ಬೆಂಗಳೂರು: ಪ್ರಸಕ್ತ ವರ್ಷದ (2021–22) ಶೈಕ್ಷಣಿಕ ವರ್ಷ ಜುಲೈ 1 ರಿಂದ ಆರಂಭವಾಗಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ 220 ಕರ್ತವ್ಯದ ದಿನಗಳನ್ನು ನಿಗದಿಪಡಿಸಲಾಗಿದೆ.
2021-2022ರ ಸಾಲಿನ ಶೈಕ್ಷಣಿಕ ಚಟುವಟಿಕೆಯು 2021ರ ಜುಲೈ 1 ರಿಂದ ಆರಂಭವಾಗಿ 2022ರ ಏಪ್ರಿಲ್ 30ರವರೆಗೆ ರಜಾ ದಿನಗಳನ್ನು ಹೊರತುಪಡಿಸಿ ದಿನಗಳನ್ನು ನಿಗದಿಪಡಿಸಲಾಗಿದೆ.
ಕೋವಿಡ್ 19ರ ಹಿನ್ನೆಲೆಯಲ್ಲಿ ಶಾಲಾ ತರಗತಿಗಳನ್ನು ಪ್ರಾರಂಭಿಸಲು ಸಾಧ್ಯವಾಗದಿದ್ದರೆ ಕಳೆದ ವರ್ಷದ ಶೈಕ್ಷಣಿಕ ಹಿನ್ನೆಡೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಸಾಳಿನಲ್ಲಿ ಮಕ್ಕಳ ಕಲಿಕೆ ಮತ್ತು ಮೌಲ್ಯಾಂಕನ ವಿಶ್ಲೇಷಣೆಗೆ ಪರ್ಯಾಯ ಕಾರ್ಯತಂತ್ರ ರೂಪಿಸಲು ತಿಳಿಸಲಾಗಿದೆ.
1 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳ ಪೋಷಕರಲ್ಲಿ ಇರುವ ತಾಂತ್ರಿಕ ಸಾಧಾನಗಳ ಲಭ್ಯತೆಯ ಕುರಿತು ಮಾಹಿತಿಯು ಶಾಲೆಯ ಶಿಕ್ಷಕರ ಬಳಿ ಇರಬೇಕು. ಕಳೆದ ವರ್ಷವೂ ಶಾಲೆಗಳು ಮಾಹಿತಿ ಸಂಗ್ರಹಿಸಿದ್ದವು. ಈ ವರ್ಷವೂ ಸಹ ಮಾಹಿತಿಗಳನ್ನು ಸಂಗ್ರಹಿಸಿ ಪರಿಷ್ಕರಿಸಬೇಕು. ತಾಂತ್ರಿಕ ಸಾಧನಗಳ ಲಭ್ಯತೆಯ ಆಧಾರದಲ್ಲಿ ವಿದ್ಯಾರ್ಥಿವಾರು ಅವರಿಗೆ ಸರಿಹೊಂದುವಂತೆ ತರಗತಿಯನ್ನು ರೂಪಿಸುವುದು. ವಿವಿಧ ರೀತಿಯ ಸಾಧನಗಳನ್ನು ಹೊಂದಿರುವ ಮತ್ತು ಹೊಂದಿರದ ವಿದ್ಯಾರ್ಥಿಗಳ ಗುಂಪುಗಳನ್ನು ರೂಪಿಸಲು ಇಲಾಖೆಯು ಸೂಚಿಸಿದೆ.
ಕಳೆದ ವರ್ಷದಂತೆ ಈ ವರ್ಷವೂ ದೂರದರ್ಶನ ಚಂದನ ವಾಹಿನಿಯಲ್ಲಿ ಸಂವೇದನಾ ಕಾರ್ಯಕ್ರಮದ ಮೂಲಕ ವಿಡಿಯೋ ಪಾಠ ಬೋಧನೆ ನಡೆಯಲಿದೆ. ಅಲ್ಲದೇ ರೇಡಿಯೋದಲ್ಲಿ ಆಡಿಯೋ ಪಾಠಗಳ ಪ್ರಸಾರ ನಡೆಯಲಿದೆ.
ಕೇಂದ್ರ ಸರ್ಕಾರದ ದೀಕ್ಷಾ ಆ್ಯಪ್ ನಲ್ಲಿ 1 ರಿಂದ 10ನೇ ತರಗತಿ ಮಕ್ಕಳ ಪಠ್ಯಕ್ಕೆ ಸಂಬಂಧಿಸಿದ 22 ಸಾವಿರಕ್ಕೂ ಹೆಚ್ಚು ಕಂಟೆಂಟ್ ಗಳನ್ನು ಆಪ್ ಲೋಡ್ ಮಾಡಲಾಗಿದೆ. ಈ ಆ್ಯಪ್ ನಲ್ಲಿ ಮೌಲ್ಯವರ್ಧಿತ ಪಠ್ಯಪುಸ್ತಕಗಳೂ ದೊರೆಯಲಿವೆ. ಅವುಗಳೆಲ್ಲವನ್ನೂ ಡೌನ್ ಲೋಡ್ ಮಾಡಿಕೊಂಡು ಪಾಠ ಅಭ್ಯಾಸ ಮಾಡಬಹುದಾಗಿದೆ.
ಶಿಕ್ಷಕರು ಪಠ್ಯ ಬೋಧನೆಯ ಪುಟ್ಟ ವಿಡಿಯೋ ಮಾಡಿ ಮಕ್ಕಳ ಪೋಷಕರಿಗೆ ಹಂಚಿಕೊಳ್ಳಬಹುದು. ದೂರದರ್ಶನ ರೇಡಿಯೋ ಪಾಠ ಬೋಧನಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸಂಪರ್ಕಿಸಿ ಮೊಬೈಲ್ ಫೋನ್, ಇಂಟರ್ನೆಟ್, ರೇಡಿಯೋ ದೂರದರ್ಶನ ಸೇರಿದಂತೆ ಮತ್ತಿತರ ತಾಂತ್ರಿಕ ಸೌಲಭ್ಯ ಮಾಹಿತಿ ಪಡೆದು, ಅವುಗಳ ಮೂಲಕ ಹೇಗೆ ಶಿಕ್ಷಣ ಪಡೆಯಬೇಕು ಎಂಬ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಶಿಕ್ಷಕರಿಗೆ ಇಲಾಖೆ ಸೂಚಿಸಿದೆ.
ಯಾವುದೇ ತಾಂತ್ರಿಕ ಸೌಲಭ್ಯವಿಲ್ಲದ ವಿದ್ಯಾರ್ಥಿಗಳ ಮನೆಯ ಸಮೀಪದ ಸಹೃದಯಿ ವ್ಯಕ್ತಿ ಗುರ್ತಿರಿ ಅವರ ಬಳಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುವಾಗುವಂತೆ ಶಿಕ್ಷಕರು ಮನವೊಲಿಸುವಂತೆಯೂ ಇಲಾಖೆ ಶಿಕ್ಷಕರಿಸೆ ಸೂಚಿಸಿದೆ.
ಶಾಲೆಯ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ವೇಳಾಪಟ್ಟಿಯನ್ನು ಸಿದ್ಧಪಡಿಸಿ ವಾರಕ್ಕೊಮ್ಮೆ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಭೇಟಿ ನೀಡುವಂತೆ ಮಾಡಿ, ವಿದ್ಯಾರ್ಥಿಯ ಕಾರ್ಯಕ್ಷಮತೆ ಕುರಿತು ಮಾತುಕತೆ ನಡೆಸಬೇಕು. ಪ್ರತಿ ವಿದ್ಯಾರ್ಥಿಯ ವಿಷಯವಾರು ಕೃತಿ ಸಂಪುಟ ನಿರ್ವಹಣೆ ಮಾಡಿ ಮೌಲ್ಯಮಾಪನ ಮಾಡಬೇಕು. ಇದರ ವಿವರವನ್ನು ಕಡ್ಡಾಯವಾಗಿ ವಿದ್ಯಾರ್ಥಿ ಸಾಮರ್ಥ್ಯ ಟ್ರಾಕಿಂಗ್ ವ್ಯವಸ್ಥೆ ತಂತ್ರಾಂಶದಲ್ಲಿ ಅಳವಡಿಸಬೇಕು ಎಂದು ಇಲಾಖೆ ಆಯುಕ್ತರು ಸೂಚಿಸಿದ್ದಾರೆ.