ಕೈ ಅಭ್ಯರ್ಥಿಗಳ ನಾಮಪತ್ರ ಅಸಿಂಧು ವಿಚಾರ : ಡಿಕೆಶಿಯದ್ದು ಅನಗತ್ಯ ಆರೋಪ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತವಾಯಿತೆ? ಇಲ್ಲವಲ್ಲ. ಮಾತನಾಡಲು ಯಾವುದೇ ವಿಷಯ ಇಲ್ಲದಿರುವುದರಿಂದ ಅನಗತ್ಯ ಆರೋಪವನ್ನು ಡಿಕೆ ಶಿವಕುಮಾರ್‌ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಸಿಂಧು ಮಾಡಲು ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಡಿಕೆ ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯಾರ ನಾಮಪತ್ರವೂ ತಿರಸ್ಕೃತವಾಗಿಲ್ಲದಿರುವುದೇ ಡಿಕೆ ಶಿವಕುಮಾರ್‌ ಅವರ ಆರೋಪ ಸುಳ್ಳು ಎನ್ನಲು ಸಾಕ್ಷಿ. ಶುಕ್ರವಾರವೇ ಎಲ್ಲಾ ಪ್ರಕ್ರಿಯೆ ಮುಗಿದಿದೆ ಎಂದು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿ ಎಲ್ಲರೂ ಬಿಎಸ್‌ ಯಡಿಯೂರಪ್ಪ ಅವರನ್ನು ಮುಗಿಸುತ್ತಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರನ್ನು ಹೇಗೆ ಮುಗಿಸಿದ್ದಾರೆ ಎಂದು ಗೊತ್ತಿಲ್ವಾ? ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಮುಗಿಸಿದರು. ಈ ಬಾರಿ ವರುಣಾದಲ್ಲಿ ಮುಗಿಸಲು ಏನು ಹುನ್ನಾರ ಮಾಡಿದ್ದಾರೆ ಎನ್ನುವುದು ಜಗತ್ತಿಗೆ ಗೊತ್ತಿದೆ. ಈ ರೀತಿ ಮಾತುಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

ಇದನ್ನೂ ಓದಿ : ಜನಮತ 2023 : ಡಿಕೆಶಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರ

ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲ :
ಲಿಂಗಾಯತ ಅಣೆಕಟ್ಟು ಒಡೆದು ಹರಿದು ಕಾಂಗ್ರೆಸ್ ಎಂಬ ಸಮುದ್ರ ಸೇರಲಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಉತ್ತರಿಸಿ, ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲ, ಮೊದಲು ಅದನ್ನು ನೋಡಿಕೊಳ್ಳಲಿ. 2013ರಲ್ಲಿ ಲಿಂಗಾಯತ ಸಮುದಾಯ ವಿಭಜನೆ ಆಗಿಲ್ಲ. ಅದು ರಾಜಕೀಯ ಪಕ್ಷವಾಯಿತು ಅಷ್ಟೇ. ಲಿಂಗಾಯತ ಮತದಾರರು ಯಾವಾಗಲೂ ಪ್ರಬುದ್ಧರಾಗಿದ್ದಾರೆ. ಲಿಂಗಾಯತರು ಜಾಗೃತರಾಗಿ ಮತ್ತಷ್ಟು ಗಟ್ಟಿಯಾಗಿದ್ದಾರೆ. ಲಿಂಗಾಯತರನ್ನು ಗಟ್ಟಿ ಮಾಡುವ ಕೆಲಸವನ್ನು ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಸವದತ್ತಿ ಸೇರಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸರಿ ಇಲ್ಲ ಎಂಬ ಆರೋಪ ವಿಚಾರವಾಗಿ ಮಾತನಾಡಿ, ಎಲ್ಲವೂ ಚುನಾವಣಾ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ. ಯಾವುದೇ ಪಕ್ಷವೂ ಏನೂ ಮಾಡಲು ಆಗುವುದಿಲ್ಲ. ಎಲ್ಲ ಪ್ರಕ್ರಿಯೆಗಳ ವಿಡಿಯೋ ಚಿತ್ರೀಕರಣ ಆಗಿದೆ ಎಂದರು.

ಸುದೀಪ್‌ ಪ್ರಚಾರದ ವಿವರ ಒಂದೆರಡು ದಿನದಲ್ಲಿ ಅಂತಿಮ :
ಸುದೀಪ್ ಮತ್ತೆ ಪ್ರಚಾರ ಮಾಡಲಿದ್ದು, ಸುದೀಪ್ ಪ್ರಚಾರದ ವಿವರ ಒಂದೆರಡು ದಿನದಲ್ಲಿ ಅಂತಿಮಗೊಳ್ಳಲಿದೆ ಎಂದ ಬಸವರಾಜ ಬೊಮ್ಮಾಯಿ ಅವರು, ಚುನಾವಣಾ ರೋಡ್ ಶೋ ನಾಳೆಯಿಂದ ಶುರುವಾಗಲಿದೆ. ಯಲಹಂಕದಿಂದ ರೋಡ್ ಶೋ ಆರಂಭವಾಗಲಿದೆ. ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು, ಅರಸೀಕೆರೆ ನಂತರ ಬೆಳಗಾವಿ ವಿಭಾಗ, ಗುಲಬರ್ಗಾ ವಿಭಾಗ ಹಾಗೂ ಮೈಸೂರು ಭಾಗಗಳಲ್ಲೂ ಚುನಾವಣಾ ಯಾತ್ರೆ ಹಾಗೂ ರೋಡ್ ಶೋಗಳನ್ನು ನಡೆಸಲಿದ್ದೇನೆ ಎಂದು ಹೇಳಿದರು.

ಇನ್ನು, ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸದ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಪಕ್ಷ ಎಲ್ಲವನ್ನೂ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ ಕೊನೆ ವಾರ ಮತ್ತು ಮೇ ಮೊದಲ ವಾರದಲ್ಲಿ ರಾಜ್ಯದ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ. ಚನ್ನಪಟ್ಟಣ, ಮೈಸೂರು, ಚಾಮರಾಜನಗರ, ರಾಯಚೂರು, ಬೆಳಗಾವಿ, ದಾವಣಗೆರೆ ಸೇರಿ ಹಲವೆಡೆ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *