ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಂಬಾನಿ-ಅದಾನಿ ಉತ್ಪನ್ನಗಳನ್ನು ಬಹಿಷ್ಕರಿಸಿ ಕರೆಯ ಹಿನ್ನೆಲೆಯಲ್ಲಿ ಸೋಮವಾರ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಹಾಸನ, ಹಗರಿಬೊಮ್ಮನಹಳ್ಳಿ, ಹೊಸಪೇಟೆ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ನೂತನ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಬೇಡಿಕೆ ಮುಂದಿರಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು 20ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ಆರಂಭಿಸಿದ್ದಾರೆ. ರೈತರು ಹಾಗೂ ಸರಕಾರದ ಮಧ್ಯೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಯಾವುದೇ ಫಲ ಕೊಡಲಿಲ್ಲ. ಹಾಗಾಗಿ ರೈತರು ತಮ್ಮ ನಿಲುವಿನಿಂದ ಕಿಂಚಿತ್ತು ಕದಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿರುವ ರೈತರು, ಕೃಷಿ ಕಾಯ್ದೆಗಳ ಪ್ರಮುಖ ಫಲಾನುಭವಿಗಳೆಂದು ರೈತರು ಆರೋಪಿಸುತ್ತಿರುವ ಅಂಬಾನಿ ಮತ್ತು ಅದಾನಿ ಉತ್ಪನ್ನಗಳ ಬಹಿಷ್ಕರಿಸಲು ಕರೆ ನೀಡಿದ್ದರು. ಕರೆ ಹಿನ್ನೆಲೆಯಲ್ಲಿ ಹಾಸನದ ಶಂಕರಮಠ ರಸ್ತೆಯಲ್ಲಿರುವ ಮುಕೇಶ್ ಅಂಬಾನಿ ಒಡೆತನದ ರಿಲೆಯನ್ಸ್ ಸ್ಮಾರ್ಟ್ ಮಾಲ್ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ರೈತಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಕೋಟಿಗಟ್ಟಲೆ ರೈತರು ಕಾಯ್ದೆಗಳನ್ನು ವಿರೋಧಿಸುತ್ತಿದ್ದರೂ ಕೂಡ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೈತವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಹಠ ಮಾಡುತ್ತಿದೆ. ಉದ್ಯಮಿಗಳ ಸಾಲಮನ್ನಾ ಮಾಡುವ ಸರ್ಕಾರ ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡಿ ನೆರವಿಗೆ ಬರಲು ನಿರಾಕರಿಸುತ್ತಿದೆ. ಈಗ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ರೈತರನ್ನು ಕಾರ್ಪೋರೆಟ್ ಕಂಪನಿಗಳ ಹಿಡಿತಕ್ಕೆ ಸಲುಕಿಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಎಚ್.ಆರ್.ನವೀನ್‌ಕುಮಾರ್ ಮಾತನಾಡಿ, ಸರಕಾರ ಮೂರು ಕರಾಳ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದೇ ಇಲ್ಲೆಂದು ಹಠ ಹಿಡಿದು ಕೂತಿರುವುದು ಕಾರ್ಪೊರೇಟ್‌ಗಳಿಗೆ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಅದರ ಅಡಿಯಾಳುತನವನ್ನು ಬಯಲಿಗೆ ತಂದಿದೆ. ಆರೆಸ್ಸೆಸ್‌ನ ಸ್ವದೇಶಿ ಮುಖವಾಡ ಮತ್ತು ಬಿಜೆಪಿಯ ಆತ್ಮನಿರ್ಭರ ವಿಕಾಸದ ನಟನೆಯೂ ಬಯಲಾಗಿದ್ದರೆ, ಸಂಘ ಪರಿವಾರಕ್ಕೆ ಸೇರಿದ ಭಾರತೀಯ ಕಿಸಾನ್ ಸಂಘ ಈ ಕರಾಳ ರೈತ-ವಿರೋಧಿ ಕಾಯ್ದೆಗಳಿಗೆ ಬೆಂಬಲ ನೀಡಿರುವುದು ಸಂಘ ಪರಿವಾರದ ನಿಜ ಬಣ್ಣವನ್ನು ಹೊರಗೆಡಹಿದೆ ಎಂದು ಟೀಕಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಕೇಂದ್ರ ಸರ್ಕಾರವು ಅಸಾಂವಿಧಾನಿಕ ವಿಧಾನದಿಂದ, ಅತ್ಯಂತ ಅಪ್ರಜಾತಾಂತ್ರಿಕ ರೀತಿಯಲ್ಲಿ ಜಾರಿಗೆ ತಂದಿರುವ ಕೃಷಿ ಸಂಬಂಧಿತವಾದ ತಿದ್ದುಪಡಿ ಕಾಯ್ದೆಗಳು ಇಡೀ ದೇಶದ ರೈತಾಪಿಯ ಹಾಗೂ ಕಾರ್ಮಿಕರ ಬದುಕಿಗೆ ಮಾರಕವಾಗಿವೆ ಮತ್ತು ಕಾರ್ಪೋರೇಟ್ ಲೂಟಿಗೆ ಪೂರಕವಾಗಿವೆ. ಆದ್ದರಿಂದ ಅವುಗಳನ್ನು ರದ್ದುಪಡಿಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ ಖಾತರಿ (ಎಂಎಸ್‌ಪಿ)ಯನ್ನು ಶಾಸನಬದ್ಧಗೊಳಿಸಬೇಕು ಮತ್ತು ಸಾರ್ವಜನಿಕ ಸಾಲ ಒದಗಿಸುವ ಹಾಗೂ ಋಣಮುಕ್ತಿ ನೀಡುವ ಕಾಯ್ದೆ ಜಾರಿಗೆ ತರಬೇಕು ಎಂಬ ಹಕ್ಕೊತ್ತಾಯಗಳೊಂದಿಗೆ ದೇಶದ ನಾನಾ ಭಾಗಗಳ ಒಂದು ಕೋಟಿಗೂ ಹೆಚ್ಚು ರೈತರು ಇದೇ ನವೆಂಬರ್ 26 ರಿಂದ ದೆಹಲಿಯ ಸರಹದ್ದಿನಲ್ಲಿ ಸತತವಾಗಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಬರೀ ಸುಳ್ಳುಗಳು ಮತ್ತು ಹುಸಿ ಆಶ್ವಾಸನೆಗಳಿಂದಲೇ ಜನರನ್ನು ನಂಬಿಸಿ ಕೇಂದ್ರದಲ್ಲಿ ಅಧಿಕಾರಕ್ಕೇರಿ, ಒಂದರಮೇಲೊಂದು ಜನವಿರೋಧಿ ನೀತಿಗಳನ್ನೂ ಕಾಯ್ದೆಗಳನ್ನೂ ಜಾರಿಗೆ ತರುತ್ತ, ಜನರ ಬದುಕನ್ನು ನರಕವಾಗಿಸಿರುವ ಬಿಜೆಪಿ ಸರ್ಕಾರದ ಈ ಎಲ್ಲ ಅಪಪ್ರಚಾರಗಳನ್ನು ಜನತೆ ನಂಬಿ ಮೋಸ ಹೋಗಬಾರದು ಎಂದು ಧರ್ಮೇಶ್ ಹೇಳಿದರು.
ರಾಜ್ಯ ರೈತಸಂಘದ ಮುಖಂಡ ಬಾಬು ಮಾತನಾಡಿ, ರೈತವಿರೋಧಿ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ನಡೆಸುತ್ತಿರುವ ಹೋರಾಟ ಇನ್ನೂ ತೀವ್ರಗೊಳ್ಳಲಿದೆ. ದೆಹಲಿಯಲ್ಲಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇಲ್ಲೂ ಕೂಡ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ, ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ವಸಂತಕುಮಾರ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ, ಕಾರ್ಯದರ್ಶಿ ಅರವಿಂದ, ಜಯಂತಿ, ರಾಜ್ಯ ರೈತಸಂಘದ ಸಾದಿಕ್ ಮತ್ತಿತರರು ಇದ್ದರು.