ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗುತ್ತಾರೆ ಎಂದು ಕಾಂಗ್ರೆಸ್‌ನ ಯಾವ ನಾಯಕರೂ ಹೇಳಿಲ್ಲ. ಆ ರೀತಿಯ ಚರ್ಚೆಗಳು ಅಪ್ರಸ್ತುತ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ. ಅವರು ಬದಲಾಗುವುದಿಲ್ಲ ಎಂಬ ವ್ಯಾಖ್ಯಾನಗಳ ಕುರಿತು ಪ್ರತಿಕ್ರಿಯಿಸಿದರು.
ಈ ಬಗ್ಗೆ ನಮ ಪಕ್ಷದ ಯಾವ ನಾಯಕರೂ ಹೇಳಿಕೆ ನೀಡಿಲ್ಲ. ಬಿಜೆಪಿ-ಜೆಡಿಎಸ್‌ನ ನಾಯಕರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆ ರೀತಿಯ ಚರ್ಚೆಗಳೇ ಅನಗತ್ಯ ಎಂದು ಹೇಳಿದರು. ರಾಜ್ಯಪಾಲರು ಮುಖ್ಯಮಂತ್ರಿಯವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಬಾರದು. ಈ ಕುರಿತು ದಾಖಲಾಗಿರುವ ದೂರನ್ನು ತಿರಸ್ಕರಿಸಬೇಕು ಮತ್ತು ಶೋಕಾಸ್ ನೋಟೀಸ್ ಅನ್ನು ಹಿಂಪಡೆಯಬೇಕು ಎಂದು ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಸಲಹೆ ನೀಡಿದೆ.
ಅದರ ಹೊರತಾಗಿಯೂ ಅವರು ಮುಂದುವರೆದರೆ ನಮಗೂ ಕಾನೂನು ಹೋರಾಟ ಅನಿವಾರ್ಯವಾಗಲಿದೆ. ಆದರೆ ರಾಜ್ಯಪಾಲರು ಕಾನೂನು ಬಿಟ್ಟು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಮಗೆ ಅನಿಸುವುದಿಲ್ಲ. ಕಾನೂನಿನ ಪ್ರಕಾರ ನಡೆದುಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಇದನ್ನೂ ಓದಿ: ಅದಾನಿ ಗ್ರೂಪ್ ನಿಂದ ಸೆಬಿ ಮುಖ್ಯಸ್ಥೆ 10 ದಶಲಕ್ಷ ಡಾಲರ್ ಸಂಪಾದನೆ: ಹಿಂಡೆನ್ ಬರ್ಗ್ ಗಂಭೀರ ಆರೋಪ
ಸಂಸತ್ ಅಧಿವೇಶನ ಮುಗಿದ ಬಳಿಕ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡುತ್ತಾರೆ ಎಂಬ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ರಾಜ್ಯಪಾಲರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ನ್ಯಾಯಯುತವಾಗಿ ನಿರ್ಧಾರ ತೆಗೆದುಕೊಂಡರೆ ಒಪ್ಪಿಕೊಳ್ಳುತ್ತೇವೆ. ಇಲ್ಲದೇ ಹೋದರೆ ಕಾನೂನು ಹೋರಾಟ ಅನಿವಾರ್ಯವಾಗಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಫೋಕ್ಸೊ ಪ್ರಕರಣಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವು ಮಾಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಅಭಿಯೋಜಕರು ಮೇಲನವಿ ಸಲ್ಲಿಸಿದ್ದಾರೆ. ಮುಂದಿನ ವಿಚಾರಣೆಯಲ್ಲಿ ಅಡ್ವಕೇಟ್ ಜನರಲ್ ಅಥವಾ ಯಾರು ಹಾಜರಾಗುತ್ತಾರೆ ಎಂಬುದನ್ನು ಆಧರಿಸಿ ರಾಜ್ಯಸರ್ಕಾರದ ಪರವಾಗಿ ಸಮರ್ಥ ವಾದ ಮಂಡಿಸಲಾಗುವುದು ಎಂದು ಹೇಳಿದರು.
ಫೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಿಗೆ ಸಾಮಾನ್ಯವಾಗಿ ಜಾಮೀನು ದೊರೆಯುವುದಿಲ್ಲ. ಆದರೆ ನ್ಯಾಯಾಧೀಶರು ಕೊಟ್ಟಿದ್ದಾರೆ. ರಾಜ್ಯಸರ್ಕಾರದ ಪರವಕೀಲರು ನ್ಯಾಯಾಲಯದ ಮುಂದೆ ಸತ್ಯಾಸತ್ಯತೆಗಳನ್ನು ವಿವರಿಸಲಿದ್ದಾರೆ. ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಕೆನೆಪದರ ಮೀರಿದವರನ್ನು ಮೀಸಲಾತಿಯಿಂದ ಹೊರಗಿಡುವಂತಹ ನಿರ್ಣಯ ಮಾಡುವಂತೆ ಬಿಜೆಪಿ ಸಂಸದರ ನಿಯೋಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನ್ನ ಅಭಿಪ್ರಾಯಗಳು ಏನೇ ಇದ್ದರೂ ಅದು ವೈಯಕ್ತಿಕ. ಎಐಸಿಸಿ ಚರ್ಚೆ ಮಾಡಿ ತೆಗೆದುಕೊಳ್ಳುವ ನಿರ್ಧಾರಗಳು ಅದರ ಆಧಾರದ ಮೇಲೆ ರಾಜ್ಯ ಘಟಕಕ್ಕೆ ನೀಡುವ ನಿರ್ದೇಶನಗಳು ಮುಖ್ಯವಾಗುತ್ತದೆ. ನಂತರ ನಾವು ಪ್ರತಿಕ್ರಿಯೆ ನೀಡುತ್ತೇವೆ ಎಂದು ತಿಳಿಸಿದರು.
ಇದನ್ನ ನೋಡಿ: ಬಿಎಸ್ ವೈ ಸಿಎಂ ಆಗಿದ್ದಾಗ ನಕಲಿ ಸಹಿ ಹಾಕ್ತಿದ್ದ ವಿಜಯೇಂದ್ರ – ಬಿಕೆ ಹರಿಪ್ರಸಾದ್Janashakthi Media