ಅದೇನಾಗಿದೆಯೋ? ಈ ಪಶುಗಳ ಹಣೆಬರಹವೇ ಅಷ್ಟೆನೋ ಗೊತ್ತಿಲ್ಲ. ಮೂಕ ಪ್ರಾಣಿಗಳಾದ ಹಸುಗಳಲ್ಲಿಯೇ ಎಮ್ಮೆ, ದೇಶಿ, ವಿದೇಶಿ, ಹೆಚ್ಎಫ್, ಎ1, ಎ2 ಇತ್ಯಾದಿಗಳ ಬಗ್ಗೆ ಬೇಧ ಭಾವ ತೋರುತ್ತಾ ನುಡಿಯುವ ಅಪದ್ಧಗಳು ಬಹಳ ಕಿರಿಕಿರಿ ಮೂಡಿಸುತ್ತವೆ. ಯಾವುದೇ ಪ್ರಾಣಿಯನ್ನು ಸಾಕುವ ಹಕ್ಕು ಅಥವಾ ಆಯ್ಕೆ ಅದನ್ನು ಸಾಕುವವರ ಮಾಲಿಕರಿಗೆ ಇದೆ. ಕಾರಣ ಅದರ ಸಾಧಕ ಬಾಧಕಗಳನ್ನು ವಿವರಿಸಿ ಆಯ್ಕೆಯನ್ನು ಗೋಪಾಲಕರಿಗೆ ಬಿಡುವುದು ಬಹಳ ಉತ್ತಮ ವಿಧಾನ. ಧಾರ್ಮಿಕ ಮುಖಂಡರುಗಳು, ಒಂದು ಹಸು ಸಾಕದವರು, ವೇದಿಕೆಯಿಂದ ಭಾಷಣದ ಮೂಲಕ ಕರೆ ಕೊಡುವವರು ಪಶುಗಳಲ್ಲಿಯೇ ಜಾತಿ ಬೇಧ ಮಾಡುತ್ತಾ ಅದು ಶ್ರೇಷ್ಟ, ಇದು ಕನಿಷ್ಟ ಎನ್ನುತ್ತಾ ಜನರ ಮನಸ್ಸಿನಲ್ಲಿ ತಪ್ಪು ಕಲ್ಪನೆ ಮತ್ತು ಗೊಂದಲ ಮೂಡಿಸಲೇಬೇಕೆಂಬ ಹಠ ಬಂದಂತಿದೆ. ಮಠ ಮಾನ್ಯಗಳು ಸಮಾಜದ ಅವಿಭಾಜ್ಯ ಅಂಗ. ಅವರ ಮಾತಿಗೆ ಸಮಾಹದಲ್ಲಿ ಇಂದಿಗೂ ಸಹ ಗೌರವ ಇದೆ. ಈ ಕಾರಣದಿಂದ ಸಾರ್ವಜನಿಕವಾಗಿ ವಿಷಯವನ್ನು ಪ್ರಸ್ತಾವಿಸುವಾಗ ಅದು ಸತ್ಯಕ್ಕೆ ಹತ್ತಿರವಿದ್ದರೆ ಅದು ಜನಮಾನಸದಲ್ಲಿ ದೂರಗಾಮಿಯಾಗಿ ನಿಲ್ಲುತ್ತದೆ. ಪಶು
-ಡಾ. ಎನ್.ಬಿ.ಶ್ರೀಧರ
ಇತ್ತೀಚೆಗೆ ಏಷ್ಯಾನೆಟ್ ಸುವರ್ಣ ವಾಹಿನಿಯಲ್ಲಿ ಕೊಲ್ಲಾಪುರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶವರ ಸ್ವಾಮೀಜಿಯವರಿಗೆ ವೀಕ್ಷಕರಾದ ವಿಶ್ವನಾಥ ಹಳೆಕಟ್ಟೆಯರು “ಭಾರತದಲ್ಲಿ ಅನೇಕ ವಿಧದ ಪ್ರಾಣಿಗಳಿದ್ದು ಕೆಲವೊಂದು ಪ್ರಾಣಿಗಳು ಹೊರಗಿನಿಂದ ಬಂದು ಹೊಂದಿಕೊಂಡಿವೆ. ದೇಶಿ ಹಸು ಶ್ರೇಷ್ಟ ಮತ್ತು ಮಿಶ್ರತಳಿಗಳು ಕನಿಷ್ಟ ಎಂದು ಹೇಳಲಾಗುತ್ತಿದೆ. ಭಾರತದ ಗ್ರಾಮೀಣ ಭಾಗದ ಆರ್ಥಿಕತೆಯ ಬೆನ್ನೆಲುಬಾದ ಹೈನುಗಾರಿಕೆಯ ಪ್ರಮುಖ ಭಾಗ ಮಿಶ್ರತಳಿಗಳು. ಅವು ಇಲ್ಲಿಯ ಹಸುಗಳಿಗೆ ಹುಟ್ಟಿದ ಕೂಸುಗಳು. ಅವುಗಳಲ್ಲೇಕೆ ಬೇಧ ಬಾವ ಮಾಡುತ್ತೀರಿ? ಎಂದು ಪ್ರಶ್ನಿಸುತ್ತಾರೆ. ಪಶು
ಅದಕ್ಕೆ ಅತ್ಯಂತ ತಜ್ಞರ ರೀತಿಯಲ್ಲಿ ಉತ್ತರಿಸಿದ ಸ್ವಾಮಿಜಿಗಳು ಅನೇಕ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಮಾನ್ಯ ಕಾಡಸಿದ್ದೇಶ್ವರರು ಸ್ವತ: ಗೋಸಾಕಣೆ, ಕೃಷಿ, ಆಧ್ಯಾತ್ಮ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಅವರ ಮಾತನ್ನು ಅನೇಕರು ನಂಬುವುದರಲ್ಲಿ ಸಂಶಯವಿಲ್ಲ. ಆದರೆ ಪಶುವೈದ್ಯಕೀಯ ವೃತ್ತಿಯಲ್ಲಿ ಕಳೆದ 33 ವರ್ಷಗಳಿಂದ ಕ್ಷೇತ್ರ ಪಶುವೈದ್ಯ, ಬೋಧಕ, ಶಿಕ್ಷಕ, ಸಂಶೋಧಕ ಮತ್ತು ವಿಸ್ತರಣೆ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇರುವ ನಮ್ಮಂಥವರು ಹಿರಿಯ ಧಾರ್ಮಿಕ ಮುಖಂಡರಾದ ಅವರ ಗಮನಕ್ಕೆ ತರುವುದು ಈ ದಿನಮಾನದ ಅತ್ಯಂತ ಅಗತ್ಯ. ಏನು ಟೀಕೆಗಳು ಬಂದರೂ ಸತ್ಯ ಸತ್ಯವೇ. ಅವರು ಹೇಳಿದ ಒಂದೊಂದೇ ವಿಷಯವನ್ನು ಗಮನಿಸೋಣ. ಪಶು
ಇದನ್ನೂ ಓದಿ: ಬೆಂಗಳೂರು| 2 ಅಂತಸ್ತಿನ ಮನೆ ಕುಸಿತ
1) ಇವುಗಳ ದೇಹ ರಚನೆಯೇ ಭಿನ್ನ. ಎರಡರ ದೇಹದಲ್ಲಿನ ಬ್ಯಾಕ್ಟಿರಿಯಾಗಳು, ಅವುಗಳ ಉತ್ಪನ್ನಗಳು ಭಿನ್ನ. ಯಾವುದು 360 ಡಿಗ್ರೀಯಲ್ಲಿ ಬಾಲ ತಿರುಗಿಸುತ್ತದೆ ಮತ್ತು ಜರ್ಸಿ 180 ಡಿಗ್ರಿ ತಿರುಗಿಸುವುದರಿಂದ ಅದರ ರಕ್ಷಣೆಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಪಶು
ದೇಶಿ ಜಾನುವಾರು ತಳಿಗಳು ತಮ್ಮ ಬಾಲವನ್ನು 380 ಡಿಗ್ರಿಗಳಷ್ಟು ತಿರುಗಿಸುತ್ತವೆ ಮತ್ತು ಆದರೆ ಜರ್ಸಿ ಮತ್ತು ಹೆಚ್ ಎಫ್ ಕೇವಲ 180 ಡಿಗ್ರಿಗಳನ್ನು ತಿರುಗಿಸುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಅಂಗರಚನಾಶಾಸ್ತ್ರದ ಪ್ರಕಾರ ಯಾಂತ್ರಿಕವಾಗಿ ಅಸಾಧ್ಯ. ಸ್ಥಳೀಯ ಜಾನುವಾರುಗಳು ಹೆಚ್ಚು ಹೊಂದಿಕೊಳ್ಳುವ ಮತ್ತು ಉದ್ದವಾದ ಬಾಲಗಳನ್ನು ಹೊಂದಿದ್ದರೂ 380-ಡಿಗ್ರಿ ತಿರುಗುವಿಕೆಯ ಪರಿಕಲ್ಪನೆಯು ಅತ್ಯಂತ ತಪ್ಪಾದ ವಿಚಾರ. ಹಸುಗಳಲ್ಲಿನ ಬಾಲದಲ್ಲಿ ಕಶೇರುಖಂಡಗಳ ಸಂಖ್ಯೆ ಸಾಮಾನ್ಯವಾಗಿ 18 ರಿಂದ 20 ರವರೆಗೆ ಇರುತ್ತದೆ. ಇವುಗಳ ರಚನೆಯನ್ನು ಗಮನಿಸಿದರೆ ಯಾವುದೇ ಹಸು ೩೬೦ ಡಿಗ್ರಿಯಲ್ಲಿ ಬಾಲ ತಿರುಗಿಸಲು ಸಾಧ್ಯವೇ ಇಲ್ಲ. ಆದರೂ ಸಹ ಸ್ವಾಮಿಗಳು ಹೇಳುತ್ತಾರೆ. ಕೇಳಬೇಕಲ್ಲ?. ಪಶು
2) ಜರ್ಸಿ ಆಕಳುಗಳಿಗೆ ಎಷ್ಟು ತಿನ್ನಬೇಕೆನ್ನುವುದು ಗೊತ್ತಿಲ್ಲ. ಆದರೆ ಜವಾರಿ ಆಕಳುಗಳಿಗೆ ಎಷ್ಟು ತಿನ್ನಬೇಕೆನ್ನುವುದು ತಿಳಿದಿರುತ್ತದೆ.
ಸ್ವಾಮಿಗಳು ಮುಂದುವರೆಸುತ್ತಾ ಜರ್ಸಿ ಆಕಳುಗಳಿಗೆ ಎಷ್ಟು ತಿನ್ನಬೇಕೆನ್ನುವುದು ಗೊತ್ತಿಲ್ಲ. ಅವುಗಳ ಮುಂದೆ ಹಿಂಡಿಯ ಚೀಲ ಇಟ್ಟರೆ ಸಿಕ್ಕಪಟ್ಟೆ ತಿಂದು ಹೊಟ್ಟೆ ಉಬ್ಬಿ ಬಿದ್ದು ಬಿಡುತ್ತವೆ. ಆದರೆ ಜವಾರಿ ಆಕಳುಗಳಿಗೆ ಎಷ್ಟು ತಿನ್ನಬೇಕೆನ್ನುವುದು ತಿಳಿದಿರುತ್ತದೆ. ಇದೂ ಸಹ ತಪ್ಪೇ. ಜರ್ಸಿ ಮತ್ತು ಹೆಚ್ ಆಕಳುಗಳು ಹೆಚ್ಚಿನ ಹಾಲನ್ನು ಉತ್ಪಾದಿಸುವುದರಿಂದ ಅವುಗಳ ದೇಹದ ಆಹಾರದ ಅವಶ್ಯಕತೆಯೂ ಜಾಸ್ತಿ ಇರುತ್ತದೆ. ಜವಾರಿ ಆಕಳುಗಳು ಕೊಡುವುದೇ ಕುಡತೆ ಹಾಲು ಆಗಿರುವುದರಿಂದ ಮತ್ತು ಅವುಗಳ ಮೆಲುಕು ಚೀಲದ ಗಾತ್ರವೂ ಸಹ ಚಿಕ್ಕದಾಗಿರುವುದರಿಂದ ಅವು ಕಡಿಮೆ ತಿನ್ನುತ್ತವೆ. ಇದರಲ್ಲಿ ಅಂತಹದ್ದೇನಿದೆ ವಿಶೇಷ ಕಾಣಿಸಿತೋ ಮಾಹಾಮಹಿಮರಿಗೆ? ಪಶು
3) ಜರ್ಸಿ ಹಸುವಿನ ಹಾಲು ಎ ೧ ಮತ್ತು ದೇಶಿ ಹಸುವಿನ ಹಾಲು ಎ೨. ಜರ್ಸಿ ಹಸುವಿನ ಹಾಲಿನಲ್ಲಿ ಮೋರ್ಫಿನ್ ಇದೆ, ಎ೨ ಮೇದೋಜೋರಕಾಂಗ ಹಾಳು ಮಾಡುತ್ತದೆ. ಸಿಝೊಪ್ರೆನಿಯಾ, ಕ್ಯಾನ್ಸರ್, ರಕ್ತದೊತ್ತಡ, ಸಂಧಿವಾತ, ಬಂಜೆತನ ಹೀಗೆ ೧೨ ರೋಗವನ್ನು ಮಿಶ್ರತಳಿಗಳ ಹಾಲು ಉಂಟು ಮಾಡುತ್ತದೆ.
ಯಾವ ಆಧಾರದ ಮೇಲೆ ಈ ಆರೋಪವನ್ನು ಮಾಡುತ್ತಾರೋ ಅಥವಾ ಸಾರ್ವಜನಿಕವಾಗಿ ಇಂತಹ ಸಿದ್ಧಪಡಿಸದ ಆರೋಪ ಮಾಡುವಾಗ ಸ್ವಲ್ಪವೂ ಅಂಜಿಕೆ ಇಲ್ಲವಲ್ಲ ಎಂಬುದು ಬಹಳ ಆಶ್ಚರ್ಯ. ಇದೊಂದು ಹಳೆಯ ಮಾಸಲು ಪದ. ಇದಕ್ಕೆ ಈಗ ಸ್ವಲ್ಪವೂ ಬೆಲೆ ಇಲ್ಲ, ನಮ್ಮ ದೇಶದ ಮಿಶ್ರತಳಿಗಳೂ ಎಮ್ಮೆ ಸೇರಿದಂತೆ ಸೇರಿದಂತೆ ಎಲ್ಲಾ ತಳಿಗಳ ಹಾಲೂ ಎ೨. ಇದರಲ್ಲಿ ಅಂತಹ ರೋಗ ಪ್ರತಿರೋಧಕ ಗುಣ ಇಲ್ಲ ಎಂಬುದು ಮತ್ತು ಎ೧ ಹಾಲಿನಿಂದ ರೋಗ ಬರುತ್ತದೆ ಎಂಬುದಕ್ಕೆ ಚಿಕ್ಕಾಸಿನ ಪುರಾವೆಯೂ ಇಲ್ಲ. ಅವರು ಮಾಡುವ ಒಂದು ಆರೋಪಗಳೂ ಸಿದ್ಧವಾಗಿಲ್ಲ. ಪಕ್ಕಾ ಸುಳ್ಳಿನ ಕಂತೆ. ಪಶು
ಇದಕ್ಕೆ ಒಂದಿಷ್ಟು ಹೆಚ್ಚಿನ ಮಾಹಿತಿ ಅಗತ್ಯವಿದೆ. ತಾಳ್ಮೆಯಿಂದ ಓದಿ.
ಭಾರತ ದೇಶದಲ್ಲಿ ಪ್ರತಿಯೊಬ್ಬರ ತಲಾ ಹಾಲಿನ ಸೇವನೆ ಪ್ರಮಾಣ ದಿನಕ್ಕೆ 280 ಗ್ರಾಂ. ಸರಿಯಾಗಿ ವಿತರಣೆಯಾದರೆ ಪ್ರಸಕ್ತ ಹಾಲಿನ ಲಭ್ಯತೆ ಪ್ರತಿದಿನ 394 ಗ್ರಾಂ. 2018-19 ರ ಅಂಕಿಅ೦ಶದ೦ತೆ ಪ್ರಪಂಚದಲ್ಲಿ ಸರಾಸರಿ ಪ್ರತಿಯೊಬ್ಬರಿಗೆ ಪ್ರತಿದಿನ ಸಿಗುವ ಹಾಲಿನ ಪ್ರಮಾಣ 229 ಗ್ರಾಂ. ಭಾರತವು ವಿಶ್ವದ ಶೇ:20.2 ರಷ್ಟು ಅಥವಾ 188 ಮಿಲಿಯನ್ ಟನ್ ಹಾಲು ಉತ್ಪಾದಿಸಿ ಪ್ರಪಂಚದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಒಟ್ಟು ಹಾಲು ಉತ್ಪಾದನೆಯ ಶೇ 50 ರಷ್ಟು ಹಾಲನ್ನು ಎಮ್ಮೆಗಳು ಉತ್ಪಾದನೆ ಮಾಡಿದರೆ,ಶೇ:26.3 ನ್ನು ಮಿಶ್ರತಳಿಯ ಹಸುಗಳು ಉತ್ಪನ್ನ ಮಾಡುತ್ತವೆ. ಉಳಿದೆಲ್ಲವೂ ಸೇರಿ ಶೇ 24 ಉತ್ಪನ್ನ ಮಾಡುತ್ತವೆ. ಇದರಲ್ಲಿ ಸ್ಥಳೀಯ ಅಥವಾ ದೇಶಿ ತಳಿಗಳ ಕೊಡುಗೆ 9.8 ಇದೆ. ಪಶು
ಎ1 ಮತ್ತು ಎ2 ಹಾಲಿನ ಬಗ್ಗೆ ಚರ್ಚೆ ಈ ದಿನದ್ದಲ್ಲ. ಅನೇಕ ವರ್ಷಗಳಿಂದ ಸಹ ಬಹುಚರ್ಚಿತ ವಿಷಯ. ಮಿಶ್ರತಳಿಗಳಿಂದ ಬರುವ ಹಾಲು ಎ1 ಹಾಲು ಮತ್ತು ಇದನ್ನು ಕುಡಿದರೆ ತರತರದ ಕಾಯಿಲೆಗಳು ಬರುತ್ತವೆ ಎಂದು ಅನೇಕರು ವಾದಿಸಿದರು. ಎ2 ಹಾಲು ಸರ್ವಶ್ರೇಷ್ಠ. ಇದನ್ನು ಕುಡಿಯುವುದೂ ಒಂದೇ ಅಮೃತ ಕುಡಿಯುವುದೂ ಒಂದೇ ಎಂಬೆಲ್ಲಾ ವಾದಗಳ ಸರಣಿಗಳೇ ನಡೆದವು. ದೇಶಿ ದನಗಳ ಹಾಲಿನಲ್ಲಿ ಎ2 ಇರುತ್ತಿದ್ದು ಇದು ಅತ್ಯಂತ ಶ್ರೇಷ್ಠ ಔಷಧಿ ಗುಣಗಳನ್ನೆಲ್ಲಾ ಹೊಂದಿದೆ ಎಂಬ ನಂಬಿಕೆ ಹೊಂದಿ ಈ ತಳಿಯನ್ನು ರಕ್ಷಿಸಲು ಇದನ್ನೊಂದು ಪೂರಕವಾದ ವೈಜ್ಞಾನಿಕ ದಾಖಲೆ ಎಂಬಂತೆ ಬಳಸಲಾಯಿತು. ಪಶು
ಹಾಲಿನಲ್ಲಿ ಶೇ. 82 ನೀರು ಮತ್ತು ಇನ್ನುಳಿದಂತೆ ಕೊಬ್ಬು, ಶರ್ಕರಪಿಷ್ಟ ಮತ್ತು ಪ್ರೋಟೀನು ಇರುತ್ತದೆ. ಪ್ರೋಟಿನಿನಲ್ಲಿ ಬೀಟಾ ಕೆಸೀನ್ ಎಂಬ ಅಂಶವೇ ಪ್ರಮುಖವಾಗಿರುತ್ತದೆ. ಅದರಲ್ಲೂ ಅನೇಕ ವಿಧಗಳಿವೆ ಎಂದು ಒಂದೊ೦ದಕ್ಕೂ ವಿಜ್ಞಾನಿಗಳು ಗುರುತಿನ ಸಂಖ್ಯೆ ಕೊಡುತ್ತ ಹೋದರು. ಹೋಲ್ಸ್ಟೀನ್ ಮತ್ತು ಇತರ ಕೆಲವು ಹಸು ತಳಿಗಳ ಹಾಲಿನಲ್ಲಿ ಗುರುತಿಸಿದ ಬೀಟಾ ಕೆಸೀನ್ ಎ1 ಎಂದು ಹೆಸರಿಟ್ಟಿದ್ದಾಯ್ತು. ಆಫ್ರಿಕಾ, ಭಾರತೀಯ ಮೂಲದ ತಳಿಗಳ ಹಾಲಿನಲ್ಲಿರುವುದನ್ನು ಎ2 (ಎ ಟೂ) ಎಂದು ಕರೆದದ್ದಾಯಿತು. ಪಶು
ನ್ಯೂಜಿಲೆಂಡಿನ ಆಕ್ಲೆಂಡ್ ವಿವಿಯ ಶಿಶು ಆರೋಗ್ಯ ವಿಜ್ಞಾನಿ ಬಾಬ್ ಎಲಿಯೆಟ್ ಎಂಬಾತ 1999 ನೇ ಸಾಲಿನಲ್ಲಿ ಅಲ್ಲಿನ ಅನಿವಾಸಿ ಮಕ್ಕಳಲ್ಲಿ ಮಧುಮೇಹ ಹೆಚ್ಚಿಗೆ ಇರುವುದನ್ನು ಗಮನಿಸಿ, ಅವು ಕುಡಿಯುವ ಹಾಲಿನ ಮೂಲವನ್ನು ಹುಡುಕುತ್ತ ಹೋದ. ಎ1 ಹಾಲಿನ ಸೇವನೆಯಿಂದ ಮಕ್ಕಳಿಗೆ ಬಾಲ್ಯದಲ್ಲೇ ಸಕ್ಕರೆ ಕಾಯಿಲೆ ಬರುತ್ತದೆಂದು ವಾದಿಸಿದ. ಅಷ್ಟೇ ಅಲ್ಲ, 20 ದೇಶಗಳಲ್ಲಿ ಹೃದ್ರೋಗ ಮತ್ತು ಸಕ್ಕರೆ ಕಾಯಿಲೆಗಳ ಹೆಚ್ಚಳಕ್ಕೂ ಎ1 ಹಾಲಿಗೂ ನೇರ ಸಂಬ೦ಧ ಇದೆಯೆಂದು ಘೋಷಿಸಿದ. ಇಲಿಗಳಿಗೆ ಎರಡೂ ಬಗೆಯ ಹಾಲುಗಳನ್ನು ಕುಡಿಸಿ, ಅವಕ್ಕೂ ಎ1 ಹಾಲು ಅಪಾಯಕಾರಿ ಎಂದು ತೋರಿಸುವ ನಾನಾ ಸಂಶೋಧನೆಗಳು ಅವನಿಂದ ಮತ್ತವನ ತಂಡದಿ೦ದ ನಡೆದವು. ಅವನ್ನೆಲ್ಲ ಆಧರಿಸಿ ಡೇರಿ ವಿಜ್ಞಾನಿ ಕೇತ್ ವುಡ್ಫೋರ್ಡ್ ಎಂಬಾತ “ಹಾಲಿನಲ್ಲಿ ಯಮದೂತ” ಹೆಸರಿನ ಪುಸ್ತಕವನ್ನೇ ಬರೆದ. ಅವನನ್ನೇ ಅನುಸರಿಸಿ ಅನೇಕ ಜನ ಸಂಶೋಧಕರು ಈ ಕುರಿತು ಸಂಶೋಧನೆ ಮಾಡಿ ಎ1 ಹಾಲು ಕಾರ್ಕೋಟಕ ವಿಷ ಎಂಬ೦ತೆ ಬಿಂಬಿಸಿದರು. ಇದನ್ನೇ ಮಾನ್ಯ ಕಾಡ ಸಿದ್ದೇಶ್ವರರು ಉಲ್ಲೇಖಿಸಿದ್ದು. ಪಶು
ಆದರೆ ಅವನ ವಾದಗಳನ್ನೆಲ್ಲಾ ತಲೆಬುಡ ಮಾಡುವಂತ ಅನೇಕ ಸಂಶೋಧನೆಗಳು ನಡೆದವು. 2004 ರಲ್ಲಿ ನ್ಯೂಝಿಲ್ಯಾಂಡಿನ ವಿಜ್ಞಾನಿಗಳು ಎ1 ಮತ್ತು ಎ2 ಎರಡರಿಂದಲೂ ತೊಂದರೆಯೇನಿಲ್ಲ. ಲ್ಯಾಕ್ಟೋಸ್ ಅಲರ್ಜಿಯಿಂದ ಈ ತೊಂದರೆಯಾಗಿರಬಹುದು ಎಂದು ಸಿದ್ಧ ಮಾಡಿದರು. 2005 ರಲ್ಲಿ ಟ್ರಸ್ವೆಲ್ ಎಂಬಾತ ವಿವರವಾದ ಅಧ್ಯಯನ ನಡೆಸಿ ಎ2 ಹಾಲಿನಲ್ಲಿ ಅಂತಹ ಮಹತ್ವವಾದದ್ದೇನೂ ಇಲ್ಲ ಹಾಗೆಯೇ ಎ1 ನಲ್ಲಿ ಅಂತಹ ದುಷ್ಪರಿಣಾಮಗಳಿಲ್ಲ ಎಂದು ಬರೆದ. ಹಾಗೆಯೇ 2009 ರಲ್ಲಿ ನಡೆದ ಸಂಶೋಧನೆಯೂ ಸಹ ಇದನ್ನೇ ಹೇಳಿತು. ಅಲ್ಲದೇ ಎ2 ಹಾಲು ಸರ್ವಶ್ರೇಷ್ಠ ಎನ್ನುವುದಕ್ಕೆ ಯಾವುದೇ ದಾಖಲೆಗಳು ಸಿಗಲಿಲ್ಲ.
ಎ2 ಹಾಲು ಶ್ರೇಷ್ಠ ಎನ್ನುವವರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಎ2 ಹಾಲಿನ ಪ್ರತಿಪಾದಕ ಸಂಘಟನೆಗಳೊಡನೆ ಸಹಯೋಗ ಹೊಂದಿದ್ದರಿಂದ ಅವರ ಸಂಶೋಧನೆ ಪಕ್ಷಪಾತದಿಂದ ಕೂಡಿದೆ ಎಂದು ತೀರ್ಮಾನಿಸಲಾಯಿತು. ಅಲ್ಲದೇ ಯಾವುದೇ ಸಂಶೋಧನೆಯಲ್ಲೂ ಸಹ ಎ2 ಹಾಲು ಮಧುಮೇಹಕ್ಕೆ, ರಕ್ತದ ಒತ್ತಡ ಕಡಿಮೆ ಮಾಡಲು ಪ್ರಯೋಜನಕ್ಕೆ ಬರುತ್ತದೆ ಎಂದು ಸಾಬೀತು ಪಡಿಸಲು ಸಾಧ್ಯವಾಗಲೇ ಇಲ್ಲ. ಹಾಗೆಯೇ ಎ1 ಸಹ ಈ ರೀತಿಯ ರೋಗಗಳನ್ನು ತರುತ್ತದೆ ಎನ್ನಲು ನಿಖರ ಸಂಶೋಧನೆಗಳು ಬರಲಿಲ್ಲ. ಸಿಝೊಪ್ರೆನಿಯಾ, ಕ್ಯಾನ್ಸರ್, ರಕ್ತದೊತ್ತಡ, ಸಂಧಿವಾತ, ಬಂಜೆತನ ಹೀಗೆ 12 ರೋಗವನ್ನು ಮಿಶ್ರತಳಿಗಳ ಹಾಲು ಉಂಟು ಮಾಡುತ್ತದೆ ಎಂಬುದಕ್ಕೆ ಚಿಕ್ಕ ದಾಖಲೆ ಸಹಾ ಸಿಗಲಿಲ್ಲ. ಪಶು
ಎ2 ಹಾಲು ಉತ್ತಮ ಎಂದು ಸಾರಲು ನ್ಯೂಜಿಲ್ಯಾಂಡಿನಲ್ಲಿ ಪ್ರತ್ಯೇಕವಾದ ಸಂಸ್ಥೆಯೇ ಹುಟ್ಟಿಕೊಂಡು ಎ2 ಹಾಲನ್ನು ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡಲು ಅನುಮತಿ ಪಡೆಯಿತು. ಆದರೆ ಈ ಸಂಸ್ಥೆ ಜನರಲ್ಲಿ ತಪ್ಪು ರೀತಿಯಲ್ಲಿ ಪ್ರಚಾರ ಮಾಡಿ ಅದರ ಉತ್ಪನ್ನಗಳನ್ನು ಮಾರಲು ತಪ್ಪು ಸಂದೇಶವನ್ನು ಸಾರುತ್ತದೆ ಎಂದು ಆಸ್ಟ್ರೇಲಿಯಾದ ಸರ್ಕಾರ ಅದಕ್ಕೆ ಭಾರಿ ದಂಡ ವಿಧಿಸಿತು. ಆಸ್ಟ್ರೇಲಿಯಾದ ಸರ್ಕಾರವು ನೇಮಿಸಿದ ತಜ್ಞರ ಸಮಿತಿಯು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಎ1 ಮತ್ತು ಎ2 ಹಾಲುಗಳ ಪರಿಣಾಮದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಮತ್ತು ಎರಡು ಒಂದೇ ಎನ್ನುವ ತೀರ್ಮಾನ ನೀಡಿತು. ಯಾವ ಸುಪ್ರೀಂ ಕೋರ್ಟೂ ಸಹ ಎ1 ಹಾಲು ಅಪಾಯಕಾರಿ ಎಂದು ಅದರ ಮೇಲೆ ಬರೆಯಿರಿ ಎಂದು ಹೇಳಲೇ ಇಲ್ಲ. ಇವೆಲ್ಲ ಕೆಲವು ಪತ್ರಿಕಾ ಹೇಳಿಕೆಗಳೇ ಹೊರತು ಯಾವ ಆಧಾರವೂ ಇಲ್ಲ. ಆದರೆ ಕಾಡಸಿದ್ದೇಶ್ವರರು ಇನ್ನೂ ಇದೇ ಹಳೆಯ ರಾಗವನ್ನೇ ಹೇಳುತ್ತಿದ್ದಾರೆ. ಪಶು
ಹಾಗಿದ್ದರೆ ಭಾರತದಲ್ಲಿ ಇದು ಎಷ್ಟು ಪ್ರಸ್ತುತ?
ಜಾಗತಿಕ ಮಟ್ಟದಲ್ಲಿ ನಡೆದ ಅನೇಕ ಸಂಶೋಧನೆಗಳು ಎ 1 ಮತ್ತು ಎ2 ಹಾಲಿನಲ್ಲಿ ವ್ಯತ್ಯಾಸವಿಲ್ಲ ಎಂದು ನಿಸ್ಸಂಶಯವಾಗಿ ಹೇಳಿದರೂ ಸಹ ಸ್ವದೇಶಿ ತಳಿಗಳನ್ನು ಸಾಕಬೇಕೆಂದು ಪ್ರೋತ್ಸಾಹಿಸುವ ಗುಂಪೊ೦ದು ಈ ವಿಷಯಗಳನ್ನೆಲ್ಲಾ ಮರೆಮಾಚಿ ಎ2 ಹಾಲು ಕೇವಲ ದೇಶಿಯ ತಳಿಗಳಿಂದ ಮಾತ್ರ ಲಭ್ಯ. ಇದು ಅಮೃತ ಸಮಾನ. ಎ2 ಮಿಶ್ರತಳಿಗಳಿಂದ ಜನ್ಯ. ಇದು ಅನೇಕ ಕಾಯಿಲೆಗಳಿಗೆ ಮೂಲ ಕಾರಣ ಎನ್ನುವ ರೀತಿಯಲ್ಲಿ ಅವೈಜ್ಞಾನಿಕವಾಗಿ ಪ್ರಚಾರ ಮಾಡಿತು. ಇದರ ಬದಲಾಗಿ ನಮ್ಮ ದೇಶದ ತಳಿಗಳನ್ನು ಉತ್ತೇಜಿಸಲು ಅವುಗಳಲ್ಲಿರುವ ರೋಗನಿರೋಧಕ ಶಕ್ತಿ, ಉಷ್ಣವನ್ನು ತಾಳುವ ಶಕ್ತಿ ಇತ್ಯಾದಿಗಳನ್ನು ಹೇಳಬಹುದಿತ್ತು. ದೇಶದ ಒಟ್ಟು ಹಾಲಿನ ಉತ್ಪನ್ನದ ಶೇ 88 ರಷ್ಟು ಹಾಲು ಉತ್ಪಾದಿಸುವ ನಮ್ಮ ದೇಶದ ಎಲ್ಲಾ ಎಮ್ಮೆಗಳೂ, ಕುರಿಗಳೂ, ಆಡುಗಳೂ ಮತ್ತು ಮಿಶ್ರತಳಿಗಳೂ ಸಹ ಎ2 ಹಾಲನ್ನೇ ಉತ್ಪಾದಿಸುವುದು ಎಂಬ ವಿಷಯ ಮರೆತೇ ಹೋಗಿತ್ತು. ಇದರಿಂದ ಅನೇಕ ಅನಾಹುತಗಳು ನಡೆಯುವುದಿತ್ತು.
1. ಈ ರೀತಿಯ ಎ1 ಮತ್ತು ಎ2 ಹಾಲಿನಲ್ಲಿ ವ್ಯತ್ಯಾಸವಿದೆಯೆಂಬ ಅನೇಕರ ವಾದ ಹಾಲಿನ ಉತ್ಪಾದಕರಲ್ಲಿ ಮತ್ತು ಗ್ರಾಹಕರಲ್ಲಿ ಬಹಳಷ್ಟು ಸಂಶಯಗಳನ್ನು ಹುಟ್ಟು ಹಾಕಿತು. ಪಶು
2. 30 ಮಿಲಿಯನ್ ಮಿಶ್ರತಳಿ ಹಸುಗಳನ್ನು ಸಾಕಿ ಅವುಗಳ ಮೇಲೇಯೇ ಜೀವನಾಧಾರ ಹೊಂದಿದ ರೈತರ ಮನಸ್ಸಿನಲ್ಲಿಯೂ ಸಹ ಗೊಂದಲವು೦ಟಾಯಿತು.
3. ಅನೇಕ ರೈತರು ಸ್ಥಳೀಯ ದೇಶಿ ತಳಿಗಳನ್ನು ದುಬಾರಿ ಬೆಲೆ ನೀಡಿ ಖರೀದಿಸಿ ಸಾಕಲು ಪ್ರಾರಂಭಿಸಿದರೂ ಸಹ ಅವುಗಳ ಹಾಲಿನ ಇಳುವರಿ ಬಹಳ ಕಡಿಮೆಯಿರುವುದರಿಂದ ಮತ್ತು ಇವುಗಳಿಗೆ ಹಾಯುವ ಒದೆಯುವ ಚಾಳಿಯಿದ್ದು ತೊಂದರೆ ಅನುಭವಿಸಿದರು. ಪಶು
4. ಇದ್ದುದರಲ್ಲೇ ಹೆಚ್ಚಿನ ಹಾಲು ನೀಡುವ ಗಿರ್ ಮತ್ತು ಸಾಹಿವಾಲ್ ಇತ್ಯಾದಿ ತಳಿಗಳು ಬಂದರೂ ಸಹ ಇವುಗಳಲ್ಲಿಯೂ ಸಹ ಮಿಶ್ರತಳಿ ಜಾನುವಾರುಗಳಂತೇ ಕೆಚ್ಚಲು ಬಾವು, ಗರ್ಭಧರಿಸದೇ ಇರುವುದು, ನೆಣೆ ಬರುವುದು ಇತ್ಯಾದಿ ತೊಂದರೆಗಳು ರೈತರನ್ನು ಹೈರಾಣ ಮಾಡಿದವು.
5. ಒಂದು ವೇಳೆ 30 ಮಿಲಿಯನ್ ಸಂಖ್ಯೆಯಲ್ಲಿರುವ ಮಿಶ್ರತಳಿ ಹಸುಗಳನ್ನು ಸಂಪೂರ್ಣವಾಗಿ ದೇಶಿ ತಳಿಗಳಿಂದ ಬದಲಾಯಿಸಿದರೆ ಹಾಲಿನ ಉತ್ಪಾದನೆಯಲ್ಲಿ 30-35 ಮಿಲಿಯನ್ ಟನ್ ಗಳಷ್ಟು ಕಡಿಮೆಯಾಗಿ ಬಿಡುತ್ತಿತ್ತು.
ನಮ್ಮಲ್ಲಿ ಯಾವುದೇ “ವಿದೇಶಿ” ತಳಿಯ ಜಾನುವಾರುಗಳು ಇಲ್ಲ. ಮಿಶ್ರ ತಳಿಯ ಜಾನುವಾರುಗಳನ್ನು ವಿದೇಶಿ ತಳಿ ಎಂದು ತಪ್ಪಾಗಿ ಕರೆಯುತ್ತಿದ್ದಾರೆ. ತಳಿ ಯಾವುದೇ ಇರಲಿ ಸಗಣಿ, ಮೂತ್ರ ಇವೆರದೂ ದೇಹದ ತ್ಯಾಜ್ಯವನ್ನು ಹೊರಗೆ ಹಾಕುವ ಮಾಧ್ಯಮಗಳು. ಇವು ಜಾನುವಾರು ತಿನ್ನುವ ಆಹಾರ, ಅದರ ಜರ‍್ಣಕ್ರಿಯೆ, ದೈಹಿಕ ಸಮನ್ವಯ, ಕಿಣ್ವಗಳ ಸಾಂದ್ರತೆ, ಕರುಳಿನಲ್ಲಿ ಮತ್ತು ಹೊಟ್ಟೆಯಲ್ಲಿ ಹೀರುವಿಕೆಯ ಸಾರ‍್ಥ್ಯ, ಕುಡಿಯುವ ನೀರಿನ ಪ್ರಮಾಣ, ಆರೋಗ್ಯ, ಸೂಕ್ಷ್ಮಾಣುಗಳು ಮತ್ತು ಪರೋಪಜೀವಿಗಳ ಬಾಧೆ, ಮೆಲಾಕಾಡಿಸುವಿಕೆಯ ಪ್ರಮಾಣ, ಉತ್ಪಾದನೆಯಾಗುವ ಜೊಲ್ಲಿನ ಪ್ರಮಾಣ, ಉತ್ಪಾದನೆಯಾಗುವ ಅನಿಲದ ಪ್ರಮಾಣ, ಜಾನುವಾರಿಗೆ ಆಹಾರ ಜೀರ್ಣ ಮಾಡಲು ಸಿಗುವ ವಿಶ್ರಾಂತಿ, ಸಮಯ, ಕರುಳಿನ ಚಲನೆ, ಪಿತ್ತದ ಉತ್ಪಾದನೆ, ಗರ್ಭಧಾರಣೆ, ಹಾರ‍್ಮೋನುಗಳ ಉತ್ಪಾದನೆ, ನರಮಾನಸಿಕ ಸ್ಥಿತಿ ಇನ್ನೂ ಅನೇಕ ರೀತಿಯ ಅಂಶಗಳ ಮೇಲೆ ಬದಲಾಗಬಹುದು. ಆದರೆ ಒಟ್ಟಾರೆ ಹೇಳಬೇಕಾದರೆ ಸಗಣಿ ಮತ್ತು ಮೂತ್ರದ ಪ್ರಾಥಮಿಕ ರಚನೆ ಎಲ್ಲಾ ರೋಮಾಂತಕ ಅಂದರೆ ನಾಲ್ಕು ಹೊಟ್ಟೆ ಇರುವ ಜೀವಿಗಳಲ್ಲಿ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಮಿಶ್ರ ತಳಿ ಮತ್ತು ದೇಶಿ ಇವುಗಳ ಮೂತ್ರ ಮತ್ತು ಸಗಣಿಯಲ್ಲಿ ಭೌತಿಕವಾದ ವ್ಯತ್ಯಾಸಗಳಿರಬಹುದೇ ಹೊರತು ಒಂದಕ್ಕಿಂದ ಒಂದು ಶ್ರೇಷ್ಠ ಎನ್ನುವ ವಿಶೇಷ ಔಷಧೀಯ ಅಥವಾ ಇತರ ಯಾವುದೇ ಹೆಚ್ಚುವರಿ ಅಂಶಗಳಿರಲ್ಲ.
ಈ ಪ್ರಶ್ನೆಗಳೂ ಸಹ ಹುಟ್ಟಿಕೊಂಡು ಬಿಡುತ್ತಿದ್ದವು.
1. ಬೇರೆ ದೇಶದಲ್ಲಿ ಹುಟ್ಟು ಹಾಕಿರುವ ಎ1 ಮತ್ತು ಎ2 ಗೊಂದಲಗಳು ಭಾರತಕ್ಕೆ ಎಷ್ಟು ಸೂಕ್ತ?
2. ನಮ್ಮ ದೇಶದಲ್ಲಿ ಪ್ರಾಯೋಗಿಕವಾಗಿ ಸಾಕಷ್ಟು ಸಂಶೋಧನೆಗಳು ಇಲ್ಲದಿದ್ದರೂ ಸಹ ಎ1 ಮತ್ತು ಎ2 ಹಾಲುಗಳ ಪರಿಣಾಮವನ್ನು ಬೇರೆ ದೇಶದಲ್ಲಿ ಅನೇಕ ಬಗೆಯ ಜೀವವೈವಿಧ್ಯಗಳ ವ್ಯತ್ಯಾಸವಿದ್ದರೂ ಸಹ ಒಪ್ಪಬಹುದೇ?
3. ಭಾರತದಲ್ಲಿ 50 ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಮಿಶ್ರತಳಿ ಸಂವರ್ಧನೆಯನ್ನು ನಿಲ್ಲಿಸಿಬಿಡಬೇಕೆ?
4. ನಿಲ್ಲಿಸಿ ಬಿಟ್ಟರೆ ಉಂಟಾಗುವ ಅಗಾಧ ಹಾಲಿನ ಕೊರತೆಗೆ ಪರ್ಯಾಯವೇನು?
5. ಇನ್ನು ಮುಂದೆ ಭಾರತದಲ್ಲಿ ಎ2 ಹಾಲು ಉತ್ಪಾದಿಸುತ್ತವೆಯೆಂದು ಹೇಳಲಾಗುವ ದೇಶಿ ತಳಿಗಳನ್ನು ಮಾತ್ರವೇ ಪೋಷಿಸಬೇಕೆ? ಹಾಗಿದ್ದರೆ ಎಮ್ಮೆಯೇ ಶ್ರೇಷ್ಟ.
ಇದಕ್ಕೆಲ್ಲಾ ಸ್ವಾಮಿಗಳು ಉತ್ತರಿಸಿಯಾರೆ? ಖಂಡಿತಾ ಇಲ್ಲ.
ಸಧ್ಯಕ್ಕೆ ಈ ಕೆಳಗಿನ ಕೆಲಸ ಆಗಬೇಕು
⦁ ಹಾಲು ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಒದಗಿಸುವ ಸರ್ವಶ್ರೇಷ್ಠ ಆಹಾರ.
⦁ ಜನರಲ್ಲಿ ಎ1 ಮತ್ತು ಎ2 ಹಾಲಿನ ಗುಣಗಳ ಬಗ್ಗೆ, ಅವು ಹೇಗೆ ಉದಯವಾದವು ಎಂಬ ಬಗ್ಗೆ ಇನ್ನೂ ಮೌಢ್ಯವಿರುವುದರಿಂದ ಇದರ ಬಗ್ಗೆ ವ್ಯಾಪಕ ವೈಜ್ಞಾನಿಕ ಮಾಹಿತಿ ನೀಡುವುದು ಅಗತ್ಯ.
⦁ ಎ2 ಹಾಲನ್ನೇ ಕುಡಿಯಲೇ ಬೇಕೆಂದರೆ, ಎಮ್ಮೆ ಪಕ್ಕಾ ಸ್ವದೇಶಿ ಪ್ರಾಣಿಯಾಗಿದ್ದು ಭಾರತದ ಹಾಲು ಉತ್ಪಾದನೆಗೆ ಸರ್ವಶ್ರೇಷ್ಠ ಕೊಡುಗೆ ನೀಡಿರುವುದರಿಂದ ಇದರ ಹಾಲನ್ನು ಕುಡಿಯುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯ.
⦁ ಆಕಳುಗಳನ್ನು ಮತ್ತು ಎಮ್ಮೆಗಳನ್ನು ಹೊರತು ಪಡಿಸಿ ಕುರಿ, ಆಡು, ಒಂಟೆ, ಯಾಕ್ ಇತ್ಯಾದಿ ಪ್ರಾಣಿಗಳ ಹಾಲನ್ನೂ ಸಹ ಕುಡಿಯುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.
ಸಧ್ಯ ನಮ್ಮ ದೇಶಿಯ ತಳಿಗಳನ್ನು ಮೂಲತಳಿಗಳಾಗಿ ಉಳಿಸಿಕೊಂಡು, ಇವುಗಳಿಗೆ ಜರ್ಸಿ ಅಥವಾ ಹೆಚ್ ಎಫ್ ಹೋರಿಗಳ ಸಂಕರಣದಿAದ ಮಿಶ್ರತಳಿಗಳ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು ಸಧ್ಯದ ಉತ್ತಮ ದಾರಿ.ಸುಖಾ ಸುಮ್ಮನೇ ಎ1 ಮತ್ತು ಎ2 ಇದರ ಬಗ್ಗೆ ಚರ್ಚೆ ಮಾಡಿ ಜನರ ಮನಸ್ಸಿನಲ್ಲಿ ಗೊಂದಲ ಹುಟ್ಟು ಹಾಕಿ ಅದಕ್ಕೆ ಭಾವನೆಗಳ ಥಳಕು ಹಾಕುವುದಕ್ಕಿಂತ ವೈಜ್ಞಾನಿಕ ಮಾಹಿತಿಗಳನ್ನು ಒಪ್ಪಿಕೊಂಡು ಪಶುಪಾಲನೆ ಮತ್ತು ಹೆಚ್ಚು ಹಾಲು ಉತ್ಪಾದನೆಯತ್ತ ಒತ್ತು ನೀಡುವುದು ಸಧ್ಯಕ್ಕಿರುವ ಉತ್ತಮ ಆಯ್ಕೆ.
ಡಾ: ಸಿ.ಎಸ್. ನಾಗರಾಜ್, ನಿವೃತ್ತ ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇವರು ಸ್ವಯಂ ತಳಿಶಾಸ್ತ್ರಜ್ಞರು. ಅವರು ಈ ಎ1 ಮತ್ತು ಎ2 ಹಾಲುಗಳ ಬಗ್ಗೆ ಹೀಗೆ ಹೇಳುತ್ತಾರೆ
“ಎ1 ಹಾಲು ಮತ್ತು ಅದರಿಂದ ಬರಬಹುದಾದ ಖಾಯಿಲೆಯಬಗ್ಗೆ ಪ್ರತಿಪಾದಿಸುವವರು ಎಲ್ಲಾ ಸಂಶೋಧನೆಯ ವಿವರವನ್ನು ಕೊಡದೆ ಕೇವಲ ಒಂದೇ ಆಯಾಮದ ಕಡೆ ಪ್ರತಿಪಾದಿಸಿ ದಿಕ್ಕು ತಪ್ಪಿಸುತ್ತಿದ್ದಾರೆ. ಅನೇಕ ಸಂಶೋಧನಾ ಪ್ರಭಂಧಗಳನ್ನು ಸವಿವರವಾಗಿ ಓದಿ ಎರಡೂ ಪ್ರತಿಪಾದನೆಗಳನ್ನು ಕೂಲಂಕಷವಾಗಿ ತೆರೆದ ಮನಸ್ಸಿನಿಂದ ನೊಡಿದಾಗ ಎ1 ಹಾಲು ವಿಷಕಾರಿ ಎಂಬ ವಾದವನ್ನು ನಂಬಲಾಗುವುದಿಲ್ಲ.
ಯಾವುದೇ ವಿಷಯವನ್ನು ವೈಜ್ಞಾನಿಕವಾಗಿ ಪ್ತತಿಪಾದುಸುವಾಗ ‘ಕಾರಣ ಮತ್ತು ಪರಿಣಾಮ’ ಆಧಾರದ ಮೇಲೆ ಚರ್ಚಿಸುವ ಬದಲು ಕೇವಲ ಭಾವುಕವಾಗಿ ಯೋಚಿಸುವುದು ಸರಿ ಅಲ್ಲ. ಪ್ರಪ್ರಥಮ ಬಾರಿಗೆ ನ್ಯೂಜಿಲ್ಯಾಂಡನಲ್ಲಿ ಇದನ್ನು ಪ್ರತಿಪಾದಿಸಿದಾಗ “ಕಾರಣ ಮತ್ತು ಪರಿಣಾಮ” ಆಧಾರದ ಮೇಲೇ ಪ್ರತಿಪಾದಿಸದೆ ಕೇವಲ ಈ ದೇಶಗಳಲ್ಲಿ ಮಧುಮೇಹ ಮತ್ತಿತರ ಖಾಯಿಲೆಗೆ ಇಲ್ಲಿಯ ಜನರು ಹೆಚ್ಚಾಗಿ ಎ1 ಹಾಲು ಉಪಯೋಗಿಸುವುದರಿಂದ ಈ ಖಾಯಿಲೆಗಳು ಬರುತ್ತವೆ ಎಂಬ ವಾದವನ್ನು ಯಾವುದೇ ವೈಜ್ಞಾನಿಕ ಸಂಶೋಧನೆಯ ಆದಾರವಿಲ್ಲದೆ ಮಂಡಿಸಿ, ಎ೨ ಹಾಲಿಗೆ ಹೊಸ ಮಾರುಕಟ್ಟೆ ತರಲು ಪ್ರಯತ್ನಿಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು.
ಇತ್ತಿಚಿನ ದಿನಗಳಲ್ಲಿ ಆ ದೇಶಗಳಲ್ಲಿ ಈ ಕೃತಕ ಮಾರುಕಟ್ಟೆ ಕ್ಷೀಣಿಸುತ್ತಿದೆ. ನಮ್ಮ ದೇಶದಲ್ಲೀ ಇತ್ತೀಚಿಗೆ ಸಣ್ಣ ಮಟ್ಟದಲ್ಲಿ ಎ2 ಹಾಲಿನ ಮಾರಾಟ ನಡೆಯಿತ್ತುದ್ದು ಅದರಿಂದ ಕೆಲವು ರೈತರಿಗೆ ಲಾಭವಾಗುತ್ತಿದ್ದು ಆರೋಗ್ಯದ ಬಗ್ಗೆ ಸ್ವಲ್ಪ ಜಾಸ್ತಿ ಕಾಳಜಿ ಇರುವ ಕೆಲವರು ಇದನ್ನು ಕೊಡುಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಸರಿಯಾದ ಮಾಹಿತಿ ಇಲ್ಲದೇ ಅನ್ಯಾಯವಾಗುತ್ತಿದೆಯೇನೋ ಅನ್ನಿಸುತ್ತದೆ”
ನಮ್ಮ ದೇಶದಲ್ಲಿ ಹಾಲು ಉತ್ಪಾದನೆಗೆ ಮೂಲ ಕಾರಣವಾದ ಎಮ್ಮೆಗಳು ಉತ್ಪಾದಿಸುವುದು ಶುದ್ಧ ಎ2 ಹಾಲು. ಅಲ್ಲದೇ ಎಲ್ಲಾ ಮಿಶ್ರತಳಿಯ ಹಸುಗಳ ಹಾಲೂ ಸಹ ಎ2 ಎಂದೆ ಆಗಿರುವುದರಿಂದ ಮತ್ತು ಎ1 ಹಾಲಿನಿಂದ ತೊಂದರೆಯಿಲ್ಲ ಎಂದು ಗೊತ್ತಾದ ಮೇಲೆ ಈ ಎ1 ಮತ್ತು ಎ2 ವಾದಕ್ಕೆ ಹುರುಳೇ ಇರುವುದಿಲ್ಲ. ನಮ್ಮ ದೇಶದಲ್ಲಿ ವಿದೇಶದಿಂದ ನೇರವಾಗಿ ಆಮದು ಮಾಡಿಕೊಂಡ ಯಾವುದೇ ಆಕಳುಗಳಿಲ್ಲ ಎಂಬುದು ಗಮನದಲ್ಲಿರಬೇಕು.
4) ಜವಾರಿ ದನ ದನ ಚುರುಕು. ಜರ್ಸಿ ಆಕಳ ಸೆಗಣಿಯನ್ನು ಒಂದೇ ಕೈಯಿಂದ ತೆಗೆಯಲು ಸಾಧ್ಯವಿಲ್ಲ. ಜವಾರಿ ಆಕಳ ಸಗಣಿಯನ್ನು ಒಂದೇ ಕೈಯಿಂದ ತೆಗೆಯಬಹುದು. ಜವಾರಿ ಆಕಳುಗಳಲ್ಲಿ ಉತ್ತಮ ಬ್ಯಾಕ್ಟಿರಿಯಾಗಳಿದ್ದರೆ ಮಿಶ್ರತಳಿಯ ಆಕಳುಗಳಲ್ಲಿ ಅಪಾಯಕಾರಿ ಬ್ಯಾಕ್ಟಿರಿಯಾಗಳಿವೆ. ಜವಾರಿ ಆಕಳುಗಳ ಆಕಳುಗಳಲ್ಲಿ ಸುವರ್ಣಕ್ಷಾರ ಇದೆ. ಸೂರ್ಯಕೇತು ನಾಡಿ ಕಾಸ್ಮಿಕ್ ಶಕ್ತಿಯನ್ನು ಸುವರ್ಣಕ್ಷಾರವಾಗಿ ಪರಿವರ್ತಿಸಿ ಹಾಲಿನಲ್ಲಿ, ಮೂತ್ರದಲ್ಲಿ ಬಂದು ಅದು ದಿವ್ಯೌಷಧಿಯಾಗುತ್ತದೆ. ಬಂಗಾರ ವರ್ಣದ ಸುವರ್ಣಕ್ಷಾತ್ರವನ್ನು ರಾಸಾಯನಿಕ ಬಳಸಿ ಪ್ರತ್ಯೇಕಿಸಬಹುದು.
ಇದನ್ನೆಲ್ಲಾ ಹೇಗೆ ಸ್ವಾಮಿಗಳು ಅರಿತುಕೊಂಡರೋ ತಿಳಿದಿಲ್ಲ. ಸಗಣಿಯು ಆಯಾ ಹಸುವು ತಿನ್ನುವ ಆಹಾರ ಮತ್ತು ಅದರ ದೇಹದ ಪೃಕೃತಿಯಿಂದ ನಿರ್ಧಾರವಾಗುತ್ತದೆ. ಅದನ್ನು ಮಲವೆಂದು ಕರೆಯಬಹುದು. ವಿವಿಧ ಪ್ರಾಣಿಗಳಲ್ಲಿ ಇದರ ಭೌತಿಕ ಮತ್ತು ರಾಸಾಯನಿಕ ಗುಣಗಳು ನಿರ್ಧಾರವಾಗುತ್ತವೆ. ಒಂದು ತಳಿಯಿಂದ ಮತ್ತೊಂದು ತಳಿಗೆ ಇದು ವ್ಯತ್ಯಾಸವಾಗುವುದು ಸಹಜ. ಆದರೆ ಇದರಿಂದ ಅಂತಹ ಗುರುತರ ಬದಲಾವಣೆ ಇಲ್ಲ. ಎಲ್ಲಾ ಸಗಣಿಯಲ್ಲೂ ಕ್ಲಾಸ್ಟ್ರಿಡಿಯಂ, ಇ ಕೊಲೈ, ಸಾಲ್ಮೊನೆಲ್ಲಾ, ಶಿಗೆಲ್ಲಾ, ಕ್ಷಯ, ಲಿಸ್ಟಿರಿಯಾ ಇತ್ಯಾದಿ ಅಪಾಯಕಾರಿ ಬ್ಯಾಕ್ಟಿರಿಯಾಗಳು ಮತ್ತು ಕೋಟಿಗಟ್ಟಲೆ ಉಪಕಾರಿ ಬ್ಯಾಕ್ಟಿರಿಯಾಗಳು ಎಲ್ಲಾ ಸಗಣಿಯಲ್ಲಿಯೂ ಇವೆ.
ಇದರಿಂದ ಸಗಣಿಯ ಮಹತ್ವ ಏನೂ ಬದಲಾಗುವುದಿಲ್ಲ. ಕಾಡಸಿದ್ದೇಶ್ವರರು ಉಲ್ಲೇಖಿಸದ ವಿಷಯವೆಂದರೆ ಎಮ್ಮೆಯ ಸಗಣಿ ಜೈವಿಕ ಅನಿಲದ ಉತ್ಪಾದನೆಗೆ ಮತ್ತು ಎಲ್ಲವುಗಳಿಗಿಂತ ಉತ್ತಮವಾದ ಸಸಾರಜನಕದ ಸತ್ವ, ಉತ್ತಮ ಬ್ಯಾಕ್ಟಿರಿಯಾಗಳು ಇವೆ ಎಂಬುದು ಸಾಬೀತಾಗಿದೆ. ಸುವರ್ಣಕ್ಷಾರ, ಸೂರ್ಯಕೇತು ನಾಡಿ, ಕಾಸ್ಮಿಕ್ ಶಕ್ತಿ ಇತ್ಯಾದಿಗಳೆಲ್ಲಾ ಕಾಲ್ಪನಿಕವಾದ ಮತ್ತು ಯಾವುದೇ ಆಧಾರವಿಲ್ಲದ ಹಳಸಲು ಶಬ್ಧಗಳು.
ಮಾನ್ಯ ಕಾಡಸಿದ್ದೇಶ್ವರ ಸ್ವಾಮಿಜಿಗಳಲ್ಲಿ ವಿನಂತಿಸುವುದೇನೆಂದರೆ ನಿಮ್ಮ ಮಾತನ್ನು ಕೋಟ್ಯಾಂತರ ಭಕ್ತರು, ಅಭಿಮಾನಿಗಳು ಮತ್ತು ಗೋಪಾಲಕರು ಆಲಿಸುತ್ತಾರೆ. ಅದೇ ನಿಜ ಎಂದು ಅನುಸರಿಸಲೂಬಹುದು. ದಯವಿಟ್ಟು ತಪ್ಪು ಮಾಹಿತಿ ನೀಡಬೇಡಿ. ನೀವು ಹೇಳಿದ್ದು ವೈಜ್ಞಾನಿಕವಾಗಿ ತಪ್ಪು ಎಂದರೆ ನಿಮ್ಮ ಭಕ್ತರು ನನ್ನನ್ನು ಹಿಂದೂ ವಿರೋಧಿ, ದೇಶ ವಿರೋಧಿ, ಎಡಪಂಥೀಯ ಎಂದೆಲ್ಲಾ ಕೊಳಕು ಭಾಷೆಯಲ್ಲಿ ಜರಿಯುವುದು ಖಚಿತ.
ಇದೆಲ್ಲಾ ಈಗ ಅಭ್ಯಾಸವಾಗಿದೆ. ತಾವು ಯಾವಾಗ ಬೇಕಾದರೂ ನನ್ನನ್ನು ಸಂಪರ್ಕಿಸಬಹುದು. ನೈಜ ವೈಜ್ಞಾನಿಕ ಮಾಹಿತಿ ನೀಡಲು ಸದಾ ಸಿದ್ಧ ಲಭ್ಯ. ಅತ್ಯಂತ ಉತ್ತಮವಾದ ನಮ್ಮದೇ ದೇಶದ, ಕಸವನ್ನು ತಿಂದು ರಸ ನೀಡುವ ಕರ್ನಾಟಕದಲ್ಲಿ ವಿನಾಶದತ್ತ ತೆರಳುತ್ತಿರುವ ಎಮ್ಮೆಯನ್ನು ಅದರ ಮೇಲಿನ ಧಾರ್ಮಿಕ ನಿರ್ಭಂಧ ತೆಗೆದು ಅದನ್ನೂ ಸಹ ಗೋವಿನ ಮಟ್ಟದಲ್ಲಿ ಸ್ಥಾನಮಾನ ನೀಡಿದಲ್ಲಿ, ಅದರ ಸಂರಕ್ಷಣೆಗೆ ಬದ್ಧರಾಗ್ದಲ್ಲಿ ನನ್ನನ್ನೂ ಸೇರಿದಂತೆ ಅನೇಕರು ಶ್ರೀ ಕಾಡಸಿದ್ದೇಶ್ವರರ ಅಭಿಮಾನಿಗಳಾಗುವುದು ಖಚಿತ.
ಇದನ್ನೂ ನೋಡಿ: ಉಕ್ಕಿನ ಕಾರ್ಖಾನೆ ಸ್ಥಾಪನೆ ಬೇಡ : ಕೊಪ್ಪಳದ ಜನರ ಆಕ್ರೋಶ Janashakthi Media