ಹಿಂಡೆನ್‌ಬರ್ಗ್ ನಂತರ ಒಸಿಸಿಆರ್‌ಪಿ ವರದಿ

‘ನ ಖಾನೇ ದೂಂಗಾ’ ಆಳ್ವಿಕೆಯ ಬಗ್ಗೆ ಪ್ರಶ್ನೆಚಿಹ್ನೆಗಳು

2014ರಲ್ಲಿ ಮೋದಿಯವರು ಪ್ರಧಾನಿಗಳಾದಾಗ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 629ನೇ ಸ್ಥಾನದಲ್ಲಿದ್ದವರು 2022ರ ಅಂತ್ಯದಲ್ಲಿ ಎರಡನೇ ಸ್ಥಾನಕ್ಕೆ ಹೇಗೆ ಏರಿದರು, ಅದಾನಿ ಸಮೂಹಗಳ ಕಂಪನಿಯ ಶೇರುಗಳ ಮೌಲ್ಯ ವಿಪರೀತವಾಗಿ ಏರಿದ್ದು ಕೇವಲ ಅದಾನಿಯವರ ಮಹಾನ್ ಉದ್ಯಮಶೀಲತೆಯಿಂದಾಗಿ ಮಾತ್ರವೇ? ಇಲ್ಲ, ಇದು ಮಾರುಕಟ್ಟೆಯಲ್ಲಿ ಈ ಉದ್ಯಮ ಸಮೂಹ ನಡೆಸಿರುವ ಕೈಚಳಕಗಳಿಂದಾಗಿ, ಕಾನೂನುಬಾಹಿರ ಚಟುವಟಿಕೆಗಳಿಂದಾಗಿ ಎಂದು ಹಿಂಡೆನ್‌ಬರ್ಗ್ ವರದಿ ಹೇಳಿತು. ಆದರೆ ಅದಕ್ಕೆ ಪುರಾವೆಗಳನ್ನು ಕೊಟ್ಟಿರಲಿಲ್ಲ. ಈಗ ಒಸಿಸಿಆರ್‌ಪಿ ವರದಿ ಪುರಾವೆಗಳನ್ನು ಒದಗಿಸಿದೆ.

ಅದಾನಿ ಸಮೂಹದ ಶೇರು ಮಾರುಕಟ್ಟೆ ವ್ಯವಹಾರಗಳ ಬಗ್ಗೆ ಆರು ತಿಂಗಳ ಹಿಂದೆ ಹಿಂಡೆನಬರ್ಗ್ ವರದಿ ಹಲವು ಪ್ರಶ್ನೆಗಳನ್ನು ಎಬ್ಬಿಸಿತ್ತು. ಈಗ ಇನ್ನೊಂದು ವರದಿ ಈ ಪ್ರಶ್ನೆಗಳು ಎತ್ತಿದ ಹಗರಣದ ಸ್ವರೂಪವನ್ನು ಇನ್ನಷ್ಟು ಸ್ಪಷ್ಟಗೊಳಿಸಿದೆ. ಅಲ್ಲದೆ ಇದರಲ್ಲಿ ಈಗ ದೇಶವನ್ನಾಳುತ್ತಿರುವವರೂ ಶಾಮೀಲಾಗಿದ್ದಾರೆ ಎಂಬುದಕ್ಕೆ ಮೇಲ್ನೋಟಕ್ಕೇ ಕಾಣುವ ಪುರಾವೆಗಳು ಈ ವರದಿಯಲ್ಲಿ ಇವೆ ಎಂದು ತಿಳಿದುಬಂದಿದೆ.

ಹಿಂಡೆನ್ ಬರ್ಗ್ ವರದಿಯಿಂದ ಶೇರು ಮಾರುಕಟ್ಟೆಯಲ್ಲಿ ಭಾರೀ ಕೋಲಾಹಲ ಎದ್ದು ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ ದಿಢೀರನೆ ಅರ್ಧಕ್ಕೆ ಕುಸಿಯಿತು. ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿ ‘ಅಚ್ಛೇ ದಿನ್’ಗಳನ್ನು ಸಾರ್ಥಕಗೊಳಿಸಿದ್ದವರು 20ನೇ ಸ್ಥಾನಕ್ಕಿಂತಲೂ ಕೆಳಕ್ಕೆ ಜಾರಿದರು. ಆದರೂ, ಅದಕ್ಕೆ ಅದಾನಿ ಸಮೂಹವಾಗಲೀ, ಸರಕಾರವಾಗಲೀ ಉತ್ತರ ಕೊಡದೆ ತಪ್ಪಿಸಿಕೊಂಡವು. ನಿಜ, ಅದೇನೂ ಅನಿರೀಕ್ಷಿತವಾಗಿರಲಿಲ್ಲ. ಅದಾನಿ ಹಾರಿಕೆಯ
ಮಾತುಗಳನ್ನಾಡಿದರೆ, ಕೇಂದ್ರ ಸರಕಾರ, ಅದರಲ್ಲೂ ಪ್ರಧಾನಿಗಳು ತಮ್ಮ ಪರಮಾಪ್ತ ಉದ್ಯಮಿಯ ಬಗ್ಗೆ ಎಂದಿನ ದಿವ್ಯಮೌನವೃತ ಧರಿಸಿದರು. ಆದರೆ ಅದಾನಿಯ ಸಮರ್ಥನೆಗೂ ಮುಂದಾಗಲಿಲ್ಲ ಎಂಬುದೂ ಗಮನಾರ್ಹ.

ಈ ವರದಿ ಎಬ್ಬಿಸಿದ ಸದ್ದಿನಿಂದಾಗಿ ಇದು ಸುಪ್ರಿಂ ಕೋರ್ಟ್ ಅಂಗಳಕ್ಕೆ ಹೋಯಿತು. ಅದು ಒಂದು ಪರಿಣಿತರ ತಂಡವನ್ನು ನೇಮಿಸಿ ಇಲ್ಲಿರುವ ಪ್ರಶ್ನೆಗಳನ್ನು ಪರಿಶೀಲಿಸಲು ಹೇಳಿತು ಮತ್ತು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ‘ಸೆಬಿ’ಗೆ ಮಾರುಕಟ್ಟೆಯಲ್ಲಿ ಅಪರಾ-ತಪರಾದ ತನಿಖೆ ನಡೆಸುವಂತೆ ಹೇಳಿತು. ಸೆಬಿ ಕೊಟ್ಟ ಅವಧಿಯಲ್ಲಿ ವರದಿ ತನಿಖೆ ಪೂರ್ಣಗೊಳಿಸಲಾಗಿಲ್ಲ ಎಂದು ಮೂರು ತಿಂಗಳ ವಿಸ್ತರಣೆ ಕೇಳಿತು. ಇದರಿಂದಾಗಿ ಪರಿಣಿತರ ತಂಡಕ್ಕೂ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರಲಾಗಲಿಲ್ಲ.

ಆದರೆ ಈಗ ಆಗಸ್ಟ್ 31ರಂದು ‘ದಿ ಗಾರ್ಡಿಯನ್’ ಮತ್ತು ‘ಫಿನಾನ್ಶಿಯಲ್ ಟೈಮ್ಸ್’ ನಲ್ಲಿ ಪ್ರಕಟವಾಗಿರುವ ವರದಿ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ, ಹಿಂಡೆನ್‌ಬರ್ಗ್ ವರದಿಯಲ್ಲಿ ಕಾಣಸಿಗದ ಕೆಲವು ಅಂಶಗಳನ್ನು ಬಯಲಿಗೆ ತಂದು ಚಿತ್ರವನ್ನು ಇದು ಹೆಚ್ಚು ಸ್ಪಷ್ಟಗೊಳಿಸಿದೆ ಎಂದು ಪರಿಣಿತರು ಹೇಳುತ್ತಿದ್ದಾರೆ. ಆ ಪತ್ರಿಕೆಗಳಿಗೆ ‘ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಮಾಡುವ ಪ್ರಾಜೆಕ್ಟ್(ಒಸಿಸಿಆರ್‌ಪಿ) ಎಂಬ ತನಿಖಾ ವರದಿಗಾರರ ಅಂತರರಾಷ್ಟ್ರೀಯ ಸಮೂಹ ಸಂಸ್ಥೆ ಈ ಮಾಹಿತಿಗಳನ್ನು ನೀಡಿತ್ತು.

ಅವ್ಯವಹಾರಗಳ ಸರಮಾಲೆ!

2014ರಲ್ಲಿ ಮೋದಿಯವರು ಪ್ರಧಾನಿಗಳಾದಾಗ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 629ನೇ ಸ್ಥಾನದಲ್ಲಿದ್ದವರು 2022ರ ಅಂತ್ಯದಲ್ಲಿ ಎರಡನೇ ಸ್ಥಾನಕ್ಕೆ ಹೇಗೆ ಏರಿದರು, ಅದಾನಿ ಸಮೂಹಗಳ ಕಂಪನಿಯ ಶೇರುಗಳ ಮೌಲ್ಯ ವಿಪರೀತವಾಗಿ ಏರಿದ್ದು ಕೇವಲ ಅದಾನಿಯವರ ಮಹಾನ್ ಉದ್ಯಮಶೀಲತೆಯಿಂದಾಗಿ ಮಾತ್ರವೇ?

ಇಲ್ಲ, ಇದು ಮಾರುಕಟ್ಟೆಯಲ್ಲಿ ಈ ಉದ್ಯಮ ಸಮೂಹ ನಡೆಸಿರುವ ಕೈಚಳಕಗಳಿಂದಾಗಿ, ಕಾನೂನುಬಾಹಿರ ಚಟುವಟಿಕೆಗಳಿಂದಾಗಿ ಎಂದು ಹಿಂಡೆನ್‌ಬರ್ಗ್ ವರದಿ ಹೇಳಿತು. ಭಾರತದಲ್ಲಿರುವ ಕಾನೂನಿನ ಪ್ರಕಾರ ಶೇರು ಮಾರುಕಟ್ಟೆಯಲ್ಲಿ ಪಟ್ಟಿಯಾದ ಕಂಪನಿಯ ಪ್ರವರ್ತಕರು 75%ಕ್ಕಿಂತ ಹೆಚ್ಚು ಶೇರುಗಳನ್ನು ಹೊಂದಿರುವಂತಿಲ್ಲ. ಕನಿಷ್ಟ 25% ಶೇರು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರಬೇಕು. ಇದು ಪ್ರವರ್ತಕರು ತಮ್ಮ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸದಂತೆ ತಡೆಯಲಿಕ್ಕಾಗಿ. ಆದರೆ ಅದಾನಿ ಸಮೂಹ ಮಾಡಿದ್ದು ಇದನ್ನೇ ಎಂದು ಹಿಂಡೆನ್‌ಬರ್ಗ್ ವರದಿ ಹೇಳಿತ್ತು. ಅದರ ಶೇರುಗಳ ಪ್ರಮಾಣ ವಾಸ್ತವದಲ್ಲಿ 85%ಕ್ಕಿಂತಲೂ ಹೆಚ್ಚಿದೆ ಎನ್ನಲಾಗಿದೆ. ಇದರಿಂದಾಗಿ ಅದಕ್ಕೆ ತನ್ನ ಸಮೂಹ ಕಂಪನಿಗಳ ಶೇರು ಬೆಲೆಗಳನ್ನು ಕೃತಕವಾಗಿ ಏರಿಸಲು ಮತ್ತು ಅದರ ಆಧಾರದ ಮೇಲೆ ಬ್ಯಾಂಕುಗಳಿಂದ ಹೆಚ್ಚಿನ ಸಾಲಗಳನ್ನು ಪಡೆಯಲು ಸಾಧ್ಯವಾಯಿತು. ಮೇಲ್ನೋಟಕ್ಕೆ ಅದಾನಿ ಸಮೂಹದ ಎಲ್ಲ ಕಂಪನಿಗಳಲ್ಲಿ ಅದಾನಿ ಅಥವ ಅವರ ಕುಟುಂಬದ ಸದಸ್ಯರ ಶೇರುಗಳ ಪ್ರಮಾಣ 75% ಕ್ಕಿಂತ ಕಡಿಮೆಯಿರುವುದಾಗಿ ಕಂಡರೂ ವಿದೇಶಗಳಲ್ಲಿ ‘ಚಿಪ್ಪು’(ಶೆಲ್) ಕಂಪನಿಗಳ ಮೂಲಕ ಈ ಕೈಚಳಕವನ್ನು ನಡೆಸಲಾಗಿದೆ ಎಂದು ಹಿಂಡೆನ್‌ಬರ್ಗ್ ವರದಿ ಹೇಳಿತ್ತು. ಆದರೆ ಅದಕ್ಕೆ ಪುರಾವೆಗಳನ್ನು ಕೊಟ್ಟಿರಲಿಲ್ಲ. ಈಗ ಒಸಿಸಿಆರ್‌ಪಿ ವರದಿ ಈ ಪುರಾವೆಗಳನ್ನು ಒದಗಿಸಿದೆ.

ಒಸಿಸಿಆರ್‌ಪಿ ನಡೆಸಿದ ತನಿಖೆಗಳ ಪ್ರಕಾರ 2013ರಿಂದ 2018ರ ನಡುವೆ ಎರಡು ಮಾರಿಷಸ್ ನ ‘ಫಂಡ್’ಗಳು, ಇ.ಐ.ಎಫ್.ಎಫ್. ಮತ್ತು ಇಎಂ ಆರ್‌ಎಫ್ ಅಂದಾನಿ ಕಂಪನಿಗಳ ಶೇರುಗಳ ವಹಿವಾಟು ನಡೆಸಿವೆ. ಈ ನಿಧಿಗಳ ಇಬ್ಬರು ಪ್ರಮುಖ ವಿದೇಶಿ ಹೂಡಿಕೆದಾರರೆಂದರೆ ಯುಎಇಯ ನಾಸಿರ್ ಅಲಿ ಶಬಾನ್ ಅಹ್ಲಿ ಮತ್ತು ತೈವಾನಿನ ಚಾಂಗ್ ಚುಂಗ್-ಲಿಂಗ್. ಇವರು ಬೆರ್ಮುಡಾದಲ್ಲಿರುವ ಜಿಒಎಫ್ ಎಂಬ ಹೂಡಿಕೆ ನಿಧಿಯ ಮೂಲಕ ಹಣ ಹೂಡಿಕೆ ಮಾಡಿರುವುದು.

ಈ ತನಿಖೆಗಳಿಂದ ಗೊತ್ತಾದ ಮತ್ತೊಂದು ಸಂಗತಿಯೆಂದರೆ ಗೌತಮ್ ಅದಾನಿಯ ಸೋದರ ಮತ್ತು ಈ ಸಮೂಹದ ಪ್ರವರ್ತಕರಲ್ಲಿ ಒಬ್ಬರಾದ ವಿನೋದ್ ಅದಾನಿಯ ಒಡೆತನದ ಎಕ್ಸೆಲ್ ಇನ್ವೆಸ್ಟ್ಮೆಂಟ್ ಅಂಡ್ ಅಡ್ವೈಸರಿ ಸರ್ವಿಸಸ್ ಲಿ.ಎಂಬ ಯುಎಇಯಲ್ಲಿರುವ ರಹಸ್ಯಮಯ ಕಂಪನಿ ಮೇಲೆ ಹೇಳಿದ ಮಾರಿಷಸ್ ಮತ್ತು ಬೆರ್ಮುಡಾದ ‘ಫಂಡ್’ಗಳಾದ ಇ.ಐ.ಎಫ್.ಎಫ್. ಮತ್ತು ಇಎಂಆರ್‌ಎಫ್ ಮತ್ತು ಜಿಒಎಫ್ ನಿಂದ ಜೂನ್ 2012ರಿಂದ ಆಗಸ್ಟ್ 2014 ರ ನಡುವೆ 1.4 ದಶಲಕ್ಷ ಡಾಲರ್ ‘ಸಲಹಾ ಶುಲ್ಕ’ ಎಂದು ಪಡೆದಿತ್ತು. ಅಂದರೆ ಆ ಮೂರು ನಿಧಿಗಳು ವಿನೋದ್ ಅದಾನಿಯ ‘ಸಲಹಾ’ ಕಂಪನಿಯ ಸಲಹೆಯಂತೆ ಅದಾನಿ
ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಿದ್ದವು ಎಂಬುದನ್ನೂ ಒಸಿಸಿಆರ್‌ಪಿ ಕಂಡು ಹಿಡಿದಿದೆ.

ಅದಾನಿ ತನ್ನ ಕಂಪನಿಗಳಲ್ಲಿ ಕಾನೂನಿನ ಮಿತಿಯನ್ನು ಮೀರಿ ತಾನೇ ಹೂಡಿಕೆ ಮಾಡುತ್ತಿದ್ದರು ಎಂಬುದು ಮೇಲ್ನೋಟಕ್ಕೆ ಇದರಿಂದ ಕಾಣ ಬರುತ್ತಿದೆ.

ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ವಿದೇಶದಲ್ಲಿರುವ ಕಂಪನಿಗಳ ಮೂಲಕ ಹೂಡಿಕೆ ಮಾಡಿದ ಹಣ ನ್ಯಾಯವಾಗಿ ಸಂಪಾದಿಸಿದ್ದಲ್ಲ. ಕಾರ್ಪೊರೇಟ್‌ಗಳು ವಿದೇಶಗಳಲ್ಲಿ ರಫ್ತುಗಳ ಅಂಡರ್-ಇನ್‌ವಾಯ್ಸಿಂಗ್ (ನಿಜವಾದ ಬೆಲೆಗಿಂತ ಕಡಿಮೆ ನಮೂದಿಸುವುದು) ಮತ್ತು ಆಮದುಗಳ ಓವರ್ ಇನ್ವಾಯ್ಸಿಂಗ್(ಹೆಚ್ಚು ನಮೂದಿಸುವುದು) ಮೂಲಕ ಅಪಾರ ಪ್ರಮಾಣದ ಕಪ್ಪು ಹಣವನ್ನು ಸಂಪಾದಿಸುತ್ತವೆ. ಇದು ಅಂತಹ ಹಣ ಎನ್ನಲಾಗಿದೆ.

ಇದೀಗ ಕೇವಲ ಎರಡು ‘ಚಿಪ್ಪು’ ಕಂಪನಿಗಳ ತನಿಖೆಯಿಂದ ಕಂಡುಬಂದಿರುವ ಅವ್ಯವಹಾರಗಳು. ಇನ್ನಷ್ಟು ಇಂತಹ ಕಂಪನಿಗಳ ವ್ಯವಹಾರಗಳ ತನಿಖೆ ನಡೆಸಿದರೆ ಮತ್ತಷ್ಟು ಅವ್ಯವಹಾರಗಳು ಬಯಲಿಗೆ ಬರುತ್ತವೆ ಎಂದು ಪರಿಣಿತರು ಹೇಳುತ್ತಾರೆ.

ಈ ನಡುವೆ ಅದಾನಿ ಸಮೂಹದ ಶೇರುಗಳನ್ನು ಖರೀದಿಸುತ್ತಿದ್ದ 8 ಬೆರ್ಮುಡಾ ಮತ್ತು ಮಾರಿಷಸ್‌ನ ಸಾರ್ವಜನಿಕ ‘ಫಂಡ್’ಗಳು ಈಗ ಮುಚ್ಚಿವೆ ಎಂದು ವರದಿಯಾಗಿದೆ. ಸೆಬಿ 2020ರಲ್ಲಿ ಅದಾನಿ ಸಮೂಹದಲ್ಲಿ ಸಾಗರದಾಚೆಗಿನ ಇಂತಹ ‘ಫಂಡ್’ಗಳ ಹೂಡಿಕೆಯ ತನಿಖೆ ಆರಂಭಿಸಿದ ನಂತರ ಮಾರಿಷಸ್‌ನಲ್ಲಿರುವ ಎರಡು ‘ಫಂಡ್’ಗಳು ಬಾಗಿಲು ಹಾಕಿವೆ, ಇನ್ನೊಂದು ಮುಚ್ಚುವುದರಲ್ಲಿದೆಯಂತೆ!

ಇದನ್ನೂ ಓದಿ:ಶೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಕೈಚಳಕಗಳ ತಾಜಾಪುರಾವೆಗಳು

ಸೆಬಿ ಈಗ ಏನು ಹೇಳುತ್ತದೆ?

ಒಸಿಸಿಆರ್‌ಪಿ ತನಿಖೆಯಿಂದ ಸೆಬಿ ಕುರಿತಂತೆಯೂ ಒಂದು ಮಹತ್ವದ ಮಾಹಿತಿ ಬಯಲಾಗಿದೆ. ಎರಡು ಸಂದರ್ಭಗಳಲ್ಲಿ ಈ ಸಮೂಹದ ಸಂದೇಹಾಸ್ಪದ ವ್ಯವಹಾರಗಳ ಬಗ್ಗೆ ಸೆಬಿಗೆ ತಿಳಿಸಲಾಗಿತ್ತು. 2014ರಲ್ಲಿ ರೆವಿನ್ಯೂ ಪತ್ತೇದಾರಿಕೆ ನಿರ್ದೇಶನಾಲಯ(ಡಿಆರ್‌ಐ)ದ ಮುಖ್ಯಸ್ಥರು, ಅದಾನಿ ಸಮೂಹದ ಒಂದು ಕಂಪನಿ ಉಪಕರಣಗಳ ವಿಷಯದಲ್ಲಿ 6000 ಕೋಟಿ ರೂ.ಗಳಿಗಿಂತಲೂ ಹೆಚ್ಚು ಮೊತ್ತದ ಓವರ್ ಇನ್‌ವಾಯ್ಸಿಂಗ್ ನಡೆಸಿದ್ದಾರೆ ಎಂಬ ಆರೋಪದ ತನಿಖೆ ಮಾಡುತ್ತಿರುವುದಾಗಿ ಸೆಬಿ ಅಧ್ಯಕ್ಷರಿಗೆ ತಿಳಿಸುತ್ತ “ಈ ರೀತಿ ಸೆಳೆದುಕೊಂಡ ಹಣದ ಒಂದು ಭಾಗ ಭಾರತದಲ್ಲಿ ಶೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹಕ್ಕೆ ಹೂಡಿಕೆ ಮತ್ತು ಹೂಡಿಕೆ ಹಿಂತೆಗೆತದ ರೂಪದಲ್ಲಿ ಹೋಗಿರಬಹುದು ಎಂಬ ಸೂಚನೆಗಳಿವೆ” ಎಂದು ಅವರು ಬರೆದಿದ್ದರು. ಆದರೆ ಸೆಬಿಯಿಂದ ಈ ಬಗ್ಗೆ ಯಾವ ಕ್ರಮವೂ ಕಂಡು ಬಂದಿಲ್ಲ.

ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಆಗ ಸೆಬಿ ಅಧ್ಯಕ್ಷರಾಗಿದ್ದವರು ಉಪೇಂದ್ರ ಕುಮಾರ್ ಸಿನ್ಹ. ಅವರು ಮೋದಿ ಸರಕಾರದ ಅಡಿಯಲ್ಲಿ ಎರಡು ಸೇವಾ ವಿಸ್ತರಣೆಗಳನ್ನು ಪಡೆದ ಇನ್ನೊಬ್ಬ ಹಿರಿಯ ಐಎಎಸ್ ಅಧಿಕಾರಿ, 2011ರಿಂದ 2017ರ ವರೆಗೆ ಸೆಬಿಯ ಅಧ್ಯಕ್ಷರಾಗಿದ್ದರು. ಈಗ ನಿವೃತ್ತಿಯ ನಂತರ, ಮತ್ತು ಅದಾನಿ ಎನ್‌ಡಿಟಿವಿಯನ್ನು ವಹಿಸಿಕೊಂಡ ನಂತರ, ಈ ಮಾರ್ಚ್ ತಿಂಗಳಲ್ಲಿ ಅದರ ನಾನ್-ಎಕ್ಸೆಕ್ಯುಟಿವ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ! 2014ರಲ್ಲಿ ಡಿಆರ್‌ಐ ಬರೆದಿರುವ ಪತ್ರದ ಬಗ್ಗೆ ಕೇಳಿದಾಗ ಅದು 9 ವರ್ಷಗಳ ಹಿಂದಿನ ವಿಷಯ ಈಗ ತನಗೆ ನೆನಪಿಲ್ಲ ಎಂದಿದ್ದಾರಂತೆ.

ಅದೇನೇ ಇರಲಿ, ಈ ಹೊಸ ಮಾಹಿತಿಗಳು ಬಯಲಾದ ನಂತರ ಸೆಬಿ ಸುಪ್ರಿಂ ಕೋರ್ಟ್ ಸಮ್ಮುಖ ಏನು ಹೇಳುತ್ತದೆ, ಎಂದು ಕಾದು ನೋಡಬೇಕಾಗಿದೆ ಎನ್ನುತ್ತಾರೆ ಕೇರಳದ ಎಲ್‌ಡಿಎಫ್ ಸರಕಾರದ ಮಾಜಿ ಹಣಕಾಸುಮಂತ್ರಿ ಮತ್ತು ಅರ್ಥಶಾಸ್ತ್ರಜ್ಞ ಡಾ. ಥಾಮಸ್ ಐಸಾಕ್. ಅದೇ ರೀತಿಯಲ್ಲಿ ಪ್ರಧಾನಿಗಳು ಏನಾದರೂ ಹೇಳುತ್ತಾರೆಯೇ ಎಂದೂ ಕಾದು ನೋಡಬೇಕಾಗಿದೆ , ಏಕೆಂದರೆ “ಅದಾನಿ ನಮ್ಮ ಪ್ರಧಾನಿಗಳ ಚಾಂಪಿಯನ್ ಹೂಡಿಕೆದಾರರಲ್ಲಿ ಒಬ್ಬರು. ಭಾರತ ಒಂದು ಜಾಗತಿಕ ಆರ್ಥಿಕ ಶಕ್ತಿಯಾಗಬೇಕಾದರೆ ಜಾಗತಿಕ ಉದ್ಯಮ ದೈತ್ಯರು ಭಾರತದಲ್ಲಿರಬೇಕು ಎಂಬುದು ಅವರ ಅಭಿವೃದ್ಧಿ ಕಣ್ಣೋಟ. ಅಂತಹ ಒಬ್ಬ ದೈತ್ಯರ ವಂಚನೆಗಳ ಬಗ್ಗೆ ವಿವರಣೆ ನೀಡುವ ರಾಜಕೀಯ ಜವಾಬ್ದಾರಿಕೆ ಪ್ರಧಾನಿಗಳ ಮೇಲಿದೆ. ಆದರೆ ಅವರಿನ್ನೂ ಸಂಸತ್ತಿನ ಒಳಗಾಗಲೀ, ಹೊರಗಾಗಲೀ ಬಾಯಿ ತೆರೆಯಲು ಸಿದ್ಧರಾಗಿಲ್ಲ” ಎಂದು ಮುಂದುವರೆದು ಅವರು ಟಿಪ್ಪಣಿ ಮಾಡಿದ್ದಾರೆ.

ಇದೊಂದು ಸಮೂಹದ ಇದೊಂದು ಓವರ್/ಅಂಡರ್ ಇನ್‌ವಾಯ್ಸಿಂಗ್‌ನಿಂದ ಉತ್ಪನ್ನವಾದ ಕಪ್ಪು ಹಣವನ್ನು ಭಾರತಕ್ಕೆ ವಾಪಾಸು ತಂದರೆ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15ಲಕ್ಷರೂ. ಜಮಾ ಆಗುವುದು ಗೃಹಮಂತ್ರಿಗಳು ಈ ಹಿಂದೆ ಹೇಳಿದಂತೆ ‘ಜುಮ್ಲಾ’ವಾಗುಳಿಯದೆ ವಾಸ್ತವವಾಗಬಹುದೇ? ಏಕೆಂದರೆ 6000 ಕೋಟಿಯನ್ನು 140 ಕೋಟಿಯಿಂದ ಭಾಗಿಸಿದರೆ ಅದು 15ಲಕ್ಷವನ್ನು ದಾಟುತ್ತದೆ!

Donate Janashakthi Media

Leave a Reply

Your email address will not be published. Required fields are marked *