ವಸಂತರಾಜ ಎನ್.ಕೆ
ಜಾಗತಿಕ ಮಾಧ್ಯಮಗಳಲ್ಲಿ ಕಳೆದ 1-2 ವಾರಗಳಲ್ಲಿ ಎರಡು ಸುದ್ದಿಗಳು ಭಾರೀ ಗಮನ ಸೆಳೆದವು. ಒಂದು ನಾರ್ಡ್ ಸ್ಟ್ರೀಂ-1 (Nord Stream-1) ಪೈಪ್ ಲೈನ್ ಮೇಲಿನ ಬುಡಮೇಲು ಕೃತ್ಯವನ್ನು ಯು.ಎಸ್ ಸರಕಾರವೇ ಯೋಜಿಸಿ ನಡೆಸಿದ್ದೆಂದು ತನಿಖಾ ಪತ್ರಕರ್ತ ಸೈಮೂರ್ ಹರ್ಷ್ ಪ್ರಕಟಿಸಿದ ಲೇಖನ. ಎರಡನೆಯದು ಯು.ಎಸ್ ಪ್ರವೇಶಿಸಿದ ಚೀನಾದ ಬಲೂನನ್ನು ‘ಮಿಲಿಟರಿ ಬೇಹುಗಾರಿಕೆ ಕಾಯ’ ವೆಂದು ಆಪಾದಿಸಿ ಹೊಡೆದುರುಳಿಸಲಾಯಿತು. ಇವೆರಡಕ್ಕೂ ಸಂಬಂಧವಿದೆಯೆ? ಇದಕ್ಕಾಗಿ ಈ ಎರಡು ಸುದ್ದಿಗಳ ವಿವರಗಳನ್ನು ಪರಿಶೀಲಿಸಬೇಕು.
ಜಾಗತಿಕ ಮಾಧ್ಯಮಗಳಲ್ಲಿ ಕಳೆದ 1-2 ವಾರಗಳಲ್ಲಿ ಎರಡು ಸುದ್ದಿಗಳು ಭಾರೀ ಗಮನ ಸೆಳೆದವು. ಒಂದು ನಾರ್ಡ್ ಸ್ಟ್ರೀಂ-1 (Nord Stream-1) ಪೈಪ್ ಲೈನ್ ಮೇಲಿನ ಬುಡಮೇಲು ಕೃತ್ಯವನ್ನು ಯು.ಎಸ್ ಸರಕಾರವೇ ಯೋಜಿಸಿ ನಡೆಸಿದ್ದೆಂದು ಯು.ಎಸ್ ನ ಪ್ರಸಿದ್ಧ ತನಿಖಾ ಪತ್ರಕರ್ತ ಸೈಮೂರ್ ಹರ್ಷ್ ಪ್ರಕಟಿಸಿದ ಲೇಖನವೊಂದರಲ್ಲಿ ಬರೆದದ್ದು. ಸೆಪ್ಟೆಂಬರ್ 2022ರ ಈ ಬುಡಮೇಲು ಕೃತ್ಯದ ಪರಿಣಾಮವಾಗಿ ರಶ್ಯದಿಂದ ಜರ್ಮನಿ ಮತ್ತು ಯುರೋಪಿಗೆ ಪ್ರಾಕೃತಿಕ ಗ್ಯಾಸ್ ಪೂರೈಕೆ ಮಾಡುತ್ತಿದ್ದ ನಾರ್ಡ್ ಸ್ಟ್ರೀಂ-1 ಬಂದಾಗಿ, ತೀವ್ರ ಇಂಧನ ಕೊರತೆಯಿಂದಾಗಿ ಬೆಲೆಗಳು ವಿಪರೀತವಾಗಿ ಏರಿ, ಜರ್ಮನಿ ಮತ್ತು ಇತರ ಯುರೋಪಿನ ಜನ ಚಳಿಗಾಲದಲ್ಲಿ ನಡುಗುವಂತಾಗಿದೆ.
ಎರಡನೆಯದು ಚೀನಾದ ಬಲೂನು ಯು.ಎಸ್ ಪ್ರವೇಶಿಸಿ ಒಂದು ವಾರ ಅದರ ‘ಬಾಹ್ಯಾಕಾಶ’ದಲ್ಲಿ ತೇಲುತ್ತಿತ್ತು ಎಂಬುದು ಮಾಧ್ಯಮಗಳಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಯು.ಎಸ್ ಮತ್ತು ಚೀನಾಗಳ ನಡುವೆ ಭಾರೀ ವಿವಾದಕ್ಕೂ ಕಾರಣವಾಯಿತು. ಅದು ‘ಮಿಲಿಟರಿ ಬೇಹುಗಾರಿಕೆ ಕಾಯ’ ವೆಂದು ಆಪಾದಿಸಿ (ಯು.ಎಸ್ ಗಡಿ ದಾಟಿ) ಅಟ್ಲಾಂಟಿಕ್ ಸಾಗರದ ಮೇಲಕ್ಕೆ ಹೋಗುತ್ತಿದ್ದಂತೆ ಅದನ್ನು ಹೊಡೆದುರುಳಿಸಲಾಯಿತು. ಅದು ತನ್ನದೇ ಬಲೂನು, ಆದರೆ ಮಿಲಿಟರಿ ಬೇಹುಗಾರಿಕೆ ಅಲ್ಲ. ಹವಾಮಾನ ಅಧ್ಯಯನಕ್ಕೆ ಬಿಟ್ಟಿದ್ದು ಎಂಬ ಚೀನಾದ ಸಮಜಾಯಿಷಿಯನ್ನು ಯು.ಎಸ್ ಒಪ್ಪದೆ ರಾಯಭಾರ-ಘರ್ಷಣೆಗೆ ಕಾರಣವಾಯಿತು. ಅದರ ಪರಿಣಾಮವಾಗಿ ಯು.ಎಸ್ ವಿದೇಶ ಸಚಿವರ ಚೀನಾ ಬೇಟಿ ರದ್ದಾಯಿತು. ಇನ್ನೂ ಮೂರು ‘ನಿಗೂಢ ಆಕಾಶಕಾಯ’ ಗಳನ್ನು ಯು.ಎಸ್-ಕೆನಡಾ ಗಡಿಯೊಳಗೆ ಬರುತ್ತಿದ್ದಂತೆ ಹೊಡೆದುರುಳಿಸಲಾಯಿತು.
ಇದನ್ನು ಓದಿ: ಆರ್ಥಿಕ ಕಾರ್ಯತಂತ್ರವಾಗಿ ʻʻಬಂಟ ಬಂಡವಾಳಶಾಹಿʼʼ
ಇವೆರಡಕ್ಕೂ ಸಂಬಂಧವಿದೆಯೆ? ಇದೆ. ಎಂದು ಕೆಲವು ವೀಕ್ಷಕರ ಅಭಿಪ್ರಾಯ. ಇಲ್ಲ, ಇರಬಹುದು ಎಂದು ಇನ್ನು ಕೆಲವು ವೀಕ್ಷಕರ ಅಭಿಪ್ರಾಯ. ಇವುಗಳಲ್ಲಿ ಯಾವುದು ಹೆಚ್ಚು ಸರಿಯೆಂದು ತಿಳಿಯಲು ಈ ಎರಡು ಸುದ್ದಿಗಳ ವಿವರಗಳನ್ನು ಪರಿಶೀಲಿಸಬೇಕು.
ಸೈಮೂರ್ ಹರ್ಷ್ ತನಿಖಾ ವರದಿಯ ಮುಖ್ಯಾಂಶಗಳು
ಪ್ರಸಿದ್ಧ ತನಿಖಾ ಪತ್ರಕರ್ತ ಸೈಮೂರ್ ಹರ್ಷ್ ಪ್ರಕಟಿಸಿದ ಲೇಖನದಲ್ಲಿ ತಮ್ಮ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಈ ಕೆಳಗಿನ ಅಂಶಗಳನ್ನು ಹೊರಗೆಡವಿದ್ದಾರೆ:
* ನಾರ್ಡ್ ಸ್ಟ್ರೀಂ ಪೈಪ್ ಲೈನಿನಲ್ಲಿ ಸ್ಫೋಟಕಗಳನ್ನಿಟ್ಟು ಅದನ್ನು ಹಾಳುಗೆಡವಲು ಡಿಸೆಂಬರ್ 2021ರಲ್ಲೇ, ಅಂದರೆ ಉಕ್ರೇನ್ ಯುದ್ಧ ಆರಂಭವಾಗುವ ಕೆಲವು ತಿಂಗಳುಗಳ ಮೊದಲೇ ಅಧ್ಯಕ್ಷ ಬಿಡೆನ್ ಆಜ್ಞೆ ಮಾಡಿದ್ದರು. ಆಗ ನಾರ್ಡ್ ಸ್ಟ್ರೀಂ-2 ಆಗಲೇ ಕೆಲಸ ಮಾಡಲು ಸಿದ್ಧವಾಗಿತ್ತು. ಅದರ ಪರೀಕ್ಷಣೆ, ಪ್ರಮಾಣೀಕರಣದ ಪ್ರಕ್ರಿಯೆ ನಡೆದಿತ್ತು. ಅದನ್ನು ಯು.ಎಸ್ ವಿರೋಧಿಸಿದ್ದರೂ, ಜರ್ಮನಿ ಈ ಪ್ರಕ್ರಿಯೆಯನ್ನು ಮುಂದುವರೆಸುತ್ತಿದ್ದಾಗ, ಬಿಡೆನ್ ‘ಅದು ಮುಂದುವರೆಯದಂತೆ ಮಾಡಲು ಅಗತ್ಯವಾದ ಎಲ್ಲವನ್ನೂ ಮಾಡುತ್ತೇವೆ’ ಎಂದು ಹೇಳಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು.
ಇದನ್ನು ಓದಿ: ಪೆರು : ಜನರ ಪ್ರತಿರೋಧ ಹತ್ತಿಕ್ಕಲು ಯು.ಎಸ್ ಪಡೆಗಳಿಗೆ ಆಹ್ವಾನ
* ನಾರ್ಡ್ ಸ್ಟ್ರೀಂ-1 ಮತ್ತು 2 ಉಕ್ಕಿನ ಪೈಪ್ ನ ಸುತ್ತ ಕಾಂಕ್ರೀಟ್ ಕವಚವಿರುವ ಬಹಳ ಮಜಬೂತಾದ ಪೈಪ್ ಲೈನ್. ಅದರಲ್ಲಿ ತೂತು ಮಾಡುವ ಸ್ಫೋಟಕಗಳನ್ನು ನಿರ್ಧರಿಸುವುದು, ಸ್ಫೋಟಕಗಳನ್ನು ಇಡುವುದು, ಸ್ಫೋಟಿಸುವುದು – ಇವೆಲ್ಲವನ್ನೂ ರಶ್ಯಾದ ಗಮನಕ್ಕೆ ಬಾರದಂತೆ ನಿಭಾಯಿಸುವುದು, ಅತ್ಯಂತ ಸವಾಲಿನ ತಾಂತ್ರಿಕ, ಮಿಲಿಟರಿ, ರಾಜತಾಂತ್ರಿಕ ಕೆಲಸ. ಸಿ.ಐ.ಎ ಮತ್ತು ಯು.ಎಸ್ ನೌಕಾದಳಕ್ಕೆ ಮಾತ್ರ ಈ ಸಾಮರ್ಥ್ಯ ಇರುವುದು.
* ಇದಕ್ಕೆ ಯು.ಎಸ್ ಮತ್ತು ನಾರ್ವೆ ನಡುವೆ ರಹಸ್ಯ ಮಾತುಕತೆ ನಡೆದು ಒಪ್ಪಂದ ಆಗಿತ್ತು. ನಾರ್ವೆ ಯಲ್ಲಿ ರುವ ಯು.ಎಸ್ ನೆರವಿನಿಂದ ಕಟ್ಟಿದ ನೌಕಾ ನೆಲೆಯಿಂದ ಈ ಕೆಲಸದ ಯೋಜನೆ ಆರಂಭವಾಯಿತು. ಇದರಲ್ಲಿ ಎರಡು ದೇಶಗಳ ನೌಕಾ ದಳಗಳು, ಬೇಹುಗಾರಿಕಾ ದಳಗಳು, ಇತರ ಪರಿಣತ ಸಿಬ್ಬಂದಿ ಒಟ್ಟಿಗೆ ಕೆಲಸ ಮಾಡಿದವು.
* ಜೂನ್ 2022ರಲ್ಲಿ ಮಿಲಿಟರಿ ತರಬೇತಿ ಕವಾಯಿತಿನ (BALTOPS 22) ನೆಪದಲ್ಲಿ ಯುದ್ಧ ಹಡಗಿನಿಂದ ಎರಡು ದೇಶಗಳ ಸಾಗರದಾಳಕ್ಕೆ ಮುಳುಗುವ ಪರಿಣತರನ್ನು ಇಳಿಸಿ ನಾರ್ಡ್ ಸ್ಟ್ರೀಂ-1 ಮತ್ತು 2ರಲ್ಲಿ ಸ್ಫೋಟಕಗಳನ್ನು ಇಡಲಾಯಿತು.
* ಸೆಪ್ಟೆಂಬರ್ 2022ರಲ್ಲಿ ಈಗಾಗಲೇ ಇಟ್ಟಿರುವ ಸ್ಫೋಟಕಗಳನ್ನು ರಿಮೋಟ್ ಮೂಲಕ ಸ್ಫೋಟಿಸಲಾಯಿತು. ನಾರ್ಡ್ ಸ್ಟ್ರೀಂ-1 ರಲ್ಲಿ ಎರಡೂ ಪೈಪ್ ಗಳಲ್ಲಿ ಮತ್ತು 2ರಲ್ಲಿ ಒಂದು ಪೈಪ್ ನಲ್ಲಿ ಸ್ಫೋಟ ನಡೆಸಿ ತೂತು ಮಾಡಲಾಯಿತು. ಈ ಸ್ಫೋಟ ನಡೆದ ಸ್ಥಳದ ಹತ್ತಿರ ಆ ಸಮಯದ ಸುತ್ತಮುತ್ತ ಯು.ಎಸ್ ಯುದ್ಧ ಹಡಗು ಇದ್ದು ಆ ಮೇಲೆ ತೆರಳಿತು.
* ಈ ಬುಡಮೇಲು ಕೃತ್ಯ ಯು.ಎಸ್-ನಾರ್ವೆ ಸಹಕಾರ ಸಹಯೋಗದಿಂದ ಆಗಿದೆ. ಈ ಕೃತ್ಯದ ಫಲವಾಗಿ ನಾರ್ಡ್ ಸ್ಟ್ರೀಂ ನ ಗ್ಯಾಸ್, ಎಲ್.ಎನ್.ಜಿ ಗ್ಯಾಸ್ ನಿಂತು ಹೋದಾಗ ಈ ಎರಡು ದೇಶಗಳಿಗೆ ಲಾಭವಾಗಿದೆ. ಯುರೋ ಕೂಟಕ್ಕೆ ಪ್ರಾಕೃತಿಕ ಗ್ಯಾಸ್ ಎಲ್.ಎನ್.ಜಿ ಗ್ಯಾಸ್ ಮತ್ತು ತೈಲ ಪೂರೈಕೆ ಮಾರುಕಟ್ಟೆಯಲ್ಲಿ ರಶ್ಯಾದ ಭಾಗವನ್ನು ಇವೆರಡು ಗಳಿಸಿವೆ. ಈ ಕೃತ್ಯದ ಕುರಿತು ನಾಟೋ ಅಥವಾ ಯುರೋ ಕೂಟಕ್ಕೆ ಮಾಹಿತಿಯಿರಲಿಲ್ಲ. ಸ್ವೀಡನ್ ಮತ್ತು ಡೆನ್ಮಾರ್ಕಿಗೆ ಮಾತ್ರ ಇಂಥದ್ದೊಂದು ನಡೆಯುತ್ತಿದೆ ಎಂಬುದರ ಬಗ್ಗೆ ಸುಳಿವಿತ್ತು ಅಷ್ಟೇ.
ಹರ್ಷ್ ವರದಿಗೆ ಪ್ರತಿಕ್ರಿಯೆ
ಸೆಪ್ಟೆಂಬರ್ 2022ರಲ್ಲಿ ನಾರ್ಡ್ ಸ್ಟ್ರೀಂ ಪೈಪ್ ಲೈನಿನಲ್ಲಿ ಬುಡಮೇಲು ಕೃತ್ಯ ಬೆಳಕಿಗೆ ಬರುತ್ತಿದ್ದಂತೆ, ಯುದ್ಧದಲ್ಲಿ ಹಿನ್ನಡೆಯಾಗಿರುವುದರಿಂದ ಇದನ್ನು ರಶ್ಯಾವೇ ಬೇಕೆಂತಲೇ ಮಾಡಿದೆಯೆಂದು ಯು.ಎಸ್ ಮತ್ತು ನಾಟೋ ಆಪಾದಿಸಿದವು. ಗ್ಯಾಸ್ ಪೈಪ್ ಲೈನನ್ನು ನಾಟೋ ವನ್ನು ಮಣಿಸಲು ಅಸ್ತ್ರವಾಗಿ ಬಳಸಲಾಗುತ್ತಿದೆಯೆಂದು ಆಪಾದಿಸಿದವು. ಯು.ಎಸ್- ನಾಟೋ ಕೂಟವೇ ಈ ಬುಡಮೇಲು ಕೃತ್ಯ ಮಾಡಿದೆಯೆಂದು ರಶ್ಯಾ ಆಪಾದಿಸಿತು. ಎರಡೂ ಕಡೆಯಿಂದ ಯಾವುದೇ ಪುರಾವೆ ಕೊಡಲಾಗಲಿಲ್ಲ. ಈ ಸ್ಫೋಟದ ಕುರಿತು ರಶ್ಯಾ ಸಹ ಭಾಗವಾಗಿರುವ ಅಂತರರಾಷ್ಟ್ರೀಯ ತನಿಖೆ ಆಗಬೇಕೆಂಬ ರಶ್ಯಾದ ಒತ್ತಾಯವನ್ನು ತಿರಸ್ಕರಿಸಲಾಯಿತು. ಸ್ವೀಡನ್ ಸ್ವತಂತ್ರ ತನಿಖೆ ನಡೆಸಿತು. ಅದರ ವರದಿಯೂ ಬಂದಿದೆ. ಆದರೆ ಅದನ್ನು ಸಾರ್ವಜನಿಕಗೊಳಿಸಲ್ಲ ಎಂದು ಅದು ಘೋಷಿಸಿದೆ. ಇವೆಲ್ಲವೂ ಸಂಶಯಕ್ಕೆಡೆ ಮಾಡಿಕೊಟ್ಟಿತ್ತು.
ಇದನ್ನು ಓದಿ: “ನಮಗೆ ಈ ಪೆಂಶನ್ ಸುಧಾರಣೆ ಬೇಡ !!” – ಫ್ರೆಂಚ್ ಒಕ್ಕೊರಲ ಕೂಗು
ಈ ಹಿನ್ನೆಲೆಯಲ್ಲಿ ಈಗ ಸೈಮೂರ್ ಹರ್ಷ್ ವರದಿಗೆ ಹೆಚ್ಚಿನ ವಿಶ್ವಾಸಾರ್ಹತೆಯಿದೆ. ಅವರು ಹಿಂದಿನ ಪೀಳಿಗೆಯ ಅಮೆರಿಕನ್ ತನಿಖಾ ಪತ್ರಕರ್ತರಾಗಿದ್ದು, ಅವರ ವರದಿಗಳು ಮಜಬೂತಾಗಿರುತ್ತವೆ. ವಿಶ್ವಾಸಾರ್ಹವೂ ಆಗಿರುತ್ತವೆ. ಯು.ಎಸ್ ರಾಜಕಾರಣವನ್ನು ಬಹುವಾಗಿ ಪ್ರಭಾವಿಸಿದ ಮೈ ಲೇ (ವಿಯೇಟ್ನಾಂ) ನರಮೇಧ, ವಾಟರ್ ಗೇಟ್, ಇರಾಕ್ ಯುದ್ಧ ಕಾಲದ ಅಬು ಗೈರಾಬ್ ಜೈಲಿನ ಘೋರ ಚಿತ್ರಹಿಂಸೆಗಳು ಅವರ ತನಿಖಾ ಪತ್ರಕಾರಿತೆಯ ಪ್ರಾಮಾಣಿಕತೆ, ಪ್ರಖರತೆಗಳಿಗೆ ಸಾಕ್ಷಿ. ತನಿಖೆ, ಮಾಹಿತಿ ಮೂಲಗಳು, ಮಾಹಿತಿಯ ನಿಖರತೆ ಸ್ಪಷ್ಟತೆ, ಯು,ಎಸ್ ಸರಕಾರ ಮತ್ತು ಅದರ ಅಂಗಸಂಸ್ಥೆಗಳ ಕಾರ್ಯವಿಧಾನ ಬಲ್ಲ ಮಜಬೂತಾದ, ವಿಶ್ವಾಸಾರ್ಹವಾದ ಪತ್ರಕಾರಿತೆ ಅವರದು. ಈ ಬುಡಮೇಲು ಕೃತ್ಯದ ನಂತರ ಯುರೋಪಿಗೆ ಗ್ಯಾಸ್, ತೈಲ ಗಳ ರಫ್ತಿನಲ್ಲಿ ಯು.ಎಸ್, ನಾರ್ವೇ ಎರಡೂ ಭಾರೀ ಪಾಲು ಪಡೆದುಕೊಂಡದ್ದು ಹರ್ಷ್ ಅವರ ವರದಿಯನ್ನು ಬೆಂಭಲಿಸುತ್ತದೆ.
ಯು.ಎಸ್ ಸರಕಾರದ ಪ್ರತಿನಿಧಿ ಸೈಮೂರ್ ಹರ್ಷ್ ವರದಿಯನ್ನು ನಿರಾಕರಿಸಿ ತಳ್ಳಿ ಹಾಕಿದ್ದು ಬಿಟ್ಟರೆ, ಈ ಕುರಿತು ಮಾಧ್ಯಮಗಳಲ್ಲಿ ಹೆಚ್ಚಿನ ಚರ್ಚೆ, ವಾದ-ವಿವಾದ ನಡೆಯಲಿಲ್ಲ. ನಾರ್ವೆ ಅಥವಾ ಯುರೋಪಿನ ಸರಕಾರಗಳು ಈ ಕುರಿತು ಸೊಲ್ಲೆತ್ತಿಲ್ಲ. ರಶ್ಯಾ ಮಾತ್ರ ಸಹಜವಾಗಿಯೇ ತಾನು ಸಹ ಭಾಗವಾಗಿರುವ ಅಂತರರಾಷ್ಟ್ರೀಯ ತನಿಖೆ ಆಗಬೇಕೆಂಬ ಒತ್ತಾಯವನ್ನು ಪುನರುಚ್ಚರಿಸಿದೆ.
ಯು.ಎಸ್ ಬಾಹ್ಯಾಕಾಶ ಸಾರ್ವಭೌಮತೆ ಉಲ್ಲಂಘನೆಯಾಗಿದೆಯೆ?
‘ಚೀನಾ ಬಲೂನು’ ಪ್ರಕರಣದಲ್ಲಿ ಎರಡು ಮುಖ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಪ್ರಕರಣ ಸೃ಼ಷ್ಟಿಸಿದ ವಿವಾದದ ಕುರಿತು ಒಂದು ನಿರ್ಣಯಕ್ಕೆ ಬರಬಹುದು. ಅದರಲ್ಲಿ ಮೊದಲನೆಯದು – ಚೀನಾದ ಬಲೂನು ಯು.ಎಸ್ ನ ‘ಬಾಹ್ಯಾಕಾಶ ಸಾರ್ವಭೌಮತೆ’ಯನ್ನು ಉಲ್ಲಂಘಿಸಿದೆಯೆ? ಅದನ್ನು ನಿರ್ಣಯಿಸಲು ಬಾಹ್ಯಾಕಾಶ ಸಾರ್ವಭೌಮತೆ’ ಎಂದರೇನು ಅಂತ ತಿಳಿದುಕೊಳ್ಳಬೇಕು. ಮೊದಲನೆಯದಾಗಿ ಭೂಭಾಗ ಅಥವಾ ಸಾಗರಗಳಲ್ಲಿ ಇದ್ದ ಹಾಗೆ ಬಾಹ್ಯಾಕಾಶದಲ್ಲಿ ಅಂತರರಾಷ್ಟ್ರೀಯ ಒಪ್ಪಿತ ‘ರಾಷ್ಟ್ರೀಯ ಸಾರ್ವಭೌಮತೆ’ ಎಂಬುದಿಲ್ಲ. ಉದಾಹರಣೆಗೆ ಸಾಗರದಲ್ಲಿ ದೇಶದ ಭೂಗಡಿಯಿಂದ 12 ನಾಟಿಕಲ್ (ಸಾಗರಿಕ) ಮೈಲಿನ ವರೆಗೆ ಆಯಾ ದೇಶದ ಸಾರ್ವಭೌಮ ಪ್ರದೇಶ, ಅದಕ್ಕಿಂತ ಆಚೆಗೆ ಅಂತರರಾಷ್ಟ್ರೀಯ ಪ್ರದೇಶ – ಎಂಬುದರ ಬಗ್ಗೆ ಒಪ್ಪಂದವಿದೆ. ಆದರೆ ಬಾಹ್ಯಾಕಾಶ ದಲ್ಲಿ ಅಂಥದ್ದೇನಿಲ್ಲ. 60 ಸಾವಿರ ಅಡಿ (ಅಥವಾ 19.8 ಕಿ.ಮಿ) ಹೆಚ್ಚಾಗಿ ‘ರಾಷ್ಟ್ರೀಯ ಸಾರ್ವಭೌಮ’ ಪ್ರದೇಶ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ನಾಗರಿಕ ಯಾನ ಮತ್ತು ಮಿಲಿಟರಿ ಫೈಟರ್ ವಿಮಾನಗಳು 60 ಸಾವಿರ ಅಡಿಯೊಳಗೆ ಹಾರುತ್ತವೆ. ಕೆಲವೇ ಮಿಲಿಟರಿ (ಫೈಟರ್ ಅಲ್ಲ, ಕಣ್ಗಾವಲು, ಬೇಹುಗಾರಿಕೆ )ವಿಮಾನಗಳು, ಕ್ಷಿಪಣಿಗಳು, ರಾಕೆಟ್ ಗಳು, ಉಪಗ್ರಹಗಳು 60 ಸಾವಿರ ಅಡಿಗಿಂತ ಮೇಲೆ ಹಾರುತ್ತವೆ. 100 ಕಿ.ಮಿ ಗಿಂತ ಮೇಲೆ ಸ್ಪಷ್ಟವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶವೆಂದು ಪರಿಗಣಿತವಾಗುತ್ತವೆ. ಆದರೆ 19.8 (60 ಸಾವಿರ ಅಡಿ) ಮತ್ತು 100 ಕಿ.ಮಿ ನಡುವೆ ಯಾವುದೇ ಸ್ಪಷ್ಟ ಒಪ್ಪಿತ ಸಾರ್ವಭೌಮತೆಯಿಲ್ಲ. ‘ಚೀನಾ ಬಲೂನು’ 60 ಸಾವಿರ ಅಡಿಗಿಂತ ಮೇಲೆ ತೇಲುತ್ತಿತ್ತು ಎಂದು ಹೇಳಲಾಗಿದೆ. ಹಾಗಾಗಿ ಅದನ್ನು ಯು.ಎಸ್ ನ ‘ರಾಷ್ಟ್ರೀಯ ಸಾರ್ವಭೌಮತೆಯ ಉಲ್ಲಂಘನೆ’ ಎಂದು ಫೈಟರ್ ವಿಮಾನ ಬಳಸಿ ಹೊಡೆದು ಹಾಕುವುದಕ್ಕೆ ಅಂತರರಾಷ್ಟ್ರೀಯ ಕಾನೂನು, ನಿಯಮಗಳ ಬೆಂಬಲವಂತೂ ಇಲ್ಲ.
ಇದನ್ನು ಓದಿ: ಪಾಕಿಸ್ತಾನದ ಭೀಕರ ನೆರೆಗೆ ನೆರವು ನೇಣಾಗುವುದೇ?
ಬಲೂನು ಮಿಲಿಟರಿ ಬೇಹುಗಾರಿಕೆ ಉಪಕರಣವೇ?
ಈ ಪ್ರಕರಣದಲ್ಲಿ ಎದ್ದ ಎರಡನೆಯ ಪ್ರಶ್ನೆ ಬಲೂನು ಮಿಲಿಟರಿ ಬೇಹುಗಾರಿಕೆ ಉಪಕರಣವೇ ಎಂಬುದು. ಹವಾಮಾನ ಅಥವಾ ವೈಜ್ಞಾನಿಕ ಅಧ್ಯಯನಕ್ಕೆ. ಬಲೂನುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ವೇಗವಾಗಿ ಮತ್ತು ನಿರ್ದಿಷ್ಟ ಸ್ಥಳಕ್ಕೆ ಅಥವಾ ಪಥಕ್ಕೆ ಹೋಗುವ ಅಗತ್ಯವಿಲ್ಲದಿರುವಾಗ, ಸೀಮಿತ ವೇಗ, ಸ್ಥಳ, ಪಥಗಳ ಮೇಲೆ ಸೀಮಿತ ನಿಯಂತ್ರಣ ಸಾಕಾಗುವಲ್ಲಿ, ಸೀಮಿತ ಪರಿಮಾಣಗಳನ್ನು ಅಳೆಯುವ ಸರಳ ಉಪಕರಣಗಳು ಮಾತ್ರ ಇದ್ದಾಗ ಮತ್ತು ವೆಚ್ಚದ ಮೇಲೂ ಮಿತಿ ಇರುವಾಗ ಇವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಮಿಲಿಟರಿ ಕಣ್ಗಾವಲಿಗೆ, ಬೇಹುಗಾರಿಕೆಗೆ ಇವು ಸಾಕಾಗುವುದಿಲ್ಲ. ಮಿಲಿಟರಿ ಕಣ್ಗಾವಲಿಗೆ, ಬೇಹುಗಾರಿಕೆಗೆ ಬೇಕಾದ ಉಪಕರಣಗಳು ಭಾರವಿರುತ್ತವೆ. ವೆಚ್ಚದ ಮಿತಿಯೂ ಇವಕ್ಕಿರುವುದಿಲ್ಲ. ಹಾಗಾಗಿ ಹೆಚ್ಚಾಗಿ ಮಿಲಿಟರಿ ಬಳಕೆಗೆ ವಿಮಾನಗಳು ಅಥವಾ ಉಪಗ್ರಹಗಳನ್ನು ಬಳಸಲಾಗುತ್ತದೆ. ಚೀನಾ, ಯು.ಎಸ್ ಎರಡರ ಬಳಿಯೂ ಇಂತಹ ಹಲವಾರು ಮಿಲಿಟರಿ ವಿಮಾನಗಳು, ಉಪಗ್ರಹಗಳು ಇವೆ.
ಯು.ಎಸ್ ಸೇರಿದಂತೆ ಹೆಚ್ಚಿನ ದೇಶಗಳು ಹವಾಮಾನ ಅಥವಾ ವೈಜ್ಞಾನಿಕ ಅಧ್ಯಯನಕ್ಕೆ. ಬಲೂನುಗಳನ್ನು ಬಳಸುತ್ತವೆ. ಕಳೆದ ಒಂದು ವರ್ಷದಲ್ಲಿ ಯು.ಎಸ್ 1800 ಬಲೂನುಗಳನ್ನು ಹಾರಿಬಿಟ್ಟಿದೆ ಎಂದು ಒಂದು ವರದಿ ಹೇಳುತ್ತದೆ. ಇಂತಹ ಬಲೂನುಗಳಲ್ಲಿ ಬಿಸಿ ಹೀಲಿಯಂ ನಂತಹ ಹಗುರ ಅನಿಲಗಳನ್ನು ತುಂಬಿದ್ದು, ಅದರ ತೇಲು-ಚಲನೆ ಅದರ ಒಳಗಿನ ಮತ್ತು ಹೊರಗಿನ ಒತ್ತಡದ ವ್ಯತ್ಯಾಸದ ಮೇಲೆ ಅವಲಂಬಿಸಿರುತ್ತವೆ. ಪಥಧ ಮೇಲೆ ಸೀಮಿತ ನಿಯಂತ್ರಣವಿರುವುದರಿಂದ ಮತ್ತು ಅನಿಶ್ಚಿತತೆಯಿರುವುದರಿಂದ ತಮ್ಮ ಪಥದಿಂದ ದಾರಿ ತಪ್ಪಿ ಎಲ್ಲೋ ಹೋಗುವುದು ಅಥವಾ ಮೇಲೆ ಹೋಗುತ್ತಾ ಕುಸಿದು ಹೋಗುವುದು ಸಾಮಾನ್ಯ. ಈಗ ಕುಖ್ಯಾತವಾದ ಬಲೂನು ಹೀಗೆ ದಾರಿ ತಪ್ಪಿ ಬಂದಿದ್ದು ಎಂದು ಚೀನಾದ ಅಂಬೋಣ. ಚೀನಾದ ಬಾಹ್ಯಾಕಾಶದ ಮೇಲೂ ಇಂತಹ ಹಲವು ಯು.ಎಸ್ ಬಲೂನುಗಳು ಬಂದಿವೆ ಎಂಬ ಹೇಳಿಕೆಯನ್ನು ತೆಗೆದು ಹಾಕುವಂತಿಲ್ಲ.
ಅಲ್ಲದೆ ಹೆಚ್ಚಿನ ರಾಡಾರ್ ಗಳು ವಿಮಾನ, ಉಪಗ್ರಹ ದಂತಹ ದೊಡ್ಡ, ಭಾರಿ ತೂಕದ ಆಕಾಶಕಾಯಗಳನ್ನು ಮಾತ್ರ ಗುರುತಿಸಿ, ಹಿಂಬಾಲಿಸಬಲ್ಲವು, ತುಂಬಾ ಸಣ್ಣ ಗಾತ್ರದ, ಕಡಿಮೆ ತೂಕದ, ಬಹಳ ಕಡಿಮೆ ಅಥವಾ ಬಹಳ ಎತ್ತರದಲ್ಲಿ ಹಾರುವ ಆಕಾಶಕಾಯಗಳನ್ನು ಗುರುತಿಸಲಾರವು, ಹಿಂಬಾಲಿಸಲಾರವು. ಸಣ್ಣ ಗಾತ್ರದ, ಕಡಿಮೆ ತೂಕದ, ಬಹಳ ಕಡಿಮೆ ಎತ್ತರದಲ್ಲಿ ಹಾರುವ ಡ್ರೋನ್ ನಂತಹ ಆಕಾಶಕಾಯಗಳನ್ನು ಗೆರಿಲ್ಲಾ ಮತ್ತು ಮಿಲಿಟರಿ ಪಡೆಗಳೂ ಬಳಸಲಾರಂಭಿಸಿವೆ. ತುಂಬಾ ಸಣ್ಣ ಗಾತ್ರದ, ಕಡಿಮೆ ತೂಕದ, ಬಹಳ ಕಡಿಮೆ ಅಥವಾ ಬಹಳ ಎತ್ತರದಲ್ಲಿ ಹಾರುವ ಆಕಾಶಕಾಯಗಳನ್ನು ಗುರುತಿಸಬಲ್ಲ, , ಹಿಂಬಾಲಿಸಬಲ್ಲ ರಾಡಾರ್ ಗಳ ಮೇಲೆ ಸಂಶೋಧನಾ ಕೆಲಸ ನಡೆಯುತ್ತಿರಬಹುದು. 60 ಸಾವಿರ ಅಡಿಯಾಚೆ ಬಲೂನುಗಳ ಸೀಮಿತ ಮಿಲಿಟರಿ ಬಳಕೆಗೂ ಯು.ಎಸ್ ಮತ್ತು ಚೀನಾ ಸಂಶೋಧನಾ ಕೆಲಸ ನಡೆಸುತ್ತಿರಬಹುದು. ಯು.ಎಸ್ ಅಭಿವೃದ್ಧಿ ಪಡಿಸಿದ ರಾಡಾರ್ ವೈಜ್ಞಾನಿಕ ಬಲೂನನ್ನು ಗುರುತಿಸಿ, ಹಿಂಬಾಲಿಸಿರಬಹುದು. ಚೀನಾ ಅಭಿವೃದ್ಧಿ ಪಡಿಸಿದ ಮಿಲಿಟರಿ ಬಲೂನನ್ನು ಯು.ಎಸ್ ಅಭಿವೃದ್ಧಿ ಪಡಿಸಿದ ರಾಡಾರ್ ಗುರುತಿಸಿ, ಹಿಂಬಾಲಿಸಿರಬಹುದು. ಹಾಗಾಗಿ ಈ ಪ್ರಕರಣ ಬೆಳಕಿಗೆ ಬಂದಿರಬಹುದು. ಯು.ಎಸ್ ತನ್ನ ಹೊಸ ಸಾಮರ್ಥ್ಯವನ್ನು ಟಾಂ ಟಾಂ ಮಾಡಬಯಸುತ್ತಿರಬಹುದು ಅಥವಾ ಚೀನಾ ಮಿಲಿಟರಿ ಬಲೂನು ಅಭಿವೃದ್ಧಿ ಪಡಿಸಿದೆ ಎಂದು ಗಾಬರಿಯೂ ಆಗಿರಬಹುದು. ಅಥವಾ ಇದು ರೋಗದ ಮಟ್ಟ ಮುಟ್ಟಿರುವ ಯು.ಎಸ್ ಆಡಳಿತ ಮತ್ತು ಮಿಲಿಟರಿಯ ತನ್ನ ಅಧಿಪತ್ಯ ಕಳೆದು ಹೋಗುತ್ತಿದೆ ಎಂಬ ಬರಿಯ ತೀವ್ರ ಸಂಶಯಗ್ರಸ್ತತೆಯೂ ಆಗಿರಬಹುದು.
ಇದನ್ನು ಓದಿ: ಬ್ರೆಜಿಲ್ ನಲ್ಲಿ ಉಗ್ರ ಬಲಪಂಥೀಯ ದಂಗೆಗಳ ಹಿಂದೆ ಯಾರಿದ್ದಾರೆ?
Nord Stream-1 ಪೈಪ್ ಲೈನ್ ಬುಡಮೇಲು ಕೃತ್ಯದ ಬೆಳಕಿನಲ್ಲಿ ಇತರ ಸಾಧ್ಯತೆಗಳನ್ನು ಹಲವು ವೀಕ್ಷಕರು ಮುಂದಿಟ್ಟಿದ್ದಾರೆ. Nord Stream-1 ಪೈಪ್ ಲೈನ್ ಬುಡಮೇಲು ಕೃತ್ಯದ ಮತ್ತು ಇನ್ನೂ ಹಲವು ಯು.ಎಸ್ ಸರಕಾರದ ವೈಫಲ್ಯಗಳು, ಕುಕೃತ್ಯಗಳು (ಆರ್ಥಿಕ ಹಿಂಜರಿತದ ಆತಂಕ, ಒಹಿಯೊ ಬಳಿ ಘಾತಕ ರಾಸಾಯನಿಕ ಸಾಗಿಸುತ್ತಿದ್ದ ಸಾಗಾಣಿಕ ರೈಲಿನ ಭೀಕರ ದುರಂತ ಮತ್ತು ಆ ಮೇಲಿನ ಜನಗಳ ಬದುಕಿಗೆ ಪರಿಸರ ಹಾನಿ) ಬೆಳಕಿಗೆ ಬಂದಿದ್ದು ಅವುಗಳ ಕುರಿತು ಚರ್ಚೆಯಾದರೆ ಯು.ಎಸ್ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಚೀನಾ ಬಲೂನುಗಳನ್ನು ದೊಡ್ಡ ಸುದ್ದಿ ಮಾಡಿರಬಹುದು. ಯುದ್ಧದಲ್ಲಿ ಉಕ್ರೇನಿಗೆ ಹಿನ್ನಡೆ, ಈ ನಿಟ್ಟಿನಲ್ಲಿ ರಶ್ಯಾದ ಮೇಲೆ ಯು.ಎಸ್ ಒತ್ತಡದಿಂದ ಹೊರಿಸಿದ ದಿಗ್ಬಂಧನ ರಶ್ಯಾಕ್ಕಿಂತಲೂ ಹೆಚ್ಚು ಯುರೋಪಿನ ಜನತೆಯನ್ನು ಬಾಧಿಸುತ್ತಿರುವ ಕುರಿತು ಹೆಚ್ಚುತ್ತಿರುವ ಆಕ್ರೋಶವನ್ನು ಬೇರೆಡೆಗೆ ತಿರುಗಿಸಲು ಸಹ ‘ಚೀನಾ ಬಲೂನು’ ಬಳಕೆಯಾಗಿರಬಹುದು. ರಶ್ಯಾ-ಚೀನಾ ಗಳ ವಿರುದ್ಧ ಯುದ್ಧವನ್ನು ತೀವ್ರಗೊಳಿಸುವ ಸಲುವಾಗಿ ಚೀನಾ ವನ್ನು ರಾಕ್ಷಸೀಕರಿಸುವ, ಜನರನ್ನು ಮಾನಸಿಕವಾಗಿ ತಯಾರು ಮಾಡುವುದರ ಭಾಗವೂ ಆಗಿರಬಹುದು. Nord Stream-1 ಪೈಪ್ ಲೈನ್ ಬುಡಮೇಲು ಕೃತ್ಯದ ಕುರಿತು ಯು.ಎಸ್ ಅಥವಾ ಜಾಗತಿಕ ಮಾಧ್ಯಮಗಳಲ್ಲಿ ಅಷ್ಟೇನೂ ಚರ್ಚೆಯಾಗಿಲ್ಲ. ಆದರೆ ‘ಚೀನಾ ಬಲೂನು’ ಭಾರೀ ಚರ್ಚೆಗೆ ಓಳಗಾಯಿತು ಎಂಬುದರಿಂದ ಯು.ಎಸ್/ಜಾಗತಿಕ ಮಾಧ‍್ಯಮಗಳು ಎಷ್ಟರ ಮಟ್ಟಿಗೆ ಯು.ಎಸ್ ಆಳುವ ವರ್ಗಗಳ ನಿಯಂತ್ರಣದಲ್ಲಿವೆಯೆಂದು ತಿಳಿಯುತ್ತದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ