ಯಾರಿಗೆ ವಯಸ್ಸಾಗಿರುತ್ತೋ ಅವರು ಸಾಯ್ತರೆ ಬಿಡಿ’ ಬಿಜೆಪಿ ಸಚಿವನ ವಿವಾದಾತ್ಮಕ ಹೇಳಿಕೆ

ಭೋಪಾಲ್: ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಕುರಿತು” ಯಾರಿಗೆ ವಯಸ್ಸಾಗಿರುತ್ತೋ ಅವರು ಸಾಯ್ತರೆ ಬಿಡಿ’ ಎಂದು ಮಧ್ಯಪ್ರದೇಶದ ಸಚಿವ ಪ್ರೇಮ್ ಸಿಂಗ್ ಪಾಟೀಲ್ ವಿವಾದತ್ಮಾಕ ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರೊಂದಿಗೆ ಕೊರೊನಾದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ. ಈ ಕುರಿತು ಸ್ಥಳೀಯ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ಪ್ರೇಮ್ ಸಿಂಗ್ ಪಾಟೀಲ್, ಕೊರೊನಾದಿಂದಾಗಿ ಸಾವನ್ನಪ್ಪುತ್ತಿರುವುದರ ಬಗ್ಗೆ ನಾನು ಒಪ್ಪಿಕೊಳ್ಳುತ್ತೇನೆ. ಯಾರು ಕೂಡ ಇದನ್ನು ತಡೆಯಲು ಸಾಧ್ಯವಿಲ್ಲ. ಯಾರಿಗೆ ವಯಸ್ಸು ಆಗಿರುತ್ತದೋ ಅವರು ಸಾಯುತ್ತಾರೆ. ನಾನೊಬ್ಬನೆ ಈ ಕುರಿತು ಈ ರೀತಿ ಹೇಳುತ್ತಿಲ್ಲ ಎಲ್ಲರ ಅಭಿಪ್ರಾಯವು ಇದೆ ರೀತಿ ಇದೆ. ನಾವೆಲ್ಲರು ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡಬೇಕಾಗಿದೆ ಎಂದರು.

ಕೊರೊನಾ ಸೋಂಕಿತರ ಸಾವಿನ ವಿಚಾರವಾಗಿ ಪ್ರೇಮ್ ಸಿಂಗ್ ಪಾಟೀಲ್ ಅವರಿಂದ ಉಡಾಫೆ ಉತ್ತರ ಕೇಳಿ ಬರುತ್ತಿದ್ದಂತೆ ಸಚಿವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸೋಂಕಿತರಿಗೆ ಧೈರ್ಯ ತುಂಬಬೇಕಾಗಿರುವ ಸಚಿವರಿಂದಲೇ ಈ ರೀತಿ ಮನೋಬಲ ಕುಗ್ಗಿಸೋ ಹೇಳಿಕೆ ವಿರೋಧಿಸಿ ಜನ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಧ್ಯಪ್ರದೇಶದಲ್ಲಿ ಸೇರಿದಂತೆ ದೇಶದಲ್ಲಿ ಕಳೆದ ಒಂದೇ ದಿನ 2,00,739 ಕೊರೊನಾ ಪ್ರಕರಣಗಳು ದೃಢಪಟ್ಟಿತ್ತು. ಹಾಗೆ ಮಧ್ಯಪ್ರದೇಶ, ಉತ್ತರ ಪ್ರದೇಶ, ಡೆಲ್ಲಿ, ಗುಜಾರಾತ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಹಲವು ರೀತಿಯ ಸಮಸ್ಯೆಗಳು ಕೂಡ ಎದುರಾಗಿತ್ತು. ಮಧ್ಯಪ್ರದೇಶ ಒಂದರಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದಾಗಿ 51 ಮರಣ ಪ್ರಕರಣಗಳು ವರದಿಯಾಗಿದೆ.

Donate Janashakthi Media

One thought on “ಯಾರಿಗೆ ವಯಸ್ಸಾಗಿರುತ್ತೋ ಅವರು ಸಾಯ್ತರೆ ಬಿಡಿ’ ಬಿಜೆಪಿ ಸಚಿವನ ವಿವಾದಾತ್ಮಕ ಹೇಳಿಕೆ

Leave a Reply

Your email address will not be published. Required fields are marked *