ಅಹಮದಾಬಾದ್: ಬಿಲ್ಕಿಸ್ ಬಾನೊ ಪ್ರಕರಣದ ಅತ್ಯಾಚಾರಿಗಳು ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಹೊಂದಿದ್ದರು. ಅವರನ್ನು ಗುಜರಾತ್ ಸರ್ಕಾರ ಬಿಡುಗಡೆಗೊಳಿಸಿದ ಸಂದರ್ಭದಲ್ಲಿಯೇ ವಿವಾದಕ್ಕೆ ಗುರಿಯಾಗಿತ್ತು. ಸ್ವತಂತ್ರೋತ್ಸವದ ದಿನ ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ಕೆಲ ಗಂಟೆಗಳಲ್ಲೇ ಅತ್ಯಾಚಾರಿಗಳ ಬಿಡುಗಡೆಯಾಗಿದ್ದು ದೇಶವ್ಯಾಪಿ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು.
ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಮೂರು ವರ್ಷದ ಮಗಳನ್ನು ದಾರುಣವಾಗಿ ಕೊಂದಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರವು ಗೋಧ್ರಾ ಉಪ-ಜೈಲಿನಿಂದ ಕ್ಷಮೆ ನೀಡಿ ಬಿಡುಗಡೆ ಮಾಡಿದ ಬೆನ್ನಲ್ಲೇ ಗುಜರಾತ್ ರಾಜ್ಯದ ಗೋದ್ರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅತ್ಯಾಚಾರಿಗಳು ಬ್ರಾಹ್ಮಣರು ಮತ್ತು ಉತ್ತಮ ಸಂಸ್ಕಾರ ಉಳ್ಳವರು ಎಂದು ಹೇಳಿಕೆ ನೀಡಿ ಅವರು ಬಿಡುಗಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮುಂದುವರೆದು, ಬಿಜೆಪಿ ಶಾಸಕ ಸಿಕೆ ರೌಲ್ಜಿ ಅತ್ಯಾಚಾರಿಗಳು ಅಪರಾಧ ಮಾಡಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಜೈಲಿನಲ್ಲಿ ಅವರು ಉತ್ತಮ ನಡತೆ ಹೊಂದಿದ್ದರು. ಅವರೆಲ್ಲರೂ ಬ್ರಾಹ್ಮಣರು ಮತ್ತು ಉತ್ತಮ ಸಂಸ್ಕಾರ ಹೊಂದಿದವರು ಎಂದು ಹೇಳಿಕೆ ನೀಡಿದ್ದಾರೆ.
ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗಳ ಬಿಡುಗಡೆ ಕುರಿತು ರಚಿಸಲಾದ ಸಮಿತಿಯಲ್ಲಿದ್ದ ಗೋದ್ರಾ ಕ್ಷೇತ್ರದ ಶಾಸಕ ಅತ್ಯಾಚಾರಿಗಳು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಅತ್ಯಾಚಾರಿ ಅಪರಾಧಿಗಳ ಪರ ನಿಂತು ಮಾತನಾಡಿರುವುದು ಶಾಸಕರ ನಡೆ ಯಾರ ಪರ ಎಂಬುದು ತೋರ್ಪಡಿಸುತ್ತದೆ.
ಮುಂದುವರೆದು, ಮಾತನಾಡಿದ ಶಾಸಕ ಸಿಕೆ ರೌಲ್ಜಿ, ಪ್ರಕರಣದಲ್ಲಿ ಅವರು ಮೊದಲಿಂದಲೂ ಉತ್ತಮವಾಗಿ ನಡೆದುಕೊಳ್ಳುತ್ತಿದ್ದರು. ಇದು ಆಕಸ್ಮಿಕವಾಗಿ ಘಟಿಸಿದಾಗ ಎಲ್ಲರೂ ಸಿಕ್ಕಿಕೊಂಡಿದ್ದಾರೆ. ಅವರನ್ನು ಇನ್ನೂ ಹೆಚ್ಚು ದಿನ ಜೈಲಿನಲ್ಲಿ ಇಡುವ ಅಗತ್ಯವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಬ್ರಾಹ್ಮಣರು. ಅವರನ್ನು ಮೂಲೆಗುಂಪು ಮಾಡುವುದು ಮತ್ತು ಶಿಕ್ಷಿಸುವುದು ಕೆಲವರ ದುರುದ್ದೇಶವೂ ಆಗಿರಬಹುದು ಎಂದರು.
ಅತ್ಯಾಚಾರಿಗಳು ಬಿಡುಗಡೆಗೊಂಡಾಗ ಸಿಹಿ ಹಂಚಿ ಸಂಭ್ರಮಿಸಿದ್ದ ಬಗ್ಗೆ ಕೇಳಲಾದ ಪ್ರಶ್ನೆಗೆ “ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ನೋಡುತ್ತಾರೆ. ನ್ಯಾಯಾಲವೇ ಅವರನ್ನು ಬಿಡುಗಡೆ ಮಾಡಿ ಎಂದು ಹೇಳಿರುವಾಗ ಸಿಹಿ ಹಂಚುವುದರಲ್ಲಿ ತಪ್ಪೇನಿದೆ? ಆದರೆ ಹೂಹಾರ ಹಾಕಿದವರು ನಮ್ಮ ಸಮಿತಿಯವರಲ್ಲ. ಈ ಕುರಿತು ನಾನು ಹೆಚ್ಚು ಹೇಳುವುದಿಲ್ಲ.” ಎಂದು ಉತ್ತರಿಸಿದ್ದಾರೆ.
ಅತ್ಯಾಚಾರ ಮತ್ತು ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲ್ಗೊಂಡವರಿಗೆ ಕ್ಷಮಾದಾನ ನೀಡಬಾರದು ಎಂದು ಗೃಹ ಸಚಿವಾಲಯ ಹೇಳಿದೆಯಲ್ಲ ಎಂಬ ಪ್ರಶ್ನೆಗೆ ಶಾಸಕ ಸಿಕೆ ರೌಲ್ಜಿ “ಅದು ನಮಗೆ ಗೊತ್ತಿಲ್ಲ. ಅವರ ವರ್ತನೆ ಜೈಲಿಗೆ ಹೋಗುವ ಮುಂಚೆ ಹೇಗಿತ್ತು, ಜೈಲಿನಲ್ಲಿ ಹೇಗಿದೆ ಎಂಬುದನ್ನು ಗಮನಿಸಬೇಕು. ಅವರ ಕುಟುಂಬ ಸದಸ್ಯರು ಸಹ ಉತ್ತಮವಾಗಿ ನಡೆದುಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.
ಸಿಕೆ ರೌಲ್ಜಿ ನೀಡಿರುವ ಹೇಳಿಕೆ ಖಂಡಿಸಿರುವ ಹಲವರು, ವಿರೋಧ ವ್ಯಕ್ತಪಡಿಸಿದ್ದು, ಅತ್ಯಾಚಾರಿಗಳನ್ನು ಸಮರ್ಥಿಸಿಕೊಳ್ಳುವ ಬಿಜೆಪಿ ಪಕ್ಷದವರ ಮನಸ್ಥಿತಿ ಎಂತದ್ದು ಇದರಿಂದ ಸಾಬೀತಾಗುತ್ತದೆ ಎಂದಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದು, ಶಾಸಕರ ನಡೆಯನ್ನು ಪ್ರಶ್ನಿಸಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ ವಕ್ತಾರ ವೈ ಸತೀಶ್ ರೆಡ್ಡಿ, “ಅತ್ಯಾಚಾರಿಗಳು ಬ್ರಾಹ್ಮಣರು. ಉತ್ತಮ ಸಂಸ್ಕಾರ ಹೊಂದಿದವರು. ಜೈಲಿನಲ್ಲಿ ಅವರ ನಡತೆ ಉತ್ತಮವಾಗಿತ್ತು,” ಎಂದು ಬಿಜೆಪಿ ಶಾಸಕ ಅತ್ಯಾಚಾರಿಗಳನ್ನು ಸಂಸ್ಕಾರವಂತರು ಎಂದಿದ್ದಾರೆ. ಇಷ್ಟು ನೀಚ ಹಂತಕ್ಕೆ ಯಾವುದೇ ಪಕ್ಷವೂ ಇಳಿದಿರಲಿಲ್ಲ, ಎಂದು ಬಿಜೆಪಿಯನ್ನು ಖಂಡಿಸಿದ್ದಾರೆ.