ಒಕ್ಕೂಟ ವ್ಯವಸ್ಥೆಯ ರಾಜಕೀಯ ಮತ್ತು ಹಣಕಾಸು ಆಯಾಮಗಳ ಚರ್ಚೆಗೆ ಅಗತ್ಯ ಪುಸ್ತಕ

-ವಸಂತರಾಜ ಎನ್.ಕೆ
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯಗಳಷ್ಟೇ ಒಕ್ಕೂಟ ತತ್ವ ಕೂಡಾ ಪ್ರಮುಖ ಆಶಯವಾಗಿತ್ತು. ಸ್ವಾತಂತ್ರ್ಯ ಚಳುವಳಿ ಮತ್ತು ಅದರ ಪ್ರಮುಖ ವೇದಿಕೆಯಾಗಿದ್ದ ಕಾಂಗ್ರೆಸ್, ಭಾರತ ಹಲವು ಭಾಷಾವಾರು ರಾಷ್ಟ್ರೀಯತೆಗಳಿರುವ ದೇಶ ಎಂದು ಒಪ್ಪಿಕೊಂಡಿತ್ತು. ಹಾಗಾಗಿಯೇ ಕಾಂಗ್ರೆಸ್, ಕಮ್ಯುನಿಸ್ಟ್ ಸೇರಿದಂತೆ ಹೆಚ್ಚಿನ ರಾಜಕೀಯ ಪಕ್ಷಗಳ ಘಟಕಗಳು, ಬ್ರಿಟಿಷ್ ಪ್ರಾಂತ್ಯಗಳ ಮೇಲೆ ಆಧಾರಿತವಾಗದೆ, ಭಾಷಾವಾರು ಪ್ರಾಂತ್ಯಗಳ ಮೇಲೆ ಆಧಾರಿತವಾಗಿದ್ದವು. 1956ರಲ್ಲಿ ಮೈಸೂರು ಒಂದು ಭಾಷಾವಾರು ರಾಜ್ಯವಾಗುವ ಮೊದಲೇ ಮತ್ತು 1973ರಲ್ಲಿ ಕರ್ನಾಟಕ ಎಂದು ಮರುನಾಮಕಾರಣವಾಗುವ ಬಹಳ ಮೊದಲೇ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಘಟಕಗಳನ್ನು ಕರ್ನಾಟಕ ಪ್ರಾಂತ ಸಮಿತಿಗಳೆಂದು ಕರೆಯಲಾಗುತ್ತಿತ್ತು. ಸ್ವತಂತ್ರವಾದಾಗ ದೇಶ ವಿಭಜನೆಯ ದುರಂತ ಮತ್ತು ರಾಜರುಗಳ ಅವಕಾಶವಾದದ ಸನ್ನಿವೇಶದಿಂದಾಗಿ ಸಂವಿಧಾನಾತ್ಮಕವಾಗಿ ಒಂದು ‘ರಾಜ್ಯಗಳ ಯೂನಿಯನ್’ ಎಂದು ಘೋಷಿತವಾದರೂ, ಸ್ವಾಯತ್ತ ರಾಜ್ಯಗಳ ಒಕ್ಕೂಟ ಒಂದು ಆಶಯವಾಗಿ ಮುಂದುವರೆದಿತ್ತು. ಆದರೆ ಆನಂತರ ಇದಕ್ಕೆ ಪಕ್ವವಾದ ಸನ್ನಿವೇಶ ಬಂದರೂ, ಅಧಿಕಾರಸ್ಥರು ಒಕ್ಕೂಟ ವ್ಯವಸ್ಥೆಯನ್ನು ಹೆಚ್ಚು ಹೆಚ್ಚಾಗಿ ಕೇಂದ್ರೀಕರಿಸುತ್ತಾ ನಡೆದರು.

ಪ್ರಧಾನಿ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದು ಈ ಕೇಂದ್ರೀಕೃತ ಒಕ್ಕೂಟ ವ್ಯವಸ್ಥೆಯಿಂದ “ಸಹಕಾರಿ ಒಕ್ಕೂಟವಾದ” ದತ್ತ ಪ್ರಗತಿ ಸಾಧಿಸುವ ಭರವಸೆ ಕೊಟ್ಟರೂ, ಅವರ ಇತರ ಭರವಸೆಗಳಂತೆ ಅದೂ ಹುಸಿಯಾಗಿತ್ತು. ಯೋಜನಾ ಅಯೋಗದ ರದ್ದು, ಜಿ.ಎಸ್.ಟಿ ಯಿಂದ ಆರಂಭಿಸಿ, ಒಂದು ದೇಶ ಒಂದು ಚುನಾವಣೆ, ಸೆಸ್ ಸರ್ ಚಾರ್ಜ್, ಕ್ಷೇತ್ರಗಳು ಡಿಲಿಮಿಟೇಶನ್ ವರೆಗೆ, ನಿಜವಾಗಿಯೂ ಒಕ್ಕೂಟವಾದ ನಡೆದದ್ದು ವಿರುದ್ಧವಾದ ದಿಕ್ಕಿನಲ್ಲಿ – ಇನ್ನಷ್ಟು ಕೇಂದ್ರೀಕರಣದತ್ತ. ಈಗ ಯಾವ ರೀತಿಯ ಒಕ್ಕೂಟ ವ್ಯವಸ್ಥೆ ಬೇಕು ಎನ್ನುವುದು ತೀವ್ರ ವಿವಾದಾಸ್ಪದ ರಾಜಕೀಯ ಸಮಸ್ಯೆಯಾಗಿ ಪರಿಣಮಿಸಿದೆ. ಒಕ್ಕೂಟ ವ್ಯವಸ್ಥೆಯ ರಾಜಕೀಯ ಮತ್ತು ಹಣಕಾಸು ಎರಡೂ ಆಯಾಮಗಳ ಕುರಿತೂ ತೀವ್ರ ಚರ್ಚೆ ನಡೆದಿದೆ, ಇನ್ನಷ್ಟು ನಡೆಯಬೇಕಾಗಿದೆ.

ಈ ಚರ್ಚೆಗಳಿಗೆ ಅಗತ್ಯವಾದ ಮಾಹಿತಿ ಕನ್ನಡದಲ್ಲಿ ಲಭ್ಯವಿಲ್ಲ. ಈ ಚರ್ಚೆಯನ್ನು ಸಕಾರಾತ್ಮಕವಾಗಿ ಮುಂದಕ್ಕೊಯ್ಯಬೇಕಾದರೆ ಒಕ್ಕೂಟ ವ್ಯವಸ್ಥೆಯ ರಾಜಕೀಯ ಮತ್ತು ಆರ್ಥಿಕ ಆಯಾಮಗಳ ಆಳ ಮತ್ತು ಅಗಲಗಳ ಮಾಹಿತಿ ವ್ಯಾಪಕವಾಗಿ ಲಭ್ಯವಾಗಬೇಕಾದ ಅಗತ್ಯವಿದೆ. ಇದನ್ನು ಒಂದು ಪುಸ್ತಕದ ರೂಪದಲ್ಲಿ ಬರೆಯಲು ಈ ಸಮಸ್ಯೆಯ ಹಲವು ಆಯಾಮಗಳ ಕುರಿತು ಅಧ್ಯಯನ, ಸಂವಾದ, ಸಂವಹನಗಳಲ್ಲಿ ಈಗಾಗಲೇ ನಿರತರಾಗಿರುವ ಬಿ ಶ್ರೀಪಾದ ಭಟ್ ಅತ್ಯಂತ ಅರ್ಹ ವ್ಯಕ್ತಿ. ಅವರು ಬರೆದಿರುವ “ಒಕ್ಕೂಟವೋ ತಿಕ್ಕಾಟವೋ” ಈ ಕೊರತೆಯನ್ನು ತುಂಬುತ್ತದೆ.  ಈ ಪುಸ್ತಕದ ವಿಷಯದ ಕುರಿತು ತೀವ್ರ ಕಾಳಜಿ ಮತ್ತು ಅಧ್ಯಯನವಿರುವ ಪ್ರೊ ಚಂದ್ರ ಪೂಜಾರಿ ಅವರು ಈ ಪುಸ್ತಕಕ್ಕೆ ವಿದ್ವತ್ಪೂರ್ಣ ಮುನ್ನುಡಿ ಬರೆದಿದ್ದಾರೆ.

ಇದನ್ನೂ ಓದಿ :ಜೆಎನ್‌ಯುಎಸ್‌ಯು ಚುನಾವಣೆ| ಒಗ್ಗಟ್ಟಿನ ಬಲ ಯಾರಿಗೆ ? ಜೆಎನ್‌ಯು ಚುನಾವಣೆಗೆ ಯಾಕಿಷ್ಟು ಮಹತ್ವ?  ಒಕ್ಕೂಟ

ಗಣರಾಜ್ಯ ವ್ಯವಸ್ಥೆಯ ಬಿಕ್ಕಟ್ಟುಗಳನ್ನು ಅರ್ಥ ಮಾಡಿಕೊಳ್ಳಲು ಅನಿವಾರ್ಯ


ನಮ್ಮ ಒಕ್ಕೂಟ ವ್ಯವಸ್ಥೆ ಅಲುಗಾಡುತ್ತಿರುವ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆ ಕುರಿತ ಚರ್ಚೆ, ಬರಹಗಳ ಕೊರತೆಯಿದೆ. ಇಂತಹ ಕೊರತೆಯನ್ನು ಬಿ.ಶ್ರೀಪಾದ ಭಟ್ ಅವರ ‘ಒಕ್ಕೂಟವೋ ತಿಕ್ಕಾಟವೋ’ ಪುಸ್ತಕ ತುಂಬಬಹುದು. ನಮ್ಮ ಒಕ್ಕೂಟ ವ್ಯವಸ್ಥೆ ಹೊರನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ ಎನ್ನುವುದನ್ನು ಮನದಟ್ಟು ಮಾಡುವ ಹಲವು ಬೆಳವಣಿಗೆಗಳನ್ನು ಪುಸ್ತಕ ಚರ್ಚಿಸುತ್ತಿದೆ… …

ಶ್ರೀಪಾದ ಭಟ್ ಅವರ `ಒಕ್ಕೂಟವೋ ತಿಕ್ಕಾಟವೋ’ ಪುಸ್ತಕ ಎಲ್ಲ ಕ್ಷೇತ್ರಗಳಲ್ಲೂ ಶಾಸನಾತ್ಮಕ, ಆಡಳಿತಾತ್ಮಕ ಹಾಗು ಹಣಕಾಸು – ಗಣರಾಜ್ಯ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚರ್ಚಿಸುತ್ತಿದೆ. ಗಣರಾಜ್ಯ ವ್ಯವಸ್ಥೆಯ ಬಿಕ್ಕಟ್ಟುಗಳನ್ನು ವಿವರಿಸುವ ಬರಹಗಳನ್ನು ಓದುವುದು ಇಂದು ನಮ್ಮ ಗಣರಾಜ್ಯ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅರ್ಥ ಮಾಡಿಕೊಳ್ಳಲು ಅನಿವರ‍್ಯ. ಅಷ್ಟು ಮಾತ್ರವಲ್ಲ, ಮುಂದೊಂದು ದಿನ ಎರಡನೇ ಬಾರಿಗೆ ವಸಾಹತು ಆಡಳಿತಕ್ಕೆ ಬಲಿಯಾಗುವುದನ್ನು ತಪ್ಪಿಸಲು ಕೂಡ ಅನಿವಾರ್ಯ

 

ಡಾ.ಚಂದ್ರ ಪೂಜಾರಿ (ಮುನ್ನುಡಿಯಿಂದ)

ಕುಸಿಯುತ್ತಿರುವ ಒಕ್ಕೂಟ ವ್ಯವಸ್ಥೆಯ ಸಬಲೀಕರಣ ಅಗತ್ಯ

ಭಾರತವು ಇಂದು “ಕ್ವಾಸಿ (ಆಂಶಿಕ) ಒಕ್ಕೂಟ ಪ್ರಭುತ್ವ’ವಾಗಿಯೂ ಉಳಿದುಕೊಂಡಿಲ್ಲ. ಪ್ರಸ್ತುತ ಅದು ‘ಕೇಂದ್ರೀಕರಣಗೊಂಡ ಒಕ್ಕೂಟ ವ್ಯವಸ್ಥೆ’. ಸ್ವಾತಂತ್ರ್ಯ ಬಂದ ನಂತರ ಅಪಾರ ವೈವಿಧ್ಯತೆ, ಭಿನ್ನತೆ, ಬಹುಸಂಸ್ಕೃತಿಯ ಭಾರತದಲ್ಲಿ ‘ಒಕ್ಕೂಟ ವ್ಯವಸ್ಥೆ’ಯನ್ನು ಮತ್ತಷ್ಟು ವಿಕೇಂದ್ರೀಕರಣಗೊಳಿಸುವ ಬದಲಿಗೆ ಕೇಂದ್ರೀಕರಣಕ್ಕೆ ಒತ್ತು ಕೊಟ್ಟಿರುವುದಕ್ಕೆ ಅನೇಕ ಕಾರಣಗಳಿದ್ದವು. ಆದರೆ ಯಾವ ಸಂದರ್ಭದಲ್ಲಿಯೂ ಸಂಪೂರ್ಣವಾಗಿ ಕೇಂದ್ರಕ್ಕೆ ಅಧಿಪತ್ಯ ಕೊಟ್ಟಿರಲಿಲ್ಲ. ಕಳೆದ ಶತಮಾನದ ಎಂಬತ್ತರ ದಶಕದ ನಂತರ ಈ ಒಕ್ಕೂಟ ವ್ಯವಸ್ಥೆ ಕ್ರಮೇಣ ಕುಸಿಯುತ್ತಾ ಹೋದಂತೆ ಫ್ಯಾಸಿಸಂನ ಆಡಳಿತ ಗಟ್ಟಿಗೊಳ್ಳತೊಡಗಿತು.

ಮೋದಿ ನೇತೃತ್ವದ ಬಿಜೆಪಿ ಸರಕಾರದ ಹತ್ತು ವರ್ಷಗಳ ಆಡಳಿತದಲ್ಲಿ ಸಮಾಜೋ ರಾಜಕೀಯ-ಆರ್ಥಿಕ ವ್ಯವಸ್ಥೆ ಕೇಂದ್ರೀಕರಣಗೊಳ್ಳುತ್ತಾ ಹೋದಂತೆ ಒಕ್ಕೂಟ ವ್ಯವಸ್ಥೆ ಕುಸಿಯತೊಡಗಿತು. ರಾಜ್ಯಗಳ ಸ್ವಾಯತ್ತತೆ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗತೊಡಗಿತು. ರಾಜ್ಯಗಳ ಸ್ಥಳೀಯ ಅಸ್ಮಿತೆ, ಬಹುಸಂಸ್ಕೃತಿ, ನೆಲ, ಜಲ, ಭಾಷೆ ಮತ್ತು ಸಾಮಾಜಿಕ ನ್ಯಾಯ ಎಲ್ಲವೂ ದುರ್ಬಲಗೊಳ್ಳತೊಡಗಿದವು. ರಾಜ್ಯಗಳು ತಮ್ಮ ಹಕ್ಕನ್ನು ಕಳೆದುಕೊಳ್ಳತೊಡಗಿದವು. ಬಲಿಷ್ಠ ಕೇಂದ್ರದ ನೆಪದಲ್ಲಿ ರಾಜ್ಯಗಳ ಕತ್ತು ಹಿಚುಕಲಾಯಿತು. ದೇಶವನ್ನು ಹುಸಿ ರಾಷ್ಟ್ರೀಯತೆ ಮತಾಂಧತೆಯ, ಬ್ರಾಹ್ಮಣಶಾಹಿ ಚಾತುರ್ವರ್ಣದ ಮೂಲಕ ಸೋಲಿಸಲಾಯಿತು.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಗಳ ಸ್ವಾಯತ್ತತೆ ಮತ್ತು ಹುಸಿ ರಾಷ್ಟ್ರೀಯ ಸಮಗ್ರತೆ, ಕೇಂದ್ರೀಕರಣ ಮತ್ತು ವಿಕೇಂದ್ರೀಕರಣ, ಹುಸಿ ರಾಷ್ಟ್ರೀಕರಣ ಮತ್ತು ಪ್ರಾದೇಶೀಕರಣಗಳ ನಡುವೆ ಸಮತೋಲನ ಸಾಧಿಸುವಂತಹ ಒಕ್ಕೂಟ ವ್ಯವಸ್ಥೆಯ ಅವಶ್ಯಕತೆ ಇದೆ. ಇದು ಸಾಧ್ಯವಾಗಬೇಕಾದರೆ ಸಾರ್ವಜನಿಕ ಸಂಸ್ಥೆಗಳಿಗೆ ಸ್ವಾಯತ್ತತೆ ದೊರಕಬೇಕು. ಮುಖ್ಯವಾಗಿ ರಾಜ್ಯಗಳಿಗೆ ರಾಜಕೀಯ, ಆರ್ಥಿಕ . ಸ್ವಾತಂತ್ರ್ಯ ದೊರಕಬೇಕು. ಸ್ಥಳಿಯ ಸಂಸ್ಥೆಗಳು ಸಬಲೀಕರಣಗೊಳ್ಳಬೇಕು. ‘ಹಿಂದಿ-ಹಿಂದೂ-ಹಿಂದುಸ್ತಾನ’ ಎಂಬ ಮತೀಯವಾದಕ್ಕೆ ಸೋಲುಂಟಾಗಬೇಕು. ಸಾಮಾಜಿಕ, ಭಾಷಾ ಬಹುತ್ವಕ್ಕೆ ಮಹತ್ವ ದೊರಕಬೇಕು. ಈ ‘ಬೇಕುಗಳು’ ಬೆಳೆದಷ್ಟು ಒಕ್ಕೂಟ ವ್ಯವಸ್ಥೆ ಸಬಲೀಕರಣಕ್ಕೆ ಸಹಕಾರಿಯಾಗುತ್ತದೆ.

ಬಿ ಶ್ರೀಪಾದ ಭಟ್ (ಪ್ರಸ್ತಾವನೆಯಿಂದ)

ಇದನ್ನೂ ನೋಡಿ : “ಜಾತಿ ಜನಗಣತಿ” ಜನತೆಯ ಹಿತಾಸಕ್ತಿ ಸೋಲದಿರಲಿ – ಡಾ. ಕೆ.ಪ್ರಕಾಶ್Janashakthi Media ಒಕ್ಕೂಟ

Donate Janashakthi Media

Leave a Reply

Your email address will not be published. Required fields are marked *