ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ಬೆಂಗಳೂರು: ರಾಜ್ಯ ಸರ್ಕಾರವು, ಭದ್ರತಾ ಕಾರಣಕ್ಕೆ ನಿರ್ದಿಷ್ಟ ಸ್ಥಳದಲ್ಲೇ ಬೈಟ್ ಪಡೆಯಲು ಸೂಚನೆ ನೀಡಲಾಗಿತ್ತೇ ವಿನಃ ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ ಎಂದು ಸ್ಪಷ್ಟನೆ ನೀಡಿದೆ.

ವಾರ್ತಾ ಇಲಾಖೆ ಅನುಮತಿ ನೀಡಿರುವ ಪತ್ರಕರ್ತರನ್ನು ಹೊರತುಪಡಿಸಿ, ಪತ್ರಿಕಾ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ವಿಧಾನಸೌಧಕ್ಕೆ ಪ್ರವೇಶವಿಲ್ಲ ಎಂದು ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಪತ್ರಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಕಾರ್ಯದರ್ಶಿ ಡಾ. ಕೆ. ಜಿ. ಜಗದೀಶ ಅವರು ಮಾರ್ಚ್ 5 ರಂದು ಉತ್ತರ ನೀಡಿದ್ದಾರೆ.

ಇದನ್ನೂ ಓದಿ: 4 ತಿಂಗಳಿಂದ ವೇತನವಿಲ್ಲ: ಸಂಕಷ್ಟದಲ್ಲಿ ಅತಿಥಿ ಶಿಕ್ಷಕರು

ವಿಧಾನಸೌಧ ಮತ್ತು ಸಭಾಂಗಣ ಸಂಕೀರ್ಣದ ಒಳಭಾಗದಲ್ಲಿ ಮಾಧ್ಯಮ ಮಾನ್ಯತಾ ಕಾರ್ಡ್ ಹೊಂದಿರುವ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮಗಳು, ಕಾರ್ಯಾಗಾರಗಳು ಹಾಗೂ ಸಭೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಆದ್ದರಿಂದ, ಈ ಕುರಿತು ಪ್ರತ್ಯೇಕ ಅನುಮತಿ ಆದೇಶ ನೀಡುವ ಅಗತ್ಯವಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮುಂದುವರಿದು, ಫೆಬ್ರವರಿ 18ರಂದು ಕರ್ನಾಟಕ ವಿಧಾನಸಭೆಯ ಸಭಾಪತಿಯವರು ನೀಡಿದ ಪತ್ರದಂತೆ, ಎಲೆಕ್ಟ್ರಾನಿಕ್ ಮತ್ತು ಪ್ರಿಂಟ್ ಮೀಡಿಯಾದ ಪ್ರತಿನಿಧಿಗಳಿಗೆ ಶಾಸಕರ ಭವನದ (ಶಾಸಕ ಭವನ) ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ಭದ್ರತೆಯ ಹಿತದೃಷ್ಟಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ನಿಗದಿಪಡಿಸಲಾಗಿರುವ ಸ್ಥಳದಲ್ಲಿ ಮಾತ್ರ ವ್ಯವಸ್ಥಿತವಾಗಿ ಎಲೆಕ್ಟ್ರಾನಿಕ್ ಮಾಧ್ಯಮದವರು ಸಂಬಂಧಪಟ್ಟವರಿಂದ ಹೇಳಿಕೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ವಾರ್ತಾ ಇಲಾಖೆಗೆ ಜನವರಿ 9ರಂದು ಪತ್ರ ಬರೆದಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳು, ಸಚಿವ ಪರಿಷತ್ತಿನ ಕಚೇರಿಯ ಹಿತದೃಷ್ಟಿಯಿಂದ ಹಾಗೂ ಭದ್ರತೆಯ ಕಾರಣದಿಂದ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದ ಪೋರ್ಟಿಕೋ ಬಳಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಹೇಳಿಕೆಗಳನ್ನು ಪಡೆಯಬೇಕು ಎಂದು ತಿಳಿಸಿದ್ದರು. ಅಲ್ಲದೆ, ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರು ವಿಧಾನಸೌಧದ ಒಳಗೆ ಪ್ರವೇಶಿಸುವಾಗ ಅವರನ್ನು ಹಿಂಬಾಲಿಸದಂತೆ ಮಾಧ್ಯಮದವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ಪತ್ರಿಕಾ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ ಪ್ರತಿನಿಧಿಗಳಿಗೆ ವಿಧಾನಸೌಧ ಪ್ರವೇಶಕ್ಕೆ ನಿರ್ಬಂಧ ಹೇರಿ ಹೊರಡಿಸಿದ್ದ ಈ ಆದೇಶದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮಗಳಿಗೆ ನಿರ್ಬಂಧ ಹೇರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಇದನ್ನೂ ನೋಡಿ: ಗೋಷ್ಠಿ – 02 |ಹೆಣ್ಣು ಮಕ್ಕಳ ಕಣ್ಮರೆ | ಮಾನಗೇಡಿ ಹತ್ಯೆ ಮತ್ತು ಜಾತಿ ದೌರ್ಜನ್ಯ – ಅಂತರ ಸಂಬಂಧ

Donate Janashakthi Media

Leave a Reply

Your email address will not be published. Required fields are marked *