಕಾರ ಮಾತುಕತೆ ನಡೆಸಿ ಸದಾಶಿವ ಆಯೋಗದ ವರದಿಯ ಕುರಿತು ಸರಕಾರದ ಅಭಿಪ್ರಾಯವೇನೆಂದು ಪ್ರಕಟಿಸುವ ಬದಲು ಹೋರಾಟ ನಿರತರ ಮೇಲೆ ಪೋಲೀಸ್ ಧಾಳಿಗೆ ಕ್ರಮವಹಿಸಿ ದೌರ್ಜನ್ಯ ನಡೆಸಿರುವುದನ್ನು ಸಿಪಿಐಎಂ ಪಕ್ಷ ಬಲವಾಗಿ ಖಂಡಿಸುತ್ತದೆ. ತಕ್ಷಣವೇ ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ಮತ್ತು ಉಚಿತ ಆರೋಗ್ಯ ಸೇವೆಯನ್ನು ನೀಡಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಪರಿಶಿಷ್ಟ ಜಾತಿ ಸಮುದಾಯದ ಮೀಸಲಾತಿಯಲ್ಲಿ ಹಿಂದುಳಿದಿರುವಿಕೆಯ ಕಾರಣದಿಂದ ವಂಚನೆಗೊಳಗಾದವರಿಗೆ ಒಳ ಮೀಸಲಾತಿ ನೀಡಬೇಕೆಂಬ ಒತ್ತಾಯ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಈ ಕುರಿತಂತೆ ನ್ಯಾ . ಸದಾಶಿವ ಆಯೋಗವು ತನ್ನ ವರದಿಯನ್ನು ನೀಡಿ ಹಲವು ವರ್ಷಗಳೇ ಕಳೆದಿವೆ. ಇದುವರೆಗೆ ರಾಜ್ಯ ಸರಕಾರ ಆ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿಲ್ಲ ಮತ್ತು ಸರಕಾರ ಆ ಕುರಿತು ತನ್ನ ನಿಲುಮೆ ಏನೆಂದು ಪ್ರಕಟಿಸದಿರುವುದು ಅಕ್ಷಮ್ಯವಾಗಿದೆ. ಈ ಕೂಡಲೇ ನ್ಯಾ. ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಮತ್ತು ಸರಕಾರ ಆ ಕುರಿತು ತನ್ನ ನಿಲುಮೆ ಏನೆಂಬುದನ್ನು ಪ್ರಕಟಿಸ ಬೇಕೆಂದು ಸಿಪಿಐಎಂ ಒತ್ತಾಯಿಸಿದೆ.

ಒಳ ಮೀಸಲಾತಿಗಾಗಿ ಹೋರಾಟದಲ್ಲಿ ತೊಡಗಿರುವವರ ಮೇಲೆ ಪೋಲೀಸ್ ದಾಳಿಯ ಮೂಲಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುವ ಮೂಲಕ ಸರಕಾರ ಒಳ ಮೀಸಲಾತಿಯನ್ನು ವಿರೋಧಿಸುವ ಇಂಗಿತ ವ್ಯಕ್ತ ಪಡಿಸಿದೆಯೇ ಎಂದು ಸಿಪಿಐಎಂ ಮುಖ್ಯ ಮಂತ್ರಿಗಳನ್ನು ಪ್ರಶ್ನಿಸಿದೆ.

Donate Janashakthi Media

Leave a Reply

Your email address will not be published. Required fields are marked *