ಹಾಸನ : ಗಂಗೂರಿನ ದಲಿತರು ಉಳಮೆ ಮಾಡುತ್ತಿದ್ದ ಜಾಗದಿಂದ ಅವರನ್ನು ತೆರವುಗೊಳಿಸುವ ಕ್ರಮವನ್ನು ವಿರೋಧಿಸಿ ನಿರಂತರವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಸರಕಾರ ಮತ್ತು ಜಿಲ್ಲಾಡಳಿತ ದಲಿತರ ಬೇಡಿಕೆಗಳನ್ನು ಈಡೇರಿಸವ ಬದಲು ಆ ಜಾಗದಿಂದ ಇವರನ್ನು ತೆರವುಗೊಳಿಸವ ಕಾರ್ಯವನ್ನು ಹಲವು ತಿಂಗಳಿಂದ ನಡೆಸುತ್ತಾ ಬಂದಿದೆ. ಇದರ ವಿರುದ್ದ ಪ್ರಭಲ ಹೋರಾಟ ನಡೆಸಿದ್ದ ಜೀತ ವಿಮುಕ್ತರು ಇಂದು ಉಳಿಮೆ ಮಾಡಲು ನಿರ್ಧರಿಸಿ ಹೋರಾಟಕ್ಕೆ ಮುಂದಾಗಿದ್ದರು. ಈಗಲಾದರೂ ಅವರ ಬೇಡಿಕೆಗಳನ್ನುಈಡೇರಿಸಬೇಕಿದ್ದ ಜಿಲ್ಲಾಡಳಿತ ಆ ಜಾಗದ ಸುತ್ತ ಆಂಬುಲೆನ್ಸ್ ಮತ್ತು ವೈದ್ಯರ ತಂಡವನ್ನು ನೇಮಿಸಿದೆ. ಇದು ಪ್ರತಿಭಟನೆ ಹತ್ತಿಕ್ಕಲು ಜಿಲ್ಲಾಡಳಿತ ಪ್ರತಿಭಟನೆಕಾರರ ಮೇಲೆ ದೌರ್ಜನ್ಯ ನಡೆಸಲು ಸಿದ್ದತೆ ಮಾಡಿಕೊಂಡಿರುವ ಪೂರ್ವ ತಯಾರಿ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗಂಗೂರಿನ ದಲಿತರನ್ನು 1976 ರ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆಯ ಆಧಾರದ ಮೇಲೆ 1994 ರಲ್ಲಿ 91 ಕುಟುಂಬವನ್ನು ಜೀತದಿಂದ ಮುಕ್ತಿಗೊಳಿಸಿತು. ಈ ಕಾಯ್ದೆಯ ಪ್ರಕಾರ ಜೀತದಿಂದ ಮುಕ್ತಗೊಳಿಸಿದವರಿಗೆ ಸರ್ಕಾರ ಕೃಷಿಯೋಗ್ಯ ಭೂಮಿ ಮತ್ತು ಜೀವನ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಓದಗಿಸಬೇಕು. ಆದರೆ ಕಳೆದ 27 ವರ್ಷಗಳಿಂದ ಗಂಗೂರಿನ ಜೀತ ವಿಮುಕ್ತರಿಗೆ ಹಾಸನ ಜಿಲ್ಲಾಡಳಿತ ಭೂಮಿಯನ್ನೂ ನೀಡದೆ ಯಾವ ಸೌಕರ್ಯಗಳನ್ನು ನೀಡದೆ. ಜೀತ ನಿರ್ಮೂಲನಾ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಂಪೂರ್ಣ ವಿಫಲವಾಗಿದೆ.
ಇದರಿಂದ ಬೇಸತ್ತು ಜೀವನ ರೂಪಿಸಿಕೊಳ್ಳಲು ಊರಿನ ಪಕ್ಕದಲ್ಲಿ ಖಾಲಿಯಿದ್ದ ಅರಣ್ಯ ಭೂಮಿಯನ್ನು ಉಳುಮರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಆ ಭೂಮಿಯಿಂದಲೂ ದಲಿತರನ್ನು ಒಕ್ಕಲೆಬ್ಬಿಸಲು ಸರ್ಕಾರ ಮುಂದಾಗಿದೆ. ಭೂಹೀನ ದಲಿತರಿಗೆ ಕೃಷಿ ಭೂಮಿ ನೀಡಲು ಕೂಡಲೆ ಕ್ರಮಕೈಗೊಳ್ಳಬೇಕೆಂದು ಈಗಾಗಲೇ ಸರ್ಕಾರ ಹಾಗೂ ಹಾಸನ ಜಿಲ್ಲಾಡಳಿತ, ಅರಕಲಗೂಡು ತಾಲ್ಲೂಕು ಆಡಳಿತಕ್ಕೆ ಆಗ್ರಹಿಸಿ ಹಲವು ಭಾರಿ ಒತ್ತಾಯಿಸಿದ್ದರೂ ಯಾವುದೇ ಕ್ರಮವಹಿಸದ ಅಧಿಕಾರಿಗಳು ಜೀತದಿಂದ ವಿಮುಕ್ತರಾದವರಿಗೆ ಅನ್ಯಾಯ ಎಸಗಿದ್ದಾರೆ.
ಜೀತದಿಂದ ಹೊರಬಂದ ದಲಿತ ಕುಟುಂಬಗಳು ಜೀವನ ಸಾಗಿಸಲು 1970 ರಿಂದಲೂ ಸಾಗುವಳಿ ಮಾಡುತ್ತಿದ್ದ ಗಂಗೂರಿನ ಗೊಬ್ಬಳ್ಳಿ ಅರಣ್ಯ ಪ್ರದೇಶದಲ್ಲಿಯೇ ಕೃಷಿ ಮಾಡಿಕೊಂಡಿರುತ್ತಾರೆ. 1974ರಲ್ಲಿಯೇ ಆ ಜಾಗದ ಹಕ್ಕು ಪತ್ರ ನೀಡುವಂತೆ ಸರ್ಕಾರಕ್ಕೆ ಹಣ ಪಾವತಿಯಾಗಿದೆ. ಅಲ್ಲದೆ, ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ. ಇಷ್ಟಿದ್ದರೂ ಸರ್ಕಾರ ಜಮೀನಾಗಲೀ ಅಥವಾ ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕುಪತ್ರವಾಗಲೀ ನೀಡಲ್ಲ. ಹಾಗಾಗಿ ಭೂಮಿ ಮಂಜೂರು ಮಾಡುವವರೆಗೆ ಅವರು ಉಳುಮೆ ಮಾಡಿಕೊಂಡು ಬದುಕುತ್ತಿದ್ದ ಗೊಬ್ಬಳಿ ಅರಣ್ಯ ಪ್ರದೇಶದಲ್ಲಿ ಜೀವನೋಪಾಯಕ್ಕಾಗಿ ಕೃಷಿ ಚಟುವಟಿಕೆ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಇವರ ಬೇಡಿಕೆಗಳಿಗೆ ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ಸ್ಪಂದಿಸಿದ ಕಾರಣ ಇಂದು ಊರಿನ ಪಕ್ಕದಲ್ಲಿರುವ ಅರಣ್ಯ ಭೂಮಿಯನ್ನೇ ಉಳುಮೆ ಮಾಡಲು ಪ್ರತಿಭಟನಾಕಾರರು ನಿರ್ಧರಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ ಬೇಡಿಕೆಗಳನ್ನು ಈಡೇರಿಸುವ ಬದಲಿಗೆ ರಾಜ್ಯ ಸರಕಾರ ಜಿಲ್ಲಾಡಳಿತದ ಮೂಲಕ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದೆ. ಹೋರಾಟದ ಜಾಗಕ್ಕೆ ಆಂಬುಲೆನ್ಸ್ ಮತ್ತು ವೈದ್ಯರ ತಂಡವನ್ನು ನಿಯೋಜಿಸಿದೆ. ಅಂದರೆ ಹೋರಾಟಗಾರರ ಮೇಲೆ ಲಾಠೀ ಬೀಸಲು ಇಲ್ಲವೆ ಅವರ ಮೇಲೆ ಅಶ್ರುವಾಯು ಸಿಡಿಸಲು ಸಿದ್ದತೆ ಮಾಡಿಕೊಂಡಿದೆ ಎಂದು ಸುತ್ತೋಲೆಗಳನ್ನು ನೋಡಿದರೆ ಅರ್ಥವಾಗುತ್ತದೆ.
ಜಿಲ್ಲಾಡಳಿತವು ಆರೋಗ್ಯ ಇಲಾಖೆಗೆ ಆದೇಶ ನೀಡಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದ್ದು ಆಂಬುಲೆನ್ಸ್ ಮತ್ತು ವೈದ್ಯರ ತಂಡವನ್ನು ನಿಯೋಜಿಸಬೇಕೆಂದು ಆದೇಶಿಸಲಾಗಿದೆ. ಇದನ್ನು ಗಮನಿಸಿದರೆ ಜಿಲ್ಲಾಡಳಿತವು ಗಂಗೂರು ದಲಿತರ ಮೇಲೆ ದೌರ್ಜನ್ಯ ನಡೆಸಲು ಪೂರ್ವ ತಯಾರಿ ಮಾಡಿಕೊಂಡು ನಂತರ ಜಿಕಿತ್ಸೆ ನೀಡಲು ತಯಾರಿ ಮಾಡಿದಂತಿದೆ. ಹಾಸನದ ಜಿಲ್ಲಾಡಳಿತದ ಈ ಕ್ರಮ ಅತ್ಯಂತ ಖಂಡನಾರ್ಹವಾದದ್ದು ಎಂದು ಕರ್ನಾಟಕ ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷ ಎಚ್. ಆರ್. ನವೀನ್ ಕುಮಾರ್ ಆರೋಪಿಸಿದ್ದಾರೆ.