ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಇಂದು ಬೆಳಂಬೆಳಗ್ಗೆಯೇ ರಾಜ್ಯದ 18 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದೆ. ಕರ್ನಾಟಕದ 78 ಕಡೆಗಳಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಭ್ರಷ್ಟಾಚಾರ ನಿಗ್ರಹ ದಳದ 300 ಅಧಿಕಾರಿಗಳ ತಂಡಗಳು ದಾಳಿ ಮಾಡಿವೆ.
ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಬೆಂಗಳೂರಿನ 3 ಕಡೆ ಸೇರಿದಂತೆ 18 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 78 ಸ್ಥಳಗಳಲ್ಲಿ, ಏಕಕಾಲಕ್ಕೆ 200ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ ರೇಡ್ ಮಾಡಲಾಗಿದ್ದು, ಎಸಿಬಿ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಆರೋಪ ಹಿನ್ನೆಲೆ, 18 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಸ್ಥಳಗಳಲ್ಲಿ ಪರಿಶೀಲನೆ ನಡೆಯುತ್ತಿದೆ.
ಬಾಗಲಕೋಟೆ, ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ರಾಯಚೂರು, ಯಾದಗಿರಿ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವ ಆರೋಪದಲ್ಲಿ ಕೆಲವೆಡೆ ದಾಳಿ ನಡೆದಿದೆ. ಬೆಳಗ್ಗೆ 6 ಗಂಟೆಯಿಂದ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಅಕ್ರಮವಾಗಿ ಗಳಿಸಿದ ಚಿನ್ನಾಭರಣ, ಐಶಾರಾಮಿ ಬಂಗಲೆಗಳನ್ನು ಪತ್ತೆ ಮಾಡಿ ಅಕ್ರಮ ಗಳಿಕೆಯ ಲೆಕ್ಕಾಚಾರ ಮಾಡಲಾಗುತ್ತಿದೆ. ಕೆಲ ಅಧಿಕಾರಿಗಳ ಮನೆಯಲ್ಲಿನ ನಗದು ಲೆಕ್ಕ ಹಾಕಲು ಯಂತ್ರಗಳನ್ನು ಕೊಂಡೊಯ್ದಿದ್ದಾರೆ. ಎಸಿಬಿ ದಾಳಿಯಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಬಯಲಿಗೆ ಬಂದಿದೆ.
ವರ್ಷಗಳಿಂದ ನಾನಾ ಮಾರ್ಗಗಳ ಮೂಲಕ ಗಳಿಸಿದ ಹಣದಿಂದ ಖರೀದಿ ಮಾಡಿದ್ದ ಚಿನ್ನಾಭರಣ, ಬೆಳ್ಳಿ ಆಭರಣ, ಆಸ್ತಿಗಳನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿ ಲೆಕ್ಕ ಹಾಕುತ್ತಿದ್ದಂತೆ ಕೆಲ ಮಹಿಳೆಯರು ಕಣ್ಣೀರು ಹಾಕಿದ್ದಾರೆ!
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ವಲಯ ಅರಣ್ಯ ಅಧಿಕಾರಿ ಶಿವಾನಂದ ಶರಣಪ್ಪ ಖೇಡಗಿ ಮನೆಯಲ್ಲಿ ಜ್ಯುವೆಲರಿ ಅಂಗಡಿ ಇಡುವಷ್ಟು ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಅಧಿಕಾರಿಗಳ ತಂಡ ಬೆಳಗ್ಗೆ ಎಂಟು ಗಂಟೆಯಿಂದ ಚಿನ್ನಾಭರಣ ತೂಕ ಹಾಕಿ ಲೆಕ್ಕ ತೆಗೆದುಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. 500 ರೂಪಾಯಿ ಮುಖ ಬೆಲೆಯ ನೋಟುಗಳ ಐದಾರು ಕಂತುಗಳ ನಗದು ಹಣ ಸಿಕ್ಕಿದೆ. ಇದರ ಜತೆಗೆ ಚಿಲ್ಲರೆ ಹುಂಡಿ ತುಂಬುವ ರೀತಿಯಲ್ಲಿ ತುಂಬಿಸಿದ್ದ 100 ರೂಪಾಯಿ ನೋಟುಗಳನ್ನು ಎಸಿಬಿ ಅಧಿಕಾರಿಗಳು ಎಣಿಕೆ ಮಾಡುವಲ್ಲಿ ನಿರತರಾಗಿದ್ದಾರೆ. ಮನೆಯಲ್ಲಿ ಸುಗಂಧ ಬೀರುವ ಮೂರು ಕೆ.ಜಿ. ಶ್ರಿಗಂಧವನ್ನು ಕೂಡ ಸಂಗ್ರಹಿಸಿಟ್ಟಿದ್ದು, ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕೆಳಕಂಡ 18 ಅಧಿಕಾರಿಗಳ ಹೆಸರು-ಹುದ್ದೆ
- ಜ್ಞಾನೇಂದ್ರಕುಮಾರ್, ಹೆಚ್ಚುವರಿ ಆಯುಕ್ತರು ಸಾರಿಗೆ, ಟ್ರಾಡ್ ಸಾರಿಗೆ ಮತ್ತು ಸುರಕ್ಷತೆ, ಬೆಂಗಳೂರು
- ರಾಕೇಶ್ ಕುಮಾರ್, ಬಿಡಿಎ, ಪಟ್ಟಣ ಯೋಜನೆ
- ರಮೇಶ ಕಣಕಟ್ಟೆ, ಆರ್.ಎಫ್.ಓ. ಸಾಮಾಜಿಕ ಅರಣ್ಯ, ಯಾದಗಿರಿ
- ಬಸವರಾಜ ಶೇಖರ ರೆಡ್ಡಿ ಪಾಟೀಲ್, ಕಾರ್ಯನಿರ್ವಾಹಕ ಅಭಿಯಂತರ, ಕೌಜಲಗಿ ವಿಭಾಗ, ಗೋಕಾಕ
- ಬಸವ ಕುಮಾರ್ ಎಸ್. ಅಣ್ಣಿಗೇರಿ, ಶಿರಸ್ತೇದಾರ್, ಡಿಸಿ ಕಛೇರಿ, ಗದಗ
- ಗಪಿನಾಥ್ ಸಾ ಎನ್ ಮಾಳಗಿ, ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ, ವಿಜಯಪುರ
- ಬಿ ಕೆ ಶಿವಕುಮಾರ್, ಅಡಿಷನಲ್ ಡೈರೆಕ್ಟರ್, ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ,
- ಶಿವಾನಂದ್ ಪಿ ಶರಣಪ್ಪ ಖೇಡಗಿ, ಆರ್‌ಎಫ್‌ಒ, ಬಾದಾಮಿ
- ಮಂಜುನಾಥ್, ಸಹಾಯಕ ಆಯುಕ್ತ, ರಾಮನಗರ
- ಶ್ರೀನಿವಾಸ್, ಜನರಲ್ ಮ್ಯಾನೇಜರ್, ಸಮಾಜ ಕಲ್ಯಾಣ ಇಲಾಖೆ
- ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ
- ಕೃಷ್ಣನ್ ಎಇ, ಎಪಿಎಂಸಿ, ಹಾವೇರಿ
- ಚಲುವರಾಜ್, ಅಬಕಾರಿ ನಿರೀಕ್ಷಕರು, ಗುಂಡ್ಲುಪೇಟೆ ತಾಲೂಕು
- ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಸುವಿವಿಭಾಗ
- ಬಾಲಕೃಷ್ಣ ಹೆಚ್ ಎನ್, ಪೊಲೀಸ್ ಇನ್ಸ್ ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು
- ಗವಿರಂಗಪ್ಪ, ಎಇಇ, ಪಿಡಬ್ಲ್ಯೂಡಿ, ಚಿಕ್ಕಮಂಗಳೂರು
- ಅಶೋಕ್ ರೆಡ್ಡಿ ಪಾಟೀಲ್, ಎಇಇ, ಕೃಷ್ಣ ಭಾಗ್ಯ ಜಲ ನಿಗಮ ಲಿ, ದೇವದುರ್ಗ ರಾಯಚೂರು
- ದಯಾ ಸುಂದರ್ ರಾಜು, ಎಇಇ, ಕೆಪಿಟಿಸಿಎಲ್, ದಕ್ಷಿಣ ಕನ್ನಡ