ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಕುಂಚಿಟಿಗರ ಸಮುದಾಯವನ್ನು ಸೇರ್ಪಡೆಗೊಳಿಸಬೇಕು. ಸಂವಿಧಾನ ಬದ್ಧವಾಗಿ ಸಮುದಾಯಕ್ಕೆ ದೊರೆಯಬಹುದಾದ ಮೀಸಲಾತಿ ಸಿಗಬೇಕೆಂದು ವಿಶ್ವ ಕುಂಚಿಟಿಗರ ಪರಿಷತ್ ಆಗ್ರಹಿಸಿದೆ.
ವಿಶ್ವ ಕುಂಚಿಟಿಗರ ಪರಿಷತ್ತಿನ 30 ವರ್ಷಾಚರಣೆ ನಿಮಿತ್ತ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಸ್ನೇಹ ಮಿಲನ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕುಂಚಿಟಿಗರ ಸಮಾಜದ ಮುಖಂಡ ಮುರಳೀಧರ ಹಾಲಪ್ಪ, ಹಿಂದುಳಿದ ವರ್ಗಗಳ ಆಯೋಗದಿಂದ ಈಗಾಗಲೇ ಕುಂಚಿಟಿಗರ ಸಮುದಾಯದ ಕುಲಶಾಸ್ತ್ರ ಆಧ್ಯಯನವಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಆದರೆ, ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ ನೀಡಿದ ವರದಿಯನ್ನು ಅಧಿಕೃತವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕಿದೆ ಎಂದರು.
ರಾಜ್ಯದ 27 ವಿಧಾನಸಭಾ ಕ್ಷೇತ್ರಗಳಲ್ಲಿ ಕುಂಚಿಟಿಗರು ಬಲಿಷ್ಠರಾಗಿದ್ದರೂ ಕೂಡ ರಾಜಕೀಯವಾಗಿ ಅವರನ್ನು ಮೂಲೆಗುಂಪಾಗಿಸಲಾಗಿದೆ. ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ನಮ್ಮ ಸಮುದಾಯದ ಎಲ್ಲ ಉಪಪಂಗಡಗಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದು, ಉದ್ಯೋಗ ಮತ್ತು ಉದ್ದಿಮೆ ಕ್ಷೇತ್ರದಲ್ಲಿ ನಮ್ಮ ಜನಾಂಗದವರಿಗೆ ಉತ್ತೇಜನ ನೀಡುವ ಬಗ್ಗೆ ಈ ಸಮಾವೇಶದಲ್ಲಿ ಚರ್ಚಿಸಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ರಾಜ್ಯದ 17 ಜಿಲ್ಲೆಗಳ ಕುಂಚಿಟಿಗ ಸಮಾಜದ ಸಂಘ-ಸಂಸ್ಥೆಗಳು ಭಾಗಿಯಾಗಿರುವುದು ಈ ಸಮಾವೇಶಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ತಿಳಿಸಿದ್ದಾರೆ.
ಕುಂಚಿಟಿಗರ ಸಮುದಾಯದ ಸಂಘ-ಸಂಸ್ಥೆಗಳಿಗೆ ಹಾಗೂ ಸಮುದಾಯದ ಜನರಿಗಾಗಿ ಸರ್ಕಾರಿ ಮೀಸಲಾತಿ ಹೆಚ್ಚಳವಾಗಬೇಕೆಂದು ಕೇಳಲಾಗಿದೆ. ಮೀಸಲಾತಿ ಸೌಲಭ್ಯವನ್ನು ಹೆಚ್ಚಿಸುವ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರ್ಕಾರವೇ ಶಿಫಾರಸು ಮಾಡಬೇಕು. ಈ ನಿಟ್ಟಿನಲ್ಲಿ ಕುಂಚಿಟಿಗರ 101 ಉಪಪಂಗಡಗಳ ವತಿಯಿಂದ ಒತ್ತಾಯಿಸಲಾಗುತ್ತಿದ್ದು, ಸಮುದಾಯದ ಯುವಕರಿಗೆ ಕೃಷಿ, ಹೈನುಗಾರಿಕೆ ಸೇರಿದಂತೆ ಮತ್ತಿತರ ವಲಯಗಳಲ್ಲಿ ಆದ್ಯತೆ ಸಿಗುವಂತಾಗಬೇಕು. ಜೊತೆಗೆ ಸಮುದಾಯದ ಸಂಘ-ಸಂಸ್ಥೆಗಳಿಗೆ ಸರ್ಕಾರಗಳು ಸಮರ್ಪಕ ಅನುದಾನವನ್ನು ನೀಡಬೇಕು. ಈ ನಿಟ್ಟಿನಲ್ಲಿ ನಾವು ಮೂರು ಅಥವಾ ಆರು ತಿಂಗಳಿಗೊಂದಾವರ್ತಿಯಂತೆ ಇಂಥಹ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಮುರಳೀಧರ ಹಾಲಪ್ಪ ಅವರು ವಿವರಿಸಿದರು.
ವಿಶ್ವ ಕುಂಚಿಟಿಗರ ರಾಜ್ಯ ಮಟ್ಟದ ಸ್ನೇಹ ಮಿಲನ ಸಮಾವೇಶದಲ್ಲಿ, ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಹೈಕೋರ್ಟ್ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್, ಉಪಕುಲಪತಿ ಪ್ರೊ. ವೀರಪ್ಪ, ವಿಶ್ವ ಕುಂಚಿಟಿಗ ಪರಿಷತ್ತಿನ ಅಧ್ಯಕ್ಷ ಡಾ. ಅಂಜನಪ್ಪ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಹೆಸರು ಮಾಡಿದ ಕುಂಚಿಟಿಗ ಸಾಧಕರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಕುಂಚಿಟಿಗ ಆದರ್ಶ ದಂಪತಿ-2021 ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿದರು.