ಬೆಂಗಳೂರು: ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ(ಓಪಿಎಸ್)ಯನ್ನೇ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಸಿಎಸ್ ನೌಕರರ ಸಂಘದ ನೇತೃತ್ವದಲ್ಲಿ ಕಳೆದ 14 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ನಡೆಯುತ್ತಿರುವ ಹೋರಾಟದ ಹಕ್ಕೋತ್ತಾಯಗಳನ್ನು ಪರಿಗಣಿಸಿ ನ್ಯಾಯ ಒದಗಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು, ಹೊಸ ಪಿಂಚಣಿ ಯೋಜನೆ ಕಾಯ್ದೆಯು, ಸಾಮಾಜಿಕ ಭದ್ರತೆ ಒದಗಿಸುತ್ತಿದ್ದ ಹಳೆಯ ಪಿಂಚಣಿ ಯೋಜನೆಯನ್ನು ಕಳಚಿ ಹಾಕಿತಲ್ಲದೆ, ಭವಿಷ್ಯ ನಿಧಿಯ ಮಾದರಿಯಲ್ಲಿ ನೌಕರರಿಂದ ಮಾಸಿಕವಾರು ನಿಧಿ ಸಂಗ್ರಹಿಸಿ ಅದಕ್ಕೆ ಸರಕಾರದ ಪಾಲು ಸೇರಿಸಿ, ಹಾಗೆ ಸೇರಿಸಲಾದ ಮೊತ್ತವನ್ನು ಶೇರು ಮಾರುಕಟ್ಟೆಯ ಜೂಜಾಟದಲ್ಲಿ ತೊಡಗಿಸಿ ಅದರಿಂದ ಬಂದ ಲಾಭ / ನಷ್ಠದಂತೆ ಪಿಂಚಣಿ ನೀಡಲು ಕ್ರಮವಾಗಿದೆ. ಶೇರು ಮಾರುಕಟ್ಟೆಯ ಲಾಭವನ್ನು ವೈಭವೀಕರಿಸಿ ಹಳೆಯ ಪಿಂಚಣಿಯ ಸಾಮಾಜಿಕ ಭದ್ರತೆಯ ಕ್ರಮವನ್ನು ಮರೆಸಿ, ಶೇರು ಮಾರುಕಟ್ಟೆಯ ಮೂಲಕ ನೌಕರರ ಉಳಿತಾಯ ಹಾಗೂ ಸರಕಾರದ ಸೇರ್ಪಡೆಯ ಮೊತ್ತವನ್ನು ಕಾರ್ಪೊರೇಟ್ ಕಂಪನಿಗಳ ಲೂಟಿಗೆ ತೆರೆಯುವ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಇಲ್ಲ: ಸಚಿವ ಮಾಧುಸ್ವಾಮಿ
ಕರ್ನಾಟಕ ರಾಜ್ಯದ ವಿವಿಧ ನೌಕರರ ಸಂಘಗಳು, ಸಾವಿರಾರು ನೌಕರರು, ಹಿರಿಯ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಳೆದ 14 ದಿನಗಳಿಂದ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಜಾರಿಗೊಳಿಸುತ್ತಿರುವ ಜನ ವಿರೋಧಿ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ನೀತಿಗಳ ಭಾಗವಾಗಿ, ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸುವ ದುರುದ್ದೇಶದಿಂದ, ದೇಶದಾದ್ಯಂತ ನಡೆದ ನೌಕರರ ಪ್ರತಿರೋಧದ ನಡುವೆಯು, ಪಿಂಚಣಿ ನಿಧಿ ನಿರ್ವಹಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಸುಗ್ರೀವಾಜ್ಞೆ ಜಾರಿಗೊಳಿಸಿತು.
ಇದು, ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತಿದ್ದ ಹಳೆಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಲು ಕೇಂದ್ರ ಸರಕಾರ 2004 ರಿಂದ ಹಾಗೂ ಕರ್ನಾಟಕ ರಾಜ್ಯ ಸರಕಾರ 2006 ರಿಂದ ತಂದೆ ಯೋಜನೆಯಾಗಿದೆ. ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಮತ್ತು ಹೊಸ ನೌಕರರ ಸಾಮಾಜಿಕ ಭದ್ರತೆಯನ್ನು ಪೂರ್ಣವಾಗಿ ಕೈಬಿಟ್ಟು ನೌಕರರ ಉಳಿತಾಯದ ನಿಧಿಯಲ್ಲೇ ಹೊಸ ಪಿಂಚಣಿಯ ಯೋಜನೆಯ ಹೆಸರಿನ ಕಾರ್ಪೋರೇಟ್ ಲೂಟಿಯನ್ನು ಜಾರಿಗೆ ತರಲು ಉದ್ದೇಶಿಸಿದ ಯೋಜನೆಯಾಗಿದೆ.
ಇದನ್ನೂ ಓದಿ : ಎನ್‌ಪಿಎಸ್ ವಿರುದ್ಧ ಸರ್ಕಾರಿ ನೌಕರರ ಧರಣಿ ಮೂರನೇ ದಿನಕ್ಕೆ
ಹಳೆ ಪಿಂಚಣಿ ಯೋಜನೆಯಂತೆ, ನೌಕರರು ನಿವೃತ್ತರಾಗುವ ಕೊನೆಯ ತಿಂಗಳ ಸಂಬಳದ ಅರ್ಧ ಭಾಗವನ್ನು ಮತ್ತು ಮುಂದುವರೆದು ಅನುಸಾರವಾಗಿ ಹೆಚ್ಚಳವನ್ನು ಅವರು ಬದುಕಿರುವವರೆಗೆ ಮತ್ತು ನೌಕರರು ಮೃತರಾದಲ್ಲಿ, ನೌಕರರ ಹೆಂಡತಿ/ಗಂಡ ಬದುಕಿರುವವರೆಗೆ ನಿಯಮಾವಳಿಯಂತೆ ಅದರರ್ಧ ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತಿತ್ತು. ಈ ಸೌಲಭ್ಯವನ್ನು 2006ರ ನಂತರ ನೇಮಕವಾದ ನೌಕರರಿಗೆ ನಿಲ್ಲಿಸುವ ಯೋಜನೆ ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್)ಯಲ್ಲಿ ಅಡಗಿದೆ.
ಪಿಎಫ್‌ಆರ್‌ಡಿಎ ತೂಗುಕತ್ತಿ ಯಾವಾಗ ಬೇಕಾದರೂ ಬದಲಾಗುವ ಸಾಧ್ಯತೆಗಳೇ ಇವೆ. ತಮಗೆ ಇಳಿಗಾಲದಲ್ಲಿ ನೆರವಾಗದು ಬದಲಿಗೆ ತಮ್ಮ ಉಳಿತಾಯವು ತಮಗೆ ಧಕ್ಕುವ ಯಾವುದೇ ಖಾತರಿ ಇಲ್ಲವೆಂದುಕೊಂಡ ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ನೌಕರರು ಪ್ರಬಲವಾದ ಹೋರಾಟಕ್ಕೆ ಧುಮುಕಿದ್ದಾರೆ. ಸರಕಾರಿ ನೌಕರರು ಕೇಳುತ್ತಿರುವ ಹಕ್ಕೊತ್ತಾಯಗಳು ಮತ್ತು ಸಾಮಾಜಿಕ ಭದ್ರತೆಯ ವಿಚಾರ ಸಮರ್ಪಕವಾದವುಗಳಾಗಿವೆ.
ಇದನ್ನು ಓದಿ: ಎನ್‌ಪಿಎಸ್ ರದ್ದತಿಗೆ ಆಗ್ರಹಿಸಿ ಸರ್ಕಾರಿ ನೌಕರರ ಬೃಹತ್ ಪ್ರತಿಭಟನಾ ಪ್ರದರ್ಶನ ಆರಂಭ
ಭಾರತ ಕಮ್ಯೂನಿಸ್ಡ್ ಪಕ್ಷ (ಮಾರ್ಕ್ಸ್‌ವಾದಿ), ರಾಜ್ಯ ಸಮಿತಿಯು, ನೌಕರರ ಈ ಹೋರಾಟಕ್ಕೆ ಮತ್ತು ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಸಾಮಾಜಿಕ ಭದ್ರತೆ ಒದಗಿಸುವ ಹಳೆಯ ಪಿಂಚಣಿ ಜಾರಿಗೊಳಿಸಬೇಕೆಂಬ ಹಕ್ಕೊತ್ತಾಯಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಯು. ಬಸವರಾಜ ಅವರು ತಿಳಿಸಿದ್ದಾರೆ.
ಈ ಕೂಡಲೇ, ಕರ್ನಾಟಕ ಸರಕಾರ ಹೋರಾಟನಿರತ ಸಂಘಗಳ ನಾಯಕರ ಜೊತೆ ಮಾತುಕತೆ ನಡೆಸಿ ಅವರ ಹಕ್ಕೋತ್ತಾಯಗಳನ್ನು ಪರಿಹರಿಸುವಂತೆ ಸಿಪಿಐ(ಎಂ) ಪಕ್ಷವು ಬಲವಾಗಿ ಒತ್ತಾಯಿಸಿರುವ ಅವರು, ನೌಕರರ ಸಾಮಾಜಿಕ ಭದ್ರತೆಗೆ ಬೆದರಿಕೆಯಾಗಿರುವ ಪಿಎಫ್‌ಆರ್‌ಡಿಎ ಕಾಯ್ದೆಯನ್ನು ವಾಪಾಸ್ಸು ಪಡೆಯಬೇಕು. ನೌಕರರ ಮಾಸಿಕ ಉಳಿತಾಯವನ್ನು ಮರಳಿಸಲು ಕ್ರಮವಹಿಸಬೇಕೆಂದು ಪಕ್ಷವು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ