- ಗ್ರಾಪಂ ಚುನಾವಣೆಗೂ ಮುನ್ನ ಅಧ್ಯಕ್ಷ ಹುದ್ದೆ ಹರಾಜು
- 44 ಲಕ್ಷ ರೂ ಗೆ ಹರಾಜು- ಹರಾಜಿನಲ್ಲಿ ನಾಲ್ಕು ಜನ ಭಾಗಿ
- ಹರಾಜಿನಲ್ಲಿ ಬಂದ ಹಣ ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆ
ಬಲಂಗೀರ್ : ಸಾಂವಿಧಾನಿಕವಾಗಿ ಚುನಾವಣೆ ನಡೆಸಿ, ಅರ್ಹ ಅಭ್ಯರ್ಥಿ ಆಯ್ಕೆ ಮಾಡುವುದು ಭಾರತೀಯ ಪ್ರಜಾಪ್ರಭುತ್ವದ ವ್ಯವಸ್ಥೆಗಳಲ್ಲಿ ಒಂದು. ಆದರೆ, ಚುನಾವಣಾ ಪ್ರಕ್ರಿಯೆಗೆ ಅಪಹಾಸ್ಯ ಮಾಡಿರುವ ಘಟನೆವೊಂದು ಒಡಿಶಾದಲ್ಲಿ ಬೆಳಕಿಗೆ ಬಂದಿದೆ.
ಒಡಿಶಾದ ಬಲಂಗೀರ್ ಜಿಲ್ಲೆಯ ಗ್ರಾಮ ಪಂಚಾಯತ್ನಲ್ಲಿ ಕೆಲವರು ಸೇರಿಕೊಂಡು ಸರಪಂಚ್ ಹುದ್ದೆಗೆ ಹರಾಜು ಪ್ರಕ್ರಿಯೆ ನಡೆಸಿದ್ದು, 44 ಲಕ್ಷ ರೂಪಾಯಿಗೆ ಅಧ್ಯಕ್ಷ ಸ್ಥಾನ ಬಿಕರಿಯಾಗಿದೆ ಎಂದು ತಿಳಿದು ಬಂದಿದೆ. ಒಡಿಶಾದಲ್ಲಿ ಫೆಬ್ರವರಿ ತಿಂಗಳಲ್ಲಿ ಪಂಚಾಯತ್ ಚುನಾವಣೆ ನಿಗದಿಯಾಗಿದ್ದು, ಅದಕ್ಕೂ ಮುಂಚಿತವಾಗಿ ಈ ಘಟನೆ ನಡೆದಿದೆ. ಗ್ರಾಪಂ ಚುನಾವಣೆಗೆ ರಾಜ್ಯ ಸರಕಾರ ನಿಗದಿ ಮಾಡಿದ ಚುನಾವಣೆ ವೆಚ್ಚ ಕೇವಲ 2 ಲಕ್ಷ ಇದೆ, ಆದರೆ ಅಧ್ಯಕ್ಷ ಹುದ್ದೆಗೆ 44 ಲಕ್ಷಕ್ಕೆ ಹರಾಜಾಗಿದ್ದು ಚುನಾವಣಾ ಆಯೋಗ ಆ ಗ್ರಾಮದ ಪ್ರಮುಖರಿಗೆ ಹಾಗೂ ಹಾರಾಜಿನಲ್ಲಿ ಭಾಗವಹಿಸಿದ ಜನರಿಗೆ ನೋಟೀಸ್ ನೀಡಿದೆ.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಹರಾಜು : ಸರಪಂಚ್ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದ ನಾಲ್ವರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಸರಪಂಚ್ ಆಗುವ ಹಕ್ಕು ಗೆದ್ದವರು 44.10 ಲಕ್ಷ ರೂ ನೀಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಹೀಗೆ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಸ್ಥಾನವನ್ನು ಖರೀದಿಸಿರುವ ವ್ಯಕ್ತಿಯಿಂದ ಊರಿನ ಅಭಿವೃದ್ಧಿ ಆಗುತ್ತಾ ಎಂಬ ಪ್ರಶ್ನೆ ಜನರನ್ನು ಕಾಡ್ತಿದೆ. 2017 ರಲೂ ಇದೇ ರೀತಿ ಆಯ್ಕೆ ಮಾಡಲಾಗಿತ್ತು ಆದರೆ ಹಣ ದುರ್ಬಳಕೆ ಆಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಳೆದ ಕೆಲ ತಿಂಗಳ ಹಿಂದೆ ಮಧ್ಯಪ್ರದೇಶದ ಅಶೋಕನಗರದಲ್ಲೂ ಇಂತಹ ವಿಚಿತ್ರ ಪ್ರಕರಣ ನಡೆದಿತ್ತು. ಗ್ರಾಮ ಪಂಚಾ ಸರಪಂಚ್ ಸ್ಥಾನಕ್ಕಾಗಿ ಹರಾಜು ಪ್ರಕ್ರಿಯೆ ಮೂಲಕ ವ್ಯಕ್ತಿಯೋರ್ವನನ್ನು ಆಯ್ಕೆ ಮಾಡಲಾಗಿತ್ತು. ಈ ಹುದ್ದೆಗೆ ಆಯ್ಕೆಯಾಗಿರುವ ವ್ಯಕ್ತಿ ಬರೋಬ್ಬರಿ 44 ಲಕ್ಷ ರೂ.ನೀಡಿದ್ದನು.