ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆ ಹುದ್ದೆ ಖಾಲಿ ಇಲ್ಲ ಎಂದು ನಾನು ಹೇಳಿದ್ದೇನೆ. ಅದು ವಾಸ್ತವ. ಏನಿದೆಯೋ ಅದನ್ನು ಹೇಳಿದ್ದೇನಷ್ಟೆ. ಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್ಸಿನಲ್ಲಿ ಯಾವ ಗೊಂದಲವೂ ಇಲ್ಲ. ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಸಂಕ್ರಾಂತಿಯ ಶುಭಾಶಯ ತಿಳಿಸಿದ ನಂತರ ಮಾತನಾಡಿದ ಅವರು, ಇವತ್ತಿನ ಭೇಟಿಯಲ್ಲಿ ಯಾವ ರಾಜಕೀಯವೂ ಚರ್ಚೆಯಾಗಿಲ್ಲ ಎಂದರು.
ಸಿಎಂ ಬದಲಾವಣೆ, ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ, ಜಾತಿಗಣತಿ ವರದಿ ಇತ್ಯಾದಿ ಯಾವ ಸಮಸ್ಯೆಗಳೂ ಪಕ್ಷದಲ್ಲಿ ಇಲ್ಲ. ಇವೆಲ್ಲವುಗಳ ಬಗ್ಗೆಯೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಸೋಮವಾರ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಕೂಡ ಸುರ್ಜೇವಾಲಾ ಅವರು ಇದನ್ನೇ ಸ್ಪಷ್ಟವಾಗಿ ಹೇಳಿದ್ದಾರೆ. ಗೃಹ ಸಚಿವ ಪರಮೇಶ್ವರ್, ಸಹಕಾರ ಸಚಿವ ಕೆ. ರಾಜಣ್ಣ ಕಾರಣಾಂತರಗಳಿಂದ ಸಭಗೆ ಬಂದಿರಲಿಲ್ಲವಷ್ಟೆ. ಬೆಳಗಾವಿ ಜಿಲ್ಲೆಯ ರಾಜಕಾರಣ ಕುರಿತು ಡಿ.ಕೆ.ಶಿವಕುಮಾರ್ ಮತ್ತು ಸತೀಶ್ ಜಾರಕಿಜೊಳಿ ಮಧ್ಯೆ ಯಾವ ಜಗಳವೂ ಆಗಿಲ್ಲ. ಎಲ್ಲರೂ ಕೂಡಿಯೇ ಪಕ್ಷದ ಕಚೇರಿ ನಿರ್ಮಿಸಿದ್ದಾರೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳು ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಎಂ.ಬಿ. ಪಾಟೀಲ್ ಉತ್ತರಿಸಿದರು.
ಇದನ್ನೂ ಓದಿ :ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಪಘಾತ : ಬೆನ್ನಿನ ಎರಡು ಮೂಳೆ ಮುರಿತ, ಕುತ್ತಿಗೆಗೆ ಪೆಟ್ಟು
ಜಾತಿಗಣತಿ ವರದಿಯನ್ನು ನಾನು ಯಾವತ್ತೂ ವಿರೋಧಿಸಿಲ್ಲ. ಆದರೆ, ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಹೇಳುತ್ತ ಬಂದಿದ್ದೇನೆ. ಏಕೆಂದರೆ, ಲಿಂಗಾಯತರಲ್ಲೇ ಬೇರೆ ಬೇರೆ ಉಪಪಂಗಡಗಳು ಬೇರೆ ಬೇರೆ ರೀತಿ ನಮೂದಿಸಿದೆ. ಇಷ್ಟಕ್ಕೂ ವರದಿಯಲ್ಲೇನಿದೆ ಎಂದು ಯಾರೂ ನೋಡಿಲ್ಲ. ಆದರೆ, ವೀರಶೈವ ಮಹಾಸಭಾದವರು ವರದಿಯನ್ನು ವಿರೋಧಿಸುತ್ತಿದ್ದರೆ ಅಂತಹ ಹಕ್ಕು ಅದಕ್ಕಿದೆ. ಸುರ್ಜೇವಾಲಾ ಕೂಡ ಯಾವೊಂದು ಸಮುದಾಯಕ್ಕೂ ನೋವಾಗದಂತೆ ನಾವು ನಡೆದುಕೊಳ್ಳಬೇಕು ಎಂದಿದ್ದಾರೆ ಎಂದು ಅವರು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ನಾನು ಕಣ್ಣಿಟ್ಟಿಲ್ಲ. ಕೈಗಾರಿಕಾ ಸಚಿವನಾಗಿ ನಾನು ನನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ರಾಜಕೀಯದಲ್ಲಿ ನನಗೆ ಸಹಜವಾದ ಆಸೆ ಇದೆಯೇ ವಿನಾ ದುರಾಸೆಯಂತೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಗುತ್ತಿಗೆದಾರರ 30 ಸಾವಿರ ಕೋಟಿ ರೂ. ಬಿಲ್ ಪಾವತಿ ನನೆಗುದಿಗೆ ಬೀಳಲು ಹಿಂದಿನ ಬಿಜೆಪಿ ಸರ್ಕಾರವೇ ಕಾರಣ. ಅವರು ಯಾವ ಅನುಮತಿಯೂ ಇಲ್ಲದೇ 2 ಲಕ್ಷ ಕೋಟಿ ರೂ. ಮೊತ್ತದ ಗುತ್ತಿಗೆ ಕಾಮಗಾರಿ ಶುರು ಮಾಡಿದ್ದರು. ಹೀಗಾಗಿ 35 ಸಾವಿರ ಕೋಟಿ ರೂ. ಪಾವತಿಯೇ ಆಗಿರಲಿಲ್ಲ. ಆ ಹೊರೆ ನಮ್ಮ ಸರಕಾರದ ಮೇಲೆ ಬಿತ್ತು ಎಂದು ಹೇಳಿದರು.
ಇದೇ ವೇಳೆ, ಸಚಿವ ಎಂ.ಬಿ.ಪಾಟೀಲ್ ಮತ್ತು ಹಿರಿಯ ಸಾಹಿತಿ ಕೃಷ್ಣ ಕೊಲ್ಹಾರ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಎಂ.ಎಂ.ಕಲ್ಬುರ್ಗಿ ಅವರ 42 ಸಮಗ್ರ ಸಂಪುಟಗಳ ಬಿಡುಗಡೆಗೆ ದಿನಾಂಕ ನೀಡುವಂತೆ ಮನವಿ ಸಲ್ಲಿಸಿದರು.
ಸಿಎಂ ನಿವಾಸ ಕಾವೇರಿಯಲ್ಲಿ ಭೇಟಿಯಾದ ಅವರು, ಕಲ್ಬುರ್ಗಿ ಅವರ ಸಾಹಿತ್ಯದ ಸಮಗ್ರ ಸಂಪುಟ ಕುರಿತು ಮುಖ್ಯಮಂತ್ರಿಯವರಿಗೆ ಅವರು ವಿವರಿಸಿದರು. ಸಿಎಂ ಸೂಕ್ತ ದಿನಾಂಕ ನೀಡುವ ಭರವಸೆ ನೀಡಿದರು. ಹಾಗೆಯೇ ದಾಸ ಸಾಹಿತ್ಯದ ಸಮಗ್ರ ಸಂಪುಟ ಕೂಡ ಸಿದ್ಧ ಆಗುತ್ತಿದ್ದು ಅದಕ್ಕೆ ಸರ್ಕಾರದಿಂದ ಬಿಡುಗಡೆ ಆಗಬೇಕಿದ್ದ ಹಣ ಕೊಡಿಸುವಂತೆಯೂ ಅವರು ಕೋರಿಕೆ ಸಲ್ಲಿಸಿದರು.