ಮಡಿಕೇರಿ: ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘ, ಕಾವೇರಿ ವಾಹನ ಮಾಲೀಕರು ಮತ್ತು ಚಾಲಕರ ಸಂಘ ಹಾಗೂ ಕಾಫಿನಾಡು ಪ್ರವಾಸಿ ವಾಹನ ಮಾಲೀಕರ ಮತ್ತು ಚಾಲಕರ ಸಂಘಗಳು ‘ಆಟೊ ಚಾಲಕರ ಚಾಲನಾ ಪರಿಮಿತಿಯನ್ನು 55 ಕಿ.ಮೀ ವ್ಯಾಪ್ತಿಗೆ ವಿಸ್ತರಿಸಿದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿವೆ. ಮಡಿಕೇರಿ
ಯಾವುದೇ ಕಾರಣಕ್ಕೂ ಆಟೊ ಚಾಲಕರ ಚಾಲನಾ ಪರಿಮಿತಿಯನ್ನು ಈಗ ಇರುವ 15 ಕಿ.ಮೀ ವ್ಯಾಪ್ತಿಯಿಂದ ಹೆಚ್ಚಿಸಬಾರದು ಎಂದು ಈ ಸಂಘಗಳ ಪದಾಧಿಕಾರಿಗಳು ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಮನವಿ ಮಾಡಿದರು.
ಇದನ್ನೂ ಓದಿ : ಮೈಸೂರು | ಸಂಗೀತ ವಿವಿಯಿಂದ ಎಚ್. ಜನಾರ್ಧನ್ (ಜನ್ನಿ) ಸೇರಿದಂತೆ ಮೂವರಿಗೆ ಡಾಕ್ಟರೇಟ್
ಒಂದು ವೇಳೆ ಅವರ ಮನವಿಯಂತೆ ಸರ್ಕಾರ ಆಟೊ ಚಾಲಕರಿಗೆ 55 ಕಿ.ಮೀ ವರೆಗೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಿದರೆ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಬದುಕು ಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಹೇಳಿದರು.
ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸಂತೋಷ್ ಕಾರ್ಯಪ್ಪ ಮಾತನಾಡಿ, ‘ಆಟೊ ಚಾಲಕರು ಈಗ ತಮ್ಮ ಆಟೊವನ್ನು 15 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಬಹುದು. ಈಗ ಅವರು 55 ಕಿ.ಮೀವರೆಗೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದು ಸರಿಯಲ್ಲ’ ಎಂದು ಅವರು ಖಂಡಿಸಿದರು.
‘ಟ್ಯಾಕ್ಸಿಗಳಿಗೆ ಪ್ಯಾನಿಕ್ ಬಟನ್ ಅಳವಡಿಸಬೇಕು, ಜಿಪಿಎಸ್ ಹಾಕಿಸಬೇಕು ಎಂಬ ನಿಯಮ ಜಾರಿಗೊಳಿಸಲಾಗುತ್ತಿದೆ. ವಾಹನ ವಿಮೆ ಸೇರಿದಂತೆ ಇನ್ನಿತರ ವೆಚ್ಚಗಳೂ ದುಬಾರಿಯಾಗಿವೆ. ಇಂತಹ ಸನ್ನಿವೇಶದಲ್ಲಿ ಒಂದು ವೇಳೆ ಆಟೊ ಚಾಲಕರಿಗೆ 55 ಕಿ.ಮೀವರೆಗೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಿದರೆ ನಮ್ಮ ಗತಿ ಏನು’ ಎಂದು ಪ್ರಶ್ನಿಸಿದರು.
‘ಈಗಾಗಲೇ ಬಾಡಿಗೆ ಬೈಕ್‌ಗಳಿಂದ ನಮಗೆ ತೀವ್ರತರವಾದ ನಷ್ಟ ಉಂಟಾಗಿದೆ. 500ಕ್ಕೂ ಅಧಿಕ ಬಾಡಿಗೆ ಬೈಕ್‌ಗಳು ನಗರದಲ್ಲಿ ಸಂಚರಿಸುತ್ತಿವೆ. ಇದರಿಂದ ಅಪಾರ ನಷ್ಟ ಉಂಟಾಗುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.
ಪ್ರವಾಸಿ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಉಪಾಧ್ಯಕ್ಷ ಅರಸು ಮುಕ್ಕಾಟಿ, ಕಾವೇರಿ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಸತೀಶ್, ಕಾಫಿನಾಡು ಪ್ರವಾಸಿ ವಾಹನ ಚಾಲಕರ ಸಂಘದ ಅಧ್ಯಕ್ಷ ಗಗನ್ ಹಾಗೂ ಕಾರ್ಯದರ್ಶಿ ಬ್ರಿಜೇಶ್ ಹಾಗೂ ಖಾದರ್ ಭಾಗವಹಿಸಿದ್ದರು.
ಇದನ್ನೂ ನೋಡಿ : ಬಿಹಾರ ಚುನಾವಣೆ | ಭರಪೂರ ಭರವಸೆ -ಬದಲಾವಣೆಯತ್ತ ಮತದಾರರ ಒಲವು Janashakthi Media | Bihar Election 2025
