- ಕೃಷಿ ಸಂಬಂಧಿತ ಕಾಯ್ದೆಗಳ ತಿದ್ದುಪಡಿಗೆ ವಿರೋಧ – 26, 27ಕ್ಕೆ ಪಾರ್ಲಿಮೆಂಟ್ ಎದುರು ಧರಣಿ
ಬೆಂಗಳೂರು:ಕೇಂದ್ರ ಸರ್ಕಾರದ ನಾಲ್ಕು ಹೊಸ ಕಾನೂನುಗಳು, ರಾಜ್ಯ ಸರ್ಕಾರದ ಎರಡು ಸುಗ್ರೀವಾಜ್ಞೆಗಳನ್ನು ವಿರೋಧಿಸಿ, ಬೆಂಬಲ ಬೆಲೆ ಕಾನೂನು, ಋಣ ಮುಕ್ತ ಕಾಯ್ದೆ ಜಾರಿಗಾಗಿ ಹಾಗು ನೆರೆ ಪರಿಹಾರ, ಖರೀದಿ ಕೇಂದ್ರಗಳ ಆರಂಭ, ಕಬ್ಬು ಬೆಳೆಗಾರರ ಬೇಡಿಕೆಗಳು, ಕೃಷಿ ಭೂಮಿಯ ಸಕ್ರಮಕ್ಕಾಗಿ ಆಗ್ರಹಿಸಿ ನವೆಂಬರ್ 27 ರಂದು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರ ಕಚೇರಿಗಳ ಘೇರಾವ್ ಮಾಡಲು ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ( AIKSCC) ನಿರ್ಧರಿಸಿದೆ.
ಕೇಂದ್ರ ಸರ್ಕಾರದ “ಕೃಷಿ ಉತ್ಪನ್ನ ವಾಣಿಜ್ಯ ಮತ್ತು ಮಾರಾಟ (ಉತ್ತೇಜನ ಹಾಗು ಬೆಂಬಲ) ಕಾಯ್ದೆ-2020, ಬೆಲೆಭರವಸೆ (ಸಶಕ್ತೀಕರಣ ಹಾಗು ಸುರಕ್ಷೆ) ಮತ್ತು ಕೃಷಿ ಸೇವೆಗಳ ಕಾಯ್ದೆ –2020, ಅಗತ್ಯ ವಸ್ತುಗಳ ಕಾಯ್ದೆ (ತಿದ್ದುಪಡಿ)-2020, ವಿದ್ಯುತ್ ಕಾಯ್ದೆ (ತಿದ್ದುಪಡಿ)-2020 ಹಾಗೂ ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ (ತಿದ್ದುಪಡಿ) ಸುಗ್ರೀವಾಜ್ಞೆ, ಎಪಿಎಂಸಿ ಕಾಯ್ದೆ (ತಿದ್ದುಪಡಿ) ಸುಗ್ರೀವಾಜ್ಞೆಗಳನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ಹಾಗು ಡಾ|| ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಉತ್ಪಾದನಾ ವೆಚ್ಚದ ಮೇಲೆ ಶೇ.50 ಲಾಭವನ್ನು ಸೇರಿಸಿಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ”, ಎಲ್ಲಾ ರೈತರು, ಕೃಷಿ ಕೂಲಿಕಾರರು ಸಾಲ ಮನ್ನಾ, ಸಾಲ ನೀಡಿಕೆಗೆ ಸಂಬಂಧಿಸಿದ `ಋಣ ಮುಕ್ತ ಕಾಯ್ದೆ”ಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಬೇಕು ಎಂದು ಒತ್ತಾಯಿಸಿ ನ.26, 27 ರಂದು ದಿಲ್ಲಿಯ ಪಾರ್ಲಿಮೆಂಟ್ ಎದುರು ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಲು ಹಾಗು ರಾಜ್ಯದ ರೈತರು ಮತ್ತು ಕೃಷಿ ಕೂಲಿಕಾರರ ತುರ್ತು ಬೇಡಿಕೆಗಳ ಈಡೇರಿಕೆಗಾಗಿ ಎಐಕೆಎಸ್‍ಸಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ಸಂಘಟಿಸಿದೆ. ಪ್ರತಿಭಟನೆ ಬೆಂಬಲಿಸಿ ನ.26ರಂದು ಗ್ರಾಮೀಣ ಬಂದ್ ನಡೆಯಲಿದ್ದು, 27ರಂದು ಎಲ್ಲಾ ರೈತ, ಕೂಲಿಕಾರ ಸಂಘಟನೆಗಳು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಘೇರಾವ್ ಹಾಕಲಿದ್ದಾರೆ.
ನೆರೆ ಹಾವಳಿಯ ನಷ್ಟದ ಕುರಿತು ಸಮಗ್ರವಾಗಿ ಸಮೀಕ್ಷೆ ಮಾಡಿ ವೈಜ್ಞಾನಿಕ ನಷ್ಟ ಪರಿಹಾರ, ಬೆಂಬಲ ಬೆಲೆಯಲ್ಲಿ ಭತ್ತ,ರಾಗಿ, ಜೋಳ ಇತ್ಯಾದಿ ಕೃಷಿ ಉತ್ಪನ್ನ ಖರೀದಿಗಾಗಿ `ಖರೀದಿ ಕೇಂದ್ರಗಳ ಆರಂಭ, ಹಳೇ ಬಾಕಿಗಳ ಪಾವತಿ, ಬೆಂಬಲ ಬೆಲೆಯಲ್ಲಿ ಕಬ್ಬು ಖರೀದಿ, ಬಗರ್ ಹುಕುಂ ಸಾಗುವಳಿ, ಅರಣ್ಯ ಭೂಮಿ ಸಕ್ರಮಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ನ.27 ರಂದು ರಾಜ್ಯಾದ್ಯಂತ ಎಲ್ಲಾ `ಜಿಲ್ಲಾ ಕೇಂದ್ರ’ಗಳಲ್ಲಿ ಕೇಂದ್ರ ಸರ್ಕಾರದ ಕಚೇರಿಗಳ ಘೇರಾವ್ ಸಂಘಟಿಸಿದೆ. ಈ ಹೋರಾಟದಲ್ಲಿ ರೈತರು ಮತ್ತು ಕೃಷಿ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು AIKSCC ವಿನಂತಿಸಿದೆ.