ಮುಂಬೈ: ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ.. ಯಾರೂ ಶಾಶ್ವತ ಶತ್ರುಗಳಲ್ಲ, ನಾನು ಯಾವುದೇ ವೈಯಕ್ತಿಕ ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.
ಮುಂಬೈನ ಬೀಡ್ನಲ್ಲಿ ಸೋಮವಾರ ಆಗಸ್ಟ್-28 ರಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾತ್ಯತೀತ ಚಿಂತನೆಗಳನ್ನು ಅನುಸರಿಸುತ್ತಿರುವ ಮಹಾರಾಷ್ಟ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹೆಚ್ಚಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಅಜಿತ್ ಪವಾರ್ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ
ಹತ್ತು ದಿನಗಳ ಹಿಂದೆಯಷ್ಟೇ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಶರದ್ ಪವಾರ್ ಬೀಡ್ನಲ್ಲಿ ರಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಪವಾರ್, ತಮ್ಮನ್ನು ಸ್ವಾಗತಿಸಿದ್ದಕ್ಕಾಗಿ ಶಿವಸೇನೆ, ಬಿಜೆಪಿಯ ಸ್ಥಳೀಯ ನಾಯಕರು ಹಾಗೂ ಎನ್‌ಸಿಪಿಯ ಇತರ ಮಂತ್ರಿಗಳಿಗೆ ಧನ್ಯವಾದ ತಿಳಿಸಿದರು. ಪ್ರಧಾನಿ ಮೋದಿಯವರ ವರ್ಚಸ್ಸು ದೇಶದಾದ್ಯಂತ ಕಾಣುತ್ತಿದೆ. ಹಾಗೆಯೇ, ಜಾತ್ಯತೀತ ಚಿಂತನೆಗಳನ್ನು ಅನುಸರಿಸುವ ಮಹಾರಾಷ್ಟ್ರವು ಈ ವರ್ಚಸ್ಸಿನಿಂದ ಪ್ರಯೋಜನ ಪಡೆಯುತ್ತದೆ ಎಂದು ಅವರು ಹೇಳಿದರು.
‘ಪ್ರಧಾನಿ ಮೋದಿಯವರ ವರ್ಚಸ್ಸು ಮಹಾರಾಷ್ಟ್ರಕ್ಕೆ ಪ್ರಯೋಜನವಾಗಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಆದ್ದರಿಂದ ನಾವೆಲ್ಲರೂ ರಾಜ್ಯದ ಲಾಭಕ್ಕಾಗಿ ಸರ್ಕಾರವನ್ನು (ಬಿಜೆಪಿ-ಶಿವಸೇನೆ) ಸೇರಲು ನಿರ್ಧರಿಸಿದ್ದೇವೆ. ಸರ್ಕಾರ ಸೇರುವ ನಮ್ಮ ನಿರ್ಧಾರದ ಹಿಂದೆ ಯಾವುದೇ ಸ್ವಹಿತಾಸಕ್ತಿ ಇಲ್ಲ. ಕೆಲವು ಊಹಾಪೋಹಗಳಿವೆ. ಆದರೆ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.
‘ನಾನು ಕೆಲಸ ಮಾಡಲು ಇಷ್ಟಪಡುವ ಮತ್ತು ನನ್ನ ಕೆಲಸದ ಮೂಲಕ ಮಾತನಾಡಲು ಬಯಸುವ ವ್ಯಕ್ತಿ. ನನ್ನ ವಿರುದ್ಧ ಯಾರೇ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೂ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಅಜಿತ್ ಪವಾರ್ ಹೇಳಿದರು.