ನವದೆಹಲಿ: ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಜಯಗಳಿಸಿದ ಬಳಿಕ, ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತೀಯ ಕ್ರಿಕೆಟ್ ತಂಡದ ಕ್ರಮವನ್ನು ಸೆಪ್ಟೆಂಬರ್ 29ರಂದು ಶಿವಸೇನಾ ಸಂಸದ ಸಂಜಯ್ ರಾವತ್ ತಮ್ಮ “ಎಕ್ಸ್” ಖಾತಿಯಲ್ಲಿ ಟೀಕಿಸಿದರು.
ಸರಣಿಯ ಆರಂಭದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ನಖ್ವಿಯೊಂದಿಗೆ ಕೈಕುಲುಕುತ್ತಿರುವುದು, ಸಂಭಾಷಣೆ ನಡೆಸುತ್ತಿರುವುದು ಮತ್ತು ಫೋಟೋಗೆ ಪೋಸ್ ನೀಡುತ್ತಿರುವ ದೃಶ್ಯವಿರುವ ವೀಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾವತ್ ಹಂಚಿಕೊಂಡರು.
“ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಸಚಿವರೊಂದಿಗೆ ಕೈಕುಲುಕಿ ಫೋಟೋ ತೆಗೆಸಿಕೊಂಡವರು, ಇಂದು ದೇಶಭಕ್ತಿಯ ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ. ನಿಜವಾದ ದೇಶಭಕ್ತಿ ಇದ್ದಿದ್ದರೆ, ಪಾಕಿಸ್ತಾನದ ವಿರುದ್ಧ ಮೈದಾನಕ್ಕೇ ಇಳಿಯಬಾರದು” ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾವತ್, “ಟ್ರೋಫಿ ಸ್ವೀಕರಿಸದಿರುವುದು ಕೇವಲ ನಾಟಕ. ನಾನು ಹಂಚಿದ ವೀಡಿಯೊದಲ್ಲಿ ಕೈಕುಲುಕು, ಚಹಾ ಕುಡಿಯುವುದು, ಫೋಟೋ ತೆಗೆಸಿಕೊಳ್ಳುವುದು ಎಲ್ಲವೂ ಸ್ಪಷ್ಟವಾಗಿದೆ. ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ” ಎಂದರು.
ಅವರು ಭಾರತ-ಪಾಕಿಸ್ತಾನ ಪಂದ್ಯವನ್ನು ಸೇನೆ ಮತ್ತು ಪಹಲ್ಗಾಂ ದಾಳಿಯ ಹುತಾತ್ಮರ ಅವಮಾನವೆಂದು ಕರೆದರು. “ಪ್ರಶ್ನೆ ಒಂದೇ – ಪಾಕಿಸ್ತಾನದ ವಿರುದ್ಧ ಆಟವಾಡುವುದೇಕೆ? ಹುತಾತ್ಮ ಸೈನಿಕರ ತ್ಯಾಗವನ್ನು ಗೌರವಿಸುವುದಾದರೆ, ಇಂತಹ ಪ್ರದರ್ಶನ ಬೇಡ” ಎಂದು ಹೇಳಿದರು.
ಈ ಕುರಿತಂತೆ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸೌರಭ್ ಭಾರದ್ವಾಜ್ ಕೂಡ ಪ್ರತಿಕ್ರಿಯಿಸಿದ್ದು, “ಸರಣಿಯ ಆರಂಭದಲ್ಲಿ ಪಾಕಿಸ್ತಾನದ ಸಚಿವರೊಂದಿಗೆ ಕೈಕುಲುಕಿ ಫೋಟೋ ತೆಗೆಸಿಕೊಂಡಿದ್ದರು. ಆದರೆ ಭಾರತದಲ್ಲಿ ವಿರೋಧ ವ್ಯಕ್ತವಾದ ಬಳಿಕ ಆಟಗಾರರಿಗೆ ಪ್ರಚಾರಕ್ಕಾಗಿ ಹೊಸ ಸ್ಕ್ರಿಪ್ಟ್ ನೀಡಲಾಗಿದೆ” ಎಂದು ಟೀಕಿಸಿದರು.
ಇದನ್ನೂ ನೋಡಿ: ಮೈಸೂರು ದಸರಾ | ʻನಾವು ಹಗೆಗಳಿಂದ ಅಲ್ಲ, ಪ್ರೀತಿಯಿಂದ ಬದುಕನ್ನು ಅರಳಿಸಬಹುದುʼ- ಬಾನು ಮುಷ್ತಾಕ್
