ಗುವಾಹಟಿ: ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡುವ ಕ್ರಮ ಉತ್ತರ ಪ್ರದೇಶ ರಾಜ್ಯದಂತೆಯೇ ಅಸ್ಸಾಂನಲ್ಲಿಯೂ ನಡೆಯುತ್ತಿದ್ದು, ಮನೆಗಳನ್ನು ಧ್ವಂಸ ಮಾಡುವ ಕ್ರಮವನ್ನು ಪ್ರಶ್ನಿಸಿ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಗುವಾಹಟಿ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮನೆ ಧ್ವಂಸ ಪ್ರಕರಣದ ವಿಚಾರಣೆ ವೇಳೆ ಅಪರಾಧ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ಮನೆಯನ್ನು ಧ್ವಂಸ ಮಾಡುವುದು ‘ಗ್ಯಾಂಗ್ ವಾರ್’ಗೆ ಸಮ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಛಾಯಾ ಮತ್ತು ನ್ಯಾಯಮೂರ್ತಿ ಸೌಮಿತ್ರಾ ಸೈಕಿಯಾ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಉತ್ತರಪ್ರದೇಶದ ಮಾದರಿಯಲ್ಲಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರ ಮನೆಗಳ ಧ್ವಂಸಕ್ಕೆ ಕೈ ಹಾಕಿದ್ದ ಅಸ್ಸಾಂ ಬಿಜೆಪಿ ಸರಕಾರಕ್ಕೆ ವಿಭಾಗೀಯ ಪೀಠ ಗರಂ ಆಗಿದ್ದು, ”ಯಾವುದೇ ವ್ಯಕ್ತಿಯ ಆಸ್ತಿ ಅಥವಾ ಮನೆಯನ್ನು ಧ್ವಂಸ ಮಾಡುವುದಕ್ಕೆ ಮೊದಲು ಅನುಮತಿ ಪಡೆದಿರಬೇಕು. ಎಸ್‌ಪಿ, ಐಜಿ, ಡಿಐಜಿಯಾಗಲಿ ಕಾನೂನು ಮೀರಿ ಯಾರು ಕೆಲಸ ಮಾಡಬಾರದು. ಅಧಿಕಾರ ಇದೆ ಎಂದ ಮಾತ್ರಕ್ಕೆ ನಿಯಮ ಮೀರಿ ಯಾರ ಆಸ್ತಿಯನ್ನು ಧ್ವಂಸ ಮಾಡಲು ಸಾಧ್ಯವಿಲ್ಲ. ಇಂಥ ಕಾರ್ಯಗಳಿಗೆ ಅನುಮತಿ ನೀಡಿದರೆ ದೇಶದಲ್ಲಿ ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ” ಎಂದು ಅಭಿಪ್ರಾಯ ಪಟ್ಟರು.
ಆರೋಪಿಗಳ ಸ್ವತ್ತು ಧ್ವಂಸ ಮಾಡುವುದು ಯಾವ ಕಾನೂನಿನಲ್ಲಿದೆ? ಯಾವ ಆಧಾರದಲ್ಲಿ ಬುಲ್ಡೋಜರ್ ನುಗ್ಗಿಸುತ್ತೀರಿ? ಅಂತಹ ಯಾವುದಾದರೂ ನಿಯಮ ಅಥವಾ ಕಾನೂನು ರೂಪಿಸಿದ್ದರೆ ತೋರಿಸಿ ಎಂದು ವಿಭಾಗೀಯ ಪೀಠ ಪ್ರಶ್ನಿಸಿದೆ.
”ನನ್ನ ವೃತ್ತಿ ಜೀವನದಲ್ಲಿ ಇಂಥ ಕಾರ್ಯಾಚರಣೆಗಳನ್ನು ಸಿನಿಮಾದಲ್ಲಿ ಮಾತ್ರ ನೋಡಿರುವೆ” ಎಂದು ಹೇಳಿರುವ ನ್ಯಾಯಮೂರ್ತಿ ಛಾಯಾ, ಹಿಂದಿ ಸಿನಿಮಾದಲ್ಲಿ ಗ್ಯಾಂಗ್‌ವಾರ್ ದೃಶ್ಯ ಉಲ್ಲೇಖಿಸಿ ಕಾರ್ಯಾಚರಣೆಯ ಕ್ರಮವನ್ನು ಪ್ರಶ್ನಿಸಿದರು.
ಘಟನೆಯ ಹಿನ್ನೆಲೆ
2022ರ ಮೇ ತಿಂಗಳಲ್ಲಿ ಅಸ್ಸಾಂನಲ್ಲಿ ಅಪರಾಧ ಪ್ರಕರಣದ ಹಿನ್ನೆಲೆಯಲ್ಲಿ ಮೀನು ವ್ಯಾಪಾರಿ ಶಫಿಕ್ ಉಲ್ಲಾಇಸ್ಲಾಂ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಕಾರಾಗೃಹದಲ್ಲೇ ಆರೋಪಿ ಮೃತಪಟ್ಟಿದ್ದ. ಇದರಿಂದ ರೊಚ್ಚಿಗೆದ್ದ ಜನ ನಗಾಂವ್ ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದ್ದರು. ಮರುದಿನವೇ ಜಿಲ್ಲಾಡಳಿತ, ಆರೋಪಿ ಶಫಿಕ್ ಉಲ್ಲಾ ಸೇರಿ ಆರು ಮಂದಿಯ ಮನೆಗಳನ್ನು ಧ್ವಂಸಗೊಳಿಸಿತ್ತು.