ಎನ್ಆರ್ ಐಗಳಿಗೆ ಮತದಾನದ ಅವಕಾಶ ನೀಡುವ ಮೊದಲು ಸರ್ವಪಕ್ಷ ಸಮಾಲೋಚನೆ ಅಗತ್ಯ

  – ಚುನಾವಣಾ ಆಯೋಗಕ್ಕೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಪತ್ರ


ನವದೆಹಲಿ: ಭಾರತದ ಚುನಾವಣಾ ಆಯೋಗ ಅನಿವಾಸಿ ಭಾರತೀಯರಿಗೆ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಪ್ರಶ್ನೆಯನ್ನು ಕುರಿತಂತೆ ಮೊದಲು ಸರ್ವಪಕ್ಷಗಳ ಜೊತೆ ಸಮಾಲೇಚನೆ ನಡೆಸುವಂತೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಡಿ.4ರಂದು ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಯೆಚುರಿ, ನವಂಬರ್ 25 ರಂದು ಒಂದು ಪತ್ರವನ್ನು ಕಳಿಸಿದ್ದು, ಅದರಲ್ಲಿ ಈ ಕುರಿತ ಕಾನೂನು ಚೌಕಟ್ಟಿನ ಪ್ರಸ್ತಾವವನ್ನು ಇಟ್ಟಿದೆ ಎಂದು ವರದಿಯಾಗಿದೆ. ಈ ವರದಿಗಳ ಪ್ರಕಾರ ಇದನ್ನು ಸರಕಾರ 1961ರ ಚುನಾವಣಾ ನಿರ್ವಹಣೆ ನಿಯಮಗಳಿಗೆ ತಿದ್ದುಪಡಿಯ ಮೂಲಕವಷ್ಟೇ ತರಬಹುದು, ಇದಕ್ಕೆ ಸಂಸತ್ತಿನ ಅನುಮೋದನೆಯ ಅಗತ್ಯವಿಲ್ಲ ಎನ್ನಲಾಗಿದೆ. ಈ ಸುದ್ದಿ ಆಶ್ಚರ್ಯವನ್ನೂ, ಆಘಾತವನ್ನೂ ಉಂಟು ಮಾಡಿದೆ.   ಆಶ್ಚರ್ಯ ಮತ್ತು ಆಘಾತ ಏಕೆಂದರೆ ಇಂತಹ ಒಂದು ಬಹುಮಹತ್ವದ, ಕ್ಲಿಷ್ಟ ಸಮಸ್ಯೆಗಳಿರುವ ವಿಷಯದಲ್ಲಿ ಆಯೋಗ ಸರ್ವಪಕ್ಷ ಸಮಾಲೋಚನೆಯನ್ನು ನಡೆಸುವ ತನ್ನ ಪರಂಪರೆಯನ್ನು ಬದಿಗೊತ್ತಿದೆ ಎಂದು ಯೆಚುರಿ ತಮ್ಮ ಪತ್ರದಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.

ಸಿಪಿಐ(ಎಂ)  ಕೂಡ ಹೊರದೇಶಗಳ ಭಾರತೀಯರು/ಅನಿವಾಸಿ ಭಾರತೀಯರಿಗೆ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚು ಪರಿಣಾಮಕಾರಿಯಾದ ಮತದಾನದ ಹಕ್ಕನ್ನುನೀಡುವುದರ ಪರವಾಗಿದೆ ಎಂದು ಪುನರುಚ್ಚರಿಸುತ್ತಲೇ ಯೆಚುರಿಯವರು, ಈ ಬಗ್ಗೆ 2014ರಿಂದಲೇ ಪ್ರಯತ್ನಗಳು ನಡೆಯುತ್ತಿದ್ದರೂ, ಇದುವರೆಗೂ ಒಂದು ದೋಷರಹಿತ ವ್ಯವಸ್ಥೆಯನ್ನು ರೂಪಿಸುವುದು ಸಾಧ್ಯವಾಗಿಲ್ಲ ಎಂಬ ಸಂಗತಿಯತ್ತ ಗಮನ ಸೆಳೆದಿದ್ದಾರೆ.

ಈಗ ಚುನಾವಣಾ ಆಯೋಗ ಮುಂದಿಟ್ಟಿರುವ ಅಂಚೆ ಮತದಾನದ ಪ್ರಸ್ತಾವ, ಅದರಲ್ಲಿ ಮತಪತ್ರವನ್ನು ಇಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕ ಕಳಿಸುವುದರಲ್ಲಿ ಹಲವು ಕ್ಲಿಷ್ಟ ಸವಾಲುಗಳಿವೆ. ಇದರಲ್ಲಿ ಕೈಚಳಕ ನಡೆಸಲು ಅವಕಾಶವಿದ್ದು, ಇದು ಮತದಾನದಲ್ಲಿ ‘ಮತದಾರರ ದೈಹಿಕ ರುಜುವಾತು ಅತ್ಯಗತ್ಯ’ಎಂಬ ಸೂತ್ರದ ಉಲ್ಲಂಘನೆಯ ಅಪಾಯವಿದೆ. ಆದ್ದರಿಂದ ಈ ಬಗ್ಗೆ ವಿವರವಾದ ಚರ್ಚೆಗಳ ಅಗತ್ಯವಿದೆ. ಚುನಾವಣಾ ಆಯೋಗ ತನ್ನ ಇದುವರೆಗಿನ ಪರಂಪರೆಯಂತೆ ಈ ಬಗ್ಗೆ ಒಂದು ಸರ್ವಪಕ್ಷ ಸಮಾಲೋಚನೆ ನಡೆಸದೆ ಮುಂದುವರೆಯಬಾರದು ಎಂದು ಮುಖ್ಯಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಯೆಚುರಿ ಆಗ್ರಹಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಅವರ ಪತ್ರದ ಪೂರ್ಣಪಾಠ ಇಲ್ಲಿದೆ.

ಪ್ರಿಯ ಶ್ರೀ ಅರೋರಾಜಿ,

ಚುನಾವಣಾ ಆಯೋಗ ಹೊರದೇಶಗಳ ಭಾರತೀಯರು/ಅನಿವಾಸಿ ಭಾರತೀಯರು ಮುಂಬರುವ ಅಸ್ಸಾಂ, ಪಶ್ಚಿಮ ಬಂಗಾಲ, ಕೇರಳ ಮತ್ತು ಪಾಂಡಿಚೇರಿಯ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಮತ ಚಲಾವಣೆ ನಡೆಸಲು ಅನುಕೂಲ ಮಾಡಿಕೊಡುವ ಒಂದು ಕಾನೂನು ಚೌಕಟ್ಟನ್ನು ಕಳಿಸಿದೆ ಎಂಬ ಮಾಧ್ಯಮ ವರದಿಗಳನ್ನು ನೋಡಿ ನಮಗೆ ಆಶ್ಚರ್ಯ ಮತ್ತು ಆಘಾತವಾಗಿದೆ.

ಆರಂಭದಲ್ಲಿಯೇ, ಸಿಪಿಐ(ಎಂ), ಹೊರದೇಶಗಳ ಭಾರತೀಯರು/ಅನಿವಾಸಿ ಭಾರತೀಯರಿಗೆ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚು ಪರಿಣಾಮಕಾರಿಯಾದ ಮತದಾನದ ಹಕ್ಕನ್ನು ನೀಡುವುದರ ಪರವಾಗಿದೆ ಎಂದು ದೃಢವಾಗಿ ಹೇಳಬಯಸುತ್ತೇವೆ. ವಿವಿಧ ದೇಶಗಳಲ್ಲಿ ಭಾರತೀಯ ನಾಗರಿಕರಿಗೆ ಅವರು ನೆಲೆಸಿರುವ ದೇಶದಲ್ಲಿ ತಮ್ಮ ಮತಗಳನ್ನು ನೀಡಲು ಅವಕಾಶ ನೀಡಲು ನಮ್ಮ ರಾಯಭಾರ/ ಕಮಿಷನ್‍ ಕಚೇರಿಗಳಲ್ಲಿ ಮತಗಟ್ಟೆಗಳನ್ನು ರಚಿಸಬೇಕು ಮತ್ತು ಇತರ ಅನುಕೂಲಗಳನ್ನು ಕಲ್ಪಿಸಬೇಕು ಎಂದು ಸಿಪಿಐ(ಎಂ) ಸೂಚಿಸಿತ್ತು. ಜಗತ್ತಿನ ಹಲವು ಪ್ರಜಾಪ್ರಭುತ್ವಗಳು ಇದನ್ನು ಅನುಸರಿಸುತ್ತಿವೆ, ಮತ್ತು ಮತದಾರರ ದೈಹಿಕ ರುಜುವಾತಿನ ಆವಶ್ಯಕತೆಯನ್ನು ಪೂರೈಸುತ್ತಿವೆ.

ನಮಗೆ ಆಘಾತದ ಭಾವನೆ ಉಂಟಾಗಿರುವುದು ಇಂತಹ ಬಹುಮಹತ್ವದ ವಿಷಯಗಳನ್ನು ಅಂತಿಮಗೊಳಿಸುವ ಮೊದಲು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸುವ ವಿಧಿ-ವಿಧಾನವನ್ನು ಅಂಗೀಕರಿಸಿರುವ ಚುನಾವಣಾ ಆಯೋಗ ತನ್ನ ಈ ಎಂದಿನ ನಡೆಯಿಂದ ನಾಚಿಕೆಯಿಲ್ಲದೆ ದೂರ ಸರಿದಿದೆ ಎಂಬುದು. ಚುನಾವಣಾ ಆಯೋಗ ಎನ್ಆರ್ಐಗಳಿಗೆ ಮತ ಚಲಾಯಿಸುವ ಅನುಮತಿ ಕೊಡುವ ಪ್ರಸ್ತಾವವನ್ನು ಮೊದಲು ಕೈಗೆತ್ತಿಕೊಂಡದ್ದು  2014ರಲ್ಲಿ. ಆಗ ಆಯೋಗ ಎನ್ಆರ್ಐಗಳಿಗೆ ಸಂಬಂಧಪಟ್ಟಂತೆ ಒಂದು ‘ಮುಕ್ತ ಮತ್ತು ನ್ಯಾಯಯುತ’ಚುನಾವಣೆಯನ್ನು ಖಾತ್ರಿ ಪಡಿಸುವ ಒಂದು ದೋಷರಹಿತ ವ್ಯವಸ್ಥೆಯನ್ನು ವಾಸ್ತವಗೊಳಿಸಲು ಸಾಧ್ಯವಾಗಬಹುದಾದ ವಿಧಾನಗಳನ್ನು ಚರ್ಚಿಸಲು ಒಂದು ಸರ್ವಪಕ್ಷ ಸಮಾಲೋಚನೆಯನ್ನು ಏರ್ಪಡಿಸಿತ್ತು. ನಂತರ, ಸುಪ್ರಿಂಕೋರ್ಟ್ ಕೂಡ ಭಾರತದ ಪಾಸ್‌ಪೋರ್ಟ್‍ ಹೊಂದಿರುವವರು  ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗಿಸುವ ಅನಿವಾಸಿ ಭಾರತೀಯರ ಹಕ್ಕುಗಳನ್ನು ಎತ್ತಿಹಿಡಿಯಿತು.

ಹೊರ ದೇಶಗಳಲ್ಲಿರುವ ಭಾರತೀಯರಿಗೆ ತಾವು ಹೆಸರಿಸಿದ ವ್ಯಕ್ತಿಯ(ಫ್ರಾಕ್ಸಿ) ಮೂಲಕ ಮತದಾನ ಮಾಡುವ ಅನುಕೂಲವನ್ನು ಒದಗಿಸುವ ಒಂದು ಮಸೂದೆ 16ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಲುಪ್ತಗೊಂಡಿತು. ಈಗ ಭಾರತದ ಚುನಾವಣಾ ಆಯೋಗ ಕಾನೂನು ಮಂತ್ರಾಲಯಕ್ಕೆ ಬರೆದ ಪತ್ರ ಎನ್ಆರ್ಐಗಳಿಗೆ ಪ್ರಾಕ್ಸಿ ಮತದಾನದ ಬದಲು ಅಂಚೆ ಮತದಾನದ ಹಕ್ಕನ್ನು ಕೊಡುವ ಪ್ರಸ್ತಾವವನ್ನು ಇಟ್ಟಿದೆ. ಇದರ ಅರ್ಥ ಸರಕಾರ ಚುನಾವಣಾ ನಿರ್ವಹಣೆಯ ನಿಯಮಗಳು, 1961ನ್ನು ತಿದ್ದುಪಡಿ ಮಾಡಬೇಕಷ್ಟೇ, ಇದಕ್ಕೆ ಸಂಸತ್ತಿನ ಅನುಮೋದನೆಯ ಅಗತ್ಯವಿಲ್ಲ.

ಭಾರತದ ಚುನಾವಣಾ ಆಯೋಗದ ಪ್ರಸಕ್ತ ಪ್ರಸ್ತಾವವನ್ನು, ಇದುವರೆಗಿನ ಸ್ಥಾಪಿತ ನಡವಳಿಕೆಯಂತೆ ಒಂದು ಸರ್ವಪಕ್ಷ ಸಮಾಲೋಚನೆಯಲ್ಲಿ ಎಂದೂ ಚರ್ಚಿಸಿಲ್ಲ. 2015ರಲ್ಲಿ ಚುನಾವಣಾ ಆಯೋಗ ನೇಮಿಸಿದ ಪರಿಣಿತರ ಗುಂಪಿನ ಅಧ್ಯಯನದ ಭಾಗವಾದ ಯಾವುದೇ ಪರ್ಯಾಯಗಳು ಒಂದು ದೋಷರಹಿತ ವ್ಯವಸ್ಥೆಯ ಬಗ್ಗೆ ಮೂರ್ತ ಪ್ರಸ್ತಾವನ್ನೇನೂ ಕೊಟ್ಟಿಲ್ಲ ಎಂಬುದು ಸ್ಪಷ್ಟ.

ಆದರೆ ಮಾಧ್ಯಮ ವರದಿಗಳು ಸೂಚಿಸುವ ಪ್ರಕಾರ, ಕಾನೂನು ಮಂತ್ರಾಲಯ ನವಂಬರ್ 25ರಂದು ಪಡೆದ ಚುನಾವಣಾ ಆಯೋಗದ ಪ್ರಸ್ತಾವ ಅಂಚೆ ಮತಪತ್ರದ ಮೂಲಕ ಮತದಾನ ಮಾಡಬಯಸುವ ಯಾವುದೇ ಎನ್ಆರ್ಐ ಚುನಾವಣಾ ಅಧಿಸೂಚನೆ ಪ್ರಕಟಿಸಿದ ಕನಿಷ್ಟ ಐದುದಿನಗಳ ನಂತರ ರಿಟರ್ನಿಂಗ್ ಆಫೀಸರ್ (ಆರ್.ಒ.)ಗೆ ಕಳಿಸಬೇಕು. ಇಂತಹ ಮಾಹಿತಿ ಸಿಕ್ಕಿದ ಮೇಲೆ ಆರ್ಒ ಮತಪತ್ರವನ್ನು ಇಲೆಕ್ಟ್ರಾನಿಕ್‍ ವ್ಯವಸ್ಥೆ  ಮೂಲಕ ಕಳಿಸುತ್ತಾರೆ. ಎನ್ಆರ್ಐ  ಮತದಾರರು ಇದರ ಪ್ರತಿಯನ್ನು ಮುದ್ರಿಸಿಕೊಂಡು ಅದರಲ್ಲಿ ತಮ್ಮ ಆಯ್ಕೆಯನ್ನು ಗುರುತಿಸಿ ಅದನ್ನು ಎನ್ಆರ್ಐ  ವಾಸಿಸುವ ದೇಶದಲ್ಲಿ ಭಾರತದ ರಾಯಭಾರ ಅಥವಾ ಕಾನ್ಸುಲೇಟ್‍ ಪ್ರತಿನಿಧಿ ನೇಮಿಸಿದ ಒಬ್ಬ ಅಧಿಕಾರಿ ಪ್ರಮಾಣೀಕರಿಸಿದ ಒಂದು ಘೋಷಣೆಯೊಂದಿಗೆ ವಾಪಸು ಕಳಿಸಬೇಕು.  ಮತದಾರ ತಾನೆ ಮತಪತ್ರವನ್ನು ಅಂಚೆ ಮೂಲಕ ಹಿಂದಿರುಗಿಸಬೇಕೋ, ಅಥವಾ ಭಾರತೀಯ ರಾಯಭಾರ ಕಚೇರಿಯಲ್ಲಿ ಅದಕ್ಕೆಂದು ಇಟ್ಟಿರುವ ಪೆಟ್ಟಿಗೆಯಲ್ಲಿ ಹಾಕಬೇಕೋ, ಅದನ್ನು ಚುನಾವಣಾ ಕ್ಷೇತ್ರವಾರು ವಿಂಗಡಿಸಲಾಗುತ್ತದೆಯೋ ಈ ವೇಳೆಗೆ ಸ್ಪಷ್ಟವಿಲ್ಲ. ಆದರೆ ಮತಪತ್ರವನ್ನು “ಇಲೆಕ್ಟ್ರಾನಿಕ್‍ ವ್ಯವಸ್ಥೆಯ  ಮೂಲಕ ಕಳಿಸುವ’ಪ್ರಸ್ತಾವದಲ್ಲಿ ಕೈಚಳಕ ನಡೆಸುವ ಸವಾಲು ಇದೆ. ಮತದಾನದಲ್ಲಿ ‘ಮತದಾರರ ದೈಹಿಕ ರುಜುವಾತು ಒಂದು ಅನುಲ್ಲಂಘನೀಯ ನೀತಿ’ಆಗಿರುವುದರಿಂದ, ಆ ನೆಲೆಯಲ್ಲಿ ನೋಡಿದಾಗ, ಹೊರದೇಶದ/ಎನ್ಆರ್ಐ  ಮತದಾರರ ಸಂದರ್ಭದಲ್ಲಿ ಮತಪತ್ರದ ಇಲೆಕ್ಟ್ರಾನಿಕ್‍ ವರ್ಗಾವಣೆಯಲ್ಲಿ ಇದನ್ನು ಖಾತ್ರಿಪಡಿಸುವುದರಲ್ಲಿ ಸಮಸ್ಯೆಗಳಿವೆ ಎಂಬುದು ಸ್ಪಷ್ಟ. ಚುನಾವಣಾ ಕ್ಷೇತ್ರಮಟ್ಟದ ಚುನಾವಣಾ ಅಧಿಕಾರಿಯ ಮೂಲಕ ಗುರುತು ಮಾಡಿದ ಮತಪತ್ರವನ್ನು ಕಳಿಸುವುದು ಕೂಡ ಇನ್ನೊಂದು ಕ್ಲಿಷ್ಟ ಸವಾಲು. ಮತದಾರರು ಪಡೆಯುವ ಮತಪತ್ರದ ಗೋಪ್ಯತೆ ಮತ್ತು ಸಮಗ್ರತೆಯನ್ನು ರಕ್ಷಿಸುವುದು ಹೇಗೆ ಎಂಬುದೇ ಇಲ್ಲಿರುವ ಪ್ರಶ್ನೆ ಎಂಬುದು ಸ್ಪಷ್ಟ. ಈ ಮತದಾರರು ಹೊರಗಿನ ಪ್ರಭಾವಗಳಿಂದ, ಅವರ ವಿದೇಶಿ ಉದ್ಯೋಗದಾತರ ಪ್ರಭಾವಗಳಿಂದಲೂ ಹೊರತಾಗಲಾರದ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಕಳವಳ ಉಂಟು ಮಾಡುವ ಸಂಗತಿ.

ಆದ್ದರಿಂದ ಚುನಾವಣಾ ಆಯೋಗ ಎನ್.ಆರ್.ಐ.ಗಳಿಗೆ ಮತದಾನದ ಹಕ್ಕನ್ನು ನೀಡುವುದಕ್ಕೆ ಮುಂದುವರೆಯುವ ಮೊದಲು, ಇದಕ್ಕೆ ಸಂಬಂಧಪಟ್ಟ ಕ್ಲಿಷ್ಟಪ್ರಶ್ನೆಗಳನ್ನು ವಿಶದವಾಗಿ ಚರ್ಚಿಸಲು ತಕ್ಷಣವೇ ಒಂದು ಸರ್ವಪಕ್ಷಸಭೆಯನ್ನುಕರೆಯಬೇಕು ಎಂಬುದು ಸಿಪಿಐ(ಎಂ)ನ ಅಭಿಪ್ರಾಯ.

ಧನ್ಯವಾದಗಳೊಂದಿಗೆ,

ನಿಮ್ಮವಿಶ್ವಾಸಿ,

(ಸೀತಾರಾಂ ಯೆಚುರಿ)

Donate Janashakthi Media

Leave a Reply

Your email address will not be published. Required fields are marked *