ಇರಾನ್‌ನ ಮಹಿಳಾ ಹೋರಾಟಗಾರ್ತಿ ನರ್ಗಿಸ್ ಮೊಹಮ್ಮದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ-2023

ಸ್ಟಾಕ್‌ಹೋಮ್: ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸುದೀರ್ಘ ಹೋರಾಟಕ್ಕಾಗಿ ಇರಾನ್‌ನ ಪ್ರಮುಖ ಮಹಿಳಾ ಹಕ್ಕುಗಳ ವಕೀಲರಾದ ನರ್ಗಿಸ್‌ ಮೊಹಮ್ಮದಿ ಅವರು 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ದೇಶದ ಆಡಳಿತದ ವಿರುದ್ಧ ಅಪಪ್ರಚಾರ ಮಾಡಿದ ಆರೋಪದ ಮೇಲೆ ನರ್ಗಿಸ್ ಅವರು ಟೆಹ್ರಾನ್‌ನ ಎವಿನ್ ಜೈಲಿನಲ್ಲಿ ಅನೇಕ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇರಾನ್‌ನಲ್ಲಿ ಮಹಿಳೆಯರ ದಬ್ಬಾಳಿಕೆಯ ವಿರುದ್ಧದ ಹೋರಾಟಕ್ಕಾಗಿ ಮತ್ತು ಎಲ್ಲರಿಗೂ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುವ ಹೋರಾಟಕ್ಕಾಗಿ ಅವರನ್ನು ಸಮಿತಿಯು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ.

ಇರಾನ್‌ನಲ್ಲಿ 1979 ರ ಕ್ರಾಂತಿಯ ನಂತರ, ಅಯತೊಲ್ಲಾ ರುಹೊಲ್ಲಾ ಖೊಮೇನಿ ನೇತೃತ್ವದ ಧಾರ್ಮಿಕ ಗುರುಗಳು ಸರ್ಕಾರದ ಮೇಲೆ ಹಿಡಿತ ಸಾಧಿಸಿದರು. ಇದರ ನಂತರ ದೇಶದ ಆಡಳಿತವು ಮಹಿಳೆಯರ ಮೇಲೆ ಹಲವು ನಿರ್ಬಂಧಗಳನ್ನು ಹೇರಿ ದಬ್ಬಾಳಿಕೆಯ ಕಾನೂನುಗಳನ್ನು ಪರಿಚಯಿಸಿತು. ನೊಬೆಲ್

ಇದನ್ನು ವಿರೋಧಿಸಿ ಇರಾನಿನ ಮಹಿಳೆಯರು ಆಡಳಿತದ ಹಿಂಸಾಚಾರದ ಹೊರತಾಗಿಯೂ ಪ್ರತಿಭಟನೆಯನ್ನು ಮುಂದುವರೆಸಿದರು. ಇಂತಹ ಹೋರಾಟಕ್ಕೆ 1990 ರ ದಶಕದ ಆರಂಭದಲ್ಲಿ ನರ್ಗಿಸ್ ಮೊಹಮ್ಮದಿ ಅವರು ವಿದ್ಯಾರ್ಥಿಯಾಗಿದ್ದಾಗ ಸೇರಿಕೊಂಡರು.

ಇದನ್ನೂ ಓದಿ: ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನ್ಯೂಸ್‌ ಕ್ಲಿಕ್ ಸಂಸ್ಥಾಪಕ; ಸೋಮವಾರ ವಿಚಾರಣೆ

ಇರಾನ್‌ನ ಝಂಜಾನ್‌ ನಗರದಲ್ಲಿ ಜನಿಸಿದ ನರ್ಗೀಸ್ ಮೊಹಮ್ಮದಿ ಅವರು ಭೌತಶಾಸ್ತ್ರದಲ್ಲಿ ಪದವಿ ಪಡೆದು ಇಂಜಿನಿಯರ್ ಆಗಿ ಉದ್ಯೋಗ ಪಡೆದ ನಂತರ ಮಹಿಳಾ ಹಕ್ಕುಗಳಿಗಾಗಿ ಆಂದೋಲನ ಪ್ರಾರಂಭಿಸಿದರು. ಜೊತೆಗೆ ಸುಧಾರಣಾ ಮನೋಭಾವದ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯಲು ಪ್ರಾರಂಭಿಸಿದರು. 1998 ರಲ್ಲಿ ಇರಾನ್ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಅವರನ್ನು ಮೊದಲ ಬಾರಿಗೆ ಬಂಧಿಸಲಾಯಿತು.

2003 ರ ಹೊತ್ತಿಗೆ ಅವರು ನೊಬೆಲ್ ವಿಜೇತೆ ಶಿರಿನ್ ಇಬಾದಿ ಅವರೊಂದಿಗೆ ಟೆಹ್ರಾನ್‌ನಲ್ಲಿ ಮಾನವ ಹಕ್ಕುಗಳ ರಕ್ಷಕರ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಶಿರಿನ್ ಇಬಾದಿ ಅವರಿಗೆ ಆ ವರ್ಷವಷ್ಟೆ ನೊಬೆಲ್ ಘೋಷಣೆಯಾಗಿತ್ತು.

ನರ್ಗೀಸ್‌ ಅವರನ್ನು ಈ ವರೆಗೆ 13 ಬಾರಿ ಬಂಧಿಸಲಾಗಿದೆ ಮತ್ತು ಐದು ಸಂದರ್ಭಗಳಲ್ಲಿ ಅಪರಾಧಿ ಎಂದು ಘೋಷಿಸಲಾಗಿದೆ. ಅವರಿಗೆ ಒಟ್ಟು 31 ವರ್ಷಗಳ ಜೈಲು ಶಿಕ್ಷೆ ಮತ್ತು 154 ಛಡಿ ಏಟುಗಳನ್ನು ವಿಧಿಸಲಾಗಿದೆ.

“ಮಹಿಳೆ-ಜೀವನ-ಸ್ವಾತಂತ್ರ್ಯ” ಎಂಬ ಘೋಷವಾಕ್ಯದೊಂದಿಗೆ 2022ರಲ್ಲಿ ಇರಾನ್‌ನಲ್ಲಿ ಪ್ರಾರಂಭವಾದ ಮಹಿಳಾ ಹೋರಾಟವು ಜಾಗತಿಕವಾಗಿ ಮನ್ನಣೆ ಪಡೆಯಲು ಆರಂಭವಾದಾಗ ನರ್ಗೀಸ್ ಅವರನ್ನು ದೇಶದ ರಾಜಧಾನಿ ಟೆಹ್ರಾನ್‌ನ ಅತ್ಯಂತ ಕುಖ್ಯಾತ ಜೈಲಿನಲ್ಲಿ ಬಂಧಿಸಿ ಇಡಲಾಯಿತು. ಜೈಲಿನಲ್ಲಿ ಕೂಡಾ ಹೋರಾಟ ಮುಂದುವರೆಸಿದ ಕಾರಣಕ್ಕೆ ಅವರಿಗೆ ಸಂದರ್ಶಕರು ಮತ್ತು ಫೋನ್ ಕರೆಗಳನ್ನು ನಿಷೇಧಿಸಲಾಯಿತು.

ವಿಡಿಯೊ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ

Donate Janashakthi Media

Leave a Reply

Your email address will not be published. Required fields are marked *