ಬೆಂಗಳೂರು: ಕೋವಿಡ್ ಸಾಂಕ್ರಾಮಿಕತೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಹಂತ ಹಂತವಾಗಿ ಎಲ್ಲಾ ಶಾಲಾ ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸಿರುವ ಸರ್ಕಾರವು ಇದೀಗ ನವೆಂಬರ್ 8 ರಿಂದ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಪುನರಾರಂಭಿಸಲು ಅನುಮತಿ ನೀಡಿದೆ.
ಈ ಸಂಬಂಧ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಲಾಗಿದ್ದು, ಕೋವಿಡ್ ನಿಯಂತ್ರಣ ಮಾರ್ಗಸೂಚಿಯ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ. ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ ಮಕ್ಕಳಿಗೆ ಕಲಿಕಾ ಚಟುವಟಿಕೆ ನಡೆಸಬಹುದು. ಮೊದಲ ಹಂತದಲ್ಲಿ ಬೆಳಗ್ಗೆ 10 ರಿಂದ 12ರವರೆಗೆ ಮಾತ್ರ ನಡೆಸಬೇಕು. ಕೇಂದ್ರದ ಆರಂಭಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯತ್ ಗಮನಕ್ಕೆ ತಿಳಿಸಬೇಕಿದೆ ಎಂದು ಸೂಚಿಸಲಾಗಿದೆ.
ಇದನ್ನು ಓದಿ: “ಸದ್ಯಕ್ಕೆ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ” ಗೌರವಧನ ಹೆಚ್ಚಳ ಇಲ್ಲ
ಮಕ್ಕಳ ಹಾಜರಾತಿಗೆ ಪೋಷಕರ ಅನುಮತಿ ಪತ್ರ ಪಡೆಯಬೇಕು. ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿ ಹಾಗೂ ಕೇಂದ್ರಕ್ಕೆ ಬರುವ ಮಕ್ಕಳ ಪೋಷಕರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಅಂಗನವಾಡಿ ಕೇಂದ್ರಗಳಲ್ಲಿ ಸಣ್ಣ ಮಕ್ಕಳು ಇರುವುದರಿಂದ ಅವರಿಗೆ ತೊಂದರೆ ಆಗದಂತೆ ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದೆ. ಕೇಂದ್ರಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸೇಶನ್ ಮಾಡಿಸಬೇಕು. ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಆರಂಭದಲ್ಲಿ ಎರಡು ತಾಸು ಮಾತ್ರ ಆರಂಭಿಸಿ ನಂತರದಲ್ಲಿ ಹಂತ, ಹಂತವಾಗಿ ಸಂದರ್ಭ ನೋಡಿ ಸಮಯ ವಿಸ್ತರಿಸಲು ಚಿಂತನೆ ನಡೆದಿದೆ’ ಎಂದರು.
ಮಾರ್ಗಸೂಚಿ:
ಅಂಗನವಾಡಿಗೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಬೇಕು, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಅಲ್ಲದೆ, ಸ್ಯಾನಿಟೈಸರ್ ಬಾಟಲಿಗಳು ಪುಟ್ಟಮಕ್ಕಳ ಕೈಗೆ ಸಿಗದಂತೆ ಸಿಬ್ಬಂದಿ ಎಚ್ಚರ ವಹಿಸಬೇಕು. ಕೈ ತೊಳೆಯಲು ಸಾಬೂನು ವ್ಯವಸ್ಥೆ ಮಾಡಬೇಕು. ಮಕ್ಕಳು, ಸಿಬ್ಬಂದಿ ಪ್ರತಿ 30 ನಿಮಿಷಕ್ಕೊಮ್ಮೆ ಕೈತೊಳೆಯಬೇಕು.
ಇದನ್ನು ಓದಿ: ಅಂಗನವಾಡಿ ನೌಕರರನ್ನು ಸೇವಾಜೇಷ್ಠತೆಗೆ ಪರಿಗಣಿಸಿ-ಉತ್ತಮ ಬದುಕು ಕಲ್ಪಿಸಿ: ಎಸ್.ವರಲಕ್ಷ್ಮಿ
ಮಕ್ಕಳನ್ನು ಕನಿಷ್ಠ 1 ಮೀಟರ್ ಅಂತರದಲ್ಲಿ ಕೂರಿಸಬೇಕು. ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ತಂಡಗಳನ್ನು ರಚಿಸಿ ಒಂದು ತಂಡ ಒಂದು ದಿನ, ಮತ್ತೊಂದು ತಂಡ ಮರುದಿನ ಬರಲು ಸೂಚಿಸಬೇಕು. ಕೇಂದ್ರಗಳಿಗೆ ಸಾರ್ವಜನಿಕರ ಸಂದರ್ಶನ ನಿರ್ಬಂಧಿಸಬೇಕು.
ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್ ಲಕ್ಷಣಗಳಿರುವ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದಂತೆ ಪೋಷಕರಿಗೆ ಸೂಚಿಸಬೇಕು. ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಸೂಚಿಸಬೇಕು ಎಂದು ತಿಳಿಸಲಾಗಿದೆ.