ಜಾತಿಗಣತಿ ಸಮೀಕ್ಷೆಗೆ ವಿರೋಧವಿಲ್ಲ; ಇಚ್ಛಾಶಕ್ತಿಯ ಬಗ್ಗೆ ನಮಗೆ ಗೊಂದಲ: ಬಿ.ವೈ.ವಿಜಯೇಂದ್ರ

ಕಲಬುರಗಿ: ‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ವಿರೋಧವಿಲ್ಲ. ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಬಗ್ಗೆ ನಮಗೆ ಗೊಂದಲವಿದೆ. ರಾಜ್ಯದ ಜನರಿಗೆ ಅನುಮಾನವಿದೆ’ ಎಂದು ಸೆಪ್ಟೆಂಬರ್‌ 30ರಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಇಚ್ಛಾಶಕ್ತಿ

‘ರಾಜ್ಯ ಸರ್ಕಾರ ಈ ಸಮೀಕ್ಷೆ ಹೆಸರಲ್ಲಿ ಪಗಡೆ ಆಟವಾಡುತ್ತಿದೆ. ಹಿಂದೂ ಸಮಾಜ ಒಡೆಯುವ ಕೆಲಸಕ್ಕೆ ಕೈಹಾಕಿದೆ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಸಮೀಕ್ಷೆ ನಡೆಸುತ್ತಿದ್ದಾರೋ ಅಥವಾ ಪ್ರಾಮಾಣಿಕವಾಗಿ ಹಿಂದುಳಿದ, ಶೋಷಿತ ಸಮುದಾಯಗಳ ನ್ಯಾಯ ಒದಗಿಸಲು ಇದನ್ನು ನಡೆಸುತ್ತಿದ್ದಾರೋ ತಿಳಿಯುತ್ತಿಲ್ಲ. ಅದರಲ್ಲಿ ಸರ್ಕಾರದ ಪ್ರಾಮಾಣಿಕ ಕಳಕಳಿ ನಮಗೂ ಕಾಣುತ್ತಿಲ್ಲ. ಜನರಿಗೂ ಕಾಣುತ್ತಿಲ್ಲ’ ಎಂದು ಟೀಕಿಸಿದರು.

ಇದನ್ನೂ ಓದಿ: ಹುಕ್ಕೇರಿ | ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ರಮೇಶ ಕತ್ತಿ ನೇತೃತ್ವದ ಪ್ಯಾನಲ್‌ 15 ಸ್ಥಾನಗಳಿಗೆ ಜಯ

‘ಸ್ವಾತಂತ್ರ್ಯದ ನಂತರ ಕೇಂದ್ರ ಸರ್ಕಾರ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡು ಜನಗಣತಿ ಜೊತೆಗೆ ಜಾತಿಗಣತಿಗೂ ಮುಂದಾಗಿದೆ. ಹಿಂದೆ ಯುಪಿಎ ಸರ್ಕಾರ ಈ ಬಗೆಗೆ ನಿರ್ಧರಿಸಿದ್ದರೂ, ರಾಹುಲ್‌ ಗಾಂಧಿ ಅವರೇ ಅದನ್ನು ವಿರೋಧಿಸಿದ್ದರು’ ಎಂದರು.

‘ಕ್ರಿಶ್ಚಿಯನ್‌ ಲಿಂಗಾಯತರು, ಜೈನ ಪಂಚಮಸಾಲಿಗಳು ಇದ್ದಾರಾ?’

‘ರಾಜ್ಯದಲ್ಲಿ ಕ್ರಿಶ್ಚಿಯನ್‌ ಲಿಂಗಾಯತರು, ಜೈನ ಪಂಚಮಸಾಲಿಗಳು ಇದ್ದಾರಾ, ಕ್ರಿಶ್ಚಿಯನ್ ದಲಿತರು ಇದ್ದಾರಾ’ ಎಂದು ಸಂಸದ ಗೋವಿಂದ ಕಾರಜೋಳ ಪ್ರಶ್ನಿಸಿದರು.

‘ಯಾವುದೇ ವ್ಯಕ್ತಿ ಒಮ್ಮೆ ಧರ್ಮಾಂತರವಾಗುವುದು ಅವರ ಹಕ್ಕು. ಆದರೆ, ಧರ್ಮಾಂತರವಾದ ದಿನದಿಂದಲೇ ಅವರ ಪೂರ್ವಾಶ್ರಮದ ಹಂಗುಗಳೆಲ್ಲ ತೊರೆದು ಹೋಗುತ್ತವೆ. ಆ ವ್ಯಕ್ತಿ ಕ್ರಿಶ್ಚಿಯನ್‌ ಆಗಿದ್ದರೆ, ಕ್ರಿಶ್ಚಯನ್‌ ಧರ್ಮ, ಇಸ್ಲಾಂಗೆ ಧರ್ಮಾಂತರ ಆಗಿದ್ದರೆ ಇಸ್ಲಾಂ ಧರ್ಮದವರಾಗುತ್ತಾರೆ’ ಎಂದರು.

‘ಈ ಸರ್ಕಾರಕ್ಕೆ ಹಿಂದುಳಿದವರು, ದಲಿತರ ಬಗೆಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ₹180 ಕೋಟಿ ವೆಚ್ಚ ಮಾಡಿ ತಯಾರಿಸಿದ ಕಾಂತರಾಜು ವರದಿ ಯಾಕೆ ಕಸದ ಬುಟ್ಟಿಗೆ ಎಸೆದರು? ಗೋಪ್ಯವಾಗಿ ಇಡಬೇಕಿದ್ದ ವರದಿಯನ್ನು ಸೋರಿಕೆ ಮಾಡಿದ್ದರು ಯಾರು’ ಎಂದು ಪ್ರಶ್ನಿಸಿದರು.

ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹಣ ಬಲ, ತೋಳ್ಬಲ, ಜನ ಬಲ ಬಳಸಿಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ – ಸುಭಾಷಿಣಿ ಅಲಿ

Donate Janashakthi Media

Leave a Reply

Your email address will not be published. Required fields are marked *