ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ, ಇದು ರಾಜ್ಯದ ಬಡ ಜನರ ಹಸಿವಿನ ಪ್ರಶ್ನೆ: ಸಿ.ಟಿ.ರವಿಗೆ ದಿನೇಶ್‌ ತಿರುಗೇಟು

ಬೆಂಗಳೂರು: ಬಿಜೆಪಿಗೆ ಕರ್ನಾಟಕದ ಜನರ ಮೇಲೆ ಕಾಳಜಿ ಇದ್ದಿದ್ದರೆ ರಾಜ್ಯಕ್ಕೆ ಅಕ್ಕಿ ಮಾರಾಟ ಸ್ಥಗಿತಗೊಳಿಸಿರುವುದನ್ನ ವಾಪಸ್ ಪಡೆಯಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ. ಈ ಕುರಿತಂತೆ ಬೆಂಗಳೂರಿನಲ್ಲಿ ನಿನ್ನೆ ಜೂ.15 ಗುರುವಾರ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗುಂಡೂರಾವ್, ಕೇಂದ್ರ ಸರ್ಕಾರದ ಫುಲ್ ಕಾರ್ಪೋರೇಷನ್ ಅಕ್ಕಿ ಮಾರಾಟ ಸ್ಥಗಿತಗೊಳಿಸಿದ್ದು ಏಕೆ ಎಂದು ಪ್ರಶ್ನಿಸಿದರು.‌ ಸಿ.ಟಿ.ರವಿಯವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸೋದನ್ನ ಬಿಟ್ಟು ಅವರ ಕೇಂದ್ರ ನಾಯಕರ ಜೊತೆ ಮಾತಾನಾಡುವ ಧೈರ್ಯ ತೋರಿಸಲಿ. 10 ಕೆ.ಜಿ ಅಕ್ಕಿ ಬಡವರಿಗೆ ಕೊಡಲು ಕಾಂಗ್ರೆಸ್ ಬದ್ಧವಾಗಿದೆ. ಆದರೆ, ನಮಗೆ ಅಕ್ಕಿ ಸಿಕ್ತಿಲ್ಲ ಅಂತಾ ಬಿಜೆಪಿ ನಾಯಕರು ಖುಷಿಯಾಗಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಪ್ರಶ್ನೆಯಲ್ಲ. ಬಡವರ ಹಸಿವನ್ನ ನೀಗಿಸುವ ಪ್ರಶ್ನೆ. ಬಿಜೆಪಿಗೆ ಮತ ಹಾಕಿದ ಶೇ.35ರಷ್ಟು ಜನರಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೂ ನಾವು ಅಕ್ಕಿ ಕೊಡ್ತೇವೆ. ಇದನ್ನ ಅರಿತುಕೊಂಡು ಸಿ.ಟಿ.ರವಿ ಮಾತನಾಡಬೇಕು ಎಂದು ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರ್ಕಾರ ಕೊಕ್ಕೆ – ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ 5 ಕೆ.ಜಿ ಅಕ್ಕಿ ದೊರೆಯುತ್ತಿರುವುದು ಮೋದಿಯವರಿಂದಲ್ಲ. ಯು.ಪಿ.ಎ – 2 ಸರ್ಕಾರವಿದ್ದಾಗ ಆಹಾರ ಭದ್ರತೆ ಬಿಲ್ ತಂದಿದ್ದರಿಂದ ಇಂದು ಬಡವರಿಗೆ ಅಕ್ಕಿ ದೊರೆಯುತ್ತಿದೆ. ಸಿ.ಟಿ ರವಿ ಅವರಿಗೆ ರಾಜ್ಯದ ಜನರ ಮೇಲೆ ಕಾಳಜಿ ಇದ್ದಿದ್ದರೆ ಕೇಂದ್ರ ನಾಯಕರ ಜೊತೆ ಮಾತಾಡಲಿ. ಕರ್ನಾಟಕದ 25 ಸಂಸದರು ಏನು ಮಾಡ್ತಿದ್ದಾರೆ. ಮೋದಿ ಅವರು ಒಪ್ಪುತ್ತಾರೋ ಇಲ್ವೋ, ಆದ್ರೆ ರಾಜ್ಯದ ಜನರ ಪರ ಒಂದು ಪ್ರಯತ್ನವನ್ನಾದ್ರೂ ಬಿಜೆಪಿ ನಾಯಕರು ಮಾಡಬೇಕಲ್ವಾ ಎಂದು ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.  ಅಗತ್ಯ ಅಕ್ಕಿ ಖರೀದಿಗೆ ಕಾಂಗ್ರೆಸ್ ಸರ್ಕಾರ ತನ್ನ ಶಕ್ತಿ ಮೀರಿ ಪ್ರಯತ್ನಿಸಲಿದೆ. ಖಾಸಗಿ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸುವುದು ಅಷ್ಟು ಸುಲಭವಲ್ಲ. ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆದಿದೆ. ಬಡವರ ಪರವಾಗಿ ನ್ಯಾಯ ದೊರಕಿಸಲು  ನಮ್ಮ ಪ್ರಯತ್ನ ಮುಂದುವರಿಸಲು ನಿರ್ಧರಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಚರ್ಚೆ ನಡೆದಿದೆ. ಛತ್ತಿಸಗಡ, ತೆಲಂಗಾಣ, ಆಂಧ್ರ ಪ್ರದೇಶದ ಜೊತೆ ಚರ್ಚೆ ನಡೆಸಲಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *