ಬೆಂಗಳೂರು : ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸುವಂತೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ನೇತೃತ್ವದಲ್ಲಿ ಸಾವಿರಾರು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸ ದಿರುವ ಕಾರಣಕ್ಕೆ ‘ವೋಟ್ ಫಾರ್ ಒಪಿಎಸ್’ ಅಭಿಯಾನ ಆರಂಭಿಸಲಾಗಿದೆ. ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿ ಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ. ಎನ್ಪಿಎಸ್ ರದ್ದು ಮಾಡಬೇಕು ಎಂಬುದು ನಮ್ಮ ಏಕೈಕ ಬೇಡಿಕೆ’ ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.
‘ಎನ್ಪಿಎಸ್ ಜಾರಿಯಾಗಿ 16 ವರ್ಷ ಕಳೆದಿದೆ. ದಿನ ಕಳೆದಂತೆಲ್ಲಾ ನೌಕರರು ನೋವು ಅನುಭವಿಸುವ ಸ್ಥಿತಿಯಿದೆ. ಹೆಸರಿಗಷ್ಟೆ ಸರ್ಕಾರಿ ನೌಕರರು ಎಂಬ ಸ್ಥಿತಿಯಿದ್ದು, ಸಂಧ್ಯಾಕಾಲದಲ್ಲಿ ಬದುಕು ಹೇಗೆ ಎಂಬ ಪ್ರಶ್ನೆ ನೌಕರರನ್ನು ಕಾಡುತ್ತಿದೆ’ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ, ರಾಜ್ಯ ಉಪಾಧ್ಯಕ್ಷ ಎಸ್.ಪಿ. ಸಂಗಣ್ಣ, ಗೌರವ ಸಲಹೆಗಾರ ಎಸ್.ಎಸ್. ಹದ್ಲಿ, ರಾಜ್ಯ ಖಜಾಂಚಿ ಕೇಶವ ಪ್ರಸಾದ್, ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ಪಿ.ತಳವಾರ, ಮಂಜುನಾಥ್ ಕೆ.ಜೆ., ಕರಾಸ ಎನ್ಪಿಎಸ್ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಗೌಡ ಎಂ.ಎ. ಸರಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ಜೈಕುಮಾರ್ ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿದ್ದಾರೆ.
ನ್ಯಾಯಾಂಗಕ್ಕೂ ಜಾರಿ ಮಾಡಬಹುದು : ನ್ಯಾಯಾಂಗಕ್ಕೂ ಎನ್ಪಿಎಸ್ ಯೋಜನೆ ಜಾರಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೈಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಸರ್ಕಾರಿ ನೌಕರರ ಎನ್ಪಿಎಸ್ ಸಮಸ್ಯೆಯ ಗಂಭೀರತೆಯ ಬಗ್ಗೆ ನನಗೆ ಅರಿವಾಗಿದೆ. “ರಾಜ್ಯದ ಜನಸಂಖ್ಯೆಯ ಶೇ.1ರಷ್ಟು ಮಾತ್ರ ಸರ್ಕಾರಿ ನೌಕರರಾಗಿದ್ದು, ಎನ್ಪಿಎಸ್ ಯೋಜನೆಯ ಮೂಲಕ ಅವರನ್ನೆಲ್ಲ ಅನಾಥಾಶ್ರಮಗಳಿಗೆ, ಬೀದಿಗೆ ತಳ್ಳುವ ಹುನ್ನಾರ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಈ ನೀತಿಯನ್ನು ಯಾವುದೇ ನಾಗರಿಕ ಸಮಾಜ ಒಪ್ಪುವುದಿಲ್ಲ. ಇಡೀ ರಾಜ್ಯದ ಹಾಲಿ-ಮಾಜಿ ಶಾಸಕರು, ಸಂಸದರು, ಸಚಿವರು ಕೂಡ ಪಿಂಚಣಿ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಮಸ್ಯೆ ಇದು ಎಂದು ಇತರೆ ವರ್ಗ ಸುಮ್ಮನಿದ್ದರೆ, ಎಂಎಲ್ಎ, ಎಂಪಿಗಳು ಸಹ ಮುಂದೊಂದು ದಿನ ಬೀದಿಗೆ ಬೀಳುತ್ತಾರೆ. ಹಾಗಾಗಿ ನೌಕರರ ಹೋರಾಟದ ಬಗ್ಗೆ ಅವರೆಲ್ಲ ದನಿ ಎತ್ತಬೇಕು, ಒಪಿಎಸ್ ಮಾದರಿಗೆ ಉತ್ತಮ ತಿದ್ದುಪಡಿ ತಂದು ಸುಧಾರಿಸಿ, ನೌಕರರನ್ನು ಕಾಪಾಡಿ. ರಾಜ್ಯದ ಎಲ್ಲ ಶಾಸಕರು ಈ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.