ರಾಜ್ಯದಲ್ಲಿ 4244 ಅಂಗನವಾಡಿ ಕೇಂದ್ರಗಳ ಪ್ರಾರಂಭಕ್ಕೆ ಅಧಿಕೃತ ಆದೇಶ

ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ 4,244 ಅಂಗನವಾಡಿ ಕೇಂದ್ರಗಳ ಆರಂಭ ಮಾಡುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಸುಮಾರು 16 ಲಕ್ಷ ಕುಟುಂಬಗಳ ಮಕ್ಕಳ ಪೌಷ್ಟಿಕಾಂಶ ಮತ್ತು ಶಾಲಾ ಪೂರ್ವ ಶಿಕ್ಷಣದ ಪ್ರಯೋಜನ ಪಡೆಯುವ ಹಾಗೂ 8100 ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವಂತಹದ್ದಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ.

ನಗರ ಪ್ರದೇಶದಲ್ಲಿ 2,589 ಅಂಗನವಾಡಿ ಕೇಂದ್ರಗಳು ಮತ್ತು ವಲಸೆ ಅಥವಾ ಭೂರಹಿತ ಕಾರ್ಮಿಕರಿರುವ ಸ್ಥಳದಲ್ಲಿ 1,655 ಕೇಂದ್ರಗಳನ್ನು ತೆರೆಯಲು 268.98 ಕೋಟಿ ರೂಪಾಯಿಗಳ ಅನುದಾನ ರಾಜ್ಯ ಸರ್ಕಾರ ಮೀಸಲಿಟ್ಟಿದೆ. ಕರ್ನಾಟಕ ಅಂಗನವಾಡಿ ಮತ್ತು ಪೋಷಣ್ ಅಭಿಯಾನ 2.0 ಎಂದು ಮರು ನಾಮಾಂಕಿತಗೊಂಡಿರುವ ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆಯಡಿಯಲ್ಲಿ ಅಂಗನವಾಡಿ ಕೇಂದ್ರಗಳು ಪ್ರಾರಂಭವಾಗಲಿದೆ.

ಕರ್ನಾಟಕ ಅಂಗನವಾಡಿ ಮತ್ತು ಪೋಷನ್‌ ಅಭಿಯಾನ 2.0 ಎಂದು ಮರುನಾಮಾಂಕಿತಗೊಂಡಿರುವ ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆಯು 1975 ರಲ್ಲಿ ಪ್ರಾರಂಭವಾಯಿತು. ಪ್ರಸ್ತುತ ರಾಜ್ಯದಲ್ಲಿ ಒಟ್ಟು 66,361 ಅಂಗನವಾಡಿ ಕೇಂದ್ರಗಳು ಸ್ಥಾಪಿತವಾಗಿದ್ದು, ಅವುಗಳ ಮೂಲಕ ರಾಜ್ಯದ ಮಕ್ಕಳಿಗೆ, ಕಿಶೋರಿಯರಿಗೆ, ಗರ್ಭಿಣಿ ಸ್ತ್ರೀಯರಿಗೆ ಹಾಗೂ ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ಪೌಷ್ಟಿಕತೆ ಮತ್ತು ಆರೋಗ್ಯ ಶಿಕ್ಷಣ ಮುಂತಾದ 6 ಸೇವೆಗಳನ್ನು ಒದಗಿಸಲಾಗುತ್ತಿದೆ.

ಈ ಯೋಜನೆಯ ಅಡಿಯಲ್ಲಿ ಶೇಕಡಾ 56ರಷ್ಟು ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ನೀಡಲು ಸಾಧ್ಯವಾಗಿದೆ. ಈ ಯೋಜನೆಯಿಂದ ಹೊರಗಿರುವ ಕಡಿಮೆ ಆದಾಯದ ಜನಸಂಖ್ಯೆಯು ವಾಸಿಸುವ ಪ್ರದೇಶಗಳು ಹೆಚ್ಚಾಗಿದ್ದು, ಅವರಿಗೆ 6 ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ನಿರ್ಧಾರಿದೆ ಎಂದು ಸಚಿವರು ವಿವರಿಸಿದರು.

ಈ ಅಂಗನವಾಡಿ ಕೇಂದ್ರಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *