ಹೊಸದಿಲ್ಲಿ: ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹರಾದ ಬೆನ್ನಲ್ಲೇ ಸರ್ಕಾರಿ ನಿವಾಸವನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ಸೋಮವಾರ ಲೋಕಸಭಾ ಕಾರ್ಯದರ್ಶಿ ತುಘಲಕ್ ಲೇನ್‌ನಲ್ಲಿ ರಾಹುಲ್ ಗಾಂಧಿ ವಾಸವಾಗಿರುವ 12ನೇ ಸಂಖ್ಯೆಯ ಸರ್ಕಾರಿ ಬಂಗಲೆಯನ್ನು ಏಪ್ರಿಲ್ 23ರೊಳಗೆ ಖಾಲಿ ಮಾಡಿ ಎಂದು ಕಾಂಗ್ರೆಸ್ ನಾಯಕನಿಗೆ ನೋಟಿಸ್ ನೀಡಿದ್ದರು.
ಇದಕ್ಕೆ ಪತ್ರ ಬರೆದು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ನಿಮ್ಮ ನೋಟಿಸ್‌ಗೆ ಬದ್ಧನಾಗಿದ್ದು, ಸರ್ಕಾರಿ ಬಂಗಲೆ ಖಾಲಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದಲ್ಲದೇ, ಕಳೆದ ನಾಲ್ಕು ಅವಧಿಗಳಲ್ಲಿ ಲೋಕಸಭೆಯ ಚುನಾಯಿತ ಸದಸ್ಯನಾಗಿ, ನಾನು ಇಲ್ಲಿ ಅನೇಕ ಖುಷಿ ಕ್ಷಣಗಳನ್ನು ಕಳೆದಿದ್ದೇನೆ. ಜನರ ಆದೇಶಕ್ಕೆ ಋಣಿಯಾಗಿದ್ದೇನೆ ಎಂದು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ನನ್ನ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ, ಖಂಡಿತವಾಗಿಯೂ ನಿಮ್ಮ ನೋಟಿಸ್‌ಗೆ ಬದ್ಧನಾಗಿರುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
2004ರಲ್ಲಿ ಸಂಸದರಾಗಿ ಆಯ್ಕೆಯಾದ ಬಳಿಕ ರಾಹುಲ್ ಗಾಂಧಿ ತುಘಲಕ್ ಲೇನ್‌ನಲ್ಲಿರುವ ಸಂಖ್ಯೆ 12ರ ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದರು. ಈಗ ಸಂಸದ ಸ್ಥಾನದಿಂದ ಅನರ್ಹರಾದ ಕಾರಣ 19 ವರ್ಷದ ಬಳಿಕ ಆ ನಿವಾಸವನ್ನು ಬಿಡಬೇಕಾದ ಪರಿಸ್ಥಿತಿ ರಾಹುಲ್ ಗಾಂಧಿಗೆ ಬಂದಿದೆ.
ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಗುಜರಾತ್ ನ್ಯಾಯಾಲಯ ದೋಷಿ ಎಂದು ಅಭಿಪ್ರಾಯಪಟ್ಟು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದಾಗಿ ಮರು ದಿನವೇ ರಾಹುಲ್ ಗಾಂಧಿ ವಯನಾಡು ಸಂಸದ ಸ್ಥಾನದಿಂದ ಅನರ್ಹರಾಗಿದ್ದರು. ಅನರ್ಹರಾಗಿ ಎರಡು ದಿನಗಳ ನಂತರ ಲೋಕಸಭಾ ಕಾರ್ಯದರ್ಶಿಯು ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದೆ.
ಇನ್ನೂ, ಗುಜರಾತ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕಾಂಗ್ರೆಸ್ ಹೇಳಿದೆ. ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ತುಘಲಕ್ ಲೇನ್‌ನ ಸಂಖ್ಯೆ 12ರ ಸರ್ಕಾರಿ ಬಂಗಲೆಯಲ್ಲಿ ಕಳೆದ 19 ವರ್ಷಗಳಿಂದ ರಾಹುಲ್ ಗಾಂಧಿ ವಾಸವಿದ್ದರು. 2004, 2009, 2013ರಲ್ಲಿ ಅಮೇಥಿಯಿಂದ ರಾಹುಲ್ ಗಾಂಧಿ ಸಂಸದರಾಗಿದ್ದರೆ, 2019ರಲ್ಲಿ ವಯನಾಡು ಕ್ಷೇತ್ರದಿಂದ ಸಂಸದರಾಗಿದ್ದರು.
ಇದನ್ನೂ ಓದಿ : ಮೋದಿ ಹೆಸರನ್ನು ಟೀಕಿಸಿದ ರಾಹುಲ್ ಗಾಂಧಿಗೆ 2 ವರ್ಷ ಜೈಲು; ತೀರ್ಪು ನೀಡಿದ ಕೋರ್ಟಿನಿಂದಲೇ ಜಾಮೀನು
ರಾಹುಲ್ ಗಾಂಧಿ ಅನರ್ಹ ಆಗಿದ್ದು ಏಕೆ?
2019ರ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಎಲ್ಲ ಕಳ್ಳರ ಸರ್‌ನೇಮ್ ಮೋದಿ ಅಂತಾ ಹೇಗಿರುತ್ತದೆ ಎಂದು ಹೇಳಿದ್ದರು. ಇದರಿಂದ ಮೋದಿ ಸರ್‌ನೇಮ್ ಹೊಂದಿದ ಎಲ್ಲರಿಗೂ ಅವಮಾನವಾಗಿದೆ ಎಂದು ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅದನ್ನು ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರು ದೋಷಿ ಎಂದು ಅಭಿಪ್ರಾಯಪಟ್ಟು, 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದರಿಂದ ಮರುದಿನವೇ ವಯನಾಡು ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ ಆಗಿದ್ದರು.