ನವದೆಹಲಿ: ನಾಳೆಯಿಂದ ದೇಶಾದ್ಯಂತ 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರಿಗೆ ಕೊರೊನಾ ಲಸಿಕೆ ಹಾಕುವ ಮೂರನೇ ಹಂತದ ಅಭಿಯಾನ ಆರಂಭಗೊಳ್ಳಲಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಳೆಯಿಂದ ಕೊರೊನಾ ಲಸಿಕೆಗಳು ಸಿಗುವುದಿಲ್ಲ.
‘ದೆಹಲಿಯಲ್ಲಿ ಕೊರೊನಾ ಲಸಿಕೆ ಇಲ್ಲ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬೇಕಿರುವ ಹಿನ್ನಲೆಯಲ್ಲಿ ಸಭೆ ಕರೆಯಲಾಗಿತ್ತು.
ಇದನ್ನು ಓದಿ: ಲಸಿಕೆ ಕೊರತೆ : 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಬರಬೇಡಿ
ಈ ಸಭೆಯಲ್ಲಿ ಲಸಿಕೆಗಳ ಅಗತ್ಯ, ಪೂರೈಕೆ, ವಿತರಣೆ, ನಿರ್ವಹಣೆ ಬಗ್ಗೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅರವಿಂದ ಕೇಜ್ರಿವಾಲ್, ‘ಅಗತ್ಯ ಇರುವಷ್ಟು ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಲಸಿಕೆ ಪೂರೈಕೆ ಬಳಿಕವಷ್ಟೆ ತಾವು ಜನರಿಗೆ ವ್ಯಾಕ್ಸಿನ್ ನೀಡಲು ಸಾಧ್ಯ’ ಎಂದು ಅಸಹಾಯಕತೆ ತೋಡಿಕೊಂಡಿದ್ದರು.
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಲಕ್ಷಣಗಳು ಮಾರಕವಾಗಿ ಪರಣಿಮಿಸಿದೆ. ದೆಹಲಿಯಲ್ಲಂತೂ ಪ್ರತಿ ದಿನ ಸುಮಾರು 25 ಸಾವಿರ ಜನರು ಸೋಂಕು ಪೀಡಿತರಾಗುತ್ತಿರುವ ವರದಿಗಳು ಬರುತ್ತಿವೆ.
ಇಂದು ಮತ್ತೊಮ್ಮೆ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೆಹಲಿಯಲ್ಲಿ ಕೊರೋನಾ ಲಸಿಕೆ ಇಲ್ಲ. ಕೇಂದ್ರ ಸರ್ಕಾರ ಲಸಿಕೆ ಪೂರೈಕೆ ಬಳಿಕವಷ್ಟೆ ತಾವು ಜನರಿಗೆ ವ್ಯಾಕ್ಸಿನ್ ನೀಡಲು ಸಾಧ್ಯ ಎಂದು ಪುನರುಚ್ಛರಿಸಿದ್ದಾರೆ.
ಇದನ್ನೂ ಓದಿ : ಲಸಿಕೆ! ಲಸಿಕೆ!! ಲಸಿಕೆ!!!
‘ಸರಕಾರವು ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳ ತಲಾ 67 ಲಕ್ಷ ಡೋಸ್‌ಗಳಿಗಾಗಿ ಬೇಡಿಕೆ ಸಲ್ಲಿಸಿದೆ. ಅಗತ್ಯವಿರುವಷ್ಟು ಲಸಿಕೆಗಳು ಪೂರೈಕೆಯಾದರೆ, ಮುಂದಿನ ಮೂರು ತಿಂಗಳೊಳಗೆ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಗುರಿ ಹೊಂದಿದ್ದೇವೆ‘ ಎಂದು ಕೇಜ್ರಿವಾಲ್ ತಿಳಿಸಿದರು.
ಮೂರನೇ ಹಂತದ ಲಸಿಕಾ ಅಭಿಯಾನಕ್ಕೆ ನಿಗದಿತವಾಗಿ ನಾಳೆ ಅಂದರೆ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದು ದೇಶದಾದ್ಯಂತ ಆರಂಭವಾಗಲಿದೆ. ದೆಹಲಿ ಸೇರಿದಂತೆ ಕೆಲವು ರಾಜ್ಯಗಳಿಗೆ ಲಸಿಕೆ ಪೂರೈಕೆಯಾಗದ ಕಾರಣ, ಆ ರಾಜ್ಯಗಳಲ್ಲಿ ಮೂರನೇ ಹಂತದ ಲಸಿಕಾ ಅಭಿಯಾನವನ್ನು ಮುಂದೂಡಲಾಗಿದೆ.