ಬೆಂಗಳೂರು: ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾಗೊಂಡಿರುವ ಬಗ್ಗೆ ವಿಧಾನಸೌಧದಲ್ಲಿಂದು ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ʻʻನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಬಾಗಲೇ ಬೇಕು, ಇದರಲ್ಲಿ ಯಾವುದೇ ಕಪಾಲಮೋಕ್ಷ ಇಲ್ಲʼʼ ಎಂದು ಹೇಳಿದರು.
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇಂದು ತೀರ್ಪು ನೀಡಿದ್ದು, ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ವಿಚಾರದಲ್ಲಿ ಯಾವುದೇ ಒಂದು ಪಕ್ಷ ಅಥವಾ ಗುಂಪಿನ ಗೆಲುವು ಇಲ್ಲ. ತೀರ್ಪಿನ ಕುರಿತು ಪೂರ್ಣ ಪಾಠ ನಾನು ಇನ್ನೂ ಓದಿಲ್ಲ, ಆದೇಶದ ಪ್ರತಿಯನ್ನು ಸಂಪೂರ್ಣ ನೋಡಿ ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು.
ಕೋಮು ಸೌಹಾರ್ದ, ಕಾನೂನು ಸುವ್ಯವಸ್ಥೆ ಕಾಪಾಡೋದು ಮುಖ್ಯ
ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಆದರೆ, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ, ಕೋಮು ಸೌಹಾರ್ದ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಟ್ವೀಟ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ‘ಹಿಜಾಬ್ ವಿವಾದದಲ್ಲಿ ನನ್ನ ದೊಡ್ಡ ಆತಂಕವಿರುವುದು ಶಿಕ್ಷಣ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ. ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಆದರೆ ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯ ಜವಾಬ್ದಾರಿ ಕರ್ನಾಟಕ ಸರ್ಕಾರದ ಮೇಲಿದೆ ಎಂದು ಬರೆದಿದ್ದಾರೆ.
ಸರ್ಕಾರವು ಪ್ರಬುದ್ಧವಾಗಿ ನಡೆದುಕೊಳ್ಳಬೇಕು ಎಂದು ನಾನು ಈ ಮೂಲಕ ಮನವಿ ಮಾಡುತ್ತೇನೆ. ಧರ್ಮ ಮತ್ತು ಲಿಂಗ ಲೆಕ್ಕಿಸದೆ ವಿದ್ಯಾರ್ಥಿಗಳ ಶಿಕ್ಷಣ, ಕೋಮು ಸೌಹಾರ್ದತೆಯ ಖಾತ್ರಿಯನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, ಕರಾವಳಿ ಭಾಗದ ಕೆಲವೊಂದು ಕಾಲೇಜುಗಳಲ್ಲಿ ಮಾತ್ರ ಹಿಜಾಬ್ ವಿಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಉಳಿದಂತೆ ಯಾವುದೇ ಕಾಲೇಜುಗಳಲ್ಲಿ ಸಮಸ್ಯೆ ಇರಲಿಲ್ಲ ಮತ್ತು ಈಗಲೂ ಸಮಸ್ಯೆ ಇಲ್ಲ. ಹೈಕೋರ್ಟ್ ತೀರ್ಪನ್ನು ಎಲ್ಲ ಸಮುದಾಯಗಳೂ ಗೌರವಿಸುತ್ತವೆ. ಕರಾವಳಿಯಲ್ಲಿ ಕೋಮು ಸೌಹಾರ್ದಕ್ಕೆ ಯಾವುದೇ ಧಕ್ಕೆಯಿಲ್ಲ ಎಂದರು.
ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಮುಖ್ಯ. ಶಾಲಾ ಮಟ್ಟದಲ್ಲಿ ಬಗೆಹರಿಸಬಹುದಾಗಿದ್ದ ಸಮಸ್ಯೆ ಕೋರ್ಟ್ವರೆಗೆ ಬರಬೇಕಾದ ಅಗತ್ಯ ಇರಲಿಲ್ಲ. ಈಗ ಹೈಕೋರ್ಟ್ ತೀರ್ಪು ಬಂದಿದ್ದು, ಕೋರ್ಟ್ ತೀರ್ಪು ಎಲ್ಲರೂ ಪಾಲಿಸಬೇಕು ಎಂದರು.
ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಈಗ ರಾಜ್ಯ ಸರ್ಕಾರದ ಜವಾಬ್ದಾರಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗಳತ್ತ ಹೆಚ್ಚು ಗಮನ ಕೊಡಲಿ ಎಂದು ಹೇಳಿದ್ದಾರೆ.