-ಪುರುಷೋತ್ತಮ ಬಿಳಿಮಲೆ
ಹೊಯ್ಸಳರು ಮತ್ತು ಸೇವುಣರ ನಡುವಣ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ಭಾಗವಾದದ್ದು 13ನೇ ಶತಮಾನದಲ್ಲಿ ವಸಾಹತು ಕಾಲಘಟ್ಟದಲ್ಲಿ ಕರ್ನಾಟಕವು ಮುಂಬಯಿ, ಮದ್ರಾಸ್, ಹೈದರಾಬಾದ್‌ಗಳ ನಡುವೆ ಹಂಚಿಹೋಯಿತು. ಕೊಡಗು ಜಿಲ್ಲೆಯು ಬ್ರಿಟಿಷರ ಒಂದು ಅಧೀನ ರಾಜ್ಯವಾಗಿ ಉಳಿಯಿತು. ಕೆಲವು ಪ್ರದೇಶಗಳು ಸ್ಥಳೀಯ ಮರಾಠೀ ಸಂಸ್ಥಾನಿಕರ ವಶದಲ್ಲಿ ಉಳಿದವು. ಹೀಗೆ ನಿರಂರವಾಗಿ ಒಡೆಯುತ್ತಲೇ ಹೋದ ಕರ್ನಾಟಕವು ಮತ್ತೆ ಆಡಳಿತಾತ್ಮಕವಾಗಿ ಒಂದಾದದ್ದು , 750 ವರ್ಷಗಳ ಆನಂತರ, 1956ರಲ್ಲಿ. ಕನ್ನಡ
20ನೇ ಶತಮಾನದ ಆರಂಭದ ಹೊತ್ತಿಗೆ ಕರ್ನಾಟಕವು ಕನಿಷ್ಠ 20 ಕಡೆ ಹಂಚಿಹೋಗಿತ್ತು. ಈ ನಡುವೆ ದೇಶದಾದ್ಯಂತ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೊಸ ಎಚ್ಚರ ಮೂಡುತ್ತಿದ್ದಂತೆ ಕನ್ನಡ ಭಾಷಿಕರೇ ಪ್ರಧಾನವಾಗಿರುವ ಜನರದೂ ಒಂದು ಪ್ರತ್ಯೇಕ ಪ್ರಾಂತ್ಯವಿರಬೇಕೆಂಬ ಭಾವನೆ ಕರ್ನಾಟಕದಲ್ಲಿ ಬೆಳೆಯಿತು. ನವೋದಯ ಕಾಲಘಟ್ಟದಲ್ಲಿ ಕಾಣಿಸಿಕೊಂಡ ಹೊಸಬಗೆಯ ಬೌದ್ದಿಕತೆಯು ರಾಷ್ಟ್ರೀಯತೆಯನ್ನೂ ಕರ್ನಾಟಕತ್ವವನ್ನೂ ಸಂಘರ್ಷವಿಲ್ಲದ ರೀತಿಯಲ್ಲಿ ಬೆಳೆಸಿತು.
ಕುವೆಂಪು ಅವರು ʼ ಜೈ ಭಾರತ ಜನನಿಯ ತನುಜಾತೇ, ಜಯ ಹೇ ಕರ್ನಾಟಕ ಮಾತೇʼ ಎಂದು ಬರೆದು ಹೋರಾಟವನ್ನು ಸಂಘರ್ಷಾತೀತಗೊಳಿಸಿದರು. ಆ ಕಾಲದಲ್ಲಿ ಕರ್ನಾಟಕದ ಇತಿಹಾಸದ ಬಗ್ಗೆ ಪ್ರಕಟವಾದ ಪುಸ್ತಕಗಳು ಕರ್ನಾಟಕ ಏಕೀಕರಣದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟವು. 1903ರಲ್ಲೇ ಬೆನಗಲ್ ರಾಮರಾಯರು ಕರ್ನಾಟಕ ಏಕೀಕರಣದ ಕಲ್ಪನೆಯನ್ನು ಮುಂದಿಟ್ಟು ಧಾರವಾಡದಲ್ಲಿ ಒಂದು ಭಾಷಣ ಮಾಡಿದರು. ಆಲೂರ ವೆಂಕಟರಾಯರು 1907ರಲ್ಲಿ ‘ವಾಗ್ಭೂಷಣ’ ಪತ್ರಿಕೆಯಲ್ಲಿ ಏಕೀಕರಣವನ್ನು ಒತ್ತಾಯಿಸಿ ಒಂದು ಲೇಖನವನ್ನು ಪ್ರಕಟಿಸಿದರು.
ಇದನ್ನೂ ಓದಿ: ಮಾದರಿ ಅಟೋ ಚಾಲಕ| ಪ್ರಯಾಣದ ವೇಳೆ ಪರಭಾಷಿಕರಿಗೆ ಕನ್ನಡ ಕಲಿಸುವ ಅಟೋ!
1915ಲ್ಲಿ ಸಾಹಿತ್ಯ ಪರಿಷತ್ತು ನಿರ್ಮಾಣವಾಯಿತು. 1924ರಲ್ಲಿ ಬೆಳಗಾವಿ ಕಾಂಗ್ರೆಸ್ಸಿನ ಕಾಲಕ್ಕೇ ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ಪ್ರಥಮ ಕರ್ನಾಟಕ ಏಕೀಕರಣ ಸಮ್ಮೇಳನವೂ ಜರುಗಿತು. ಹಿಂದೂಸ್ಥಾನೀ ಸೇವಾದಳವು 1926ರಲ್ಲಿ ಸಹಿ ಸಂಗ್ರಹ ಚಳವಳಿಯನ್ನು ಸುರು ಮಾಡಿ, ಏಕೀಕರಣದ ಪರ 26,000 ಜನರ ಸಹಿ ಪಡೆಯಿತು. ನೆಹರೂ ಕಮಿಟಿಯು 1928ರಲ್ಲಿ ಏಕೀಕರಣವನ್ನು ಬಲವಾಗಿ ಬೆಂಬಲಿಸಿತು. ಆದರೆ ಅನೇಕ ಆಡಳಿತಗಳಿಗೆ ಒಳಪಟ್ಟಿದ್ದ ಕರ್ನಾಟಕವನ್ನು ಒಂದುಗೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. 1946ರ ಕೊನೆಗೆ ಬ್ರಿಟಿಷರು ಭಾರತವನ್ನು ಬಿಡುವ ಸಂಗತಿ ಖಚಿತವಾಗುತ್ತಿದ್ದಂತೆಯೇ ಮುಂಬೈ ಹಾಗೂ ಮದ್ರಾಸ್ ವಿಧಾನಸಭೆಗಳು 1947ರಲ್ಲಿ ಕರ್ನಾಟಕ ಏಕೀಕರಣವನ್ನು ಬೆಂಬಲಿಸಿ ಠರಾವು ಮಂಡಿಸಿದವು.
ಅದೇ ವರ್ಷ ಕರ್ನಾಟಕ ಏಕೀಕರಣ ಮಹಾಸಮಿತಿಯನ್ನು ಸ್ಥಾಪಿಸಲಾಯಿತು. ಇದರ ಮೊದಲ ಅಧ್ಯಕ್ಷರು ಶ್ರೀ ಎಸ್. ನಿಜಲಿಂಗಪ್ಪನವರು, ಕಾರ್ಯದರ್ಶಿಗಳು ಅಂದಾನಪ್ಪ ದೊಡ್ಡಮೇಟಿ ಹಾಗೂ ಮಂಗಳವೇಡೆ ಶ್ರೀನಿವಾಸರಾಯರು. 1947ರ ಡಿಸೆಂಬರಿನಲ್ಲಿ ಕಾಸರಗೋಡಿನಲ್ಲಿ ಡಾ. ದಿವಾಕರರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೇಳನವು ದೇಶ ಸ್ವತಂತ್ರವಾದರೂ ರಾಜ್ಯ ಏಕೀಕರಣ ಆಗದ ಬಗ್ಗೆ ತೀವ್ರ ಅಸಮಾಧಾನ ಸೂಚಿಸಿತು. ( ಮುಂದೆ ಇದೇ ಕಾಸರಗೋಡು ಕರ್ನಾಟಕದ ಭಾಗವಾಗದೇ ಹೋಯಿತು)
ದೇಶ ಸ್ವತಂತ್ರವಾದ ಆನಂತರ ಸಂಸ್ಥಾನಗಳೆಲ್ಲ ಮಾಯವಾದುವು. ಆಗ ೨೦ ಆಡಳಿತಗಳಿಗೆ ಸೇರಿದ್ದ ಕರ್ನಾಟಕವು ಮುಂಬೈ, ಮದ್ರಾಸ್, ಮೈಸೂರು, ಹೈದರಾಬಾದ್ ಹಾಗೂ ಕೊಡಗು, ಹೀಗೆ ಐದು ಆಡಳಿತಕ್ಕೆ ಮಾತ್ರ ಒಳಪಟ್ಟಿತು. ಇದು ಏಕೀಕರಣದ ನಿಟ್ಟಿನಲ್ಲಿ ಇಡಲಾದ ಮೊದಲ ಮತ್ತು ಮಹತ್ವದ ಹೆಜ್ಜೆ. ಮೈಸೂರು ಸಂಸ್ಥಾನ ಅತ್ಯಂತ ವಿಶಾಲ ಕನ್ನಡ ಪ್ರದೇಶವಾಗಿದ್ದು ಅದರ ಜೊತೆ ಉಳಿದ ಪ್ರದೇಶಗಳು ಐಕ್ಯವಾದಲ್ಲಿ ಏಕೀಕರಣ ಸುಲಭವೆಂದು ಹೋರಾಟಗಾರರು ಭಾವಿಸಿದರು.
ಪೊಟ್ಟಿ ಶ್ರೀರಾಮುಲು ಉಪವಾಸ ನಡೆಸಿ ತೀರಿಕೊಂಡಾಗ ಆಂಧ್ರ ಪ್ರಾಂತ್ಯ ರಚನೆಯಾಗಿ, ಬಳ್ಳಾರಿ ಜಿಲ್ಲೆಯ ಏಳು ತಾಲ್ಲೂಕುಗಳು ಮೈಸೂರಿಗೆ ಸೇರಿತು. ಕೊನೆಗೆ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ರಾಜ್ಯ ಪುನರ್ಘಟನಾ ಆಯೋಗ ನೇಮಕಗೊಂಡು, ಏಕೀಕೃತ ಕರ್ನಾಟಕವು ೧೯೫೬ರ ನವೆಂಬರ್ ೧ಕ್ಕೆ ಅಸ್ತಿತ್ವಕ್ಕೆ ಬಂತು. ಹಾಗಾಗಿ ಇವತ್ತು ನಾವು ಆಚರಿಸುತ್ತಿರುವುದು ಕರ್ನಾಟಕ ರಾಜ್ಯ ಏಕೀಕರಣಗೊಂಡ ದಿನ.
ಈ ರಾಜ್ಯದಲ್ಲಿ ಕನ್ನಡವೇ ಮುಖ್ಯ ಭಾಷೆ. ಆದರೆ ಉಳಿದ ೭೦ಕ್ಕೂ ಹೆಚ್ಚು ಭಾಷೆಗಳು ಕರ್ನಾಟಕದ ಸೊತ್ತು ಎಂಬುದನ್ನು ನಾವು ಮರೆಯಬಾರದು. ಜೊತೆಗೆ ಕರ್ನಾಟಕದ ಅಸ್ಮಿತೆಯನ್ನು ನಾಶ ಮಾಡುತ್ತಿರುವ ದುಷ್ಟ ಶಕ್ತಿಗಳ ವಿರುದ್ಧವೂ ನಾವೆಲ್ಲ ಒಟ್ಟು ಸೇರಿ ಕೆಲಸಮಾಡಬೇಕಾಗಿದೆ.
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು
ಇದನ್ನೂ ನೋಡಿ: ಸರ್ಕಾರಿ ನೌಕರರ ಸಂಘದ ಚುನಾವಣೆ | ನುಸುಳಿದ ಅಕ್ರಮ ಮತದಾರರು| ಕೋರ್ಟ್ ಬೇಡ ಅಂದ್ರು ನಡೆದ ಚುನಾವಣೆ Janashakthi Media