ಚೆನ್ನೈ: ಪಂಚಾಯತಿ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿರುವ ದಲಿತ ಸಮುದಾಯಕ್ಕೆ ಸೇರಿದ ಅಧ್ಯಕ್ಷರು ತಮ್ಮ ಕಛೇರಿಗಳಲ್ಲಿ ಕುರ್ಚಿಯಲ್ಲಿ ಕುಳಿತುವಂತಿಲ್ಲ. ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡುವಂತಿಲ್ಲ ಎಂಬ ತಾರತಮ್ಯ ತಮಿಳುನಾಡಿನಲ್ಲಿ ಚಾಲ್ತಿಯಲ್ಲಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ದಲಿತ ಪ್ರತಿನಿಧಿಗಳು ತಾರತಮ್ಯಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿಯನ್ನು ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ಮೋರ್ಚಾ (ಟಿಎನ್‌ಯುಇಎಫ್) ನಡೆಸಿದ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.
ತಮಿಳುನಾಡಿನ 24 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆದಿದ್ದು, 386 ಪಂಚಾಯಿತಿಗಳಲ್ಲಿ ದಲಿತ ಸಮುದಾಯದವರು ಅಧ್ಯಕ್ಷರಾಗಿದ್ದು, ಆ ಪೈಕಿ 22 ಮಂದಿ ತಮ್ಮ ಕಚೇರಿಗಳಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿಲ್ಲ.ಪಂಚಾಯಿತಿಗಳಲ್ಲಿ ದಲಿತ ಪ್ರತಿನಿಧಿಗಳ ವಿರುದ್ಧ 17 ಬಗೆಯ ತಾರತಮ್ಯವನ್ನು ಎದುರಿಸುತ್ತಿದ್ದಾರೆ.
ವರದಿಯನ್ನು ಬಿಡುಗಡೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟಿಎನ್‌ಯುಇಎಫ್‌ನ ಕೆ. ಸ್ಯಾಮ್ಯುಯೆಲ್ ರಾಜ್, ಸಮೀಕ್ಷೆಯ ಫಲಿತಾಂಶಗಳು ಆಘಾತಕಾರಿ ಮತ್ತು ದುಃಖಕರವಾಗಿದೆ. ಪಂಚಾಯತ್ ಕಛೇರಿಗಳಲ್ಲಿ ದಲಿತ ಸಮುದಾಯಕ್ಕೆ ಸೇರಿದ ಅಧ್ಯಕ್ಷರು ಕುರ್ಚಿಯಲ್ಲಿ ಕುಳಿತುಕೊಳ್ಳಲು ಅನುಮತಿಸುವುದಿಲ್ಲ ಮತ್ತು ದೇಶವು ತನ್ನ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಸಜ್ಜಾಗಿರುವಾಗ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶ ಮಾಡಿಕೊಟ್ಟಿಲ್ಲ. 20 ಪಂಚಾಯಿತಿಗಳಲ್ಲಿ ಇಂತಹ ಗಂಭೀರ ಸಮಸ್ಯೆಗಳಿವೆ ಎಂದರು.
ಈ ತಾರತಮ್ಯವು ಕೆಲವೆಡೆ ಸ್ಥಳೀಯ ಸಂಸ್ಥೆಯ ಕಚೇರಿಗೆ ಪ್ರವೇಶವನ್ನು ನಿರಾಕರಿಸುವುದನ್ನೂ ಒಳಗೊಂಡಿದೆ ಎಂದು ಸಮೀಕ್ಷೆ ತಿಳಿಸಿದೆ. ದಲಿತ ಪ್ರತಿನಿಧಿಗಳು ರಾಜ್ಯದ ಹೆಚ್ಚಿನ ಭಾಗಗಳಲ್ಲಿ ತಾರತಮ್ಯಕ್ಕೆ ಒಳಗಾಗಿದ್ದಾರೆ.
ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷರ ಹೆಸರಿನ ಫಲಕಗಳನ್ನು ಹಾಕಲಾಗಿಲ್ಲ. ಕೆಲವು ಪಂಚಾಯಿತಿಗಳಲ್ಲಿ ದಲಿತ ಅಧ್ಯಕ್ಷರು ಕುರ್ಚಿಯಲ್ಲಿ ಕುಳಿತು ಕಾರ್ಯನಿರ್ವಹಿಸುವುದಿಲ್ಲ. ಇನ್ನು ಕೆಲವೆಡೆಗಳಲ್ಲಿ ಕುರ್ಚಿಗಳನ್ನೇ ತೆಗೆದು ಹಾಕಲಾಗಿದೆ. ಸಭೆಗಳಲ್ಲಿ ಕೈಗೊಳ್ಳಲಾಗುವ ನಿರ್ಣಯಗಳನ್ನು ಅಂತಿಮಗೊಳಿಸಿ ಇತರ ಸದಸ್ಯರು ಅಂಗೀಕರಿಸಿದ ನಂತರ ಅದಕ್ಕೆ ಸಹಿಯನ್ನು ಮಾತ್ರ ಅವರಿಂದ ಪಡೆಯಲಾಗುತ್ತದೆ. ಅಕಸ್ಮಾತ್ ಪಂಚಾಯಿತಿಯ ದಲಿತ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಿದರೆ, ಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ್ದಲ್ಲಿ, ದಲಿತೇತರರು ಅದನ್ನು ಬಹಿಷ್ಕರಿಸುತ್ತಾರೆ.
ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಆಗಸ್ಟ್ 15 ರಂದು ಪಂಚಾಯತ್ ಅಧ್ಯಕ್ಷರು ರಾಷ್ಟ್ರಧ್ವಜಾರೋಹಣ ಮಾಡಲು ಅನುಕೂಲವಾಗುವಂತೆ ವಿಶೇಷ ಅಧಿಕಾರಿಗಳನ್ನು ನಿಯೋಜಿಸಿಬೇಕೆಂದು ಟಿಎನ್‌ಯುಇಎಫ್ ಮುಂದಾಗಿದೆ.
ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಪೆರಿಯಾರ್ ಅವರ ಸಿದ್ಧಾಂತವನ್ನು ಪ್ರತಿಪಾದಿಸುವ ರಾಜ್ಯವಾದ ತಮಿಳುನಾಡಿನಲ್ಲಿ ಜಾತಿ ತಾರತಮ್ಯವು ಚಾಲ್ತಿಯಲ್ಲಿರುವುದು ಬೇಸರದ ಸಂಗತಿಯಾಗಿದೆ ಎಂದಿರುವ ಸ್ಯಾಮ್ಯುಯೆಲ್ ರಾಜ್ ಅವರು, ಪಂಚಾಯತಿಗಳಲ್ಲಿನ ಕುಂದುಕೊರತೆಗಳನ್ನು ಪರಿಹರಿಸಲು ವಿಶೇಷವಾದ ಕಾರ್ಯವಿಧಾನದ ಅವಶ್ಯಕತೆ ಇದೆ. ಇದರ ಬಗ್ಗೆ ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.